ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮನಸ್ತಾಪ’ ಮೂಡಿಸಿದ ಟಿಕೆಟ್‌ ಪೈಪೋಟಿ

Last Updated 19 ಡಿಸೆಂಬರ್ 2017, 8:47 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಶಿಡ್ಲಘಟ್ಟ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಸ್ಪರ್ಧಿಸಲು ಶಾಸಕ ಎಂ.ರಾಜಣ್ಣ, ಮುಖಂಡ ಮೇಲೂರು ಬಿ.ಎನ್‌.ರವಿಕುಮಾರ್‌ ತೀವ್ರ ಪೈಪೋಟಿ ನಡೆಸಿದ್ದಾರೆ. ಇದರಿಂದ ತೆರೆಮರೆಯ ಮುಸುಕಿನ ಗುದ್ದಾಟ ಇತ್ತೀಚಿಗೆ ಬೀದಿಗೆ ಬರುತ್ತಿರುವ ಜತೆಗೆ ಜೆಡಿಎಸ್‌ ಪಾಳೆಯದಲ್ಲೇ ‘ಬಣ’ ರಾಜಕೀಯ ಜೋರಾಗಿದೆ.

ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಜೆಡಿಎಸ್‌ನಲ್ಲಿ ಸಕ್ರಿಯವಾಗಿ ಗುರುತಿಸಿಕೊಂಡ ರವಿಕುಮಾರ್‌ ಅವರು ರಾಜಣ್ಣ ಅವರ ಗೆಲುವಿಗೆ ಎಲ್ಲ ರೀತಿಯ ‘ಬಲ’ ತುಂಬಿದವರ ಪೈಕಿ ಪ್ರಮುಖರು. ಹೀಗಾಗಿಯೇ ಕಳೆದ ನಾಲ್ಕು ವರ್ಷಗಳಿಂದ ಈ ಇಬ್ಬರ ‘ಗಳಸ್ಯ- ಕಂಠಸ್ಯ’ ಸ್ನೇಹ ಚೆನ್ನಾಗಿಯೇ ಮುಂದುವರಿದುಕೊಂಡು ಬಂದಿತ್ತು ಎನ್ನಲಾಗಿದೆ.

ಆರು ತಿಂಗಳ ಹಿಂದೆ ರವಿಕುಮಾರ್‌ ಈ ಬಾರಿ ಜೆಡಿಎಸ್‌ನಿಂದ ನಾನು ಸ್ಪರ್ಧಿಸಲಿದ್ದೇನೆ ಎಂದು ಬಹಿರಂಗವಾಗಿ ಹೇಳುತ್ತಿದ್ದಂತೆ ಇಬ್ಬರ ಸ್ನೇಹದಲ್ಲಿ ಬಿರುಕು ಕಾಣಿಸಿಕೊಳ್ಳಲು ಆರಂಭಿಸಿತ್ತು. ಅದೀಗ ಕಂದಕದ ಸ್ವರೂಪ ಪಡೆದು ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಗೊಂದಲಕ್ಕೆ ಕಾರಣವಾಗಿದೆ.

ಈಗಾಗಲೇ ಈ ಇಬ್ಬರೂ ಪ್ರತ್ಯೇಕವಾಗಿ ತಮ್ಮ ಬೆಂಬಲಿಗರೊಂದಿಗೆ ವರಿಷ್ಠರನ್ನು ಭೇಟಿ ಮಾಡಿ ಟಿಕೆಟ್‌ಗಾಗಿ ‘ಒತ್ತಡ’ ಹಾಕಿ ಬಂದಿದ್ದಾರೆ. ಸದ್ಯ ಟಿಕೆಟ್‌ ಪೈಪೋಟಿ ಕಾರಣಕ್ಕಾಗಿಯೇ ಸ್ನೇಹ ಸೇಡಾಗಿ ಪರಿವರ್ತನೆಗೊಂಡು ತೊಡೆ ತಟ್ಟುವ ಹಂತ ತಲುಪಿದೆ.

ಒಂದೆಡೆ ರಾಜಣ್ಣ ‘ಈ ಬಾರಿಯೂ ನನಗೆ ಟಿಕೆಟ್‌. ಅದಾಗಲೇ ಈ ಬಗ್ಗೆ ಪಕ್ಷದ ವರಿಷ್ಠರ ಸಭೆಯಲ್ಲಿ ನಿರ್ಣಯವಾಗಿದೆ’ ಎಂದು ಹೇಳಿಕೊಳ್ಳುತ್ತಿದ್ದರೆ, ಇನ್ನೊಂದೆಡೆ ರವಿಕುಮಾರ್‌ ಅವರು ‘ಎಚ್‌.ಡಿ.ದೇವೇಗೌಡ ಮತ್ತು ಜಯಪ್ರಕಾಶ್‌ ನಾರಾಯಣ್‌ ಸೇವಾಭಿವೃದ್ಧಿ ಚಾರಿಟಬಲ್‌ ಟ್ರಸ್ಟ್‌’ ಮೂಲಕ ‘ಸೇವಾ ಕಾರ್ಯ’ಗಳನ್ನು ಚುರುಕುಗೊಳಿಸಿ ‘ನಾನೇ ಅಭ್ಯರ್ಥಿಯಾಗುವುದು ಖಚಿತ’ ಎನ್ನುವ ಮೂಲಕ ‘ಕದನ ಕುತೂಹಲ’ ಕೆರಳಿಸುತ್ತಿದ್ದಾರೆ.

ರಿಯಲ್ ಎಸ್ಟೆಟ್‌ ಉದ್ಯಮಿಯಾಗಿರುವ ರವಿಕುಮಾರ್ ಆರ್ಥಿಕವಾಗಿ ಕೂಡ ಚೆನ್ನಾಗಿದ್ದಾರೆ. ಹೀಗಾಗಿಯೇ ಅವರು ಈಗಾಗಲೇ ಓಂ ಶಕ್ತಿ ಪ್ರವಾಸ, ಶಬರಿಮಲೆ ಯಾತ್ರೆಗಳಿಗೆ ‘ಭಕ್ತ’ರನ್ನು ಕಳುಹಿಸಿಕೊಡಲು ಆರಂಭಿಸಿದ್ದಾರೆ. ಕೆಲ ಆಂಬುಲೆನ್ಸ್‌ಗಳನ್ನು ದೇಣಿಗೆ ನೀಡಿದ್ದಾರೆ. ಶಿಡ್ಲಘಟ್ಟ ಪಟ್ಟಣದಲ್ಲಿಯೇ ಐದೂವರೆ ಎಕರೆ ಭೂಮಿ ಖರೀದಿಸಿ ಮುಸ್ಲಿಮರ ಸ್ಮಶಾನಕ್ಕಾಗಿ ‘ಕೊಡುಗೆ’ ನೀಡಿದ್ದಾರೆ.

ಇತ್ತೀಚೆ ಬುರುಡುಗುಂಟೆಯಲ್ಲಿ ಎಚ್.ಡಿ.ಕುಮಾರಸ್ವಾಮಿ ಮತ್ತು ಎಚ್‌.ಡಿ.ರೇವಣ್ಣ ಅವರ ಹುಟ್ಟುಹಬ್ಬದ ‘ನೆಪ’ದಲ್ಲಿ ಅದ್ದೂರಿ ಕಾರ್ಯಕ್ರಮ ಆಯೋಜಿಸಿದ್ದ ರವಿಕುಮಾರ್ 330 ಗರ್ಭಿಣಿಯರಿಗೆ ತಲಾ ₹ 10 ಸಾವಿರದಂತೆ ₹ 33 ಲಕ್ಷ ಆರ್ಥಿಕ ಸಹಾಯ ನೀಡಿದರು. ಆದರೆ ಈ ಕಾರ್ಯಕ್ರಮಕ್ಕೆ ರಾಜಣ್ಣ ಅವರನ್ನು ‘ಸೌಜನ್ಯ’ಕ್ಕೂ ಆಹ್ವಾನಿಸಲಿಲ್ಲ ಎನ್ನುವ ನೋವು ಪಕ್ಷದ ಕಾರ್ಯಕರ್ತರಲ್ಲಿ ಮನೆ ಮಾಡಿದೆ.

ಒಂದು ಬಾರಿ ಸೋಲು, ಮಾಜಿ ಶಾಸಕರಾಗಿದ್ದ ಮಾವ ಮುನಿಶಾಮಪ್ಪ ಅವರ ಸಾವಿನ ‘ಅನುಕಂಪ’ ಕಳೆದ ಚುನಾವಣೆಯಲ್ಲಿ ರಾಜಣ್ಣ ಅವರಿಗೆ ಗೆಲುವು ತಂದು ಕೊಟ್ಟಿತ್ತು. ಚುನಾವಣೆ ಸಂದರ್ಭದಲ್ಲಿ ಗಡ್ಡ ಬಿಟ್ಟಿದ್ದ ರಾಜಣ್ಣ, ಮನೆ ಮನೆಗೆ ಹೋಗಿ ‘ನೋಟು, ಓಟು ಎರಡು ನೀವೇ ನೀಡಿ’ ಎಂದು ಮತದಾರರ ಎದುರು ನಿಂತಾಗ ಆ ಸನ್ನಿವೇಶದಲ್ಲಿ ಬಹುಪಾಲು ಮತದಾರರ ಮನ ಕರಗಿತ್ತು.

ಸದ್ಯ, ತಾಲ್ಲೂಕು ಪಂಚಾಯಿತಿ, ನಗರಸಭೆ ಸೇರಿದಂತೆ ಸ್ಥಳೀಯ ಸಂಸ್ಥೆಗಳಲ್ಲಿರುವ ಜೆಡಿಎಸ್ ಸದಸ್ಯರು ಕೂಡ ಸದ್ಯ ರಾಜಣ್ಣ ಅವರ ಹಿಡಿತದಿಂದ ಹೊರಬಂದಿದ್ದಾರೆ. ಕ್ಷೇತ್ರದಲ್ಲಿ ಬಹುಸಂಖ್ಯಾತ ಮತ ಹೊಂದಿರುವ ವಾಲ್ಮೀಕಿ ಸಮುದಾಯವನ್ನು ಪ್ರತಿನಿಧಿಸುವ ಜಿಲ್ಲಾ ಪಂಚಾಯಿತಿ ಸದಸ್ಯ ಬಂಕ್ ಮುನಿಯಪ್ಪ ಅವರು ಸಹ ರವಿಕುಮಾರ್‌ ಅವರೊಂದಿಗೆ ಗುರುತಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಬಾರಿ ಸ್ನೇಹಿತನೇ ಪ್ರಬಲ ಆಕಾಂಕ್ಷಿಯಾಗಿರುವುದು ರಾಜಣ್ಣ ಅವರಿಗೆ ನುಂಗಲಾರದ ತುತ್ತಾಗಿದೆ ಎನ್ನುತ್ತಾರೆ ಈ ‘ಒಳ ರಾಜಕೀಯ’ ಬಲ್ಲವರು.

ಹೀಗಾಗಿಯೇ ರಾಜಣ್ಣ ಸದ್ಯ ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ನಡೆದಿರುವ ಅಭಿವೃದ್ಧಿ ಕಾಮಗಾರಿಗಳನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಸಿಕೊಡುವ ಕೆಲಸಕ್ಕೆ ಮುಂದಾಗಿದ್ದಾರೆ. ಹಿಂದೆ ಜೆಡಿಎಸ್‌–ಬಿಜೆಪಿ ಮೈತ್ರಿ ರಾಜಕಾರಣಕ್ಕೆ ಕುಮಾರಸ್ವಾಮಿ ಅವರು ಮುನ್ನುಡಿ ಬರೆದಾಗ ಜೆಡಿಎಸ್‌ನಲ್ಲೇ ಅಪ್ಪ –ಮಗನ ಬಣಗಳು ಸೃಷ್ಟಿಯಾಗಿದ್ದವು.

ಈ ವೇಳೆ ಕುಮಾರಸ್ವಾಮಿ ಅವರು ಕೈಗೊಂಡ ನಿರ್ಧಾರಕ್ಕೆ ಮೊದಲ ಸಹಿ ಹಾಕಿದವರು ರಾಜಣ್ಣ ಎನ್ನಲಾಗಿದೆ. ಹೀಗಾಗಿಯೇ ಅವರು ಅಂದಿನಿಂದ ಈವರೆಗೆ ಕುಮಾರಸ್ವಾಮಿ ಅವರಿಗೆ ‘ಪರಮಾಪ್ತ’ರಾಗಿ ಉಳಿದುಕೊಂಡು ಬಂದಿದ್ದಾರೆ. ಅದು ಕೂಡ ಅವರಿಗೆ ಟಿಕೆಟ್ ವಿಚಾರದಲ್ಲಿ ವರದಾನವಾಗುವ ಸಾಧ್ಯತೆ ಇದೆ ಎನ್ನುತ್ತಾರೆ ಜೆಡಿಎಸ್‌ನ ಕೆಲ ಮುಖಂಡರು. ಈ ಭಿನ್ನಮತವನ್ನು ವರಿಷ್ಠರು ಹೇಗೆ ಬಗೆಹರಿಸಿ, ಯಾರಿಗೆ ಟಿಕೆಟ್‌ ನೀಡುತ್ತಾರೆ ಎನ್ನುವುದು ಸದ್ಯದ ಕುತೂಹಲ.

ಅತಿರೇಕಕ್ಕೆ ಹೋಗಿದ್ದು ನಿಜ

ಈ ಬಗ್ಗೆ ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ನಾಗರಾಜ್ ಅವರನ್ನು ಕೇಳಿದರೆ, ‘ಶಿಡ್ಲಘಟ್ಟದಲ್ಲಿ ಜೆಡಿಎಸ್‌ ಒಳ ಜಗಳ ಬೀದಿಗೆ ಬಂದು, ಅತಿರೇಕಕ್ಕೆ ಹೋಗಿದ್ದು ನಿಜ. ಸದ್ಯ ಜೆಡಿಎಸ್‌ ಟಿಕೆಟ್‌ಗೆ ಶಾಸಕ ರಾಜಣ್ಣ ಮತ್ತು ರವಿಕುಮಾರ್ ಆಕಾಂಕ್ಷಿಗಳಾಗಿದ್ದಾರೆ. ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ರವಿಕುಮಾರ್ ನಾನು ಪ್ರಬಲ ಆಕಾಂಕ್ಷಿ ಎಂದು ಕೂಡ ಹೇಳಿಕೊಂಡಿದ್ದಾರೆ. ಇಬ್ಬರಿಗೂ ವರಿಷ್ಠರು ಕರೆ ಮಾಡಿ ಒಟ್ಟಿಗೆ ಹೋಗುವಂತೆ ಸೂಚಿಸಿದ್ದಾರೆ. ಈ ವಾರದಲ್ಲಿ ಇಬ್ಬರನ್ನು ಕರೆಯಿಸಿ ಮಾತನಾಡಲಿದ್ದಾರೆ’ ಎಂದು ಹೇಳಿದರು.

* *

ಶಾಸಕ ರಾಜಣ್ಣ, ರವಿಕುಮಾರ್ ನಡುವಿನ ಬಿರುಕು ಮುಚ್ಚಲು ಸಾಕಷ್ಟು ಶ್ರಮಪಟ್ಟೆ. ಆ ಪ್ರಯತ್ನ ವಿಫಲವಾಗಿದೆ. ಹೀಗಾಗಿ ಈ ವಿಚಾರ ವರಿಷ್ಠರ ಗಮನಕ್ಕೆ ತಂದಿರುವೆ.
ಕೆ.ವಿ.ನಾಗರಾಜ್, ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT