ಚಿಕ್ಕಬಳ್ಳಾಪುರ

ಬಸವಳಿದ ಅಂಗವಿಕಲರು

ಅಂಗವಿಕಲರ ಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ ವತಿಯಿಂದ ಮಂಗಳವಾರ ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಿದ 2017–18ನೇ ಸಾಲಿಗೆ ತ್ರಿಚಕ್ರ ವಾಹನಕ್ಕೆ ಆನ್‌ಲೈನ್‌ ಅರ್ಜಿ ಸಲ್ಲಿಸಿದವರಿಗೆ ನಡೆಸಿದ ಅರ್ಹತಾ ಪರೀಕ್ಷೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿ ಅನೇಕ ಅಂಗವಿಕಲರು ಅಸಮಾಧಾನ ವ್ಯಕ್ತಪಡಿಸಿದರು.

ಜಿಲ್ಲಾ ಕ್ರೀಡಾಂಗಣದಲ್ಲಿ ಅರ್ಹತಾ ಪರೀಕ್ಷೆಗೆ ಎದುರು ನೋಡುತ್ತ ಬಿಸಿಲಲ್ಲೇ ಕಾಯುತ್ತ ಕುಳಿತ ಅಂಗವಿಕಲರು

ಚಿಕ್ಕಬಳ್ಳಾಪುರ: ಅಂಗವಿಕಲರಕಲ್ಯಾಣ ಇಲಾಖೆ ಜಿಲ್ಲಾ ಕಚೇರಿ ವತಿಯಿಂದ ಮಂಗಳವಾರ ನಗರದ ಸರ್‌.ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಸಿದ 2017–18ನೇ ಸಾಲಿಗೆ ತ್ರಿಚಕ್ರ ವಾಹನಕ್ಕೆ ಆನ್‌ಲೈನ್‌ ಅರ್ಜಿ ಸಲ್ಲಿಸಿದವರಿಗೆ ನಡೆಸಿದ ಅರ್ಹತಾ ಪರೀಕ್ಷೆ ಅವ್ಯವಸ್ಥೆಯಿಂದ ಕೂಡಿದೆ ಎಂದು ಆರೋಪಿಸಿ ಅನೇಕ ಅಂಗವಿಕ
ಲರು ಅಸಮಾಧಾನ ವ್ಯಕ್ತಪಡಿಸಿದರು.

ಅರ್ಹತಾ ಪರೀಕ್ಷೆ ಏರ್ಪಡಿಸಿದ್ದ ಸ್ಥಳದಲ್ಲಿ ಕುಡಿಯುವ ನೀರು, ಶೌಚಾಲಯ, ಕುಳಿತುಕೊಳ್ಳಲು ಆಸನ, ಉಪಾಹಾರ ವ್ಯವಸ್ಥೆ ಇಲ್ಲದಿರುವುದು ದೂರದಿಂದ ಬಸವಳಿದು ಬಂದಿದ್ದವರಲ್ಲಿ ಆಕ್ರೋಶ ಮೂಡಿಸಿತ್ತು. ಜತೆಗೆ ಕೆಲವರು ಸಂದರ್ಶಕರು ಫಲಾನುಭವಿಗಳ ಆಯ್ಕೆಯಲ್ಲಿ ತಾರತಮ್ಯ ಎಸಗುತ್ತಿದ್ದಾರೆ ಎಂದು ಸಹ ಆರೋಪಿಸಿದರು.

ಈ ವೇಳೆ ಮಾತನಾಡಿದ ಅಂಗವಿಕರ ಸರ್ವೋದಯ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಗೌರವಾಧ್ಯಕ್ಷ ಎನ್‌.ಕೃಷ್ಣಮೂರ್ತಿ, ‘ಕಳೆದ ಆಗಸ್ಟ್‌ನಲ್ಲಿ ತ್ರಿಚಕ್ರ ವಾಹನಕ್ಕೆ ಅರ್ಜಿ ಹಾಕಿದ್ದೆ. ಇವತ್ತು ಸಂದರ್ಶನಕ್ಕೆ ಬನ್ನಿ ಎಂದು ಅಧಿಕಾರಿಗಳು ಕರೆದಿದ್ದರು. ಬೆಳಿಗ್ಗೆ ಮನೆಯಲ್ಲಿ ಊಟ ಕೂಡ ಮಾಡದೆ ಎಲ್ಲರಿಗಿಂತಲೂ ಬೇಗ ಬಂದಿದ್ದೆ. ಇಲ್ಲಿ ನೋಡಿದರೆ ಕನಿಷ್ಠ ಕುಡಿಯುವ ನೀರು ಕೂಡ ವ್ಯವಸ್ಥೆ ಮಾಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‘ಪ್ರತಿ ಬಾರಿ ಇಲ್ಲಿಯೇ ಸಂದರ್ಶನ ಆಯೋಜಿಸುತ್ತಾರೆ. ಇದೇ ಅವ್ಯವಸ್ಥೆ ಮುಂದುವರಿದುಕೊಂಡು ಬರುತ್ತಿದೆ. ಇಲ್ಲಿಗೆ ಬರುವ ವೇಳೆ ಅನೇಕ ಅಂಗವಿಕಲರು ಹೈರಾಣಾಗಿ ಹೋಗಿರುತ್ತಾರೆ. ಕೆಲವರು ಬೇಗ ಸಂದರ್ಶನ ಮುಗಿಸಿ ಹೋದರಾಯಿತು ಎಂದು ಬೆಳಗಿನ ಉಪಾಹಾರ ಕೂಡ ಮಾಡದೆ ಬಂದಿರುತ್ತಾರೆ. ಅವರಿಗೆ ಕನಿಷ್ಠ ಪಕ್ಷ ಕುಡಿಯುವ ನೀರು, ಶೌಚಾಲಯ ವ್ಯವಸ್ಥೆ ಇರುವಂತೆ ನೋಡಿಕೊಳ್ಳದಿದ್ದರೆ ಹೇಗೆ’ ಎಂದು ಖಾರವಾಗಿ ಪ್ರಶ್ನಿಸಿದರು.

‘ಸಂದರ್ಶನ ನಡೆಸಲು ಸುಸಜ್ಜಿತವಾದ ಬೇರೆ ಜಾಗ ಇಲ್ಲವೆ? ಜಿಲ್ಲಾಡಳಿತಕ್ಕೆ ಅಂಗವಿಕಲರ ಮೇಲೆ ಯಾಕೆ ಇಷ್ಟು ಕೋಪ? ಮೇಲಾಗಿ ಇಲ್ಲಿ ಅಧಿಕಾರಿಗಳು ಬೇಜಾಬ್ದಾರಿತನದಿಂದ ಸಂದರ್ಶನ ನಡೆಸುತ್ತಿದ್ದಾರೆ. ಅಂಗವಿಕಲರ ಮೇಲೆ ಅಂಗವಿಕಲರ ಕಲ್ಯಾಣ ಇಲಾಖೆಗೆ ಕರುಣೆ ಇಲ್ಲದಿದ್ದ ಮೇಲೆ ಯಾವ ಪುರುಷಾರ್ಥಕ್ಕೆ ಈ ಇಲಾಖೆ ಇರಬೇಕು’ ಎಂದು ಕೇಳಿದರು.

‘ಸಂದರ್ಶನದಲ್ಲಿ ಮುಖ್ಯವಾಗಿ ಕಣ್ಣಿನ ತಪಾಸಣೆ ನಡೆಸುವ ವೈದ್ಯರು ಇರಬೇಕು. ಆದರೆ ಇಲ್ಲಿ ಅವರೇ ಇಲ್ಲ. ಬರೀ ಮೂಳೆ ವೈದ್ಯರಿದ್ದಾರೆ. ವಾಹನ ಚಾಲನಾ ಪರಿವೀಕ್ಷಕ ನಂದೀಶ್‌ ಅವರೇ ಕಣ್ಣನ್ನೂ ಪರೀಕ್ಷಿಸುತ್ತಿದ್ದಾರೆ. ಅಂಗವಿಕಲರ ಇಲಾಖೆ ಜಿಲ್ಲಾ ಅಧಿಕಾರಿ ಜ್ಯೋತಿ ಅವರು ಯಾರನ್ನು ಆಯ್ಕೆ ಮಾಡಿಕೊಳ್ಳಬೇಕು ಎಂದು ಸಂದರ್ಶಕರಿಗೆ ಸೂಚನೆ ನೀಡುತ್ತಿದ್ದರು. ಇದು ಯಾವ ನ್ಯಾಯ’ ಎಂದು ಪ್ರಶ್ನಿಸಿದರು.

ಚಿಂತಾಮಣಿಯಿಂದ ಅರ್ಹತಾ ಪರೀಕ್ಷೆಗೆಂದು ಮಗನೊಂದಿಗೆ ಬಂದಿದ್ದ ಎಸ್‌.ಮಹಬುಲ್‌ ಅಹಮದ್‌, ‘ಪರೀಕ್ಷೆಗಾಗಿ ಬೆಳಿಗ್ಗೆ 8ಕ್ಕೆ ಬಂದು ಕಾಯ್ದು ಕುಳಿತಿರುವೆ. ಮಧ್ಯಾಹ್ನ ಕಳೆದರೂ ನನ್ನ ಹೆಸರು ಕೂಗಲಿಲ್ಲ. ಊಟಕ್ಕೆ ಹೋಗಿ ಬರೋಣ ಎಂದರೆ ಎಲ್ಲಿ ನನ್ನ ಹೆಸರು ಕೂಗುತ್ತಾರೋ ಎನ್ನುವ ಭಯ. ದುಡಿಯುವ ಮಗನನ್ನು ಕೆಲಸ ಬಿಡಿಸಿ ಕರೆದುಕೊಂಡು ಬಂದಿರುವೆ. ಇಲ್ಲಿ ನೋಡಿದರೆ ಅಧ್ವಾನ. ಶೌಚಾಲಯಕ್ಕೂ ಗತಿ ಇಲ್ಲದಂತಾಗಿದೆ’ ಎಂದು ಅಳಲು ತೋಡಿಕೊಂಡರು.

‘ಅಂಗವಿಕಲರಿಗಾಗಿ ಸರ್ಕಾರ ಸಾಕಷ್ಟು ಖರ್ಚು ಮಾಡುತ್ತಿದೆ ಎಂಬ ಪ್ರಚಾರವೇನೋ ಜೋರಾಗಿಯೇ ನಡೆದಿದೆ. ಇಲ್ಲಿ ಅಂಗವಿಕಲರನ್ನು ನಡೆಸಿ ಕೊಳ್ಳುವುದು ನೋಡಿದರೆ ಬೇಸರವಾಗುತ್ತದೆ. ಇಲ್ಲಿ ಅಧಿಕಾರಿಗಳು ನಡೆದುಕೊಳ್ಳುವುದು ನೋಡಿದರೆ ನ್ಯಾಯವಾಗಿ ನಮಗೆ ಸರ್ಕಾರದ ಸವಲತ್ತು ಸಿಗುವುದು ಸಂದೇಹವೆನಿಸುತ್ತದೆ. ಹೀಗೆಲ್ಲ ಪರೀಕ್ಷಿಸುತ್ತಾರೆ ಎಂದು ಗೊತ್ತಿದ್ದರೆ ನಾನು ಬರುತ್ತಿರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

ಶಿಡ್ಲಘಟ್ಟ ತಾಲ್ಲೂಕಿನ ಕುಂದಲಗುರ್ಕಿಯಿಂದ ಬಂದಿದ್ದ ಸಂತೋಷ್‌ ಕುಮಾರ್‌, ‘2014 ರಿಂದಲೂ ತ್ರಿಚಕ್ರ ವಾಹನಕ್ಕೆ ಅರ್ಜಿ ಸಲ್ಲಿಸುತ್ತ ಬಂದಿರುವೆ. ಈವರೆಗೆ ನನಗೆ ಯಾವುದೇ ಸವಲತ್ತು ದೊರೆತಿಲ್ಲ. ಈ ಬಾರಿ ಜಿಲ್ಲಾಧಿಕಾರಿ ಅವರ ಕೋಟಾದಲ್ಲಿ ತ್ರಿಚಕ್ರವಾಹನ ನೀಡಲಾಗುತ್ತದೆ ಎಂದು ಭರವಸೆ ಸಿಕ್ಕಿತ್ತು. ಇಲ್ಲಿನ ಪರಿಸ್ಥಿತಿ ನೋಡಿದರೆ ಅಧಿಕಾರಿಗಳು ನಿಯಮಗಳನ್ನು ಗಾಳಿಗೆ ತೂರಿ ಮನಸೋ ಇಚ್ಛೆ ಪರೀಕ್ಷಿಸುತ್ತಿದ್ದಾರೆ. ಇನ್ನಾದರೂ ಜಿಲ್ಲಾಡಳಿತ ಎಚ್ಚೆತ್ತುಕೊಳ್ಳಲಿ’ ಎಂದರು.

ಈ ಕುರಿತು ಅಂಗವಿಕಲರ ಇಲಾಖೆ ಜಿಲ್ಲಾ ಅಧಿಕಾರಿ ಜ್ಯೋತಿ ಅವರನ್ನು ವಿಚಾರಿಸಿದರೆ, ‘ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಶೌಚಾಲಯ ಮೊದಲ ಮಹಡಿಯಲ್ಲಿತ್ತು ಆದರೆ ಆ ಬಗ್ಗೆ ನಾವು ತಿಳಿಸಿರಲಿಲ್ಲ. ಉಪಾಹಾರ ವ್ಯವಸ್ಥೆ ಮಾಡಲು ಅವಕಾಶವಿಲ್ಲ. ಪರೀಕ್ಷೆ ಐದ್ಹತ್ತು ನಿಮಿಷಗಳಲ್ಲಿ ಮುಗಿಯುವ ಕಾರಣಕ್ಕೆ ಯಾರಿಗೂ ತೊಂದರೆಯಾಗಿಲ್ಲ. ಯಾರಿಗೂ ಅನ್ಯಾಯ ಮಾಡಿಲ್ಲ ಇಲಾಖೆ ಮಾರ್ಗಸೂಚಿ ಪ್ರಕಾರವೇ ಪರೀಕ್ಷೆ ನಡೆಸಿದ್ದೇವೆ’ ಎಂದು ಹೇಳಿದರು. ಆದರೆ ಅರ್ಹತಾ ಪರೀಕ್ಷೆ ನಡೆದ ಸ್ಥಳದಲ್ಲಿ ಎಲ್ಲಿಯೂ ಕುಡಿಯುವ
ನೀರಿನ ವ್ಯವಸ್ಥೆ ಮಾಡಿದ್ದು ಕಂಡುಬರಲಿಲ್ಲ.

* * 

ಅಂಗವಿಕಲರ ಬಗ್ಗೆ ಅವರದೇ ಇಲಾಖೆ ಕಾಳಜಿ ಮಾಡದಿದ್ದರೆ ಇನ್ನು ಯಾರು ಮಾಡುತ್ತಾರೆ? ಅಧಿಕಾರಿಗಳಿಗೆ ಇಂತಹ ಪರೀಕ್ಷೆ ಸುಸಜ್ಜಿತ ಜಾಗದ ಬೇಕೆಂಬ ಪರಿಜ್ಞಾನ ಬೇಡವೆ?
ಎನ್‌.ಕೃಷ್ಣಮೂರ್ತಿ, ಅಂಗವಿಕರ ಸರ್ವೋದಯ ಹಿತರಕ್ಷಣಾ ವೇದಿಕೆ ಜಿಲ್ಲಾ ಘಟಕದ ಗೌರವಾಧ್ಯಕ್ಷ

 

Comments
ಈ ವಿಭಾಗದಿಂದ ಇನ್ನಷ್ಟು

ಗೌರಿಬಿದನೂರು
5ನೇ ಬಾರಿ ಶಾಸಕ ಸ್ಥಾನಕ್ಕೆ ಶಿವಶಂಕರರೆಡ್ಡಿ ನಾಮಪತ್ರ

ಐದನೇ ಬಾರಿಗೆ ಶಾಸಕರಾಗುವ ಉದ್ದೇಶದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಎನ್.ಎಚ್. ಶಿವಶಂಕರರೆಡ್ಡಿ ಶುಕ್ರವಾರ ಉಮೇದುವಾರಿಕೆಗೆ ಅರ್ಜಿ ಸಲ್ಲಿಸಿದರು.

21 Apr, 2018

ಚಿಕ್ಕಬಳ್ಳಾಪುರ
‘ಬರ’ದ ಬೀಡಿನಲಿ ಸಿರಿವಂತರ ‘ಉಮೇದು’ವಾರಿಕೆ

ಬಯಲು ಸೀಮೆಯ ಬರಪೀಡಿತ ಪ್ರದೇಶಗಳಲ್ಲಿ ಒಂದಾದ ಜಿಲ್ಲೆಯ ಐದು ವಿಧಾನಸಭೆ ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಈವರೆಗೆ ನಾಮಪತ್ರ ಸಲ್ಲಿಸಿದವರ ಪೈಕಿ ಬಹುತೇಕರು ಕೋಟ್ಯಧಿಪತಿಗಳೇ ಇದ್ದಾರೆ. ಅವರಿಗೆ...

21 Apr, 2018

ಚಿಕ್ಕಬಳ್ಳಾಪುರ
ನಾಲ್ಕನೇ ದಿನ 16 ನಾಮಪತ್ರ

ವಿಧಾನಸಭೆ ಚುನಾವಣೆಯ ನಾಮಪತ್ರ ಸಲ್ಲಿಕೆಯ ನಾಲ್ಕನೇ ದಿನವಾದ ಶುಕ್ರವಾರ ಜಿಲ್ಲೆ ಐದು ಕ್ಷೇತ್ರಗಳ ಪೈಕಿ 16 ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದರು. ಈ ಪೈಕಿ ಐದು...

21 Apr, 2018

ಚಿಕ್ಕಬಳ್ಳಾಪುರ
ಶಾಸಕರ ಪತ್ನಿ ₹ 10 ಕೋಟಿ ಸಾಲಗಾರ್ತಿ!

ಕಳೆದ ಐದು ವರ್ಷಗಳಲ್ಲಿ ಕ್ಷೇತ್ರದಲ್ಲಿ ಶಾಸಕನಾಗಿ ಅಧಿಕಾರ ನಡೆಸಿ ಎರಡನೇ ಬಾರಿಗೆ ‘ಅದೃಷ್ಟ’ ಪರೀಕ್ಷೆಗೆ ಮುಂದಾಗಿರುವ ಡಾ.ಕೆ.ಸುಧಾಕರ್ ಅವರು ಶುಕ್ರವಾರ ನಾಮಪತ್ರ ಸಲ್ಲಿಸಿದ್ದು, ಇದೇ...

21 Apr, 2018

ಶಿಡ್ಲಘಟ್ಟ
ಕಾಂಗ್ರೆಸ್‌ ಅಭ್ಯರ್ಥಿ ವಿ.ಮುನಿಯಪ್ಪ ಉಮೇದುವಾರಿಕೆಗೆ ಅರ್ಜಿ

ಮೇ 12ರಂದು ನಡೆಯಲಿರುವ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಹಿರಿಯ ಮುಖಂಡ ವಿ.ಮುನಿಯಪ್ಪ ಬುಧವಾರ ನಾಮಪತ್ರ ಸಲ್ಲಿಸಿದರು.

20 Apr, 2018