ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಬೇಸಾಂಗವಿ: ರಸ್ತೆ, ಚರಂಡಿ ಮರೀಚಿಕೆ

Last Updated 19 ಡಿಸೆಂಬರ್ 2017, 8:36 IST
ಅಕ್ಷರ ಗಾತ್ರ

ಭಾಲ್ಕಿ: ಹದಗೆಟ್ಟ ರಸ್ತೆ, ಗ್ರಾಮದ ರಸ್ತೆಗಳ ಮೇಲೆ ಮನೆಗಳ ಹೊಲಸು ನೀರು, ಅಂಗನವಾಡಿ ಕೇಂದ್ರದ ಮಕ್ಕಳಿ ಗಿಲ್ಲ ಆಟದ ಮೈದಾನ, ಪಾಳುಬಿದ್ದ ಬಸ್‌ ತಂಗುದಾಣ, ಗ್ರಾಮ ಸಮೀಪದ ರಸ್ತೆ ಅಕ್ಕಪಕ್ಕದಲ್ಲಿಯೇ ಶೌಚಕ್ರಿಯೆ, ಶಿಥಿಲಗೊಂಡ ಶಾಲಾ ಕೋಣೆಗಳು.

ಹೀಗೆ ತಾಲ್ಲೂಕು ಕೇಂದ್ರದಿಂದ 5 ಕಿ.ಮೀ ದೂರದಲ್ಲಿರುವ ಅಂಬೇ ಸಾಂಗವಿ ಗ್ರಾಮವೂ ನಾನಾ ಸಮಸ್ಯೆಗಳಿಂದ ಸೊರಗಿದ್ದು, ಗ್ರಾಮ ವಾಸಿಗಳು ಇಲ್ಲದ ತೊಂದರೆ ಅನುಭವಿಸುತ್ತಿದ್ದಾರೆ.

ಭಾಲ್ಕಿಯಿಂದ ಗಣೇಶಪೂರವಾಡಿ ಮಾರ್ಗವಾಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 5 ಕಿ.ಮೀ ರಸ್ತೆ ಎಂಟು ವರ್ಷಗಳಿಂದ ಹದಗೆಟ್ಟಿದ್ದು, ದ್ವಿಚಕ್ರ ವಾಹನ ಸವಾರರು, ಖಾಸಗಿ ಶಾಲೆಗಳ ಬಸ್‌ಗಳು ಅಪಾಯದ ಜತೆಗೆ ತೆಗೆದುಕೊಂಡು ಚಲಿಸುವಂತಾಗಿದೆ. ಈ ಮಾರ್ಗದ ರಸ್ತೆ ಕೆಟ್ಟಿರುವುದರಿಂದ ಜನ ಅನಿವಾರ್ಯವಾಗಿ ಅಂಬೇಸಾಂಗವಿ ಕ್ರಾಸ್‌ ಮಾರ್ಗವಾಗಿ ತಾಲ್ಲೂಕು ಕೇಂದ್ರಕ್ಕೆ ತೆರಳುತ್ತಿದ್ದಾರೆ.

‘ಇದರಿಂದ ಅನಗತ್ಯವಾಗಿ ಮೂರು ಕಿ.ಮೀ ಹೆಚ್ಚುವರಿ ಕ್ರಮಿಸಬೇಕಾಗಿದ್ದು, ಅಮೂಲ್ಯ ಸಮಯ, ಹಣ ಪೋಲಾಗುತ್ತಿದೆ. ರಸ್ತೆ ಸುಧಾರಣೆ ಸಂಬಂಧ ಅನೇಕ ಸಾರಿ ಜನಪ್ರತಿನಿಧಿ ಅಧಿಕಾರಿಗಳ ಗಮನ ಸೆಳೆದರೂ ಪ್ರಯೋಜನವಾಗಿಲ್ಲ’ ಎಂದು ಅಸಮಾ ಧಾನ ವ್ಯಕ್ತಪಡಿಸುತ್ತಾರೆ ಯುವಕರಾದ ಸಚಿನ್‌ ಬಿರಾದರ, ಸಚಿನ್‌ ರಜಂತಲ್‌.

ಗ್ರಾಮದ ಬಹುತೇಕ ಕಡೆ ಸಿ.ಸಿ ರಸ್ತೆ ನಿರ್ಮಿಸಲಾಗಿದೆ. ಆದರೆ, ಎಲ್ಲೆಡೆ ಚರಂಡಿ ವ್ಯವಸ್ಥೆ ಇಲ್ಲ. ಹೀಗಾಗಿ ಗ್ರಾಮದ ಪ್ರಮುಖ ರಸ್ತೆಗಳ ಮೇಲಿಂದಲೇ ಮನೆಗಳ ಹೊಲಸು ನೀರು ಹರಿಯುತ್ತಿವೆ. ಜನರಿಗೆ ನಡೆದಾಡಲು ಹಿಂಸೆ ಆಗುತ್ತಿದೆ. ಚರಂಡಿ ನೀರು ಗ್ರಾಮ ಸಮೀಪವೆ ಸಂಗ್ರಹ ಆಗುವುದರಿಂದ ಅಕ್ಕಪಕ್ಕದ ಮನೆಗಳ ಜನರಿಗೆ ಸಾಂಕ್ರಾಮಿಕ ರೋಗ ಭೀತಿ ಎದುರಾಗಿದೆ.

ಗ್ರಾಮದಲ್ಲಿ ಶೇ 75ರಷ್ಟು ಜನ ಶೌಚಾಲಯ ನಿರ್ಮಿಸಿಕೊಂಡಿದ್ದಾರೆ. ಆದರೆ, ಕೆಲವರು ಅವುಗಳನ್ನು ಪ್ರಜ್ಞೆಯ ಕೊರತೆಯಿಂದ ಬಳಸುತ್ತಿಲ್ಲ. ಇನ್ನು ಹೆಚ್ಚಿನವರಿಗೆ ಶೌಚಾಲಯ ನಿರ್ಮಿಸಿಕೊಳ್ಳಲು ಸ್ಥಳವಕಾಶ ಕೊರತೆ ಇದೆ. ಪಂಚಾಯಿತಿ ವತಿಯಿಂದಲೂ ಸಾರ್ವಜನಿಕ ಶೌಚಾಲಯ ನಿರ್ಮಿಸಿಲ್ಲ. ಅನಿವಾರ್ಯವಾಗಿ ಅವರೆಲ್ಲ ಗ್ರಾಮದ ಹೊರವಲಯದಲ್ಲಿ ಶೌಚ ಮಾಡುತ್ತಾರೆ. ಅದರ ದುರ್ವಾಸನೆ ಗ್ರಾಮ ವಾಸಿಗಳಲ್ಲಿ ಗ್ರಾಮದ ಬಗ್ಗೆ ಅಗೌರವ ಮನೋಭಾವ ಮೂಡಿಸುತ್ತಿದೆ ಎಂದು ಆಕ್ರೋಶ ಹೊರ ಹಾಕುತ್ತಾರೆ ರಜನಿಕಾಂತ ಬಿರಾದರ.

ಗ್ರಾಮ ಸಮೀಪದ ಸೇತುವೆಯ ಎತ್ತರ ಕಡಿಮೆ ಇದೆ. ಮಳೆಗಾಲದಲ್ಲಿ ಸೇತುವೆ ಮೇಲಿಂದ ನೀರು ಹರಿದು ಸಂಪರ್ಕ ಕಡಿತಗೊಳ್ಳುತ್ತದೆ. ಬಸ್‌ ತಂಗು ದಾಣ ಶಿಥಿಲಗೊಂಡಿದೆ. ಪ್ರಯಾಣಿಕರು ಮಳೆ, ಬಿಸಿಲು ಗಾಳಿಯಲ್ಲಿಯೇ ಬಸ್‌ಗಾಗಿ ಕಾಯಬೇಕಾಗಿದೆ. ಶಾಲೆಗೆ ಗೇಟ್‌ ಇಲ್ಲ. ಶಾಲೆ ಆವರಣದಲ್ಲಿನ ನಾಲ್ಕು ಕೋಣೆಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಅವುಗಳನ್ನು ನೆಲಸಮಗೊಳಿಸಿಲ್ಲ. ಮಕ್ಕಳ ಭವಿಷ್ಯ ಅಪಾಯದಲ್ಲಿದೆ. ಗ್ರಾಮದ ಎಲ್ಲ ಸಮಸ್ಯೆಗಳನ್ನು ಜನಪ್ರತಿನಿಧಿ, ಅಧಿಕಾರಿಗಳು ಪರಿಹರಿಸಲು ಮುಂದಾಗಬೇಕು ಎಂಬ ಆಗ್ರಹ ಸಾರ್ವಜನಿಕರದು.

* * 

>ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಬಹು ವರ್ಷಗಳಿಂದ ಹದಗೆಟ್ಟಿದೆ. ಬೈಕ್‌್ ಸವಾರರು ಜೀವ ಕೈಯಲ್ಲಿಡಿದು ವಾಹನ ಚಲಾಯಿಸುವಂತಾಗಿದೆ.
ರಜನಿಕಾಂತ ಬಿರಾದರ, ಗ್ರಾಮದ ನಿವಾಸಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT