ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಡ್ಡದ ಮೇಲೆ ದಾಳಿಂಬೆ ಬೆಳೆದು...

Last Updated 18 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ಕೊಟ್ಟಲಗಿ ಬರಪೀಡಿತ ಗ್ರಾಮ. ಈ ಗ್ರಾಮದಿಂದ ಒಂದೆರಡು ಫರ್ಲಾಂಗು ದಾಟಿದರೆ ಮಹಾರಾಷ್ಟ್ರ ಸೀಮೆ ಶುರುವಾಗುತ್ತದೆ. ಸ್ವಾತಂತ್ರ್ಯ ಯೋಧರಾಗಿದ್ದ ವೆಂಕಟೇಶ ಕುಲಕರ್ಣಿಯವರು ಇದೇ ಗ್ರಾಮದವರು.13 ಎಕರೆ ಭೂಮಿಯನ್ನು ಅವರು ಹೊಂದಿದ್ದರೂ ಎರಡು ಎಕರೆ ಹೊಲವಷ್ಟೇ ಬಿತ್ತನೆಗೆ ಯೋಗ್ಯವಿತ್ತು. ಅದೇ ಹೊಲದಲ್ಲಿ 200 ದಾಳಿಂಬೆ ಸಸಿಗಳನ್ನು ನೆಟ್ಟಿದ್ದ ಅವರು ಕೈಸುಟ್ಟುಕೊಂಡಿದ್ದರು.ವೆಂಕಟೇಶ ಅವರ ದಾಳಿಂಬೆ ಬೆಳೆಯುವ ಕನಸನ್ನು ಅವರ ಪುತ್ರ ರಾಘವೇಂದ್ರ ಅವರು ಈಗ ನನಸು ಮಾಡುತ್ತಿದ್ದಾರೆ.

ಹುಕ್ಕೇರಿ ತಾಲ್ಲೂಕಿನ ಸಂಕೇಶ್ವರ ಪಟ್ಟಣದ ಎಸ್.ಎಸ್.ಕೆ.ಪಾಟೀಲ ಸಿಬಿಎಸ್ಇ ಸ್ಕೂಲಿನ ಪ್ರಾಚಾರ್ಯರಾಗಿರುವ ರಾಘವೇಂದ್ರ ಅವರು ಗ್ರಾಮಕ್ಕೆ ಹೋದಾಗ ‘ಇಂವ ಮಾಸ್ತರ. ಆ ಗುಡ್ಡದಾಗ ಏನ್ ಮಾಡ್ತಾನು? ನಮ್ಮಂಥವರಿಗೇ ಏನೂ ಮಾಡಾಕ ಆಗಿಲ್ಲ’ ಎಂದು ಹೇಳಿದವರೇ ಹೆಚ್ಚು. ಗುಡ್ಡದ ಜಮೀನನ್ನು ಸಮತಲ ಮಾಡಿ ಅದರಲ್ಲಿ ದಾಳಿಂಬೆ ಬೆಳೆಯಬೇಕು ಎಂಬ ಮಹದಾಸೆ ಹೊತ್ತ ರಾಘವೇಂದ್ರ, ಅದಕ್ಕಾಗಿ ಕೈಮೀರಿ ಖರ್ಚು ಮಾಡಿದ್ದಾರೆ. ಜತೆಗೆ ಒಂದು ತೆರೆದ ಬಾವಿ ಮತ್ತು ಮೂರು ಕೊಳವೆ ಬಾವಿಗಳನ್ನು ಕೊರೆಸಿದ್ದಾರೆ. ನೀರಿನ ವ್ಯವಸ್ಥೆ ಮಾಡಿಕೊಂಡ ಬಳಿಕ 2013ರಲ್ಲಿ ಅವರು ಮಹಾರಾಷ್ಟ್ರದ ಸಾಂಗೋಲಾದಿಂದ 1,600 ದಾಳಿಂಬೆ ಸಸಿಗಳನ್ನು ತಂದು (ಒಂದು ಸಸಿಗೆ ₹21ರಂತೆ ) ನೆಟ್ಟರು. ಎರಡನೇ ಹಂತದಲ್ಲಿ ಮತ್ತೆ 2,400 ಸಸಿಗಳನ್ನು ತಂದರು. ಸದ್ಯ 4000 ದಾಳಿಂಬೆ ಗಿಡಗಳು ಅವರ ತೋಟದಲ್ಲಿವೆ. ಇದರಲ್ಲಿ 3,650 ಕೇಸರ್ ಮತ್ತು 350 ಗಣೇಶ ತಳಿಯ ಗಿಡಗಳಿವೆ.

ಪ್ರತಿಗಿಡ ಸರಾಸರಿ 70ರಿಂದ 80 ಕಾಯಿ ಬಿಡುತ್ತವೆ ಎಂದು ರಾಘವೇಂದ್ರ ತಿಳಿಸುತ್ತಾರೆ. ದಾಳಿಂಬೆ ಕೃಷಿಗಾಗಿ ಇಲ್ಲಿಯವರೆಗೆ ₹8 ಲಕ್ಷ ದವರೆಗೆ ಖರ್ಚು ಮಾಡಿರುವುದಾಗಿ ಹೇಳುತ್ತಾರೆ. ಬೆಳೆ ಸರಿಯಾಗಿ ಬರಲು ಆಕಳ ಸಗಣಿ ಗೊಬ್ಬರವನ್ನು ಹೊಲಕ್ಕೆ ಹಾಕಿದ್ದಾರೆ. ಈಗ ಎಲ್ಲ ಬೆಳೆಯಿಂದ ಉತ್ತಮ ಆದಾಯ ನಿರೀಕ್ಷೆ ಮಾಡಿದ್ದು, ಒಂದು ಟನ್ನಿಗೆ ಸರಾಸರಿ₹60 ಸಾವಿರ ಬರುವ ನಿರೀಕ್ಷೆಯಿದೆ ಎಂದು ವಿವರಿಸು ತ್ತಾರೆ. ದಾಳಿಂಬೆ ಹಣ್ಣಿಗೆ ದೇಶಿ ಹಾಗೂ ವಿದೇಶಿ ಮಾರುಕಟ್ಟೆಗಳಲ್ಲಿ ಅಪಾರ ಬೇಡಿಕೆ ಇದೆ. ಮಾಡಿದ ಖರ್ಚನ್ನು ಆದಷ್ಟು ಬೇಗ ವಾಪಸ್‌ ಪಡೆಯುತ್ತೇನೆ ಎಂದು ಅವರು ಹೇಳುವಾಗ ಆತ್ಮವಿಶ್ವಾಸ ಎದ್ದು ಕಾಣುತ್ತದೆ. ಅವರ ತೋಟದಲ್ಲಿ ಬೆಳೆದ ದಾಳಿಂಬೆ ಸದ್ಯ ಹೈದರಾಬಾದ್‌ಗೆ ಹೋಗುತ್ತಿದೆ.

ದಾಳಿಂಬೆ ಗಿಡಕ್ಕೆ ಎರಡು ರೀತಿಯ ಔಷಧಿ ತಯಾರಿಸಿ ಸಿಂಪಡಿಸುವ ಪದ್ಧತಿಯನ್ನು ರಾಘವೇಂದ್ರ ಅನುಸರಿಸುತ್ತಾರೆ. ಅವುಗಳೇ ಜೀವಾಮೃತ ಮತ್ತು ದಶಪರ್ಣಿ ಅರ್ಕ. ಈ ಔಷಧಿಗಳ ತಯಾರಿಕೆಗೆ ದೇಸಿ ತಳಿ ಹಸುಗಳ ಸಗಣಿ ಮತ್ತು ಗಂಜಲ ಬೇಕಾಗಿದ್ದರಿಂದ ನಾಲ್ಕು ಹಸುಗಳನ್ನೂ ಅವರು ಸಾಕಿದ್ದಾರೆ. ಹತ್ತು ಲೀಟರ್ ಗೋಮೂತ್ರದಲ್ಲಿ ಅಷ್ಟೇ ಪ್ರಮಾಣದ ಸಗಣಿ, ತಲಾ ಒಂದು ಕೆಜಿ ದ್ವಿದಳ ಧಾನ್ಯದ ಹಿಟ್ಟು, ಬೆಲ್ಲ ಮತ್ತು ಹೊಲದ ಬದುವಿನ (ಒಡ್ಡು) ಒಂದು ಮುಷ್ಟಿ ಮಣ್ಣು ಮಿಶ್ರಣ ಮಾಡಿ ಬ್ಯಾರಲ್‌ನಲ್ಲಿ ಹಾಕಿ ದಿನಕ್ಕೆ ಎರಡು ಬಾರಿ ಕೈಯಾಡಿಸಿ ಜೀವಾಮೃತ ತಯಾರಿಸಿ ಗಿಡಕ್ಕೆ ಸಿಂಪರಣೆ ಮಾಡಬಹುದು ಅಥವಾ ನೆಲಕ್ಕೆ ಹಾಯಿಸಬಹುದು.

ತಲಾ ಎರಡು ಕೆ.ಜಿ ಬೇವಿನ ತೊಪ್ಪಲು, ಹತ್ತು ಗಿಡಗಳ (ಬೇವು, ನುಗ್ಗೆ, ಪೇರಲು, ಸೀತಾಫಲ, ಚಂದರಗಿ, ಹೊಂಗೆ, ಎಕ್ಕೆ ಎಲೆ, ಹೊನ್ನಂಬರಿ, ಮಾವು, ಕರಿಬೇವು) ತೊಪ್ಪಲು, ತಲಾ ಒಂದು ಕೆ.ಜಿ ತಂಬಾಕು, ಹಸಿ ಮೆಣಸಿನಕಾಯಿ, ಜವಾರಿ ಬೆಳ್ಳುಳ್ಳಿ, ತಲಾ ಅರ್ಧ ಕೆ.ಜಿ ಹಸಿ ಶುಂಠಿ, ಅರಿಶಿಣ ಪುಡಿ, 10 ಲೀಟರ್ ಗೋಮೂತ್ರ, 10 ಕೆ.ಜಿ.ಸಗಣಿಗೆ ಮಿಶ್ರಣ ಮಾಡಿ ಕಲಸಿ 45 ದಿನಗಳ ಕಾಲ ಬ್ಯಾರಲ್‌ನಲ್ಲಿ ಹಾಕಿ ಕೊಳೆಯಲು ಬಿಡಬೇಕು. ನಂತರ ಸೋಸಬೇಕು. ಇದೇ ದಶಪರ್ಣಿ ಅರ್ಕ. ಈ ಔಷಧಿಯನ್ನು ಆರು ತಿಂಗಳುಗಳವರೆಗೆ ಬಳಸಬಹುದು ಎಂದು ರಾಘವೇಂದ್ರ ಹೇಳುತ್ತಾರೆ.

ಮುಂದಿನ ದಿನಗಳಲ್ಲಿ ದಾಳಿಂಬೆ ಫಲದ ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆ ಘಟಕವನ್ನೇ ಸ್ಥಾಪಿಸುವ ಯೋಜನೆ ಹಾಕಿಕೊಂಡಿದ್ದಾರೆ. ಸಂಪರ್ಕಕ್ಕೆ-7022937714.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT