ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿ ಸರ್ಕಸ್‌

Last Updated 20 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಜಗತ್ತು ಕಂಡ ಶ್ರೇಷ್ಠ ಕ್ರಿಯಾಶೀಲ ವ್ಯಕ್ತಿಗಳಲ್ಲೊಬ್ಬ ಚಾರ್ಲಿ ಚಾಪ್ಲಿನ್‌. ನಟನಾಗಿಯಷ್ಟೇ ಅಲ್ಲದೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಹೀಗೆ ಸಿನಿಮಾದ ಹಲವು ಕ್ಷೇತ್ರಗಳಲ್ಲಿ ಅವನದು ಅಚ್ಚಳಿಯದ ಸಾಧನೆ. ವೃತ್ತಿಜೀವನ ಮತ್ತು ವೈಯಕ್ತಿಕ ಜೀವನ ಎರಡರಲ್ಲಿಯೂ ಅವನು ಸಂಘರ್ಷವನ್ನೇ ಎದುರಿಸಿದವನು. ವೃತ್ತಿಬದುಕಿನಲ್ಲಿ ಸಾಧನೆ, ಜನಪ್ರಿಯತೆ, ಯಶಸ್ಸಿನ ತುತ್ತತುದಿಯನ್ನು ಮುಟ್ಟಿದವನು. ಹಾಗೆಯೇ ವೈಯಕ್ತಿಕ ಬದುಕಿನಲ್ಲಿ ಹಲವು ನೋವುಗಳನ್ನು ಉಣ್ಣುತ್ತಲೇ ಮಾಗಿದವನು.

ಚಾಪ್ಲಿನ್‌ನ ವೃತ್ತಿ ಮತ್ತು ವೈಯಕ್ತಿಕ ಬದುಕಿಗೆ ರೂಪಕವೋ ಎಂಬಂತೆ ಇರುವ ಸಿನಿಮಾ ಅವನೇ ಕಥೆ ಬರೆದು ನಿರ್ದೇಶಿಸಿರುವ ‘ದಿ ಸರ್ಕಸ್‌’. ದಿ ಸರ್ಕಸ್‌ ಸಿನಿಮಾ ತೆರೆಕಂಡಿದ್ದು 1928ರಲ್ಲಿ. ಈ ಸಿನಿಮಾದ ಕಥೆ, ಚಿತ್ರಕಥೆ, ನಿರ್ದೇಶಕ, ನಾಯಕನಟ ಎಲ್ಲವೂ ಚಾಪ್ಲಿನ್‌.

ಮಾತಿಲ್ಲದೇ ಭರಪೂರ ನಗಿಸುತ್ತಲೇ ಮನುಷ್ಯ ಬದುಕಿನ ಕುರಿತಾದ ಹಲವು ಪ್ರಶ್ನೆಗಳನ್ನೂ ಬಹುಸೂಚ್ಯವಾಗಿ, ಸೂಕ್ಷ್ಮವಾಗಿ ಎತ್ತುವ ಚಿತ್ರವಿದು. ಹೆಸರೇ ಹೇಳುವಂತೆ ಒಂದು ಸರ್ಕಸ್‌ ಕಂಪನಿಯಲ್ಲಿಯೇ ಇಡೀ ಕಥನ ಘಟಿಸುತ್ತದೆ. ಕ್ಷಣಕ್ಷಣಕ್ಕೂ ಹಾಸ್ಯವನ್ನು ಉಕ್ಕಿಸುತ್ತಲೇ ಆ ಹಾಸ್ಯದ ಹಿಂದೆ ಇರಬಹುದಾದ ದಾರುಣ ನೋವಿನ ಮುಖವನ್ನೂ ತೆರೆದಿಡುತ್ತ ಹೋಗುವಂತೆಯೇ ಸಿನಿಮಾ ನಿರೂಪಿತವಾಗಿದೆ.

ಪೊಲೀಸರಿಂದ ತಪ್ಪಿಸಿಕೊಳ್ಳುವ ಅವಸರದಲ್ಲಿ ಓಡುತ್ತ ಓಡುತ್ತ ಕಥಾನಾಯಕ ಸರ್ಕಸ್‌ ಕಂಪನಿಯ ಡೇರೆಯನ್ನು ಹೊಗುತ್ತಾನೆ. ಆ ಸರ್ಕಸ್‌ ಕಂಪನಿಯ ಮಾಲೀಕ ಮಹಾಕ್ರೂರಿ. ತನ್ನ ಕೆಲಸಗಾರರನ್ನು ವಿಧವಿಧವಾಗಿ ಶಿಕ್ಷಿಸುವ ನಿರ್ದಯಿ. ಅವನ ಕಂಪನಿ ನಷ್ಟದ ದಾರಿಯಲ್ಲಿದೆ. ಅದನ್ನು ಹೇಗಾದರೂ ಮಾಡಿ ಗಳಿಕೆಯ ದಡ ಹತ್ತಿಸುವುದು ಅವನ ಗುರಿ.

ಪೊಲೀಸರಿಂದ ತಪ್ಪಿಸಿಕೊಳ್ಳಲು ಸರ್ಕಸ್‌ ಪ್ರದರ್ಶನದ ವೇದಿಕೆಗೆ ನುಗ್ಗುವ ನಾಯಕನ ಪರದಾಟಗಳು ಪ್ರೇಕ್ಷಕರಿಗೆ ತುಂಬ ಇಷ್ಟವಾಗಿಬಿಡುತ್ತವೆ. ಇದೇ ಕಾರಣಕ್ಕೆ ಅವನಿಗೆ ಸರ್ಕಸ್‌ ಕಂಪನಿಯಲ್ಲಿ ಹಾಸ್ಯಗಾರನಾಗಿ ಕೆಲಸವೂ ಸಿಗುತ್ತದೆ. ಆದರೆ ಹಾಸ್ಯ ಎನ್ನುವುದು ಅವನಿಗೆ ರೂಢಿಸಿಕೊಂಡು ಮಾಡುವ ನಾಟಕ ಅಲ್ಲವೇ ಅಲ್ಲ. ಹಾಗೆ ಮಾಡಲು ಹೋದಾಗಲೆಲ್ಲ ಅವನು ಎಡವಟ್ಟುಗಳನ್ನೇ ಮಾಡುತ್ತಾನೆ. ತನ್ನ ಎಡವಟ್ಟುಗಳಿಂದಲೇ ಕಂಪನಿಯ ಸ್ಟಾರ್‌ ಕಲಾವಿದನೂ ಆಗಿಬಿಡುತ್ತಾನೆ. ಆದರೆ ಅದು ಸ್ವತಃ ಅವನಿಗೇ ತಿಳಿದಿರುವುದಿಲ್ಲ.

ಹೀಗೆ ಒಬ್ಬ ವ್ಯಕ್ತಿಯ ಸಂಕಟಗಳು ದೂರ ನಿಂತು ನೋಡುವವರಿಗೆಲ್ಲ ಹಾಸ್ಯವಾಗಿ, ರಂಜನೆಯ ವಸ್ತುವಾಗಿ ಕಾಣುವ ವಿಪರ್ಯಾಸ ಚಿತ್ರದುದ್ದಕ್ಕೂ ಇದೆ. ಇದರ ಜತೆಗೆ ಸರ್ಕಸ್‌ ಕಂಪನಿಯಲ್ಲಿನ ಸುಂದರಿಯೊಂದಿಗೆ ನಾಯಕನಿಗೆ ಪ್ರೇಮವಾಗುತ್ತದೆ. ಆದರೆ ಅದನ್ನು ವ್ಯಕ್ತಪಡಿಸುವ ಮೊದಲೇ ಅವಳು ಮತ್ತೊಬ್ಬನನ್ನು ಪ್ರೇಮಿಸುತ್ತಿರುವುದು ತಿಳಿಯುತ್ತದೆ. ಕೊನೆಗೆ ನಾಯಕನೇ ಮುಂದೆ  ನಿಂತು ಅವರಿಬ್ಬರನ್ನು ಒಂದು ಮಾಡುತ್ತಾನೆ. (ಹೀಗೆ ಭಗ್ನಪ್ರೇಮಿ ತ್ಯಾಗಮಯಿ ನಾಯಕ ಭಾರತದ ಅಸಂಖ್ಯಾತ ಸಿನಿಮಾಗಳಲ್ಲಿ ಬಂದುಹೋಗಿರುವುದನ್ನೂ ಈಗಲೂ ಬರುತ್ತಿರುವುದನ್ನೂ ಗಮನಿಸಬಹುದು).

ಚಿತ್ರದ ಆರಂಭದಲ್ಲಿ ನಾಯಕ ತನ್ನ ಬದುಕಿನಲ್ಲಿ ಯಾವ ಸ್ಥಿತಿಯಲ್ಲಿ ಇರುತ್ತಾನೆಯೋ ಅಂತ್ಯದಲ್ಲಿಯೂ ಹೆಚ್ಚೂಕಮ್ಮಿ ಅದೇ ಸ್ಥಿತಿಯಲ್ಲಿರುತ್ತಾನೆ. ನಡುವಿನ ಅವಧಿಯಲ್ಲಿ ನಡೆದ ಎಷ್ಟೋ ಘಟನೆಗಳು ಅವನ ಅನುಭವ ಭಂಡಾರದಲ್ಲಿ ಒಂದಿಷ್ಟು ಖುಷಿ, ಇನ್ನೊಂದಿಷ್ಟು ವಿಷಾದವನ್ನು ಉಳಿಸಿಹೋಗುತ್ತವೆ. ಈ ಭಾವಪಲ್ಲಟದ ಅನುಭವ ಪ್ರೇಕ್ಷಕನದೂ ಆಗುವಂತೆ ಮಾಡುವುದು ‘ದಿ ಸರ್ಕಸ್‌’ನ ಹೆಚ್ಚುಗಾರಿಕೆ.

ಯೂ ಟ್ಯೂಬ್‌ನಲ್ಲಿ https://goo.gl/CSx6QL ಕೊಂಡಿ ಬಳಸಿ ಈ ಸಿನಿಮಾವನ್ನು ನೋಡಬಹುದು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT