ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಈರುಳ್ಳಿ ಬೆಲೆ ಹೆಚ್ಚಳ, ಟೊಮೆಟೊ ಅಗ್ಗ

Last Updated 19 ಡಿಸೆಂಬರ್ 2017, 9:35 IST
ಅಕ್ಷರ ಗಾತ್ರ

ಹಾವೇರಿ: ಸುಮಾರು ಒಂದು ತಿಂಗಳಿಂದ ಈರುಳ್ಳಿ ದರವು ಕೆ.ಜಿ.ಗೆ ₹50ರಿಂದ ₹60ರ ಆಸುಪಾಸಿನಲ್ಲಿದ್ದರೆ, ಕೆ.ಜಿಗೆ ₹20ರ ಆಸುಪಾಸಿನಲ್ಲಿದ್ದ ಟೊಮೆಟೊ ಬೆಲೆಯು ದಿಢೀರ್‌ ₹4ರಿಂದ ₹6ಕ್ಕೆ ಕುಸಿದಿದೆ. ಇದು ನಗರದ ಮಾರುಕಟ್ಟೆಯಲ್ಲಿ ಸೋಮವಾರ ಕಂಡು ಬಂದ ತರಕಾರಿ ಬೆಲೆಗಳ ಚಿತ್ರಣ.

‘ಜಿಲ್ಲೆಯ ರಾಣೆಬೆನ್ನೂರು, ಬ್ಯಾಡಗಿ ಹಾಗೂ ಹಾವೇರಿ ತಾಲ್ಲೂಕುಗಳಲ್ಲಿ ಈರುಳ್ಳಿ ಬೆಳೆಯುತ್ತಾರೆ. ಆದರೆ, ಈ ಬಾರಿ ಬಿತ್ತನೆಯ ಪ್ರಾರಂಭದಲ್ಲಿ ಮಳೆ ಕೊರತೆ ಹಾಗೂ ಬಳಿಕ ಧಾರಾಕಾರ ಮಳೆಯಿಂದಾಗಿ ಈರುಳ್ಳಿ ಬೆಳೆಗೆ ಹಾನಿಯಾಗಿದೆ ಎಂದು ರೈತ ಮುಖಂಡ ಮಲ್ಲಿಕಾರ್ಜುನ ಬಳ್ಳಾರಿ ತಿಳಿಸಿದರು. ‘ಆಣೆವಾರಿಯಲ್ಲೇ ಇಳುವರಿ ಕುಸಿತ ಕಂಡು ಬಂದಿದೆ. ಹೀಗಾಗಿ ಈರುಳ್ಳಿ ಬೆಳೆದ ಎಲ್ಲ ರೈತರಿಗೂ ಬೆಳೆ ವಿಮೆ ನೀಡಬೇಕು’ ಎಂದರು.

‘ನಾನು, ಈ ಬಾರಿ ಎರಡು ಎಕರೆಯಲ್ಲಿ ಈರುಳ್ಳಿ ಬೆಳೆದಿದ್ದೆನು. ಆದರೆ, ಕೊಯ್ಲು ಸಂದರ್ಭ ಧಾರಾಕಾರ ಮಳೆಯಾಗಿದ್ದು, ಹೊಲದಲ್ಲಿಯೇ ಕೊಳೆತು ಹೋಯಿತು. ಆಗ ಬೆಲೆಯೂ ಕಡಿಮೆ ಇತ್ತು. ಕ್ವಿಂಟಲ್‌ಗೆ ₹2,500ರಿಂದ ₹ 3 ಸಾವಿರದ ವರೆಗೆ ಮಾತ್ರ ಸಿಕ್ಕಿತ್ತು. ಆದರೆ, ಈಗ ಬೆಲೆ ಹೆಚ್ಚಾಗಿದೆ ಎಂದು ರಾಣೆಬೆನ್ನೂರು ತಾಲ್ಲೂಕು ಹಲಗೇರಿ ಗ್ರಾಮದ ಈರುಳ್ಳಿ ಬೆಳೆಗಾರ ಬಸವರಾಜ ಕಡೂರು ತಿಳಿಸಿದರು.

ನವೆಂಬರ್‌ ಆರಂಭದಲ್ಲಿ ಪ್ರತಿ ಕ್ವಿಂಟಲ್‌ಗೆ ₹ 2,700ರಿಂದ ₹2,900ರ ವರೆಗೆ ಇದ್ದ ಈರುಳ್ಳಿ ಬೆಲೆ ₹3,600 ರಿಂದ ₹5,250ರ ವರೆಗೆ ಹೆಚ್ಚಾಯಿತು. ಡಿಸೆಂಬರ್‌ ಪ್ರಾರಂಭದಲ್ಲಿ ₹3,500ರಿಂದ ₹ 4,100ರ ವರೆಗೆ ಇದ್ದ ಬೆಲೆಯು ಈಗ ₹3,750ರಿಂದ ₹4 ಸಾವಿರ ವರೆಗೆ ಬಂದಿದೆ ಎನ್ನುತ್ತಾರೆ ವ್ಯಾಪಾರಸ್ಥ ಚನ್ನಪ್ಪ ಕೊಲ್ವಾಲ್‌.

ಆದರೆ, ಮಾರುಕಟ್ಟೆಯಲ್ಲಿ ಟೊಮೆಟೊ ಬಿಟ್ಟರೆ, ಬೆರೆಲ್ಲ ತರಕಾರಿ ಬೆಲೆಗಳು ಹೆಚ್ಚಿವೆ. ಹೀಗಾಗಿ, ಜನ ತರಕಾರಿ ಖರೀದಿ ಕಡಿಮೆ ಮಾಡಿದ್ದಾರೆ ಎಂದು ಗ್ರಾಹಕ ಮೊಹಮ್ಮದ್‌ ಗೌಸ್‌ ಶೇತಸನದಿ ತಿಳಿಸಿದರು.

ತರಕಾರಿ ಬೆಲೆಯೂ ಹೆಚ್ಚುತ್ತಿದೆ: ಹಸಿ ಮೆಣಸಿನಕಾಯಿ, ಹೀರೇಕಾಯಿ, ಸೌತೆಕಾಯಿ ಹಾಗೂ ಬೀನ್ಸ್‌ ಪ್ರತಿ ಕೆ.ಜಿ.ಗೆ ₹50ರಿಂದ ₹60ರ ವರೆಗೆ ಮಾರಾಟ ಆಗುತ್ತಿದೆ ಎಂದು ತರಕಾರಿ ವ್ಯಾಪಾರಸ್ಥೆ ಈರವ್ವ ಕಾನ್ಮನಿ ತಿಳಿಸಿದರು. ಬದನೆಕಾಯಿ ₹40ರಿಂದ ₹50, ಆಲೂಗಡ್ಡೆ ₹20, ಬೀಟ್‌ರೋಟ್‌, ಕ್ಯಾರೆಟ್‌ ಹಾಗೂ ದೊಡ್ಡ ಮೆಣಸಿನಕಾಯಿ ಪ್ರತಿ ಕೆಜಿಗೆ ₹40ರಿಂದ ₹50ರ ವರೆಗೆ ಮಾರುತ್ತಿದ್ದೇವೆ ಎಂದರು.

ಈ ವಾರ ಮಾರುಕಟ್ಟೆಗೆ ಕೊತ್ತಂಬರಿ ಸೊಪ್ಪು ಹೆಚ್ಚಾಗಿ ಬಂದಿದೆ. ಒಂದು ಕಟ್ಟು ಸೊಪ್ಪಿಗೆ ₹1ಕ್ಕೆ ಮಾರಾಟ ಮಾಡುತ್ತಿದ್ದಾರೆ. ಆದರೆ, ದಲ್ಲಾಳಿಗಳು ಕಡಿಮೆ ಬೆಲೆಗೆ ತರಕಾರಿ ಖರೀದಿ ಮಾಡಿ, ಹೆಚ್ಚಿನ ಬೆಲೆಗೆ ಮಾರುತ್ತಿದ್ದಾರೆ. ಇದರಿಂದ ರೈತರಿಗೂ ಉತ್ತಮ ಬೆಲೆ ಸಿಗುತ್ತಿಲ್ಲ. ಗ್ರಾಹಕರಿಗೆ ಹೊರೆಯಾಗಿದೆ ಎಂದು ಗ್ರಾಹಕ ಮಾಲತೇಶ ಕನ್ನೇಶ್ವರ ತಿಳಿಸಿದರು.

* * 

ಜಿಲ್ಲೆಯಲ್ಲಿ ಪ್ರತಿ ವರ್ಷ 5ರಿಂದ 6 ಸಾವಿರ ಹೆಕ್ಟೇರ್‌ ಪ್ರದೇಶದಲ್ಲಿ ಈರುಳ್ಳಿ ಬಿತ್ತನೆಯಾಗುತ್ತಿತ್ತು. ಈ ವರ್ಷ ಮಳೆ ಕೊರತೆಯಿಂದ 1,500 ಹೆಕ್ಟೇರ್‌ ಮಾತ್ರ ಬಿತ್ತನೆಯಾಗಿದೆ.
ಎಸ್‌.ಪಿ.ಭೋಗಿ
ತೋಟಗಾರಿಕೆ ಇಲಾಖೆಯ ಉಪನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT