ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ವಿಮಾ ಕಂಪೆನಿಗಳಿಗೆ ಕಾಮಾಲೆ ರೋಗವೇ?’

Last Updated 20 ಡಿಸೆಂಬರ್ 2017, 8:53 IST
ಅಕ್ಷರ ಗಾತ್ರ

ಹಾವೇರಿ: ಜಿಲ್ಲೆಯ ಸಾವಿರಾರು ರೈತರ ಬೆಳೆ ವಿಮೆಯ ಕೋಟಿಗಟ್ಟಲೆ ಹಣವನ್ನು ವರ್ಷಗಟ್ಟಲೇ ಅವರ ಖಾತೆಗೆ ಜಮಾ ಮಾಡದೇ ಇರಲು ವಿಮಾ ಕಂಪೆನಿಗಳಿಗೆ ಕಾಮಾಲೆ ರೋಗ ಬಂದಿದೆಯೇ...!

ಜಿಲ್ಲಾ ಪಂಚಾಯ್ತಿ ಸಭಾಭವನದಲ್ಲಿ ಮಂಗಳವಾರ ನಡೆದ ‘ಕೃಷಿ ಇಲಾಖೆ, ಲೀಡ್‌ ಬ್ಯಾಂಕ್‌, ಬೆಳೆ ವಿಮಾ ಕಂಪೆನಿಗಳು ಮತ್ತು ರೈತರ ಸಭೆ’ಯಲ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ರಾಮಣ್ಣ ಕೆಂಚಳ್ಳೇರ ಹರಿ ಹಾಯ್ದ ಪರಿಯಿದು.

‘2015–16ನೇ ಸಾಲಿನಲ್ಲಿ ಜಿಲ್ಲೆಗೆ ಬಿಡುಗಡೆಯಾದ ₹123 ಕೋಟಿ ಪೈಕಿ, ಇನ್ನೂ ₹9 ಕೋಟಿ ದುಡ್ಡು ರೈತರ ಖಾತೆಗೆ ಜಮಾ ಮಾಡಲು ಬಾಕಿ ಇದೆ. ಅಲ್ಲದೇ, ಬಹುತೇಕ ರೈತರ ಖಾತೆಗಳಿಗೆ ಶೇ 15ರಿಂದ ಶೇ 18ರಷ್ಟು ಕಡಿಮೆ ಹಣ ಜಮಾ ಆಗಿದೆ. ಈ ಕುರಿತು ಜಿಲ್ಲಾಡಳಿತ ಹಾಗೂ ಕೃಷಿ ಇಲಾಖೆಗೆ ತಿಳಿಸಿದ್ದರೂ, ಯಾವುದೇ ಕ್ರಮ ಕೈಗೊಂಡಿಲ್ಲ’ ಎಂದು ಅವರು ದೂರಿದರು.

ಈ ಕುರಿತು ಸ್ಪಷ್ಟನೆ ನೀಡುವಂತೆ ವಿಮಾ ಕಂಪೆನಿಗಳ ಅಧಿಕಾರಿಗಳಿಗೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ(ಸಿಇಒ) ಕೆ.ಬಿ.ಅಂಜನಪ್ಪ ಸೂಚಿಸಿದರು. ಆದರೆ, ವಿಮಾ ಕಂಪೆನಿಗಳ ಅಧಿಕಾರಿಗಳು ಉತ್ತರಿಸಲು ತಡವರಿಸಿದರು. ತಕ್ಷಣವೇ ಸಿಇಒ ತರಾಟೆಗೆ ತೆಗೆದುಕೊಂಡರು.

ಹಾನಗಲ್‌ ತಾಲ್ಲೂಕಿನ ರೈತ ಮುಖಂಡ ಮಾಲತೇಶ ಪರಪ್ಪನವರ ಮಾತನಾಡಿ, ‘2016–17ರ ಭತ್ತದ ಬೆಳೆ ವಿಮೆ ಕಂತು ತುಂಬುವ ಸಂದರ್ಭದಲ್ಲಿ ಬ್ಯಾಂಕ್ ಸಿಬ್ಬಂದಿ ಮಾಡಿದ ತಪ್ಪಿನಿಂದಾಗಿ ಜಿಲ್ಲೆಯ ಒಟ್ಟು 3,993 ರೈತರಿಗೆ ಸುಮಾರು ₹11.51 ಕೋಟಿ ಬೆಳೆ ವಿಮೆ ಹಣ ಬಿಡುಗಡೆ ಆಗಿಲ್ಲ’ ಎಂದು ಆರೋಪಿಸಿದರು.

ಹಾನಗಲ್‌ ತಾಲ್ಲೂಕು ಶಿರಗೋಡ ಗ್ರಾಮದ ರೈತ ರಮೇಶ ಪಿ. ಅವರಿಗೆ ಭತ್ತದ ಬೆಳೆ ಪರಿಹಾರ ಹಣ ಜಮಾ ಆಗಿದೆ ಎಂದು ಪಟ್ಟಿಯಲ್ಲಿ ತೋರಿಸಲಾಗಿದೆ. ಆದರೆ, ಅವರ ಬ್ಯಾಂಕ್‌ ಖಾತೆಗೆ ದುಡ್ಡು ಜಮಾ ಆಗಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪುರ, ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೀಡ್‌ ಬ್ಯಾಂಕ್‌ ಅಧಿಕಾರಿ ಕದರಪ್ಪ, ಬೆಳೆ ವಿಮೆ ಭರಿಸಿಕೊಳ್ಳುವಲ್ಲಿ ಬ್ಯಾಂಕ್‌ ಸಿಬ್ಬಂದಿ ತಪ್ಪು ಮಾಡಿರುವುದು ಗೋಚರಿಸುತ್ತಿದೆ. ಆದರೆ, ಬೆಳೆ ವಿಮಾ ಕಂಪೆನಿಗಳು ಕೂಡಲೇ ತಿಳಿಸಿದ್ದರೆ, ಸಮಸ್ಯೆ ಉದ್ಭವಿಸುತ್ತಿರಲಿಲ್ಲ’ ಎಂದರು.

‘ಮಳೆ– ಬಿಸಿಲು ಲೆಕ್ಕಿಸದೇ ಹೊಲದಲ್ಲಿ ದುಡಿಯುವ ರೈತರನ್ನು ಗ್ರಾಮ ಲೆಕ್ಕಾಧಿಕಾರಿಯಿಂದ ಹಿಡಿದು ಉನ್ನತ ಮಟ್ಟದ ಅಧಿಕಾರಿಗಳ ತನಕ ಎಲ್ಲರೂ ನಿರ್ಲಕ್ಷಿಸುತ್ತಿದ್ದಾರೆ. ಬೆಳೆ ವಿಮೆ ಹಣವನ್ನು ರೈತರ ಖಾತೆಗೆ ವರ್ಷಗಟ್ಟಲೇ ಜಮಾ ಮಾಡದಿರುವ ವಿಮಾ ಕಂಪೆನಿಗಳನ್ನು ಕಪ್ಪು ಪಟ್ಟಿಗೆ ಸೇರಿಸಿ’ ಎಂದು ರೈತರು ಆಗ್ರಹಿಸಿದರು.

‘ಬಾಕಿ ಇರುವ ಬೆಳೆ ವಿಮೆಯನ್ನು ಬಡ್ಡಿ ಸಹಿತ ಜಮಾ ಮಾಡಬೇಕು’ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ ಬಳ್ಳಾರಿ ಆಗ್ರಹಿಸಿದರು. ಬೆಂಗಳೂರು ಕೃಷಿ ಇಲಾಖೆಯ ವಿದ್ಯಾನಂದ ಇದ್ದರು.

* * 

ಬೆಳೆ ವಿಮೆ ತುಂಬಿಸಿಕೊಳ್ಳುವ ವೇಳೆ ತಪ್ಪು ಮಾಡಿದ ಬ್ಯಾಂಕ್‌ ಸಿಬ್ಬಂದಿ ಮೇಲೆ ಕ್ರಮ ಕೈಗೊಳ್ಳಿ, ತಪ್ಪುಗಳು ಮರುಕಳಿಸದಂತೆ ನಿಗಾ ವಹಿಸಿ
ಕೆ.ಬಿ.ಅಂಜನಪ್ಪ
ಜಿಲ್ಲಾ ಪಂಚಾಯ್ತಿ ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT