ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಮಾರ್ಟ್ ಆದ ಬೊಕ್ಕಪಟ್ಣ ಸರ್ಕಾರಿ ಶಾಲೆ

Last Updated 20 ಡಿಸೆಂಬರ್ 2017, 5:11 IST
ಅಕ್ಷರ ಗಾತ್ರ

ಮಂಗಳೂರು: ನಗರದ ಬೊಕ್ಕಪಟ್ಣ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯು ಇದೀಗ ಸ್ಮಾರ್ಟ್‌ ಆಗಿ ರೂಪುಗೊಂಡಿದೆ. ಮಂಗಳೂರು ಕೋಸ್ಟಲ್‌ ರೌಂಡ್‌ ಟೇಬಲ್‌ನಿಂದ ಶಾಲೆಗೆ ದೃಶ್ಯ–ಶ್ರವಣ ಕೊಠಡಿ ಹಾಗೂ ಸ್ಮಾರ್ಟ್‌ ಕ್ಲಾಸ್‌ಗಳನ್ನು ನಿರ್ಮಿಸಲಾಗಿದೆ.

ಸರ್ಕಾರಿ ಶಾಲೆ ಮತ್ತು ಖಾಸಗಿ ಶಾಲೆಗಳ ನಡುವಿನ ಅಂತರವನ್ನು ಕಡಿಮೆ ಮಾಡುವ ಉದ್ದೇಶದಿಂದ ಈ ಯೋಜನೆಯನ್ನು ಹಮ್ಮಿಕೊಂಡಿರುವ ಮಂಗಳೂರು ಕೋಸ್ಟಲ್ ರೌಂಡ್ ಟೇಬಲ್–190, ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೂ ಆಧುನಿಕ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದು ರೌಂಡ್‌ ಟೇಬಲ್‌ ಅಧ್ಯಕ್ಷ ಸುದೇಶ್‌ ಕರುಣಾಕರ್‌ ತಿಳಿಸಿದರು.

ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರ ಕೊರತೆ ಇದ್ದು, ಇಂತಹ ಸೌಕರ್ಯಗಳಿಂದಾಗಿ ಆ ಕೊರತೆಯನ್ನು ನೀಗಿಸಬಹುದಾಗಿದೆ. ದೃಶ್ಯ–ಶ್ರವಣ ಪಠ್ಯದ ಮೂಲಕ ಎಲ್ಲ ವಿದ್ಯಾರ್ಥಿಗಳಿಗೆ ಏಕಕಾಲದಲ್ಲಿ ಪಾಠ ಬೋಧನೆ ಮಾಡಬಹುದಾಗಿದೆ ಎಂದು ಹೇಳಿದರು.

ಈ ಮೊದಲು ಮಣ್ಣಗುಡ್ಡೆಯ ಸರ್ಕಾರಿ ಶಾಲೆಗೆ ಒದಗಿಸಿದ ಸೌಕರ್ಯಗಳನ್ನು ಪೊಲೀಸ್‌ ಅಧಿಕಾರಿಗಳು ಹಾಗೂ ಶಿಕ್ಷಕರ ತರಬೇತಿಗೆ ಬಳಕೆ ಮಾಡಲಾಗುತ್ತಿತ್ತು ಎಂದ ಅವರು, ಈ ಸೌಕರ್ಯವನ್ನು ಶಾಲೆಯ ವಿದ್ಯಾರ್ಥಿಗಳಿಗೆ ಮಾತ್ರ ಬಳಕೆ ಮಾಡಬೇಕು ಎಂದು ಮನವಿ ಮಾಡಿದರು.

ತರಗತಿಯಲ್ಲಿ ಕಂಪ್ಯೂಟರ್, ಧ್ವನಿ ವ್ಯವಸ್ಥೆ, ದೃಶ್ಯ ಪರದೆ ಸೇರಿದಂತೆ ಕಾರ್ಪೊರೇಟ್‌ ತರಬೇತಿ ಕೇಂದ್ರದಲ್ಲಿರುವ ಎಲ್ಲ ಸೌಕರ್ಯಗಳನ್ನು ಹೊಂದಿದೆ. ಅಲ್ಲದೇ ನ್ಯಾಷನಲ್‌ ಜಿಯೋಗ್ರಫಿಕ್‌, ನಾಸಾಕ್ಕೆ ಸಂಬಂಧಿಸಿದ್ದು ಹಾಗೂ ಸರಳ ಇಂಗ್ಲಿಷ್‌ ಕಲಿಕೆಗೆ ಅಗತ್ಯವಾಗಿರುವ ವಿಡಿಯೋಗಳ ಸಂಗ್ರಹವನ್ನು ಒದಗಿಸಲಾಗಿದೆ. 1 ರಿಂದ 8 ನೇ ತರಗತಿಯ ವಿದ್ಯಾರ್ಥಿಗಳಿಗೆ ಅಗತ್ಯವಾಗಿರುವ ಪರಿಸರ, ವಿಜ್ಞಾನ, ಗಣಿತ ವಿಷಯಗಳನ್ನು ಆಸಕ್ತಿದಾಯಕವಾಗಿ ಕಲಿಸಲು ಈ ವ್ಯವಸ್ಥೆ ನೆರವಾಗಲಿದೆ ಎಂದು ಯೋಜನೆ ಸಂಚಾಲಕ ನೀಲ್‌ ರಾಡ್ರಿಗಸ್‌ ತಿಳಿಸಿದರು.

ರೌಂಡ್‌ ಟೇಬಲ್‌ನಿಂದ ಸುಮಾರು ₹ 6 ಲಕ್ಷ ವೆಚ್ಚದಲ್ಲಿ ನಗರದ ವಿವಿಧ ಸರ್ಕಾರಿ ಶಾಲೆಗಳಿಗೆ ಸೌಕರ್ಯ ಕಲ್ಪಿಸಲಾಗಿದೆ. ಇದು ನಾಲ್ಕನೇ ಸರ್ಕಾರಿ ಶಾಲೆಯಾಗಿದೆ ಎಂದರು. ಹೊಸ ವ್ಯವಸ್ಥೆಯನ್ನು ಶಾಸಕ ಜೆ.ಆರ್‌. ಲೋಬೊ ಉದ್ಘಾಟಿಸಿದರು. ಬಿಜೆಪಿ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಕ್ಯಾ. ಬ್ರಿಜೇಶ್‌ ಚೌಟ, ಕ್ರೆಡೈ ಅಧ್ಯಕ್ಷ ಡಿ.ಬಿ. ಮೆಹ್ತಾ, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು.

* * 

ಮಂಗಳೂರು ಕೋಸ್ಟಲ್‌ ರೌಂಡ್‌ ಟೇಬಲ್‌ 190ರ ವತಿಯಿಂದ ಬರುವ ವರ್ಷ ಇನ್ನೂ ಮೂರು ಶಾಲೆಗಳಿಗೆ ಸೌಕರ್ಯ ಒದಗಿಸಲು ನಿರ್ಧರಿಸಲಾಗಿದೆ
ಸುದೇಶ್‌ ಕರುಣಾಕರ್
ಮಂಗಳೂರು ಕೋಸ್ಟಲ್‌ ರೌಂಡ್‌ ಟೇಬಲ್‌ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT