ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಳು ಮಾತ್ರೆ ಮಾರಾಟ ಅಂಗಡಿ ಮಾಲೀಕರಿಗೆ ನೊಟೀಸ್

Last Updated 20 ಡಿಸೆಂಬರ್ 2017, 6:26 IST
ಅಕ್ಷರ ಗಾತ್ರ

ವಿಜಯಪುರ: ಕಾಳು ಮಾತ್ರೆ ಮಾರಾಟ ಮಾಡುತ್ತಿರುವ ಆರೋಪದಡಿಯಲ್ಲಿ ಸೋಮವಾರ ಕೆಲ ಅಂಗಡಿಗಳಿಗೆ ದಾಳಿ ಮಾಡಿದ ಕೃಷಿ ಇಲಾಖೆ ಅಧಿಕಾರಿಗಳು, ಮಾರಾಟ ಮಾಡುತ್ತಿದ್ದ ಅಂಗಡಿ ಮಾಲೀಕರಿಗೆ ನೊಟೀಸ್ ಜಾರಿ ಮಾಡಿದ್ದಾರೆ.

ಬೈರಾಪುರ ಆಂಗ್ರೋ ಸಿಂಥ್ ಕೆಮಿಕಲ್ ಕಾರ್ಖಾನೆಯಲ್ಲಿ ತಯಾರಿಸಲಾಗುತ್ತಿರುವ ಅಲ್ಯೂಮಿನಿಯಂ ಸಲ್ಫೈಡ್ ಕಾಳು ಮಾತ್ರೆಗಳು ಹಲವು ಅಂಗಡಿಗಳಲ್ಲಿ ರಾಜಾರೋಷವಾಗಿ ಮಾರಾಟವಾಗುತ್ತಿವೆ ಎಂದು ಆರೋಪಿಸಲಾಗಿತ್ತು.

ಕೃಷಿ ಇಲಾಖೆ ಆಯುಕ್ತರಿಗೆ ಸ್ಥಳೀಯ ನಾಗರಿಕರು ವಿಡಿಯೊ ಸಮೇತ ದೂರು ನೀಡಿದ್ದ ಹಿನ್ನೆಲೆಯಲ್ಲಿ ತಪಾಸಣೆ ನಡೆಸುವಂತೆ ಆಯುಕ್ತರು ಸೂಚಿಸಿದ್ದರಿಂದ ದಿಢೀರ್ ದಾಳಿ ನಡೆಸಿದ ಕೃಷಿ ಇಲಾಖೆ ಅಧಿಕಾರಿ ಮೈತ್ರಿ ತಂಡ ಮೂರು ಅಂಗಡಿಗಳಲ್ಲಿ ಮಾರಾಟಕ್ಕೆ ಇಟ್ಟಿದ್ದ ಕಾಳುಮಾತ್ರೆಯ ಟ್ಯೂಬ್‌ಗಳನ್ನು ವಶಕ್ಕೆ ಪಡೆದುಕೊಂಡು ನೊಟೀಸ್ ಜಾರಿ ಮಾಡಿದ್ದಾರೆ.

ಮಾರಾಟ ಮಾಡುತ್ತಿದ್ದ ಅಂಗಡಿಗಳ ಪೈಕಿ ಎರಡು ಅಂಗಡಿಗಳು ಗ್ರಂದಿಗೆ ಅಂಗಡಿಗಳಾಗಿವೆ. ಒಂದು ಅಂಗಡಿಯಲ್ಲಿ 15 ಟ್ಯೂಬ್‌ಗಳು ಮತ್ತೆರಡು ಅಂಗಡಿಗಳಲ್ಲಿ ತಲಾ 19,21 ಟ್ಯೂಬ್‌ಗಳು ಲಭ್ಯವಾಗಿವೆ.

ಕಾಳು ಮಾತ್ರೆ ಖರೀದಿಸುವ ನೆಪದಲ್ಲಿ ದಾಖಲೆ ಸಂಗ್ರಹಿಸಿದ ನಾಗರಿಕರು: ಕೆಲ ಅಂಗಡಿಗಳಲ್ಲಿ ಕಾಳು ಮಾತ್ರೆ ಮಾರಾಟ ಮಾಡುತ್ತಿರುವ ಬಗ್ಗೆ ಖಾತರಿ ಪಡಿಸಿಕೊಳ್ಳುವ ಸಲುವಾಗಿ ಕೆಲ ರೈತರು ತಂಡಗಳಾಗಿ ಏಕಕಾಲದಲ್ಲಿ ಹಲವಾರು ಅಂಗಡಿಗಳಿಗೆ ಹೋಗಿ ಕಾಳು ಮಾತ್ರೆ ಖರೀದಿ ಮಾಡಿಕೊಂಡಿದ್ದಾರೆ. ಮಾರಾಟ ಮಾಡುವುದನ್ನು ಖಚಿತ ಪಡಿಸಿಕೊಳ್ಳಲು ಮೊಬೈಲ್‌ಗಳಲ್ಲಿ ವಿಡಿಯೊ ಮಾಡಿಕೊಂಡಿದ್ದಾರೆ. ಈ ವಿಡಿಯೊಗಳನ್ನು ಆಯುಕ್ತರಿಗೆ ನೀಡಿದ್ದಾರೆ ಎನ್ನಲಾಗಿದೆ.

ದಾಳಿಯ ವೇಳೆ ಅಧಿಕಾರಿಗಳು ವಶಪಡಿಸಿಕೊಂಡಿರುವ ಟ್ಯೂಬ್‌ಗಳ ಮೇಲ್ಭಾಗದಲ್ಲಿ ‘ಅಲ್ಯೂಮಿನಿಯಂ ಸಲ್ಫೈಡ್’ ಎಂಬ ಹೆಸರು ಮಾತ್ರ ಇದೆ. ಅದನ್ನು ಹೇಗೆ ಉಪಯೋಗ ಮಾಡಬೇಕು ಎನ್ನುವ ಮಾಹಿತಿಯಷ್ಟೆ ಇದೆ. ಎಲ್ಲಿ ತಯಾರಾಗಿದೆ, ಯಾವಾಗ ತಯಾರಾಗಿದೆ, ಯಾವಾಗ ಔಷಧಿ ಅವಧಿ ಮುಕ್ತಾಯವಾಗುತ್ತದೆ, ಎನ್ನುವ ಯಾವ ಮಾಹಿತಿಗಳು ಮುದ್ರಣಗೊಂಡಿಲ್ಲ.

ಈ ಕುರಿತು ಕೃಷಿ ಇಲಾಖೆ ಅಧಿಕಾರಿ ಮೈತ್ರಿ ಮಾತನಾಡಿ, ಆಯುಕ್ತರ ಆದೇಶದ ಮೇರೆಗೆ ದಾಳಿ ನಡೆಸಿದ್ದೇವೆ. ವಶಪಡಿಸಿಕೊಂಡಿರುವ ಟ್ಯೂಬ್‌ಗಳನ್ನು ಮೇಲಾಧಿಕಾರಿಗಳಿಗೆ ತಲುಪಿಸುತ್ತೇವೆ. ಮುಂದಿನ ಕ್ರಮ ಜರುಗಿಸುತ್ತಾರೆ ಎಂದರು.

ಮಾರಾಟಕ್ಕೆ ನಿಬಂಧನೆಗಳಿವೆ

ಈ ಔಷಧಿಗಳನ್ನು ಮಾರಾಟ ಮಾಡಬೇಕಾದರೆ ಕೇಂದ್ರ ಸರ್ಕಾರ ವಿಧಿಸಿರುವ ಹಲವಾರು ನಿಬಂಧನೆಗಳನ್ನು ಕಡ್ಡಾಯವಾಗಿ ಅನುಸರಿಸಬೇಕಾಗುತ್ತದೆ. ಇಂತಹ ಕಡೆಗಳಲ್ಲಿಯೇ ಉಪಯೋಗ ಮಾಡಬೇಕು ಎನ್ನುವ ನಿಯಮವಿದೆ. ಅದನ್ನು ಉಲ್ಲಂಘನೆ ಮಾಡಿ ಸಾಮಾನ್ಯ ಸರಕುಗಳನ್ನು ಮಾರಾಟ ಮಾಡಿದಂತೆ ಮಾರುತ್ತಿದ್ದಾರೆ ಎಂದು ರೈತ ಸಂಘದ ಹೋಬಳಿ ಘಟಕದ ಅಧ್ಯಕ್ಷ ಮಂಡಿಬೆಲೆ ನಾರಾಯಣಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT