ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಹಾಯಹಸ್ತ ಚಾಚುವ ತಂತ್ರಜ್ಞಾನ

Last Updated 20 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸಂಶೋಧನೆ, ಆವಿಷ್ಕಾರಗಳು ಬದುಕಿನ ಗುಣಮಟ್ಟ ಹೆಚ್ಚಿಸುವ ಜತೆಗೆ ನಿತ್ಯದ ಕಾರ್ಯಗಳನ್ನು ಸರಳ ಮತ್ತು ಸುಲಭಗೊಳಿಸುವುದರಲ್ಲಿ ಪ್ರಮುಖ ಪಾತ್ರವಹಿಸಿವೆ. ಸಣ್ಣ ಬದಲಾವಣೆ ಹಾಗೂ ಹೊಸ ವಿನ್ಯಾಸದೊಂದಿಗೆ ಹೊರಬರುವ ಮೊಬೈಲ್ ಫೋನ್ ಕೊಳ್ಳಲು ಸಾಲಿನಲ್ಲಿ ನಿಂತು ಇಡೀ ದಿನ ಕಾಯುವುದಿದೆ. ತಂತ್ರಜ್ಞಾನ ಮತ್ತು ಅಲ್ಲಿನ ಹೊಸತುಗಳು ನಮ್ಮನ್ನು ಆವರಿಸಿಬಿಟ್ಟಿವೆ. ಇತ್ತೀಚಿನ ವರ್ಷಗಳಲ್ಲಿ ರೊಬೋಟಿಕ್ಸ್, ಮೆಟೀರಿಯಲ್ ಎಂಜಿನಿಯರಿಂಗ್ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿನ ಅಭಿವೃದ್ಧಿಯಿಂದ ಅಂಗವಿಕಲರು ಸೇರಿ ಹಲವರಿಗೆ ತಂತ್ರಜ್ಞಾನವೇ ಈ ಕಾಲದ ಸಹಾಯಕನಂತಾಗಿದೆ.

ಸ್ವತಃ ಚಾಲನೆ ಮಾಡುವ ಕಾರು, ಮಾರ್ಗ ತೋರಿಸುವ ಸ್ಮಾರ್ಟ್‌ಫೋನ್‌ ಯುಗದಲ್ಲಿ ಕಣ್ಣಿಗೆ ಬಳಸುವ ಕನ್ನಡಕ ಮತ್ತು ಕಾಂಟ್ಯಾಕ್ಟ್ ಲೆನ್ಸ್‌ಗಳು ಹಿಂದಿನಂತೆ ದೃಷ್ಟಿಗೆ ತಕ್ಕಂತೆ ಸಿದ್ಧಪಡಿಸಿದ ಮಸೂರಗಳಾಗಿ ಮಾತ್ರ ಉಳಿದಿಲ್ಲ. ಕ್ಯಾಮೆರಾದಂತೆಯೂ ಉಪಯೋಗಿಸಬಹುದಾದ ಸ್ಮಾರ್ಟ್ ಕಾಂಟ್ಯಾಕ್ಟ್ ಲೆನ್ಸ್‌ಗಳು, ಗೂಗಲ್ ಕನ್ನಡಕಗಳ ಅಭಿವೃದ್ಧಿ ನಡೆದಿದೆ. ಇದರೊಂದಿಗೆ ಗಮನ ಸೆಳೆದಿರುವ ಸಂಶೋಧನೆ ಅಗ್ಮೆಂಟೆಡ್ ರಿಯಾಲಿಟಿ(ಎಆರ್) ಕನ್ನಡಕಗಳು.

l ಅಂಧರಿಗೆ ಅಗ್ಮೆಂಟೆಡ್ ರಿಯಾಲಿಟಿ ಗ್ಲಾಸ್: ಜಗತ್ತಿನ ಬಹುತೇಕ ಎಲೆಕ್ಟ್ರಾನಿಕ್‌ ಉತ್ಪನ್ನ ತಯಾರಿಕಾ ಸಂಸ್ಥೆಗಳು ಅಗ್ಮೆಂಟೆಡ್ ರಿಯಾಲಿಟಿ(ಎಆರ್) ಕನ್ನಡಗಳನ್ನು ಬಳಸಿ ವಿಶೇಷ ಗೇಮ್‍ಗಳನ್ನು ಸಿದ್ಧಪಡಿಸುತ್ತಿವೆ. ಇಂಗ್ಲೆಂಡ್‍ನ ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ನರವಿಜ್ಞಾನಿ ಹಾಗೂ ಕಂಪ್ಯೂಟರ್ ವಿಷನ್ ಸಂಶೋಧಕರು ಜತೆಯಾಗಿ ದೃಷ್ಟಿದೋಷ ಹೊಂದಿರುವವರಿಗೆ ಸಹಕಾರಿಯಾಗುವಂತೆ ಎಆರ್ ಕನ್ನಡಕಗಳನ್ನು ಅಭಿವೃದ್ಧಿಪಡಿಸಿದ್ದಾರೆ.

ಈ ಸ್ಮಾರ್ಟ್ ಗ್ಲಾಸ್‍ನೊಂದಿಗೆ ಧ್ವನಿ ಸಂದೇಶ ನೀಡುವ, ನಿತ್ಯದ ಓಡಾಟದಲ್ಲಿ ಬಹಳಷ್ಟನ್ನು ರೆಕಾರ್ಡ್ ಮಾಡಿಕೊಳ್ಳಲು ಮತ್ತೊಂದು ಉಪಕರಣದೊಂದಿಗೆ ಸಂಪರ್ಕಿಸಲಾಗಿರುತ್ತದೆ. ಮಂದ ದೃಷ್ಟಿ ಇರುವವರಿಗೆ ಎಆರ್ ಕನ್ನಡಕದಲ್ಲಿ ಎದುರಿನ ದೃಶ್ಯಗಳು ದೊಡ್ಡದಾಗಿ ಮತ್ತು ಸ್ಪಷ್ಟವಾಗಿ ಗೋಚರಿಸುತ್ತವೆ. ಅಂಧರಿಗೆ ಬೆಳಕು ಹಾಗೂ ಧ್ವನಿ ಮೂಲಕ ವಸ್ತುಗಳ ಇರುವಿಕೆಯನ್ನು ತಿಳಿಸುವುದು ಸಾಧ್ಯವಾಗಿದೆ. ಜಗತ್ತನ್ನು ನಮ್ಮಂತೆ ಕಾಣಲಾಗದ ಎಷ್ಟೋ ಜನರಿಗೆ ಕಣ್ಣಾಗಬಲ್ಲ ಈ ಸ್ಮಾರ್ಟ್ ಕನ್ನಡಕದ ಅಭಿವೃದ್ಧಿಗೆ ಗೂಗಲ್ ಸಂಸ್ಥೆಯೂ ಕೈಜೋಡಿಸಿದ್ದು, ಸಂಶೋಧನೆಗಾಗಿ 6.58 ಲಕ್ಷ ಡಾಲರ್(ಅಂದಾಜು 4 ಕೋಟಿ ರೂ.) ಅನುದಾನ ನೀಡುತ್ತಿದೆ.

l ಮೂಕಭಾಷೆಗೆ ನುಡಿಕನ್ನಡಿ ‘ಕಿನ್‍ಟ್ರಾನ್ಸ್’: ಮಾತು ಆಡಲಾಗದ, ಕಿವಿ ಕೇಳದ ಲಕ್ಷಾಂತರ ಜನರು ಸನ್ನೆಯ ಮೂಲಕ ಸಂವಹನ ನಡೆಸುವುದನ್ನು ಕಲಿತಿದ್ದಾರೆ. ಆದರೆ, ಸನ್ನೆ ಮತ್ತು ಸೂಚನೆಗಳ ಮೂಲಕ ವ್ಯವಹರಿಸುವುದನ್ನು ಕಲಿತಿರುವ ಮೂಕ-ಕಿವುಡ ವ್ಯಕ್ತಿಗಳೊಂದಿಗೆ ಸಾಮಾನ್ಯರು ಸಂವಹನ ನಡೆಸುವುದು ಸುಲಭವಲ್ಲ. ಆಂಗಿಕ ಸನ್ನೆಗಳ ಮೂಲಕ ಅಥವಾ ಅಕ್ಷರ ರೂಪದಲ್ಲಿ ತಿಳಿಸಿ ವಿಷಯ ಹಂಚಿಕೊಳ್ಳುವುದೂ ಒಂದು. ಈ ಸಮಸ್ಯೆಗೆ ಅಮೆರಿಕ ಮೂಲದ ಸ್ಟಾರ್ಟ್‍ಅಪ್ ಸಂಸ್ಥೆಯೊಂದು ನುಡಿಕನ್ನಡಿ ‘ಕಿನ್‍ಟ್ರಾನ್ಸ್’ ಪರಿಹಾರ ಸಾಧನ ಸಿದ್ಧಪಡಿಸಿದೆ.

3ಡಿ ಕ್ಯಾಮೆರಾ, ಪರದೆ, ಸ್ಪೀಕರ್, ಮೈಕ್ ಹಾಗೂ ಕೀಲಿಮಣೆಯನ್ನು ಹೊಂದಿರುವ ಈ ಸಾಧನ ಸನ್ನೆ ಭಾಷೆಯನ್ನು ಅರ್ಥೈಸಿಕೊಳ್ಳುತ್ತದೆ. ಕೈ, ದೇಹದ ಸನ್ನೆಯನ್ನು ಅಕ್ಷರ ಅಥವಾ ಧ್ವನಿ ರೂಪದಲ್ಲಿ ಮೂಡಿಸುತ್ತದೆ. ಇದರಿಂದ ಎದುರಿಗೆ ಸಂವಹನ ನಡೆಸುತ್ತಿರುವ ಸಾಮಾನ್ಯ ವ್ಯಕ್ತಿಗೆ ಮಾತುಕತೆ ಮುಂದುವರಿಸುವುದು ಸುಲಭ ಹಾಗೂ ಸ್ಪಷ್ಟವಾಗಿರುತ್ತದೆ. ಕಿನ್‍ಟ್ರಾನ್ಸ್ ಮಾತನ್ನು ಅಕ್ಷರ ರೂಪ ಹಾಗೂ ಸನ್ನೆಯಾಗಿ ಪರದೆಯಲ್ಲಿ ಮೂಡಿಸುವುದರಿಂದ ಕಿವುಡ-ಮೂಕ ವ್ಯಕ್ತಿ ಅದನ್ನು ಸುಲಭದಲ್ಲಿ ಗ್ರಹಿಸಬಹುದಾಗಿದೆ.

ಬ್ಯಾಂಕ್, ಬಸ್ ನಿಲ್ದಾಣ, ವಿಮಾನ ನಿಲ್ದಾಣ, ಕಚೇರಿಗಳು ಸೇರಿ ಯಾವುದೇ ಸಾರ್ವಜನಿಕ ವಲಯಗಳಲ್ಲಿ ಈ ಸಾಧನದ ಬಳಕೆ ಉಪಯುಕ್ತ. ಸ್ಮಾರ್ಟ್‌ಫೋನ್‌ ರೀತಿ ಎಲ್ಲೆಡೆ ಲಭ್ಯವಿರುವ ಸಾಧನಗಳಲ್ಲಿ ಇದರ ಅಳವಡಿಕೆ ಸದ್ಯದ ಸಂಶೋಧನೆ. ಮೈಕ್ರೋಸಾಫ್ಟ್ ಸಂಸ್ಥೆಯ ತಂಡ ಕಿನ್‍ಟ್ರಾನ್ಸ್ ಅಭಿವೃದ್ಧಿಯಲ್ಲಿ ಜತೆಯಾಗಿದ್ದು, ಪ್ರಸ್ತುತ ಈ ಸಾಧನವು

ಶೇ 98ರಷ್ಟು ನಿಖರತೆ ಹೊಂದಿದೆ.

* ಜಾಣ ಶ್ರವಣ ಯಂತ್ರ: ಶ್ರವಣದೋಷ ಇರುವವರು ಮಾತು, ಸಂಗೀತ ಅಥವಾ ಸುತ್ತಲಿನ ಯಾವುದೇ ಶಬ್ದ ಆಲಿಸಲು ಶ್ರವಣ ಯಂತ್ರ ಬಳಸುವುದು ಸಾಮಾನ್ಯ. ಲಕ್ಷಾಂತರ ರೂಪಾಯಿ ಬೆಲೆಯ ಇಂಥ ಸೂಕ್ಷ್ಮಯಂತ್ರಗಳೂ ಮಾರುಕಟ್ಟೆಯಲ್ಲಿ ಲಭ್ಯ. ಕೊಲಂಬಿಯಾ ವಿಶ್ವವಿದ್ಯಾಲಯದ ಎಂಜಿನಿಯರಿಂಗ್ ಮತ್ತು ಅಪ್ಲೈಡ್ ಸೈನ್ಸ್‌ನ ಸಂಶೋಧಕರು ಅಭಿವೃದ್ಧಿಪಡಿಸುತ್ತಿರುವ ಶ್ರವಣ ಸಾಧನ ಮಿದುಳಿನ ಯೋಚನಾ ತರಂಗಗಳನ್ನು ಅರಿತು ನಿರ್ದಿಷ್ಟ ಧ್ವನಿಯನ್ನು ಕೇಳಲು ಸಹಕರಿಸುತ್ತದೆ.

ಯಾವ ಶಬ್ದವನ್ನು ಕೇಳಲು ಯೋಚಿಸುತ್ತೇವೆಯೋ ಆ ತರಂಗಗಳಿಗೆ ಸಾಧನ ತೆರೆದುಕೊಳ್ಳುತ್ತದೆ. ಈ ಮೂಲಕ ನಿರ್ದಿಷ್ಟ ಸದ್ದು ಒಳಗಿವಿಯನ್ನು ಪ್ರವೇಶಿಸುತ್ತದೆ. ನಮಗೆ ಬೇಕಿರುವ ಧ್ವನಿ ಅಥವಾ ಶಬ್ದಗಳನ್ನಷ್ಟೇ ಕೇಳುವಂತೆ ಮಾಡುವ ಈ ಜಾಣ ಸಾಧನ ಇನ್ನೂ ಪ್ರಾಯೋಗಿಕ ಹಂತದಲ್ಲಿದೆ.

* ಸಹಾಯಹಸ್ತ: ಕಾರ್ಖಾನೆಗಳು ಸೇರಿ ಅನೇಕ ಉತ್ಪಾದನಾ ವಲಯಗಳಲ್ಲಿ ಎಲೆಕ್ಟ್ರಾನಿಕ್ ಮತ್ತು ಮೆಕಾನಿಕಲ್ ರೋಬೊಗಳ ಬಳಕೆ ಸಾಮಾನ್ಯ. ಅನೇಕ ಕಾರ್ಯಗಳಲ್ಲಿ ಸಹಾಯ ಹಸ್ತ ನೀಡುವ ಈ ತಂತ್ರಜ್ಞಾನದಲ್ಲಿ ಸಾಕಷ್ಟು ಬೆಳವಣಿಗೆಯಾಗಿದ್ದು, ಮನುಷ್ಯರಷ್ಟೇ ಬಾಗುವ ಹಾಗೂ ಪುಟ್ಟ ವಸ್ತುಗಳನ್ನು ಕೈ ಬೆರಳಲ್ಲಿ ಹಿಡಿಯುವಷ್ಟು ಸಮರ್ಥವಾಗಿವೆ. ಈ ಯಂತ್ರವನ್ನು ಕೈಗಳು ಅಗತ್ಯ ಇದ್ದವರ ತೋಳಿಗೆ ಅಳವಡಿಸುವ ಸಂಬಂಧ ಸಂಶೋಧನೆ ನಡೆಯುತ್ತಿದೆ. ಪುಟ್ಟ ಕ್ಯಾಮೆರಾಗಳನ್ನೂ ಬೆರಳಿನ ಭಾಗದಲ್ಲಿ ಅಳವಡಿಸಿರುವುದರಿಂದ ಸಂದರ್ಭವನ್ನು ಗ್ರಹಿಸಿ ಸ್ವತಂತ್ರ ನಿರ್ಧಾರ ತೆಗೆದುಕೊಂಡು ಬೆರಳು ಚಲನೆಯನ್ನೂ ಮಾಡುವಷ್ಟು ಅಭಿವೃದ್ಧಿಯಾಗಿದೆ.

* ಪಾರ್ಕಿನ್ಸನ್‌ ಕಾಯಿಲೆಯಲ್ಲಿ... ನರಮಂಡಲಕ್ಕೆ ಹಾನಿ ಮಾಡುವ ಪಾರ್ಕಿನ್ಸನ್ ಕಾಯಿಲೆಗೆ ಒಳಗಾದವರು ಯಾವಾಗ, ಎಲ್ಲಿ, ಹೇಗೆ ಕುಸಿದು ಬೀಳುತ್ತಾರೆ ಎಂಬುದನ್ನು ಊಹಿಸುವುದು ಕಷ್ಟ. ದೇಹ ಇದ್ದಕ್ಕಿದ್ದಂತೆ ಶಕ್ತಿ ಕಳೆದುಕೊಂಡು ದೊಪ್ಪನೆ ಬೀಳುವ ಅಪಾಯಕಾರಿ ಕಾಯಿಲೆ ಗುಣಪಡಿಸಲು ಪೂರ್ಣ ಪರಿಹಾರ ಕಂಡುಕೊಳ್ಳಲಾಗಿಲ್ಲ. ಹೋಸ್ಟನ್ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್‌ಫೋನ್‌ ಸಹಾಯದಿಂದ ಮಾಹಿತಿ ಸಂಗ್ರಹಿಸಿಕೊಳ್ಳುವ ವಿಶೇಷ ಬೆಲ್ಟ್ ಸಿದ್ಧಪಡಿಸಿದ್ದಾರೆ.

ಪಾರ್ಕಿನ್ಸನ್‌ನಿಂದ ಬಳಲುತ್ತಿರುವವರು ಈ ಬೆಲ್ಟ್ ಧರಿಸಿ ಓಡಾಡುವಾಗ ಯಾವ ಸಮಯದಲ್ಲಿ ದೇಹ ಸ್ವಾಧೀನ ಕಳೆದುಕೊಳ್ಳುತ್ತದೆ, ದೇಹದ ಯಾವ ಭಾಗದಲ್ಲಿ ನರವ್ಯೂಹಕ್ಕೆ ತೊಂದರೆಯಾಗಿದೆ ಎಂಬುದನ್ನು ಬೆಲ್ಟ್‌ನಲ್ಲಿ ಅಳವಡಿಸಿರುವ ವ್ಯವಸ್ಥೆಯಿಂದ ಸ್ಮಾರ್ಟ್‌ಫೋನ್‌ಗೆ ಮಾಹಿತಿ ತಲುಪುತ್ತದೆ. ಇದರಿಂದಾಗಿ ದೇಹದ ಸಾಮರ್ಥ್ಯ ಹೆಚ್ಚಿಸಲು ಪೂರಕವಾದ ವ್ಯಾಯಾಮ ಸೂಚಿಸಲು ವೈದ್ಯರಿಗೆ ಸಹಕಾರಿಯಾಗಲಿದೆ.

*  ನಡೆಸುವ, ಕೂರಿಸುವ ಯಂತ್ರ ಕಾಲು!
ಧ್ವನಿಯನ್ನು ಗ್ರಹಿಸಿ ನೀಡಿದ ಆದೇಶಕ್ಕೆ ತಕ್ಕಂತೆ ಕಾರ್ಯನಿರ್ವಹಿಸುವ ‘ಅಮೆಜಾನ್ ಅಲೆಕ್ಸಾ’ ಕೃತಕ ಬುದ್ಧಿಮತ್ತೆಯ ಸ್ಪೀಕರ್ ವ್ಯವಸ್ಥೆಯೊಂದಿಗೆ ‘ಅರ್ಕಿ’ ಯಂತ್ರ ಕಾಲಿನ ಪ್ರಯೋಗ ನಡೆಸಲಾಗಿದೆ. ನಡೆದಾಡಲು, ಕುಳಿತುಕೊಳ್ಳಲು ಸಾಧ್ಯವಾಗದವರಿಗೆ ದೇಹವನ್ನು ಮೇಲೆತ್ತಿ ನಿಲ್ಲಿಸುವ ಅರ್ಕಿ ಯಂತ್ರ ಬಹೂಪಯೋಗಿ.

‘ಅಲೆಕ್ಸಾ.. ಅರ್ಕಿಯನ್ನು ನಿಲ್ಲಲು ಹೇಳು..’ ‘ಅಲೆಕ್ಸಾ...ಅರ್ಕಿಗೆ ನಡೆಯುವಂತೆ ಹೇಳು...’ ಹೀಗೆ ಆದೇಶ ನೀಡುತ್ತಿದ್ದಂತೆ ದೇಹಕ್ಕೆ ಕಟ್ಟಿಕೊಂಡಿರುವ ಯಂತ್ರ ಚಲನೆ ಪ್ರಾರಂಭಿಸುತ್ತದೆ. ಪ್ರೆಷರ್ ಸೆನ್ಸರ್‌ಗಳನ್ನು ಹೊಂದಿರುವ ಈ ಯಂತ್ರ ಯಾರನ್ನು ಬೇಕಾದರೂ ಎದ್ದು ನಿಲ್ಲಿಸುತ್ತದೆ. ಆದರೆ, ನೀಡುವ ಆದೇಶ ಮತ್ತು ಮೂಳೆಯಂತಹ ಯಂತ್ರವನ್ನು ಸರಿಯಾಗಿ ಕಟ್ಟಿಕೊಳ್ಳುವುದು ಅಗತ್ಯ. ಅಂಗವಿಕಲರು ಅಥವಾ ಅಪಘಾತಗಳಲ್ಲಿ ಕಾಲು ಕಳೆದುಕೊಂಡ ಅನೇಕರಿಗೆ ಈ ಯಂತ್ರ ಉಪಯುಕ್ತ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT