ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಜರಾತ್: ದೊರೆತ ಉತ್ತರ, ಉಳಿದ ಪ್ರಶ್ನೆ!

Last Updated 18 ಡಿಸೆಂಬರ್ 2017, 20:21 IST
ಅಕ್ಷರ ಗಾತ್ರ

ಪ್ರಧಾನಿ ನರೇಂದ್ರ ಮೋದಿ ಅವರು ನಮ್ಮ ಕಾಲದ ಅತ್ಯಂತ ಚಾಣಾಕ್ಷ ರಾಜಕಾರಣಿ. ಭಾರತೀಯ ಜನತಾ ಪಕ್ಷದ ಗುಜರಾತಿನ ನಾಯಕರು 150 ವಿಧಾನಸಭಾ ಸ್ಥಾನಗಳನ್ನು ಗೆಲ್ಲುವ ಬಗ್ಗೆ ಕೆಲವು ವಾರಗಳ ಹಿಂದೆ ಮಾತನಾಡುತ್ತಿದ್ದರು. ಚುನಾವಣಾ ಕಣ ಪ್ರವೇಶಿಸಿದ ಮೋದಿ ಅವರಿಗೆ, ಈ ಗುರಿ ತಲುಪುವುದು ಕಷ್ಟವಾಗಬಹುದು ಎಂದು ಅನಿಸಿತು. ಅವರು ಹಿಂದೆ ಹಲವು ಬಾರಿ ಮಾಡಿದ ಕೆಲಸ ಮಾಡಿದರು: ತಮ್ಮ ತೋಳು ಮಡಚಿ, ಚುನಾವಣಾ ಅಖಾಡಕ್ಕೆ ಧುಮುಕಿದರು.

ಮೋದಿ ಅವರು ನಡೆಸಿದ ಅಭಿಯಾನ ಕೊಳಕಾಗಿತ್ತು, ವಿಭಜನಕಾರಿಯಾಗಿತ್ತು ಮತ್ತು ದೇಶಕ್ಕೆ ಹಾನಿಯುಂಟು ಮಾಡುವಂತೆ ಇತ್ತು ಎಂದು ಹೇಳಬಹುದು. ಹೀಗಿದ್ದರೂ, ಮೋದಿ ಅವರು ಕೆಲಸ ಮಾಡುವುದು ಈ ಮಾದರಿಯ ಚುನಾವಣಾ ಅಭಿಯಾನವನ್ನು ಸ್ವೀಕರಿಸಿರುವ, ಬಹುಶಃ ಒಪ್ಪಿಕೊಂಡೂ ಆಗಿರುವ ಸಂಸ್ಕೃತಿಯ ನಡುವೆ ಎಂಬುದನ್ನು ಗಮನಿಸಬೇಕು. ಮೋದಿ ಅವರ ಇಚ್ಛಾಶಕ್ತಿ ಮತ್ತು ಅವರು ಒಂದೇ ಗುರಿ ಇರಿಸಿಕೊಂಡು ಮಾಡಿದ ಕೆಲಸ ಪಕ್ಷವನ್ನು ಮತ್ತೊಮ್ಮೆ ಗೆಲ್ಲಿಸಿದವು. ಗುಜರಾತ್‌ನಂತಹ ಧ್ರುವೀಕೃತ ರಾಜ್ಯದಲ್ಲಿ ಯಾವ ಪಕ್ಷಕ್ಕೆ ಮತ ಚಲಾಯಿಸಬೇಕು ಎಂದು ತೀರ್ಮಾನಿಸದ ಮತದಾರರು ಹೆಚ್ಚೇನೂ ಇರಲಿಲ್ಲ.

ಅಲ್ಲಿ ಮೋದಿ ಅವರ ಪಾಲಿನ ಕೆಲಸ ಭರವಸೆಗಳನ್ನು ನೀಡುವುದಾಗಿರಲಿಲ್ಲ: ತಮ್ಮ ಬೆಂಬಲಿಗರು ಮತ ಚಲಾಯಿಸುವಂತೆ ಮಾಡುವುದಷ್ಟೇ ಅವರ ಕೆಲಸ ಆಗಿತ್ತು. ಮತ ಚಲಾವಣೆಯ ಪ್ರಮಾಣ ಕಳೆದ ಬಾರಿಗಿಂತ ಮೂರು ಅಂಶಗಳಷ್ಟು ಕಡಿಮೆ ಆಗಿದ್ದರೂ, ಬಿಜೆಪಿ ಗೆಲ್ಲಬಹುದು ಎಂದು ಹೇಳಲು ಅಷ್ಟು ಸಾಕಿತ್ತು. ಇಷ್ಟೆಲ್ಲವನ್ನೂ ಸಾಧ್ಯವಾಗಿಸಿದ್ದು ಮೋದಿ ಅವರೊಬ್ಬರೇ.

ಅಭಿವೃದ್ಧಿಯ ಆಧಾರದಲ್ಲಿ ಚುನಾವಣಾ ಪ್ರಚಾರ ನಡೆಸುತ್ತಿರುವಂತೆ ಬಿಜೆಪಿ ಸೋಗುಹಾಕಿತು. ಆದರೆ ಪ್ರಚಾರ ಹಾಗೆ ನಡೆಯಲಿಲ್ಲ. ಬಿಜೆಪಿಯು ಹಿಂದುತ್ವವನ್ನು ಮುಂದಕ್ಕೆ ತಂದಿತು. ಗುಜರಾತಿಗಳನ್ನು, ಭಾರತೀಯರನ್ನು ವಿಭಜಿಸಿ, ಅದರಿಂದ ತಾನು ಲಾಭ ಪಡೆದುಕೊಂಡು, ಕೋಮುವಾದದ ಜ್ವಾಲೆಯಲ್ಲಿ ಮತ್ತೆ ತನ್ನ ಬೇಳೆ ಬೇಯಿಸಿಕೊಂಡಿತು. ಬಿಜೆಪಿ ಗೆದ್ದಿತು. ಇದು ಭಾರತೀಯರಾಗಿ ಮತ್ತು ಮತದಾರರಾಗಿ ನಮಗೆ ಹೇಗೆ ತಟ್ಟುತ್ತದೆ ಎಂಬುದನ್ನು ನಾವೆಲ್ಲರೂ ಆಲೋಚಿಸಬೇಕು.

ಕಾಂಗ್ರೆಸ್ ಕಥೆ ಏನಾಗಿದೆ?
ಚುನಾವಣೆಯಲ್ಲಿ ಈ ಪಕ್ಷ ಚೆನ್ನಾಗಿಯೇ ಹೋರಾಟ ನಡೆಸಿತು. ಆದರೆ ಚುನಾವಣಾ ಕಣಕ್ಕೆ ಹೊಸ ಹುರುಪು ತುಂಬಲು, ಹೊಸದೊಂದು ಚರ್ಚೆ ಹುಟ್ಟುಹಾಕಲು ಪಕ್ಷ ವಿಫಲವಾಯಿತು. ಗುಜರಾತ್‌ನಲ್ಲಿ ನಾಲ್ಕು ವಿಷಯಗಳ ಬಗ್ಗೆ ಜನ ಭಾರೀ ಪ್ರಮಾಣದಲ್ಲಿ ಸಂಘಟಿತರಾಗಿದ್ದರು. ಹಾರ್ದಿಕ್ ಪಟೇಲ್‌ ನೇತೃತ್ವದಲ್ಲಿ ಪಟೇಲರು ಮೀಸಲಾತಿ ಕೇಳಿದರು, ಊನಾದಲ್ಲಿನ ಕ್ರೌರ್ಯದ ನಂತರ ದಲಿತರು ಜಿಗ್ನೇಶ್ ಮೇವಾನಿ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು, ಮದ್ಯಪಾನದ ವಿಚಾರ ಮುಂದಿಟ್ಟುಕೊಂಡು ಕ್ಷತ್ರಿಯರು ಅಲ್ಪೇಶ್ ಠಾಕೂರ್ ನೇತೃತ್ವದಲ್ಲಿ ಚಳವಳಿ ನಡೆಸಿದರು, ಜಿಎಸ್‌ಟಿ ಮತ್ತು ನೋಟು ರದ್ದತಿಯನ್ನು ವಿರೋಧಿಸಿ ಸೂರತ್‌ನ ವ್ಯಾಪಾರಿಗಳು ಬೀದಿಗೆ ಇಳಿದರು.

ಈ ನಾಲ್ಕೂ ಹೋರಾಟಗಳು, ಅವು ನಡೆದ ಸಂದರ್ಭದಲ್ಲಿ, ರಾಜಕೀಯ ರಹಿತವಾಗಿಯೇ ಇದ್ದವು. ಈ ಹೋರಾಟಗಳಲ್ಲಿ ಕಾಂಗ್ರೆಸ್ಸಿನ ಪಾತ್ರ ಇರಲಿಲ್ಲ. ಕೆಲವು ಹೋರಾಟಗಳಲ್ಲಿ ಕಾಂಗ್ರೆಸ್ಸನ್ನು ಉದ್ದೇಶಪೂರ್ವಕವಾಗಿಯೇ ದೂರ ಇರಿಸಲಾಯಿತು. ಗುಜರಾತ್‌ ರಾಜ್ಯದಲ್ಲಿ ಇರುವುದು ಎರಡೇ ಪಕ್ಷಗಳು. ಒಂದು ಪಕ್ಷದ ನೀತಿಗಳ ಹಾಗೂ ಕ್ರಮಗಳ ವಿರುದ್ಧ ಸಾರ್ವಜನಿಕವಾಗಿ ವ್ಯಕ್ತವಾಗುವ ಆಕ್ರೋಶ ಅಥವಾ ಅತೃಪ್ತಿಯನ್ನು ಸಹಜವಾಗಿಯೇ ಇನ್ನೊಂದು ಪಕ್ಷ ಕೈಗೆತ್ತಿಕೊಂಡು ಮುನ್ನಡೆಸುತ್ತದೆ. ಆದರೆ ಗುಜರಾತಿನಲ್ಲಿ ಹೀಗೇಕೆ ಆಗಲಿಲ್ಲ?

ಹಣೆಪಟ್ಟಿಯ (ಮುಸಲ್ಮಾನರ ಪಕ್ಷ ಎಂಬ ಹಣೆಪಟ್ಟಿ) ಸಮಸ್ಯೆ ಕಾಂಗ್ರೆಸ್ಸಿಗೆ ಇದೆ, ಸ್ಪರ್ಧಾತ್ಮಕತೆಯ ಸಮಸ್ಯೆಯೂ ಆ ಪಕ್ಷಕ್ಕಿದೆ. ಸಂಘದ ಮೂಲಕ ಬಿಜೆಪಿ ಹೊಂದಿರುವಂತಹ ಸಂಘಟನಾ ಶಕ್ತಿ ಕಾಂಗ್ರೆಸ್ಸಿಗೆ ಇಲ್ಲ. ತಳಮಟ್ಟದಲ್ಲಿ ಇನ್ನೂ ಚೆನ್ನಾಗಿ ಕಾರ್ಯತಂತ್ರ ರೂಪಿಸುವ ಮೂಲಕ, ಅಂದರೆ ಜನರನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಸಂಘಟಿಸುವ ಮೂಲಕ, ಕಾಂಗ್ರೆಸ್ ಪಕ್ಷ ಈ ಚುನಾವಣೆಯನ್ನು ಗೆದ್ದುಕೊಳ್ಳಬಹುದಿತ್ತು. ಏಕೆಂದರೆ, ಅತೃಪ್ತ ಮತದಾರರ ಭಾರೀ ಅಲೆಯೊಂದು ಗುಜರಾತಿನಲ್ಲಿ ಈ ಬಾರಿ ಕಂಡುಬಂದಿತ್ತು. ತನ್ನ ಸಂಘಟನಾ ಶಕ್ತಿ ಗುಜರಾತಿನಲ್ಲಿ ಬಹುಕಾಲದಿಂದ ಕೊಳೆಯುತ್ತಿದೆ ಎಂಬ ಬಗ್ಗೆ ಅವಲೋಕನ ನಡೆಸಲು ಕಾಂಗ್ರೆಸ್ಸಿಗೆ ಸಾಧ್ಯವಾಗಲಿಲ್ಲ ಎಂಬುದನ್ನು ಇವೆಲ್ಲ ಸೂಚಿಸುತ್ತವೆ.

ಪಟೇಲರು ಎಷ್ಟರಮಟ್ಟಿಗೆ ಪರಿಣಾಮ ಬೀರಿದರು?
ಈ ವಿಷಯ ಅರ್ಥ ಮಾಡಿಕೊಳ್ಳಲು ಕೆಲವು ಸಂಗತಿಗಳು ನೆರವಾಗಬಹುದು. ಮೊದಲನೆಯದು, ಪಟೇಲ ಸಮುದಾಯ ಏಕರೂಪಿ ಅಲ್ಲ. ಅವರು ಎರಡು ಪ್ರತ್ಯೇಕ ಜಾತಿಗಳಾಗಿ ಒಡೆದುಹೋಗಿದ್ದಾರೆ: ಲಾವಾ– ಸರ್ದಾರ್ ಪಟೇಲ್, ಪ್ರಫುಲ್ಲ ಪಟೇಲ್ ಮತ್ತು ನನ್ನ ಕುಟುಂಬ ಈ ಗುಂಪಿಗೆ ಸೇರಿವೆ. ಇನ್ನೊಂದು ಕಡ್ವಾ (ಅಂದರೆ ‘ಕಹಿ’ ಎಂಬ ಅರ್ಥವೂ ಇದೆ). ಹಾರ್ದಿಕ್, ಆನಂದಿಬೆನ್ ಪಟೇಲ್ ಈ ಗುಂಪಿಗೆ ಸೇರಿದವರು. ಭೂಮಾಲೀಕರು ಮತ್ತು ನಗರವಾಸಿಗಳು (ವೃತ್ತಿಪರರು, ವ್ಯಾಪಾರದಲ್ಲಿ ಇರುವವರು) ಎಂದೂ ಪಟೇಲರು ಹಂಚಿಹೋಗಿದ್ದಾರೆ.

ಬಿಜೆಪಿಯು ಸರ್ಕಾರ ರಚಿಸಿದಾಗಲೆಲ್ಲ ಅಲ್ಲಿನ ಸಂಪುಟದಲ್ಲಿ ಪಟೇಲರೇ ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಿದ್ದರು ಎಂಬುದು ಗಮನಿಸಬೇಕಾದ ಅತ್ಯಂತ ಪ್ರಮುಖ ವಿಚಾರ. ಪಟೇಲರು ತಮ್ಮದೇ ಹಿತಾಸಕ್ತಿಗಳಿಗೆ ವಿರುದ್ಧವಾಗಿ ಏಕೆ ಮತ ಚಲಾಯಿಸುತ್ತಾರೆ? ಕೆಲವರು ಬಿಜೆಪಿ ವಿರುದ್ಧ ಮತ ಚಲಾಯಿಸಿದರು ಎಂಬುದರಲ್ಲಿ ಅನುಮಾನ ಇಲ್ಲ. ಆದರೆ, ನನ್ನ ಪ್ರಕಾರ ಪಟೇಲರಲ್ಲಿ ಬಹುತೇಕರು ಬಿಜೆಪಿ ಪರವಾಗಿಯೇ ಮತ ಚಲಾಯಿಸಿದರು, ಭ್ರಮನಿರಸನರಾದ ಹಲವರು ಕಾಂಗ್ರೆಸ್ಸಿಗೆ ಮತ ಚಲಾಯಿಸುವ ಬದಲು ಮತದಾನದಿಂದಲೇ ದೂರ ಉಳಿದರು. 2002ರಲ್ಲಿ ನಡೆದ ಮುಸ್ಲಿಮರ ಹತ್ಯೆಗಳಿಗೆ ಸಂಬಂಧಿಸಿದಂತೆ ಶಿಕ್ಷೆಗೆ ಗುರಿಯಾದವರಲ್ಲಿ ಬಹುತೇಕರು ಪಟೇಲ ಸಮುದಾಯಕ್ಕೆ ಸೇರಿದವರು ಎಂಬುದು ಓದುಗರಿಗೆ ಗೊತ್ತಿರಲಿಕ್ಕಿಲ್ಲ. ಅವರು ಹಿಂದುತ್ವವನ್ನು ಉತ್ಸಾಹದಿಂದ ಬೆಂಬಲಿಸುತ್ತಾರೆ (ಹಾರ್ದಿಕ್ ಅವರ ಭಾಷಣಗಳನ್ನು ಸೂಕ್ಷ್ಮವಾಗಿ ಆಲಿಸುವವರಿಗೆ ಇದು ಗೊತ್ತಿರುತ್ತದೆ). ಪಕ್ಷದ ವಿರುದ್ಧವಾಗಿ ನಡೆಯುವುದು ಅವರಿಗೆ ಸುಲಭದ ಕೆಲಸವಲ್ಲ.

ಕಾಂಗ್ರೆಸ್ ಪ್ರತಿನಿಧಿಸುವುದು ಏನನ್ನು?
ಇದಕ್ಕೆ ಉತ್ತರಿಸುವುದು ಕಷ್ಟ. ಕಾಂಗ್ರೆಸ್ ನಡೆಸಿದ ಚುನಾವಣಾ ಅಭಿಯಾನದಲ್ಲಿ ನಿರಾಸೆ ಮೂಡಿಸಿದ ಹಲವು ಸಂಗತಿಗಳಲ್ಲಿ ಪ್ರಚಾರದ ಬಗೆ ಕೂಡ ಒಂದು. ರಾಹುಲ್‌ ಗಾಂಧಿ ಅವರು ದೇವಸ್ಥಾನಗಳಿಗೆ ಭೇಟಿ ನೀಡಿದ್ದರಲ್ಲಿ ಹುಳುಕು ಕಂಡುಹಿಡಿಯಲು ಆಗದು. ಏಕೆಂದರೆ ಅದು ಅವರ ಹಕ್ಕು. ಆದರೆ, ಬಿಜೆಪಿಯು ಬಹುಸಂಖ್ಯಾತರ ಪರ ಹಾಗೂ ಕೋಮುವಾದಿ ಪ್ರಚಾರ ನಡೆಸಿತು. ಇದಕ್ಕೆ ಕಾಂಗ್ರೆಸ್‌ ಪ್ರತಿಕ್ರಿಯಿಸಿದ್ದು ‘ಮುಸ್ಲಿಂ ದೂಷಣೆ’ ಬಗ್ಗೆ ಪ್ರಸ್ತಾಪವನ್ನೇ ಮಾಡದೇ ಇರುವ ಮೂಲಕ. ಹೀಗೆ ಮಾಡಿದ ಕಾರಣ ತಾನು ಒಂದಿಷ್ಟು ಸೀಟುಗಳನ್ನು ಗೆಲ್ಲುವ ಸಾಧ್ಯತೆ ಹೆಚ್ಚಾಯಿತು ಎಂದು ಕಾಂಗ್ರೆಸ್ ಭಾವಿಸಬಹುದು. ಆದರೆ ಇದರಿಂದಾಗಿ ಬಲಿಷ್ಠ ವಾದ, ಚರ್ಚೆಯೇ ಇಲ್ಲದ ಚುನಾವಣಾ ಅಭಿಯಾನ ಇದಾಯಿತು.

ಭಾರತೀಯರೆಲ್ಲರನ್ನೂ ಒಂದೆಡೆ ತರಬಲ್ಲ ಮಾಹಿತಿ ಹಕ್ಕು ಕಾಯ್ದೆ, ನರೆಗಾ, ಅರ್ಥ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿಭಾಯಿಸುವುದು ಹಾಗೂ ಇಂತಹ ಇತರ ವಿಷಯಗಳನ್ನು ಮುಂದಿಟ್ಟು ಚರ್ಚೆಯನ್ನು ಕಟ್ಟಲು ಸಾಧ್ಯವಿದೆ. ಯುಪಿಎ ಆಡಳಿತದ ಅವಧಿಯಲ್ಲಿ ಸಾಧ್ಯವಾದ ಸರಾಸರಿ ಜಿಡಿಪಿ ಬೆಳವಣಿಗೆ ದರವನ್ನು ಮುಟ್ಟಲು ನರೇಂದ್ರ ಮೋದಿ ಅವರಿಗೆ ಸಾಧ್ಯವಿಲ್ಲ ಎಂದು ಮನಮೋಹನ್ ಸಿಂಗ್ ಹೇಳಿದರು. ವಿಶ್ವ ಆರ್ಥಿಕ ಬಿಕ್ಕಟ್ಟಿನ ಅತ್ಯಂತ ಕೆಟ್ಟ ಸ್ಥಿತಿಯಲ್ಲೂ ಮನಮೋಹನ್ ಸಿಂಗ್ ಆ ಮಟ್ಟಿಗಿನ ಜಿಡಿಪಿ ಬೆಳವಣಿಗೆ ದರ ಸಾಧ್ಯವಾಗಿಸಿದರು. ಆದರೆ ಈಗ ವಿಶ್ವದ ಅರ್ಥ ವ್ಯವಸ್ಥೆ ಬೆಳೆಯುತ್ತಿದ್ದರೂ ಆ ಮಟ್ಟದ ಬೆಳವಣಿಗೆ ದರ ಮುಟ್ಟಲು ಮೋದಿ ಅವರಿಗೆ ಸಾಧ್ಯವಾಗಿಲ್ಲ. ಇದು ವಾಸ್ತವ.

ಅಭಿವೃದ್ಧಿ ವಿಚಾರದಲ್ಲಿ ಚುನಾವಣಾ ಪ್ರಚಾರ ನಡೆಸಲಾಗುವುದು ಎಂಬ ಮಾತುಗಳಿಗೆ ಕೈಕಾಲುಗಳೇ ಇಲ್ಲ. 2019ರಲ್ಲಿನ ಚುನಾವಣಾ ಪ್ರಚಾರ ಅಸಭ್ಯವಾಗಿಯೂ, ಅಶ್ಲೀಲವಾಗಿಯೂ ನಡೆಯಲಿದೆ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT