ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಧವಾರ, 20–12–1967

Last Updated 19 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಮುಂದಿನ ವರ್ಷ ರಾಜ್ಯದ ಯೋಜನೆಗೆ 51 ಕೋಟಿ ರೂ. ವೆಚ್ಚ
ನವದೆಹಲಿ, ಡಿ. 19–
ದೊರೆಯುವ ಸಂಪತ್ಸಾಧನಗಳ ಆಧಾರದ ಮೇಲೆ 1968–69ನೇ ಸಾಲಿನ ಮೈಸೂರು ರಾಜ್ಯದ ಯೋಜನೆಗೆ 51.32 ಕೋಟಿ ರೂ. ವೆಚ್ಚ ಮಾಡಲು ಉದ್ದೇಶಿಸಲಾಗಿದೆ.

ಮೈಸೂರು ರಾಜ್ಯದ ವಾರ್ಷಿಕ ಯೋಜನೆಯ ಬಗ್ಗೆ ಇಂದು ನಡೆದ ಮಾತುಕತೆಗಳಲ್ಲಿ ಯೋಜನಾ ಆಯೋಗದ ಉಪಾಧ್ಯಕ್ಷ ಶ್ರೀ ಡಿ.ಆರ್. ಗಾಡ್ಗಿಲ್, ಆಯೋಗದ ಸದಸ್ಯರು ಮೈಸೂರು ಮುಖ್ಯಮಂತ್ರಿ ಶ್ರೀ ಎಸ್. ನಿಜಲಿಂಗಪ್ಪ ಹಾಗೂ ರಾಜ್ಯದ ಅರ್ಥ ಸಚಿವ ಶ್ರೀ ರಾಮಕೃಷ್ಣ ಹೆಗಡೆ ಅವರು ಭಾಗವಹಿಸಿದ್ದರು.

ಮಹಾಜನ್ ಶಿಫಾರಸುಗಳ ಶೀಘ್ರ ಜಾರಿಗೆ ಒತ್ತಾಯ
ಬೆಂಗಳೂರು, ಡಿ. 19–
ಮಹಾಜನ್ ಆಯೋಗದ ಶಿಫಾರಸುಗಳನ್ನು ಕೂಡಲೆ ಜಾರಿಗೆ ತರುವಂತೆ ಕೇಂದ್ರ ಸರಕಾರವನ್ನು ಒತ್ತಾಯಪಡಿಸುವ ಸೂಚನೆಯನ್ನು ಆಹಾರ ಸಚಿವ ಶ್ರೀ ಬಿ.ಡಿ. ಜತ್ತಿಯವರು ಇಂದು ವಿಧಾನ ಸಭೆಯಲ್ಲಿ ಮಂಡಿಸಿದರು.

‘ರಾಷ್ಟ್ರೀಯ ಒಟ್ಟು ಅಭಿಪ್ರಾಯ’ ಪಡೆಯುವ ಅಥವಾ ‘ಜನಮತ ಸಂಗ್ರಹ’ದ ಯಾವುದೇ ಸಲಹೆಗಳಿಗೆ ಸೂಚನೆಯು ಉಗ್ರ ವಿರೋಧ ವ್ಯಕ್ತಪಡಿಸಿದೆ.

ಮದ್ರಾಸಿನ ಹಲವೆಡೆ ಹಿಂದಿ ವಿರುದ್ಧ ಚಳವಳಿ
ಮದ್ರಾಸ್, ಡಿ. 19–
ಮದ್ರಾಸ್‌ನಗರ, ಕೊಯಮತ್ತೂರು, ಮಧುರೆ ಜಿಲ್ಲೆಯ ಪಳನಿಯಲ್ಲಿ ಭಾರೀ ಸಂಖ್ಯೆಯ ವಿದ್ಯಾರ್ಥಿಗಳು ಇಂದು ಹಿಂದಿ ವಿರೋಧಿ ಮತ ಪ್ರದರ್ಶನಗಳನ್ನು ನಡೆಸಿದರು.

ಮೈಸೂರಿನಲ್ಲಿ 25 ಕೋಟಿ ರೂ. ಬಂಡವಾಳ ಹೂಡಿಕೆ: ನೆರೆರಾಜ್ಯಗಳ ಅರ್ಜಿ
ಬೆಂಗಳೂರು, ಡಿ. 19–
ರಂಜಕ, ಸಕ್ಕರೆ, ಕಬ್ಬಿಣ, ಆಮ್ಲಜನಕ ಮುಂತಾದವುಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಮುಂಬಯಿ ಮತ್ತು ಕಲ್ಕತ್ತೆಯ ಕೈಗಾರಿಕೋದ್ಯಮಿಗಳಿಂದ 8 ಅರ್ಜಿಗಳು ಬಂದಿವೆ. ಅವುಗಳ ಉದ್ದೇಶಿತ ಬಂಡವಾಳ ಸುಮಾರು 25 ಕೋಟಿ ರೂ.

ಸಚಿವ ದಂಡ
ಬೆಂಗಳೂರು, ಡಿ. 19–
ರಾಜ್ಯದ ಮಂತ್ರಿ ಮಂಡಲದ ಸಭೆಗೆ ಕಾಲಮೀರಿ ಬಂದರೆ 5 ರೂಪಾಯಿ ದಂಡ. ಇದು ರಾಜ್ಯ ಸಚಿವರು ತಮ್ಮ ಮೇಲೆ ತಾವಾಗಿಯೇ ಹಾಕಿಕೊಂಡಿರುವ ‘ಸ್ವಯಂ ಶಿಸ್ತಿನ ಕ್ರಮ’.

ಇಲ್ಲಿಯವೆರೆಗೆ ಮುಖ್ಯಮಂತ್ರಿಗಳೂ ಸೇರಿ ಅನೇಕ ಸಚಿವರು ಈ ದಂಡ ತೆತ್ತಿದ್ದಾರೆ. ದಂಡ ವಸೂಲಿ ಮಾಡಿ ಲೆಕ್ಕ ಇಡುವ ಕೋಶಾಧಿಕಾರಿ ಸಚಿವ ಶ್ರೀ ಮಹಮದಾಲಿ ಅವರು. ಅವರೂ ಒಮ್ಮೆ ದಂಡ ನೀಡಿದ್ದಾರೆ.

ಕೆಲ ದಿನಗಳ ಹಿಂದೆ ರಾಷ್ಟ್ರಪತಿ ನಗರದಲ್ಲಿದ್ದ ಕಾರಣ ಮುಖ್ಯಮಂತ್ರಿ ಸಭೆಗೆ ಬರುವುದು ಸ್ವಲ್ಪ ಹೊತ್ತಾಯಿತು. ದಂಡ ತೆರುವುದು ಬೇಡ. ಹೊತ್ತಾದುದಕ್ಕೆ ಕಾರಣವಿದೆ ಎಂದು ಸಹೋದ್ಯೋಗಿಗಳು ಸೂಚಿಸಿದರು.

ನಾಯಕ ಶ್ರೀ ನಿಜಲಿಂಗಪ್ಪ ಅವರು ‘ರಿಯಾಯಿತಿ’ ಪಡೆಯಲು ಒಪ್ಪಲಿಲ್ಲ. 5 ರೂಪಾಯಿ ತೆಗೆದುಕೊಟ್ಟರು. ಇಲ್ಲಿಯವರೆಗೆ ಸುಮಾರು 100 ರೂಪಾಯಿ ಶೇಖರಿಸಲಾಗಿದೆ.

ಬಸವ ಜಯಂತಿ ಆಚರಣೆಗೆ 1 ಲಕ್ಷ ರೂ. ಮಂಜೂರು
ಬೆಂಗಳೂರು, ಡಿ. 19–
ಈ ತಿಂಗಳ ಅಂತ್ಯದಲ್ಲಿ ಆರಂಭವಾಗಲಿರುವ ಬಸವಜಯಂತಿಯನ್ನು ಆಚರಿಸಲು ಸರ್ಕಾರ ಒಂದು ಲಕ್ಷ ರೂಪಾಯಿಯನ್ನು ಮಂಜೂರು ಮಾಡಿದೆ ಎಂದು ಶಿಕ್ಷಣ ಸಚಿವ ಶ್ರೀ ಕೆ.ವಿ. ಶಂಕರಗೌಡ ಅವರು ಇಂದು ವಿಧಾನ ಪರಿಷತ್ತಿನಲ್ಲಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT