ಕೊಪ್ಪಳ

ಕೈ ಮುಗಿದು ಬನ್ನಿ ಹನುಮನಹಳ್ಳಿಯ ಶಾಲೆಗೆ

ಶಾಲೆಯ ಒಟ್ಟಾರೆ ಪರಿಸರವೇ ಹೀಗಿದೆ. ಪುಟ್ಟ ಶಾಲೆಯಲ್ಲಿ ಶಿಕ್ಷಕರ - ಮಕ್ಕಳ- ಪೋಷಕರ, ಶಾಲಾಭಿವೃದ್ಧಿ ಸಮಿತಿ ಸದಸ್ಯರ ಎಲ್ಲರ ಸಮಭಾವದ ಪರಿಶ್ರಮದಿಂದ ಶಾಲೆಯೊಂದು ಹೂವಿನಂತೆ ಅರಳಿದೆ.

ಕೊಪ್ಪಳ ತಾಲ್ಲೂಕು ಹನುಮನಹಳ್ಳಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಓದು ನಿರತ ಮಕ್ಕಳು

ಕೊಪ್ಪಳ: ಶಾಲಾ ಆವರಣದಲ್ಲಿ ಹಕ್ಕಿಗಳ ಕಲರವವೇ ನಿತ್ಯ ಪ್ರಾರ್ಥನೆ, ಸಂಗೀತ, ಗಿಡಮರಗಳ ತಂಗಾಳಿಯೇ ಇಲ್ಲಿ ಹವಾನಿಯಂತ್ರಕ. ಶಾಲಾ ಗೋಡೆಗಳೇ ಜ್ಞಾನ ಪುಸ್ತಕಗಳು. ಒಂದೊಂದು ಕೊಠಡಿಗೆ ಒಂದೊಂದು ವಿಷಯದ ಹೆಸರು. ಪ್ರತಿ ಗೋಡೆಗಳಲ್ಲಿ ಸಾಹಿತ್ಯ, ಸಂಗೀತ, ವಿಜ್ಞಾನ, ಕಲೆ ಕ್ಷೇತ್ರಗಳ ಮಹನೀಯರು ಸ್ವಾಗತಿಸುತ್ತಾರೆ. ಇದು ತಾಲ್ಲೂಕಿನ ಹನುಮನಹಳ್ಳಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೋಟ.

ಶಾಲೆಯ ಒಟ್ಟಾರೆ ಪರಿಸರವೇ ಹೀಗಿದೆ. ಪುಟ್ಟ ಶಾಲೆಯಲ್ಲಿ ಶಿಕ್ಷಕರ - ಮಕ್ಕಳ- ಪೋಷಕರ, ಶಾಲಾಭಿವೃದ್ಧಿ ಸಮಿತಿ ಸದಸ್ಯರ ಎಲ್ಲರ ಸಮಭಾವದ ಪರಿಶ್ರಮದಿಂದ ಶಾಲೆಯೊಂದು ಹೂವಿನಂತೆ ಅರಳಿದೆ.

ಕೊಠಡಿ ವೈವಿಧ್ಯ: ಸಾಹಿತ್ಯ ಭವನ ಹೆಸರಿನ ತರಗತಿ ಕೊಠಡಿಯ ಮುಂದೆ ಕುವೆಂಪು, ಬೇಂದ್ರೆ, ಗಿರೀಶ್‌ ಕಾರ್ನಾಡ್‌ರಂಥ ಸಾಹಿತಿಗಳ ಚಿತ್ರಗಳು, ಅವರ ಸಾಹಿತ್ಯದ ಕಿರು ಪರಿಚಯ, ಸ್ವಾತಂತ್ರ್ಯ ಭವನದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ಚಿತ್ರಗಳು ಅವರ ಜೀವನ ಸಂದೇಶಗಳು, ವಿಜ್ಞಾನ ಭವನದ ಗೋಡೆಯಲ್ಲಿ ವಿಜ್ಞಾನಿಗಳ ಚಿತ್ರ, ಅವರ ಸಂಶೋಧನೆಯ ಮಾಹಿತಿ, ಮಾನವ ದೇಹ ರಚನೆಯ ಚಿತ್ರಗಳು ಇಲ್ಲಿವೆ. ಹಳ್ಳಿಗಾಡಿನ ಪುಟ್ಟ ಶಾಲೆಯಲ್ಲಿ ಸ್ಮಾರ್ಟ್‌ ಕ್ಲಾಸ್‌ ಇದೆ.

ಆಂಡ್ರಾಯ್ಡ್‌ ಟಿವಿ ಮೂಲಕ ಪಠ್ಯವನ್ನು ಪರದೆ ಮೇಲೆ ಮೂಡಿಸಿ ಮಕ್ಕಳಿಗೆ ಬೋಧಿಸಲಾಗುತ್ತದೆ. ನಲಿ ಕಲಿಯಲ್ಲಿ ಕಲಿಸುವ ಶಿಕ್ಷಕರು ನಿಗದಿತ ಪಠ್ಯದ ಜತೆಗೆ ಹಲವು ಜನಪದ ಹಾಡುಗಳನ್ನೂ ಕಲಿಸುತ್ತಾರೆ. ಮಕ್ಕಳೊಂದಿಗೆ ಹೆಜ್ಜೆ ಹಾಕುತ್ತಾರೆ. ಶಾಲೆಯ ಸುತ್ತಮುತ್ತ ಗಮನ ಸೆಳೆಯುವುದೇ ಹಸಿರು ಗಿಡ ಮರಗಳು. ಗುಬ್ಬಚ್ಚಿಗೆಂದು ಇಟ್ಟ ಗೂಡಿನಲ್ಲಿ ಜೇನುಹುಳುಗಳು ವಾಸ ಮಾಡಿವೆ. ಶಾಲೆಯ ಹಿಂಭಾಗದ ಪುಟ್ಟ ಜಾಗದಲ್ಲಿ ಮೆಣಸಿನಕಾಯಿ ಕೈತೋಟ ಇದೆ. ಶಾಲೆಯ ಅಂಗಳದಲ್ಲಿ ನೆಟ್ಟ ಗಿಡಗಳಿಗೆ ಹಾಕಲಾದ ರಕ್ಷಣಾ ಡಬ್ಬಿಗಳಲ್ಲೂ ಕನ್ನಡ ಪದಗಳ ಪರಿಚಯ ಇದೆ.

ಇಷ್ಟೇ ಅಲ್ಲ. ಶಾಲಾ ವಿದ್ಯಾರ್ಥಿಗಳು ಎರಡು ವರ್ಷಗಳಲ್ಲಿ ಸುಮಾರು 8 ರಂಗ ಪ್ರಯೋಗಗಳನ್ನು ಮಾಡಿದ್ದಾರೆ. ಸ್ಕೌಟ್‌ ಮತ್ತು ಗೈಡ್ಸ್‌ ಇದೆ. ಪ್ರತಿ ಶನಿವಾರ ಸಾಂಸ್ಕೃತಿಕ ಚಟುವಟಿಕೆಗೆ ದಿನ ಮೀಸಲಾಗಿಡಲಾಗುತ್ತದೆ, ಜನಪದ ಹಾಡುಗಳು ಮಕ್ಕಳ ಬಾಯಲ್ಲಿ ನಲಿದಾಡುತ್ತಿವೆ. ರಂಗಭೂಮಿ, ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ಶಾಲೆಗೆ ಭೆಟಿ ನೀಡಿ ಮಕ್ಕಳೊಡನೆ ಮಾತನಾಡಿದ್ದಾರೆ. ಎಲ್ಲ ಶಿಕ್ಷಕರ ಬದ್ಧತೆ, ಪರಿಶ್ರಮ ಶಾಲೆ ಈ ಮಟ್ಟಕ್ಕೆ ಬರಲು ಕಾರಣ ಎನ್ನುತ್ತಾರೆ ಮುಖ್ಯ ಶಿಕ್ಷಕ ಸೈದುಲ್ಲಾ ಹುಸೇನ್‌ ಉಮ್ರಿ.

20 ಗುಂಟೆ ಪ್ರದೇಶವನ್ನು ಸ್ವಲ್ಪವೂ ವ್ಯರ್ಥವಾಗದಂತೆ ಸಮರ್ಪಕವಾಗಿ ಬಳಸಿಕೊಳ್ಳಲಾಗಿದೆ. ಜೀವ ವೈವಿಧ್ಯ ಶಾಲಾ ಆವರಣದಲ್ಲಿ ಮೈದಳೆದಿದೆ.

ಮಕ್ಕಳೇನಂತಾರೆ?

'7 ವರ್ಷಗಳಲ್ಲಿ ಶಾಲಾ ಕಟ್ಟಡ ಸಾಕಷ್ಟು ಬದಲಾಗಿದೆ. ನಾನು ಒಂದನೇ ತರಗತಿಗೆ ಸೇರುವಾಗ ಇಲ್ಲಿ ಕೇವಲ 4 ಕೊಠಡಿಗಳಿದ್ದವು. ಈಗ 6 ಆಗಿವೆ. ಸ್ಮಾರ್ಟ್ ಕ್ಲಾಸ್‌ ಬಂದಿದೆ. 7 ವರ್ಷಗಳಲ್ಲಿ ಸಾಕಷ್ಟು ಒಳ್ಳೆಯ ಶಿಕ್ಷಕರು ಬಂದಿದ್ದಾರೆ. ಶಾಲೆಗೆ ಬರುವುದೆಂದರೆ ಖುಷಿ ಎನಿಸುತ್ತದೆ' ಎನ್ನುತ್ತಾಳೆ 7ನೇ ತರಗತಿ ವಿದ್ಯಾರ್ಥಿನಿ ಹುಲಿಗೆವ್ವ.

'ನನ್ನ ಶಾಲೆಯ ಸುತ್ತ ಹಸಿರು ವಾತಾವರಣವಿದೆ. ಹಳ್ಳಿಯ ಶಾಂತತೆ ಇದೆ. ಒಳ್ಳೆಯ ಶಿಕ್ಷಕರಿದ್ದಾರೆ. ಇನ್ನೇನು ಬೇಕು'? ಎಂದು ಪ್ರಶ್ನಿಸಿದ 6ನೇ ತರಗತಿ ವಿದ್ಯಾರ್ಥಿ ವೆಂಕಟೇಶ.

"ಹಸಿರು ಶಾಲೆಯ ಸುತ್ತ ತಂಪು ವಾತಾವರಣ ಇದೆ. ಇಲ್ಲಿಂದಲೇ ಪರಿಸರ ಪ್ರಜ್ಞೆ ಮೂಡಿಸುತ್ತಾರೆ. ಒಂದೊಂದು ಕೊಠಡಿಗೂ ಒಂದೊಂದು ಹೆಸರಿಟ್ಟು ಆಯಾ ಕ್ಷೇತ್ರದ ಪರಿಚಯ ಮಾಡಿಸುತ್ತಿರುವುದು ನಮ್ಮ ಶಾಲೆಯ ವಿಶೇಷ' ಎಂದ 5ನೇ ತರಗತಿ ವಿದ್ಯಾರ್ಥಿ ಯೋಗೇಶ. ವಿದ್ಯಾರ್ಥಿಗಳ ಆತ್ಮವಿಶ್ವಾಸದ ಹಿಂದೆ ಶಿಕ್ಷಕರಾದ ಮಲ್ಲಪ್ಪ ಹವಳೆ, ಕೊಟ್ರೇಶ್‌ ಹೈದ್ರಿ, ಪ್ರಾಣೇಶ್‌ ಪೂಜಾರ್‌, ಅನಿತಾ, ಮುರುಗೇಶ್‌ ಸಜ್ಜನ್‌, ಕಿರಣ್‌ ಕುಮಾರ್‌ ಇದ್ದಾರೆ.

Comments
ಈ ವಿಭಾಗದಿಂದ ಇನ್ನಷ್ಟು

ಕುಷ್ಟಗಿ
ಮಕ್ಕಳ ಹಕ್ಕು ರಕ್ಷಣೆ ಸಮಾಜದ ಕರ್ತವ್ಯ

ಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳ ಹೆಚ್ಚಳಕ್ಕೆ ಸಾರ್ವಜನಿಕರಲ್ಲಿ ಮಕ್ಕಳ ಹಕ್ಕುಗಳ ಜಾಗೃತಿ ಇಲ್ಲದಿರುವುದೂ ಪ್ರಮುಖ ಕಾರಣ ಎಂದು ಹಿರಿಯ ಶ್ರೇಣಿ ಸಿವಿಲ್‌ ನ್ಯಾಯಾಧೀಶ ಎನ್‌.ಎಸ್‌.ಕುಲಕರ್ಣಿ...

26 Apr, 2018

ಹನುಮಸಾಗರ
‘ಭಾಗ್ಯ’ಗಳಿಂದಲೇ ಕಾಂಗ್ರೆಸ್‌ಗೆ ಗೆಲವು

ಬಡವರು, ರೈತರು, ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ‘ಭಾಗ್ಯ’ಗಳ ಹೆಸರಿನಲ್ಲಿ ಜಾರಿಗೆ ತಂದ ಸರ್ಕಾರ ಗೆಲುವಿಗೆ ಕಾರಣವಾಗಲಿವೆ ಎಂದು ಕಾಂಗ್ರೆಸ್‌ ಅಭ್ಯರ್ಥಿ ಅಮರೇಗೌಡ ಪಾಟೀಲ ಬಯ್ಯಾಪೂರ...

26 Apr, 2018
ವಾಸವಿ ಜಯಂತಿ: ಅದ್ಧೂರಿ ಮೆರವಣಿಗೆ

ಕನಕಗಿರಿ
ವಾಸವಿ ಜಯಂತಿ: ಅದ್ಧೂರಿ ಮೆರವಣಿಗೆ

26 Apr, 2018
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ ಜಾಗೃತಿ

ಕಾರಟಗಿ
ಸಮುದಾಯ ಆರೋಗ್ಯ ಕೇಂದ್ರದಲ್ಲಿ ಮತ ಜಾಗೃತಿ

25 Apr, 2018
ನಾಮಪತ್ರ: ಕೊನೆಯ ದಿನದ ಭರಾಟೆ

ಕೊಪ್ಪಳ
ನಾಮಪತ್ರ: ಕೊನೆಯ ದಿನದ ಭರಾಟೆ

25 Apr, 2018