ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಥಳ ಪರಿಶೀಲಿಸಲು ಬಂದ ಸಚಿವರಿಗೆ ಸಮಸ್ಯೆ ಪರಿಚಯ

Last Updated 20 ಡಿಸೆಂಬರ್ 2017, 7:15 IST
ಅಕ್ಷರ ಗಾತ್ರ

ಚಿತ್ರದುರ್ಗ: ದುರ್ಗೋತ್ಸವ ಆಯೋಜಿಸುವ ಸಂಬಂಧ ಸ್ಥಳ ಪರಿಶೀಲಿಸಲು ಮಂಗಳವಾರ ಮುಂಜಾನೆ ಐತಿಹಾಸಿಕ ಕೋಟೆಗೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ಎಚ್. ಆಂಜನೇಯ ಅವರಿಗೆ ಕೋಟೆ ಆವರಣದ ಮೂಲ ಸೌಲಭ್ಯಗಳ ಕೊರತೆ ಬಗ್ಗೆ ವಾಯುವಿಹಾರಿಗಳು ಗಮನ ಸೆಳೆದರು.

ಕೋಟೆ ಪ್ರವೇಶಿಸಿ ಸ್ಥಳಪರಿಶೀಲಿಸುತ್ತಿದ್ದ ಸಚಿವರನ್ನು ಭೇಟಿಯಾದ ಕೋಟೆ ವಾಯುವಿಹಾರಿ ಗಳು, ‘ಕೋಟೆಗೆ ತುಂಬಾ ಪ್ರವಾಸಿಗರು ಬರುತ್ತಾರೆ. ಇಲ್ಲಿ ಶೌಚಾಲಯಗಳ ಕೊರತೆ ಇದೆ. ಕುಡಿಯುವ ನೀರಿನ ಸೌಲಭ್ಯ ಸಮರ್ಪಕವಾಗಿಲ್ಲ. ಈ ಸೌಲಭ್ಯಗಳನ್ನು ಕಲ್ಪಿಸಿ’ ಎಂದು ಮನವಿ ಮಾಡಿದರು. ಕೋಟೆಗೆ ಬರುವ ರಸ್ತೆಗಳು ಒತ್ತುವರಿಯಾಗಿವೆ. ಮೊದಲು ಅವುಗಳನ್ನು ತೆರವುಗೊಳಿಸಿ’ ಎಂದು ಒತ್ತಾಯಿಸಿದರು.

ದೂರುಗಳನ್ನು ಆಲಿಸಿ, ಪುನಃ ದುರ್ಗೋತ್ಸವ ನಡೆಸುವ ಸ್ಥಳದ ಪರಿಶೀಲನೆಗೆ ಹೊರಟ ಸಚಿವರು, ಬನಶಂಕರಿ ದೇವಸ್ಥಾನ, ಮದ್ದು ಬೀಸುವ ಕಲ್ಲು, ಒಂಟಿಕಲ್ಲು
ಬಸವಣ್ಣನ ದೇವಸ್ಥಾನ ಜಾಗವನ್ನು ವೀಕ್ಷಿಸಿದರು.. ‘ಇಲ್ಲಿ ವೇದಿಕೆ ಹಾಕುವುದಕ್ಕೇ ಜಾಗ ಸಾಕಾಗುವುದಿಲ್ಲ. ವೀಕ್ಷಕರ ಸಂಖ್ಯೆ ಹೆಚ್ಚಿದರೆ, ನಿರ್ವಹಣೆ, ಸುರಕ್ಷತೆಯೂ ಕಷ್ಟ’ ಎಂದ ಸಚಿವ ಆಂಜನೇಯ, ’ಸ್ಥಳೀಯರ ಆಶಯದಂತೆ, ಉತ್ಸವದ ಮೊದಲ ದಿನದ ಕಾರ್ಯಕ್ರಮ ಕೋಟೆಯಲ್ಲೇ ಮಾಡಿ, ಮುಂದಿನ ಎರಡು ದಿನಗಳ ಕಾರ್ಯಕ್ರಮವನ್ನು ನಗರದ ಹೃದಯಭಾಗದ ಮೈದಾನದಲ್ಲಿ ಮಾಡುವುದು ಒಳ್ಳೆಯದು’ ಎಂದು ಅಭಿಪ್ರಾಯಪಟ್ಟರು.

ಸ್ಥಳ ಪರಿಶೀಲನೆ ಮುಗಿಸಿ ಕೋಟೆಯಿಂದ ನಿರ್ಗಮಿಸುತ್ತಿದ್ದ ಸಚಿವ ರನ್ನು ಪುನಃ ಕೆಲವ ವಾಯುವಿಹಾರಿಗಳು ತಡೆದು ಹಿಂದೆ ಹೇಳಿದ್ದ ಸಮಸ್ಯೆಗಳನ್ನೇ ಪಟ್ಟಿ ಮಾಡಿದರು. ಆದರೆ, ಈ ಬಾರಿ ಸ್ಥಳೀಯ ಪುರಾತತ್ವ ಇಲಾಖೆಯ ಅಧಿಕಾರಿಗಳನ್ನು ಹಾಗೂ ಕೋಟೆಯ ನಿರ್ವಹಣೆಯ ವ್ಯವಸ್ಥೆಯನ್ನೂ ಟೀಕಿಸಿ ದ್ದಲ್ಲದೇ, ‘ಕೋಟೆಗೂ ನಾಗರಿಕರಿಗೂ ಸಂಬಂಧವಿಲ್ಲದಂತೆ ಅಧಿಕಾರಿಗಳು ವರ್ತಿಸುತ್ತಿದ್ದಾರೆ. ಎಲ್ಲವುದಕ್ಕೂ ನಾವು ಸೆಂಟ್ರಲ್ ಗೌರ್ಮೆಂಟು ಎನ್ನುತ್ತಾರೆ ’ ಎಂದು ಅಧಿಕಾರಿಗಳ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

ಈ ಕೋಟೆ ಯಾವ ಸರ್ಕಾರದ ವ್ಯಾಪ್ತಿಗೆ ಬರುತ್ತದೆ ಎಂಬುದರ ಬಗ್ಗೆಯೇ ಅಧಿಕಾರಿಗಳು ಗೊಂದಲ ಸೃಷ್ಟಿಸಿದ್ದಾರೆ. ಉನ್ನತಮಟ್ಟದ ಅಧಿಕಾರಿಗಳು ಕೋಟೆಗೆ ಭೇಟಿ ನೀಡಿದರೆ ಲಕ್ಷ ಲಕ್ಷ ವೆಚ್ಚದ ಕಾಮಗಾರಿ ತೋರಿಸುತ್ತಾರೆ. ಯಾರು ಬೇಡಿಕೆ ಇಡದಿದ್ದರೂ ಕೋಟೆಯ ಮೆಟ್ಟಿಲುಗಳ ಪಕ್ಕ ಕಂಬಿಗಳನ್ನು ಹಾಕಿಸಿ, ಕೋಟೆ ಅಂದವನ್ನೇ ಹಾಳು ಮಾಡುತ್ತಿದ್ದಾರೆ. ಕೋಟೆ ಹೊರಭಾಗದ ಮೂಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಲು ಮುಂದಾದಾಗ, ಕಾನೂನು ಮುಂದಿಟ್ಟು, ಅದನ್ನು ಅರ್ಧಕ್ಕೆ ನಿಲ್ಲಿಸಿದರು. ಈಗ ಕಂಬಿಗಳನ್ನು ಹಾಕುವಾಗ ಕಾನೂನು ಅಡ್ಡಿಯಾಗಲ್ಲವಾ ಎಂದು ಫೈಲ್ವಾನ್ ತಿಪ್ಪೇಸ್ವಾಮಿ ಮತ್ತಿತರರು ಪ್ರಶ್ನಿಸಿದರು.

‘ಕೋಟೆಗೆ ಅಳವಡಿಸಿದ್ದ ದೀಪಗಳು ಏನಾಗಿವೆ’ ಎಂದು ಸಚಿವರು ಪ್ರಶ್ನಿಸಿದರು. ಇದಕ್ಕೆ ಸ್ಥಳದಲ್ಲಿದ್ದ ಪ್ರವಾಸೋದ್ಯಮ ಇಲಾಖೆ ಸಹಾಯಕ ನಿರ್ದೇಶಕ ಡಾ.ತಿಪ್ಪೇಸ್ವಾಮಿ, ‘ನಮ್ಮ ಇಲಾಖೆ ದೀಪಗಳನ್ನು ಆಳವಡಿಸಿದೆ. ಅದನ್ನು ಕೇಂದ್ರ ಪುರಾತತ್ವ ಇಲಾಖೆಗೆ ಕೊಡಲಾಗಿದೆ.

ಅವರು ಸರಿಯಾಗಿ ನಿರ್ವಹಣೆ ಮಾಡದೇ, ವಿದ್ಯುತ್ ಬಿಲ್ ಪಾವತಿಸದ ಕಾರಣ ಅವುಗಳು ಬೆಳಗುತ್ತಿಲ್ಲ’ ಎಂದು ಸಚಿವರಿಗೆ ಮಾಹಿತಿ ನೀಡಿದರು. ಸ್ಥಳದಲ್ಲಿದ್ದ ಕೇಂದ್ರ ಪುರಾತತ್ವ ಇಲಾಖೆ ಸಹಾಯಕ ನಿರ್ದೇಶಕ ಗಿರೀಶ್, ‘ಅದಕ್ಕೂ ನಮಗೂ ಸಂಬಂಧವಿಲ್ಲ. ಅದು ನಿಮ್ಮ ಜವಬ್ದಾರಿ’ ಎಂದರು. ಈ ಎರಡೂ ಅಧಿಕಾರಿಗಳ ವಾದ–ಪ್ರತಿವಾದ ಗಮನಿಸಿದ ಸಚಿವರು, ‘ಇದು ಹೊಂದಾಣಿಕೆ ಕೊರತೆಯಿಂದಾಗಿ ಅಭಿವೃದ್ಧಿ ಕುಂಠಿತವಾಗಿದೆ’ ಎಂದರು. ನಂತರ ಸಚಿವರು ಹಳೇ ಮಾಧ್ಯಮಿಕ ಶಾಲಾ ಮೈದಾನಕ್ಕೂ ಭೇಟಿ ನೀಡಿ ಪರಿಶೀಲಿಸಿದರು.

ಜಿಲ್ಲಾಧಿಕಾರಿ ವಿ.ವಿ.ಜೋತ್ನ್ಸಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀನಾಥ್ ಎಂ.ಜೋಷಿ, ನಗರಸಭೆ ಅಧ್ಯಕ್ಷ ಮಂಜುನಾಥ್ ಗೊಪ್ಪೆ, ಜಿಪಂ ಸಿಇಒ ಪಿ.ಎ.ರವೀಂದ್ರ, ತಹಸೀಲ್ದಾರ್ ಮಲ್ಲಿಕಾರ್ಜುನಪ್ಪ, ಆಯುಕ್ತ ಎಂ.ಚಂದ್ರಪ್ಪ ಇದ್ದರು.

‘ಶೌಚಾಲಯ, ಕುಡಿಯುವ ನೀರಿಗೆ ವ್ಯವಸ್ಥೆ’

ಕೇಂದ್ರ ಸರ್ಕಾರದ ಸಂಸ್ಕೃತಿ ಸಚಿವಾಲಯದಿಂದ ಕೋಟೆ ವ್ಯಾಪ್ತಿಯಲ್ಲಿ ಕುಡಿಯುವ ನೀರು ಮತ್ತು 11 ಕಡೆ ಶೌಚಾಲಯ ನಿರ್ಮಾಣಕ್ಕೆ ಅನುಮತಿ ಸಿಕ್ಕಿದೆ ಎಂದು ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ್ ತಿಳಿಸಿದರು. ಎರಡು ತಿಂಗಳ ಹಿಂದೆ ಪ್ರವಾಸೋದ್ಯಮ ಸಚಿವ ಪ್ರಿಯಾಂಕ ಖರ್ಗೆ ಅವರೊಂದಿಗೆ ನಡೆಸಿದ್ದು, ಕೋಟೆ ವೀಕ್ಷಣೆಗಾಗಿ ಹೊಸ ಯೋಜನೆ ರೂಪಿಸಲಾಗಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಕೂಡ ಸಿದ್ದವಾಗಿದೆ ಎಂದರು.

* * 

ಕೋಟೆಯೊಳಗಿನ ಅಭಿವೃದ್ಧಿ ಕೇಂದ್ರ ಸರ್ಕಾರದ ವ್ಯಾಪ್ತಿಗೆ ‌ಬರುತ್ತದೆ. ಹಾಗಾಗಿ ಸಂಬಂಧಿಸಿದ ಅಧಿಕಾರಿಗಳು, ಜಿಲ್ಲಾಡಳಿತದ ಜತೆ ಚರ್ಚಿಸಿ, ಸೌಲಭ್ಯ ಕಲ್ಪಿಸಲು ಪ್ರಯತ್ನಿಸುತ್ತೇನೆ.
ಎಚ್.ಆಂಜನೇಯ, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT