ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುಡಿಯುವ ನೀರು, ಕೃಷಿ ಅನುದಾನ ಕಡಿತ

Last Updated 20 ಡಿಸೆಂಬರ್ 2017, 5:15 IST
ಅಕ್ಷರ ಗಾತ್ರ

ಮೈಸೂರು: ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಯ ವಿವಿಧ ಕಾರ್ಯಕ್ರಮಗಳಿಗೆ 2018-19ನೇ ಸಾಲಿಗೆ ಒಟ್ಟು ₹ 1,265.01 ಕೋಟಿ ವಾರ್ಷಿಕ ಕರಡು ಯೋಜನೆ ತಯಾರಿಸಲಾಗಿದೆ.

ಪ್ರಾಥಮಿಕ, ಪ್ರೌಢಶಿಕ್ಷಣ, ಪೌಷ್ಟಿಕ ಆಹಾರ, ಹಿಂದುಳಿದ ವರ್ಗಗಳ ಕಲ್ಯಾಣ, ಆರೋಗ್ಯ ಕ್ಷೇತ್ರಗಳಿಗೆ ಅನುದಾನ ಹೆಚ್ಚಳ ಮಾಡಲಾಗಿದೆ. ಆದರೆ, ಗ್ರಾಮೀಣ ನೀರು ಪೂರೈಕೆ, ಪರಿಶಿಷ್ಟ ಜಾತಿ ಕಲ್ಯಾಣ, ಕೃಷಿ ಕ್ಷೇತ್ರಗಳ ಅನುದಾನವನ್ನು ಕಡಿತಗೊಳಿಸಲಾಗಿದೆ. ಈ ಬಗ್ಗೆ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದರು.

ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ನಯೀಮಾ ಸುಲ್ತಾನ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಾಮಾನ್ಯ ಸಭೆಯಲ್ಲಿ ಕರಡು ಯೋಜನೆ ಮಂಡಿಸಿ ಚರ್ಚಿಸಲಾಯಿತು. 2017-18ನೇ ಸಾಲಿಗೆ ಹೋಲಿಸಿದರೆ ₹ 168.59 ಕೋಟಿ ಅನುದಾನ ಹೆಚ್ಚಳವಾಗಿದೆ. ಕಳೆದ ಸಾಲಿನಲ್ಲಿ ₹ 1095.85 ಕೋಟಿ ಮೊತ್ತದ ಯೋಜನೆ ಸಿದ್ಧಪಡಿಸಲಾಗಿತ್ತು.

ಜಿಲ್ಲೆಯ ಜನಸಂಖ್ಯೆ, ಸಂಪನ್ಮೂಲ ಕ್ರೋಡೀಕರಣ, ಪರಿಶಿಷ್ಟ ಜಾತಿ ಮತ್ತು ಪಂಗಡದ ಜನಸಂಖ್ಯೆ, ಶಿಕ್ಷಣ, ಆರೋಗ್ಯ, ಕುಡಿಯುವ ನೀರು, ನೈರ್ಮಲ್ಯ ವಿಷಯ ಕುರಿತು ಜಿಲ್ಲಾಮಟ್ಟದ ಅಧಿಕಾರಿಗಳಿಂದ ಪ್ರಸ್ತಾವ ಪಡೆದು ಕರಡು ಯೋಜನೆ ರೂಪಿಸಲಾಗಿದೆ.

‘ಬಜೆಟ್‌ ಪೂರ್ವಭಾವಿ ಸಭೆ ಮುಂದೆ ಇಡಲು ಸರ್ಕಾರಿ ಮಾರ್ಗಸೂಚಿ ಪ್ರಕಾರ ಕರಡು ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪಿ.ಶಿವಶಂಕರ್‌ ತಿಳಿಸಿದರು.‌

ಈಗ ಕಲ್ಪಿಸಿರುವ ಅನುದಾನ ಸಾಲದು. ಅಲ್ಲದೆ, ಪ್ರಮುಖ ಇಲಾಖೆಗಳ ಅನುದಾನವನ್ನು ಕಡಿತಗೊಳಿಸಲಾಗಿದೆ. ಅನುದಾನ ಹೆಚ್ಚಿಸಬೇಕು‌‌ ಎಂದು ಸದಸ್ಯರು ಒಕ್ಕೊರಲಿನಿಂದ ಆಗ್ರಹಿಸಿದರು. ಪ್ರಾಥಮಿಕ ಶಾಲೆ, ಪ್ರಾಥಮಿಕ ಆರೋಗ್ಯ ಕೇಂದ್ರ, ವಿದ್ಯಾರ್ಥಿ ನಿಲಯಗಳ ದುರಸ್ತಿ ಆಗಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.

ಪುಷ್ಪಾ ಅಮರನಾಥ್‌ ಮಾತನಾಡಿ, ‘ಖಾಸಗಿ ಕಾನ್ವೆಂಟ್‌ಗಳಿಗೆ ಸಡ್ಡು ಹೊಡೆಯಲು ಮಾದರಿ ಶಾಲೆ ಅಥವಾ ಕಾನ್ವೆಂಟ್‌ ನಿರ್ಮಿಸಬೇಕು’ ಎಂದು ಸಲಹೆ ನೀಡಿದರು. ‘ಕರಡು ಯೋಜನೆಗೆ ಅನುಮೋದನೆ ಲಭಿಸಿದೆ. ಶಿಕ್ಷಣ ಹಾಗೂ ಇತರ ಇಲಾಖೆಗಳಿಗೆ ಹೆಚ್ಚಿನ ಅನುದಾನ ಕಲ್ಪಿಸಬೇಕೆಂದು ಸದಸ್ಯರು ನಿರ್ಣಯ ಕೈಗೊಂಡಿದ್ದಾರೆ. ಡಿ.26ರಂದು ಬೆಂಗಳೂರಿನಲ್ಲಿ ನಡೆಯಲಿರುವ ಸಭೆಯಲ್ಲಿ ಈ ಪ್ರಸ್ತಾವ ಇಡಲಾಗುವುದು’ ಎಂದು ಶಿವಶಂಕರ್‌ ಅವರು ಹೇಳಿದರು‌. 

ಸದಸ್ಯರ ಅನುದಾನ ₹ 50 ಲಕ್ಷಕ್ಕೆ ಹೆಚ್ಚಿಸಿ

ಮೈಸೂರು: ಅಭಿವೃದ್ಧಿ ಕಾರ್ಯಗಳಿಗೆ ಜಿ.ಪಂ ಸದಸ್ಯರಿಗೆ ಈಗ ಲಭಿಸುತ್ತಿರುವ ₹ 10 ಲಕ್ಷ ಅನುದಾನ ಏನಕ್ಕೂ ಸಾಲುತ್ತಿಲ್ಲ. ಅದನ್ನು ತಲಾ ₹ 50 ಲಕ್ಷಕ್ಕೆ ಹೆಚ್ಚಿಸಬೇಕು ಎಂದು ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಬೀರಿಹುಂಡಿ ಬಸವಣ್ಣ ಆಗ್ರಹಿಸಿದರು. ‘ಕ್ಷೇತ್ರದಲ್ಲಿನ ರಸ್ತೆ, ಚರಂಡಿ ಕಾಮಗಾರಿ ಕೈಗೆತ್ತಿಕೊಳ್ಳಲು ಹಾಗೂ ಮೂಲ ಸೌಲಭ್ಯ ಕಲ್ಪಿಸಲು ಹೆಚ್ಚಿನ ಅನುದಾನ ಮೀಸಲಿಡಬೇಕು’ ಎಂದರು.‌

* * 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕಡಿಮೆ ಅನುದಾನ ಇಡಲಾಗಿದೆ. ಆದರೆ, ಕೆಲ ಕ್ಷೇತ್ರಗಳಲ್ಲಿ ಬಯಲು ರಂಗಮಂದಿರಗಳೇ ಇಲ್ಲ‌
ಎಸ್‌.ಶ್ರೀಕೃಷ್ಣ‌ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT