ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಐದು ಆ್ಯಪ್‌ ರೂಪಿಸಿದ 13 ರ ಪೋರ...

Last Updated 19 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹೈದರಾಬಾದ್‌ನಲ್ಲಿ ಇತ್ತೀಚೆಗೆ ನಡೆದ ಜಾಗತಿಕ ಉದ್ಯಮಶೀಲತಾ ಶೃಂಗಸಭೆಯಲ್ಲಿ ಉದ್ಯಮಿಗಳು, ಹೂಡಿಕೆದಾರರು, ದೊಡ್ಡ ದೊಡ್ಡ ಕಂಪನಿಗಳ ಮಾಲೀಕರು,  ದೇಶ ವಿದೇಶಗಳ ಹೊಸ ಸಂಶೋಧಕರು ಭಾಗವಹಿಸಿದ್ದರು. ಈ ಎಲ್ಲದರ ನಡುವೆ ಅಲ್ಲಿಗೆ ಬಂದಿದ್ದವರನ್ನು ಹೆಚ್ಚು ಆಕರ್ಷಿಸಿದ್ದು ಆಸ್ಟ್ರೇಲಿಯಾದ 13 ರ ಬಾಲಕ. ಈತ ತನ್ನ ಗೇಮಿಂಗ್ ಮತ್ತು ಜಾಗೃತಿ ಆ್ಯಪ್‌ಗಳ ಮೂಲಕ ಸೆಳೆದಿದ್ದ.

ಹಮೀಶ್‌ ಫಿನ್ಲೆಷನ್‌ 7 ನೇ ತರಗತಿಯಲ್ಲಿ ಓದುತ್ತಿದ್ದರೂ 5  ಆ್ಯಪ್‌ಗಳನ್ನು ರೂಪಿಸಿದ್ದಾನೆ. ಅವುಗಳಲ್ಲಿ ಆಟಿಸಂ (ಸ್ವಲೀನತೆ) ಕುರಿತು ಜಾಗೃತಿ ಆ್ಯಪ್‌, ಕಡಲಾಮೆಗಳ ರಕ್ಷಣೆಗೆ ಅರಿವು ಮೂಡಿಸುವ ಆ್ಯಪ್ ಸೇರಿವೆ. ಇವುಗಳಲ್ಲಿ ನಾಲ್ಕು ಆ್ಯಪ್‌ಗಳು ಪರಿಸರ ಸಂರಕ್ಷಣೆ ಕುರಿತಂತೆ ಇವೆ. ಟ್ರಾ‍ಫಿಕ್‌ ಜಾಮ್‌ ಕುರಿತ ಆರನೇ  ಆ್ಯಪ್‌ ಅನ್ನು ಈತ ರೂಪಿಸುತ್ತಿದ್ದಾನೆ. ಆರನೇ ವಯಸ್ಸಿನಲ್ಲೇ ವೆಬ್‌ಸೈಟ್‌ ರೂಪಿಸುವಲ್ಲಿ ಗುರುತಿಸಿಕೊಂಡ ಆಸ್ಟ್ರೇಲಿಯಾದ ಮೆಲ್ಬರ್ನ್‌ನ ಯುಮಾ ಸೇರಿಯಾಂಟೊ ರೀತಿಯೇ ಹಮೀಶ್‌ ಈಗ ವಿಶ್ವದ ಗಮನಸೆಳೆದಿದ್ದಾನೆ.

ಹೊಸ ಹೊಸ ತಂತ್ರಜ್ಞಾನದ ಬಗ್ಗೆ ಈತನ ಆಸಕ್ತಿ ಇದ್ದರೂ ತರಗತಿಯ ಅಧ್ಯಯನಕ್ಕೆ ಹೆಚ್ಚಿನ ಸಮಯವನ್ನು ಮೀಸಲಿಡುತ್ತಾನೆ. ‘ನಾನು ಶಾಲೆಯ ಮನೆಕೆಲಸ ಮುಗಿದ ನಂತರವೇ ಆ್ಯಪ್‌ಗಳ ಕಡೆ ಕೆಲಸ ಮಾಡುತ್ತೇನೆ’ ಎನ್ನುತ್ತಾನೆ ಈತ.

‘ನನ್ನ ಮಗ ಎಂಟು ವರ್ಷದವನಾಗಿದ್ದಾಗಲೇ  (ಮೂರನೇ ತರಗತಿ) ಆ್ಯಪ್ ಸಿದ್ಧಪಡಿಸುವ ಕಡೆ ಆಸಕ್ತಿ ವಹಿಸುತ್ತಿದ್ದ. ಆ್ಯಪ್‌ ರೂಪಿಸುವ ಸ್ಪರ್ಧೆಯೊಂದಕ್ಕೆ ಹೋದ ನಂತರ ಇವನ ಆಸಕ್ತಿ ಇನ್ನೂ ಹೆಚ್ಚಿತು’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಹಮೀಶ್‌ ತಂದೆ ಗ್ರೆಮ್ಮೆ ಫಿನ್ಲೆಸನ್‌. ‘ಟ್ರಾಫಿಕ್ ಜಾಮ್‌ ಸೇರಿದಂತೆ ಪ್ರಪಂಚದಾದ್ಯಂತ ಜನರು ಎದುರಿಸುತ್ತಿರುವ ಸಮಸ್ಯೆಗಳಿಗೆ ಒಂದಷ್ಟು ಪರಿಹಾರ ಕಂಡುಹಿಡಿಯುವ ನಿಟ್ಟಿನಲ್ಲಿ ನನ್ನ ಮಗ ಈ ಕಿರಿಯ ವಯಸ್ಸಿನಲ್ಲಿ ಮುಂದಾಗಿದ್ದಾನೆ’ ಎನ್ನುತ್ತಾರೆ ಇವರು.

ಹಮೀಶ್‌ ರೂಪಿಸಿದ ಆ್ಯಪ್‌ಗಳು ಗೂಗಲ್‌ ಪ್ಲೇಸ್ಟೋರ್‌ನಲ್ಲಿ 54 ದೇಶಗಳಲ್ಲಿ ಡೌನ್‌ಲೋಡ್‌ ಆಗಿವೆ. ಫೇಸ್‌ಬುಕ್‌ ಮತ್ತು ಆ್ಯಪಲ್‌ ಕಂಪನಿಗಳು ಈತನ ಆ್ಯಪ್‌ ಬಗ್ಗೆ ಕುತೂಹಲ ವ್ಯಕ್ತಪಡಿಸಿವೆ. ಅಮೆರಿಕದ ಆಗಿನ ವಿದೇಶಾಂಗ ಕಾರ್ಯದರ್ಶಿ ಜಾನ್‌ ಕೆರಿ ಸಹ ಇವನ ಬಗ್ಗೆ ಕೇಳಿ ತಿಳಿದುಕೊಂಡಿದ್ದಾರೆ. ಫೇಸ್‌ಬುಕ್‌ ಕಚೇರಿಗೆ ಭೇಟಿ ನೀಡಿರುವ ಈತನಿಗೆ ಆ್ಯಪ್‌ಗಳನ್ನು ಅಭಿವೃದ್ಧಿಪಡಿಸಲು ಹಣಕಾಸಿನ ನೆರವು ನೀಡುವ ಭರವಸೆಯನ್ನು ಕಂಪನಿ ನೀಡಿದೆ.

ಈತನಿಗೂ ಆಟಿಸಂ ಸಮಸ್ಯೆ

ಸ್ವತಃ ಹಮೀಶ್‌ಗೆ ಆಟಿಸಂ ಸಮಸ್ಯೆ ಇದೆ. ಹಾಗಾಗಿ ಬೇರೆಯವರ ಸಮಸ್ಯೆ ಏನು ಎಂಬ ಬಗ್ಗೆ ತಿಳಿದುಕೊಳ್ಳಲು ಸುಲಭವಾಗಿದೆ. ಸ್ವಲೀನತೆ ಹೊಂದಿರುವ ಮಕ್ಕಳಿಗೆ  ಶಿಕ್ಷಕರು ಹೇಗೆ ಬೋಧನೆ ಮಾಡಬೇಕು, ಅವರ ತೊಂದರೆಯನ್ನು ಹೇಗೆ ಗುರುತಿಸಬೇಕು ಎಂಬ ಮಾಹಿತಿ ಈತನ ಆ್ಯಪ್‌ನಲ್ಲಿದೆ. ASD and Me ಹೆಸರಿನ ಈ ಆ್ಯಪ್‌ನಲ್ಲಿ ಕಾರ್ಟೂನ್‌ ಕ್ಯಾರೆಕ್ಟರ್‌ಗಳ ಬಳಕೆ ಮಾಡಲಾಗಿದೆ. LitterbugSmash ಎಂಬ ಆ್ಯಪ್‌ ಅನ್ನು 10 ನೇ ವಯಸ್ಸಿನಲ್ಲಿದ್ದಾಗಲೇ ಈತ ರೂಪಿಸಿದ್ದಾನೆ. ಇದು ಕಡಲಾಮೆಗಳನ್ನು ರಕ್ಷಿಸುವ ಬಗ್ಗೆ ಮಾಹಿತಿ ನೀಡುತ್ತದೆ.

ಬ್ಯಾಂಕ್‌ವೆಸ್ಟ್‌ನ ಸ್ಟ್ರಾಟಜಿ ಮತ್ತು ಪ್ಲ್ಯಾನಿಂಗ್‌ ಎಂಟರ್‌ಪ್ರೈಸಸ್‌ನ ಪ್ರಧಾನ ವ್ಯವಸ್ಥಾಪಕ ಸಿಯಾನ್‌ ಲಿಂಗ್ಟನ್‌ ಮತ್ತು ಅಮೆರಿಕದ ವಿದೇಶಾಂಗ ಮತ್ತು ಪಬ್ಲಿಕ್‌ ಡಿಪ್ಲೊಮಸಿಯ ಮಾಜಿ ಕಾರ್ಯದರ್ಶಿ ರಿಕ್ ಸ್ಟೆಂಗಲ್‌ ಅವರು ಹಮೀಶ್‌ ಕಾರ್ಯಕ್ಕೆ ಬೆನ್ನುತಟ್ಟಿ ಸಲಹೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT