ಜೋಡಿ ನೋಡಲು ಹೋದಾಗ...

ಅಣ್ಣನ ಸ್ನೇಹಿತನೆಂಬ ಸಲುಗೆಯಿಂದ ಹೋಗೋ ಬಾರೋ ಎಂದು ಕರೆಯುತ್ತಿದ್ದ ಸ್ನೇಹ ಕ್ರಮೇಣ ಪ್ರೇಮವಾಗಿ ಮಾರ್ಪಟ್ಟಿತ್ತು. ಆತ ವಧು ಪರೀಕ್ಷೆಗೆ ಮನೆಗೆ ಬರುತ್ತಿದ್ದಾನೆ ಎಂಬ ಸುದ್ದಿ ತಿಳಿದಾಗ ರೋಮಾಂಚನವಾಯಿತು. ಎದೆಯಲಿ ಅವ್ಯಕ್ತ ಸಂವೇದನೆ, ಹೃದಯ ನಗಾರಿಯಾಗಿ ಮನ ಹುಚ್ಚೆದ್ದು ಕುಣಿಯಿತು.

ಬಾಲ್ಯದ ಗೆಳೆಯ ನೋಡಲು ಬಂದಾಗ...

ಅಣ್ಣನ ಸ್ನೇಹಿತನೆಂಬ ಸಲುಗೆಯಿಂದ ಹೋಗೋ ಬಾರೋ ಎಂದು ಕರೆಯುತ್ತಿದ್ದ ಸ್ನೇಹ ಕ್ರಮೇಣ ಪ್ರೇಮವಾಗಿ ಮಾರ್ಪಟ್ಟಿತ್ತು. ಆತ ವಧು ಪರೀಕ್ಷೆಗೆ ಮನೆಗೆ ಬರುತ್ತಿದ್ದಾನೆ ಎಂಬ ಸುದ್ದಿ ತಿಳಿದಾಗ ರೋಮಾಂಚನವಾಯಿತು. ಎದೆಯಲಿ ಅವ್ಯಕ್ತ ಸಂವೇದನೆ, ಹೃದಯ ನಗಾರಿಯಾಗಿ ಮನ ಹುಚ್ಚೆದ್ದು ಕುಣಿಯಿತು.

ಹಿಂದಿನ ರಾತ್ರಿಯೇ ನಿದ್ರಾದೇವಿಯು ಮುನಿಸಿ ದೂರವಾಗಿದ್ದಳು. ಬೆಳಗಾಗುತ್ತಿದ್ದಂತೆ ಸಿಂಗಾರಗೊಳ್ಳುವ ಅಪೂರ್ವ ತಯಾರಿ. ಹಿಂದೆಂದೂ ಕಂಡರಿಯದ ನವಪುಳಕ, ಹಳದಿ ಸೀರೆಯುಟ್ಟು ಕಾಲಿಗೆ ಗೆಜ್ಜೆಕಟ್ಟಿ ನಡೆದಾಗ ಅದರ ಘಲ್‌ ಘಲ್‌ ಸದ್ದಿನೊಂದಿಗೆ ಮನಸ್ಸೂ ಕುಣಿಯುತ್ತಿತ್ತು. ಅಲಂಕೃತಳಾಗಿ ಕನ್ನಡಿ ನೋಡಿದಾಗ ಕಂಡದ್ದು ಅವನ ಬಿಂಬ.

ಕಾತರಿಸಿ ಕಾತರಿಸಿ ಬಂದವನು ನನ್ನ ಬಾಳ ಗೆಳೆಯ. ಗುಂಗುರು ಕೂದಲ ಚೆಲುವ. ಆ ತೀಕ್ಷ್ಣ ಕಂಗಳಲಿ ಆಯಸ್ಕಾಂತದ ಸೆಳೆತ. ಮೊದಲ ಬಾರಿಗೆ ನೋಡುವ ದೃಷ್ಟಿ ಬದಲಾಗಿ ಯಾವುದೋ ಲೋಕಕ್ಕೆ ಕಾಲಿಟ್ಟ ಭಾವ. ಕಂಗಳಲಿ ಒಲವ ಸಾಗರ ತುಂಬಿ ತುಂಟ ನಗೆ ನಕ್ಕಾಗ ಕೋಲ್ಮಿಂಚು ಮೂಡಿದಂತೆ ಭಾಸ. ಕಣ್ಣು ಕಣ್ಣು ಕಲೆತಾಗ ತೆರೆದುಕೊಂಡಿತ್ತು ಪ್ರೇಮಲೋಕ.

ಸದಾ ಚಿನಕುರಳಿಯಂತೆ ಉಲಿಯುತ್ತಿದ್ದವಳಿಗೆ ಆ ಕ್ಷಣ ಒಂದು ಮಾತು ಕೂಡ ಆಡಲಾಗದೆ ನಾಲಗೆ ಮುಷ್ಕರ ಹೂಡಿ ಅಣಕಿಸಿತು. ಕದ್ದು ಕದ್ದು ನೋಡುವ ಅದಮ್ಯ ಆಸೆ. ಎದುರಿಸಲಾಗದ ದೃಷ್ಟಿ. ನೀ ಹಿಂಗೆ ನೋಡಬ್ಯಾಡ ನನ್ನ... ಎನಿಸಿ ರೋಮಾಂಚನವಾಯಿತು. ವಧು ಪರೀಕ್ಷೆಯ ಸುಂದರ ಗಳಿಗೆ ಇದೇನಾ? ನಿನಗೂ ಹೀಗೆಲ್ಲಾ ಆಗಿತ್ತಾ? ಕೇಳಬೇಕೆನಿಸಿತ್ತು. ಪ್ರಶ್ನೆ ನನ್ನಲ್ಲೇ ಉಳಿಯಿತು. ಸಾವಿರ ಮಾತುಗಳು ಮೌನದ ಪಂಜರದಲಿ ಬಂಧಿಯಾದವು.
ಸಂಧ್ಯಾ ಶ್ಯಾಮ ಭಟ್‌ ಬಂಟ್ವಾಳ

* * 

ಮರೆಯದ ಮಂದಹಾಸ

ನಾನು ಒಂದು ಕೆಲಸಕ್ಕೆ ಹೊಂದಿಕೊಂಡು ಹೋಗಿ ಜೀವನವನ್ನು, ಅಂದರೆ ಸಂಸಾರ ನೌಕೆಯನ್ನು ತೂಗಿಸಿಕೊಂಡು ಹೋಗಬಲ್ಲೆನೆಂಬ ನಂಬಿಕೆ ಬಂದ ನಂತರವೇ ಅಮ್ಮ ನನಗೆ ಹುಡುಗಿ ಹುಡುಕತೊಡಗಿದ್ದರು. ಅಂತೂ ಒಂದು ಹುಡುಗಿ ಅವರ ಮನಸ್ಸಿಗೆ ಬಂದ ನಂತರ ಹುಡುಗಿ ನೋಡುವ ಶಾಸ್ತ್ರಕ್ಕೆ ನನ್ನನ್ನು ಆಹ್ವಾನಿಸಲಾಯಿತು. ಹುಡುಗಿಯ ಮನೆಯವರಿಗೆ ಬಹಳ ಬಂಧು ಬಳಗ. ಹಾಗಾಗಿ ಅಲ್ಲಿ ನೆರೆದಿದ್ದ ಮಂದಿಯಲ್ಲಿ ಹುಡುಗಿ ಯಾರು ಎಂದು ಹುಡುಕುವುದೇ ಕಷ್ಟವಾಯಿತು.

ಅಮ್ಮ ನನಗೆ, ಆ ಹುಡುಗಿ ಧರಿಸಿದ ಚೂಡಿದಾರದ ಆಕಾಶ ನೀಲಿ ಬಣ್ಣದ್ದು ಹಾಗೂ ಮುಡಿಗೆ ಮಲ್ಲಿಗೆ ಧರಿಸಿರುವಾಕೆಯೇ ಎಂದು ಪರಿಚಯ ಮಾಡಿಸಿದ್ದರಿಂದ ಹುಡುಗಿಯನ್ನು ಹುಡುಕುವ ಪ್ರಯತ್ನ ಮಾಡಿದೆ. ಅದಕ್ಕೆ ಕಾಕತಾಳೀಯವೆಂಬಂತೆ ಒಂದೆರಡು ಹುಡುಗಿಯರು ಅಮ್ಮ ಹೇಳಿದಂತೆಯೇ ಉಡುಗೆ ತೊಡುಗೆಯಿಂದ ಕಂಗೊಳಿಸುತ್ತಿದ್ದರಿಂದ ಯಾರು ಎನ್ನುವ ಅನುಮಾನ ಮನಸ್ಸನ್ನು ಕೊರೆದಿತ್ತು.

ಅಂತೂ ಒಂದು ಸುಂದರವಾದ ಹುಡುಗಿಯನ್ನು ನೋಡಿ ಈಕೆಯೇ ಎಂದು ತೀರ್ಮಾನಿಸಿ ಅವಳ ದೃಷ್ಟಿಗೆ ನನ್ನ ದೃಷ್ಟಿ ತಾಕಿಸುವಾಗಲೇ ಬಲಭಾಗದಿಂದ ಹುಡುಗಿಯ ತಾಯಿ ‘ಪದ್ಮಿನಿ ಈಚೆ ನೋಡಮ್ಮಾ, ಹುಡುಗನನ್ನು, ಇಷ್ಟವಿದ್ದರೆ ಒಬ್ಬರಿಗೊಬ್ಬರು ಅರಿತರೆ ಒಳ್ಳೆಯದು. ಆಗಲೇ ಸಂಸಾರ ಚೆನ್ನಾಗಿರುತ್ತದೆ’ ಎಂದು ಇನ್ನೊಂದು ಹುಡುಗಿಯನ್ನು ಕರೆ ತಂದಾಗಲೇ ನನ್ನ ವಿಚಾರಕ್ಕೆ ತಣ್ಣೀರೆರೆಚಿದಂತಾಗಿ ತಲೆ ತಗ್ಗಿಸಿ ಕುಳಿತೆ.

ಪೆಚ್ಚಾಗಿ ಕುಳಿತಾಗಲೇ ನಾನು ನೋಡಬೇಕಾದ ಹುಡುಗಿಯೂ ಎದುರಿಗೆ ಬಂದಿದ್ದಳು. ಆ ಹುಡುಗಿಯ ಮುಖದಲ್ಲಿನ ಮಂದಹಾಸ ಇನ್ನೂ ಮರೆಯಲಾಗದು. ಆಗಲೇ ನಾನು ಅವಳ ಆಕರ್ಷಕ ನಗುವಿಗೆ ಸೆರೆಯಾಗಿದ್ದೆ.
ಬಾಲಕೃಷ್ಣ. ಎಂ.ಆರ್‌ ಬೆಂಗಳೂರು

* * 

ಕಣ್ಣಲ್ಲೇ ಕಾಮನಬಿಲ್ಲು

ಆಗ ನಾನು ಮೊದಲ ವರ್ಷದ ಪದವಿ ಓದುತ್ತಿದ್ದೆ. ಹುಡುಗ ಚೆನ್ನಾಗಿದ್ದಾನಂತೆ.ಒಳ್ಳೆ ಕೆಲಸದಲ್ಲಿದ್ದಾನಂತೆ, ಕರಾಟೆ ಮಾಸ್ಟರ್ ಹೌದು, ಅಪ್ಪ– ಅಮ್ಮ ನನ್ನ ಮುಂದೆ ಹುಡುಗನನ್ನು ವರ್ಣಿಸಿದ್ದೇ ವರ್ಣಿಸಿದ್ದು. ಅಪ್ಪನನ್ನು ಕೇಳಿದ್ದೆ ಆ ಹುಡುಗ ಸಿಗರೇಟ್ ಸೇದುತ್ತಾನಾ? ಎಂದು. ಇಲ್ಲ ಅಂದಿದ್ದರು.

ಆಮೇಲೆ ನಿರ್ಧರಿಸಿದ್ದೆ. ಆಯ್ತು ಒಂದು ಸಲ ವಧು ಪರೀಕ್ಷೆಯಾದರೇನಂತೆ? ಒಪ್ಪಿದ್ದೆ. ಅಪ್ಪ ಸಮಾಧಾನಪಟ್ಟುಕೊಂಡಿದ್ದರು. ಒಂದು ಭಾನುವಾರ ಹುಡುಗ ಮನೆಗೆ ಬರುವ ವಿಷಯ ನಿಷ್ಕರ್ಷೆಯಾಯ್ತು. ನಾನಾದರೂ ನನ್ನೆಲ್ಲ ಗೆಳತಿಯರಿಗೆ ಈ ವಿಷಯವನ್ನು ತಿಳಿಸಿ, ಅವರಿಂದ ಬಹಳ ಮಾಹಿತಿ ಕಲೆ ಹಾಕಿದ್ದೆ. ಹುಡುಗ, ಹುಡುಗಿ ನೋಡಲು ಬಂದಾಗ ಏನಾಗುತ್ತೆ ಎಂದು.

ನನ್ನಲ್ಲೂ ಕುತೂಹಲ. ಸೂಕ್ತ ತಯಾರಿಯೇನೋ ಆಗಿತ್ತು. ಮನೆಯಲ್ಲಿ ಹೋಳಿಗೆ ಅಡುಗೆ ಮಾಡ್ತಾ ಇದ್ದರು. ಆ ದಿನ ನನಗೆ ಪೂರ್ತಿ ವಿರಾಮ. ಸೀರೆ ಉಟ್ಟಿದ್ದಾಯ್ತು, ಹೂ ಮುಡಿದು ಸರ್ವಾಲಂಕಾರ ಭೂಷಿತೆಯಾಗಿದ್ದೆ. ಈ ಸೀರೆ ಬೇಡ ಅಂತ ಮತ್ತೊಂದು ಸೀರೆ ಉಡಿಸಿದರು. ನನಗೆ ಇವರ ಅತೀ ಆಸಕ್ತಿ ಭಯ, ಮುಜುಗರ ತಂದಿತ್ತು.

ಹುಡುಗನ ಕಡೆಯವರು ಬಂದರು. 5 ಜನ ಪುರುಷರು, ಒಬ್ಬರು ವಯಸ್ಸಾದ ಮಹಿಳೆ. ಫಲಪುಷ್ಪಗಳೊಂದಿಗೆ ಬಂದಿದ್ದರು. ಮೊದಲಿಗೆ ನೀರು ತುಂಬಿದ ಲೋಟಗಳನ್ನು ಕೊಡಬೇಕಿತ್ತು, ನನ್ನನ್ನೇ ಕರೆದರು. ನಾನು ಎಲ್ಲರಿಗೂ ನೀರು ಕೊಟ್ಟು ಬಂದೆ. ಶರಬತ್ತು ಕೊಡಲು ಹೇಳಿದರು... ಹೂಂ! ಎಂದು ಹೊರಟವಳಿಗೆ, ಅಮ್ಮಾ ಕರೆದು ಹೇಳಿದರು ಅಲ್ಲಿ ಮೂಲೆಯಲ್ಲಿ ಸೋಫಾ ಮೇಲೆ ಕುಳಿತಿರುವವನೇ ಹುಡುಗ...

ಈಗ ಯಾಕೋ ಭಯ ಶುರುವಾಯ್ತು. ಶರಬತ್ತು ಕೊಡುವಷ್ಟರಲ್ಲಿ ಸಾಕಾಗಿ ಹೋಯ್ತು. ಒಂದೇ ನೆಗೆತ ಅಡುಗೆ ಮನೆ ಸೇರಿಕೊಂಡಿದ್ದೆ. ನಂತರ ಊಟ ಬಡಿಸಬೇಕು. ಹೃದಯ ಬಾಯಿಗೆ ಬಂದಿತ್ತು. ಅವರೆಲ್ಲಾ ನನ್ನನ್ನೇ ನೋಡುತ್ತಿದ್ದಾರೆ ಅನ್ನಿಸಿ, ಬೆವತು ಹೋಗಿದ್ದೆ. ಹೋಳಿಗೆ ಎಲ್ಲರ ತಟ್ಟೆಗೆ ಬಡಿಸಿ ನಂತರ ತುಪ್ಪದ ಸರದಿ. ತುಪ್ಪ... ಇವರ ಬಳಿ ಬಂದಾಗ ಕೈ ನಡುಗಿ ಹೆಚ್ಚು ತುಪ್ಪ ಸುರಿದಿದ್ದೆ. ಎಲ್ಲರೂ ನಕ್ಕು ಬಿಟ್ಟಿದ್ದರು. ನಂತರ ಹುಡುಗನ ಮನೆಯವರು ಹೊರಟಾಗ ನನ್ನನ್ನು ಹೊರಗೆ ಕರೆದರು. ಇವರು ನನ್ನ ಕಡೆಗೆ ತಿರುಗಿ ಬರುತ್ತೇನೆ ಎಂದು ಕಣ್ಣಿನಲ್ಲೇ ಸನ್ನೆ ಮಾಡಿ ನಗುತ್ತಾ ಹೊರಟಾಗ... ಮನದಲ್ಲೇ ಕಾಮನಬಿಲ್ಲು ಮೂಡಿತ್ತು. ಅವರೇ ನನ್ನ ಬಾಳ ಸಂಗಾತಿಯಾದರು.
ಪ್ರಭಾವತಿ ಆರ್. ಮಾಗಡಿ

* * 

ಖಾಲಿ ಲೋಟದ ಕಾಫಿಯ ಕಥೆ

ಅಂದು ನನ್ನಾಕೆಯ ನೋಡಲು ಹೋದ ದಿನ. ನನ್ನವಳ ಮನೆ ತಲುಪಿದಾಗ ಮಧ್ಯಾಹ್ನದ ಸಮಯ. ಮನೆ ಹೊಕ್ಕ ಸಮಯದಲ್ಲಿ ನೀರವ ಮೌನ. ಆದರೆ ಅಡುಗೆ ಮನೆಯಲ್ಲಿ ಮಾತ್ರ ಏನೋ ಗಡಿಬಿಡಿ. ಬಿಸಿಲ ಧಗೆಯಿಂದ ಬಳಲಿದ್ದ ನಾವು ತಣ್ಣೀರಿನಿಂದ ತಂಪಾದೆವು. ಐದು–ಹತ್ತು ನಿಮಿಷದ ಕುಶಲೋಪರಿ ನಂತರ ಹುಡುಗಿಯ 6–7 ಕಾಫಿ ಲೋಟ ಹಿಡಿದಿದ್ದ ತಟ್ಟೆಯ ಮೂಲಕ ಗ್ರ್ಯಾಂಡ್‌ ಎಂಟ್ರಿಯಾಯ್ತು. ನಾನು ಕೂಡ ತವಕದಿಂದ ತದೇಕ ಚಿತ್ತದಿಂದಲೇ ಗಮನಿಸುತ್ತಿದ್ದೆ. ನನಗಿಂತ ಒಂದಿಬ್ಬರು ಮೊದಲು ಕಾಫಿ ಲೋಟ ಕೈಗೆತ್ತಿಕೊಂಡರು. ನಂತರದ ಸರದಿಯೇ ನನ್ನದಾಗಿತ್ತು. ನಾನು ಕೂಡ ತುಂಬಾ ಕುತೂಹಲದಿಂದ ನನ್ನವಳನ್ನೇ ನೋಡುತ್ತಾ ಒಂದು ಲೋಟಕ್ಕೆ ಕೈಹಾಕಿ ತೆಗೆದುಕೊಂಡೆ.

ಆದರೆ ಹುಡುಗಿ ಮಾತ್ರ ನನ್ನನ್ನು ನೋಡುತ್ತಲೂ ಇಲ್ಲ, ಮುಂದಕ್ಕೆ ಹೋಗುತ್ತಲೂ ಇಲ್ಲ. ನಾನು ಮಾತ್ರ ಅವಳ ನೋಡುತ್ತಾ ಕಾಫಿ ಲೋಟ ನನ್ನ ಬಾಯಿ ಹತ್ತಿರ ತೆಗೆದುಕೊಂಡೆ. ಇವಳು ನನ್ನ ಮುಂದೆಯೇ ಸ್ವಲ್ಪ ಹೊತ್ತು ತಟ್ಟೆ ಹಿಡಿದು ಕಾಯುತ್ತಾ, ನಂತರ ತನ್ನ ತಂದೆಯ ಆಜ್ಞೆಯಂತೆ ಮುಂದೆ ಹೋದಳು. ಆಮೇಲೆ ಕಾಫಿ ಕುಡಿಯಲು ಪ್ರಾರಂಭಿಸಿದರೆ, ಆ ಲೋಟ ಖಾಲಿ. ಅದರಲ್ಲಿ ಕಾಫಿಯೇ ಇಲ್ಲ.

ನನಗೂ ನಾಚಿಕೆಯಾಗಿ ಎಲ್ಲರ ಹಾಗೆ ಕಾಫಿ ಕುಡಿಯುವವನಂತೆ ನಟಿಸಿದೆ. ಎಲ್ಲಾ ಆಗಿ ಮದುವೆ ಆದ ನಂತರ ನನ್ನಾಕೆ ಪ್ರಸ್ತಾಪಿಸಿದ ಮೊದಲ ವಿಚಾರವೇ ‘ಮೊದಲ ನೋಟದ ಖಾಲಿ ಲೋಟದ ಕಾಫಿ ಕಥೆ’. ಅವಳು, ‘ಆರು ಲೋಟದಲ್ಲಿ ಕಾಫಿ ತೆಗೆದುಕೊಂಡು ಇದರ ಜೊತೆ ಒಂದು ಖಾಲಿ ಲೋಟ ತೆಗೆದುಕೊಂಡು ಬಂದಿದ್ದೆ. ಖಾಲಿ ಲೋಟ ಏಕೆಂದರೆ ಯಾರಾದಾರೂ ಕಾಫಿ ಜಾಸ್ತಿ ಎಂದಾಗ ಅವರಿಂದ ಸ್ವಲ್ಪ ಹಾಕಿಸಿಕೊಳ್ಳಲಿಕ್ಕೆ’ ಎಂದಿದ್ದಳು. ಆದರೆ ನಾನು ಮಾತ್ರ ನನ್ನಾಕೆಯನ್ನೇ ನೋಡುತ್ತಾ ಆರಿಸಿಕೊಂಡಿದ್ದು, ಆ ಖಾಲಿ ಲೋಟವನ್ನೇ. ಹೀಗಿತ್ತು ನೋಡಿ ಜೋಡಿ ನೋಡಲು ಹೋದಾಗಿನ ಕಥೆ.
ಚೇತನ್‌ ಪಾತಾಳಜ್ಜಿ

 

Comments
ಈ ವಿಭಾಗದಿಂದ ಇನ್ನಷ್ಟು
ಸ್ಪರ್ಧೆಗೆ ಇಳಿಯಿತು ಮೋಜೊ

ಆಟೋ ಸಂತೆಯಲ್ಲಿ...
ಸ್ಪರ್ಧೆಗೆ ಇಳಿಯಿತು ಮೋಜೊ

15 Mar, 2018
ಹೀಗಿತ್ತು ಪರೀಕ್ಷೆಗೆ ನನ್ನ ತಯಾರಿ

ಕಾಮನಬಿಲ್ಲು
ಹೀಗಿತ್ತು ಪರೀಕ್ಷೆಗೆ ನನ್ನ ತಯಾರಿ

15 Mar, 2018
ಶಕ್ತಿಶಾಲಿ ಹಾಗೂ ವೇಗಿ ಈ ಬೆಂಜ್ ಕೂಪ್

ಪ್ರಜಾವಾಣಿ ಟೆಸ್ಟ್‌ಡ್ರೈವ್‌
ಶಕ್ತಿಶಾಲಿ ಹಾಗೂ ವೇಗಿ ಈ ಬೆಂಜ್ ಕೂಪ್

15 Mar, 2018
ಬೆಟ್ಟದ ಮೇಲೇರಿ; ಬಂಡೆಯಲ್ಲಿ ಜಾರಿ...

ಟ್ರೆಕ್ಕಿಂಗ್‌
ಬೆಟ್ಟದ ಮೇಲೇರಿ; ಬಂಡೆಯಲ್ಲಿ ಜಾರಿ...

15 Mar, 2018

ಬೆಳದಿಂಗಳು
ರಾಗ–ದ್ವೇಷಗಳ ಜಾಲ

ರಾಗವೆಂದರೆ ಯಾವುದಾದರೊಂದು ವಸ್ತುವಿನಲ್ಲಿ ಹೆಚ್ಚಿನ ಪ್ರೀತಿ. ದ್ವೇಷವೆಂದರೆ ಯಾವುದಾದರೊಂದು ವಸ್ತುವಿನ ವಿಷಯದಲ್ಲಿ ಹೆಚ್ಚಿನ ಅಸಹನೆ. ಈ ರಾಗದ್ವೇಷಗಳು ಜೀವವನ್ನು ಹಿಡಿದಾಗ ಜೀವವು ತನ್ನ ಒಳಗಿನ...

15 Mar, 2018