ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೊಗರಿಗೆ ಸೊರಗು ರೋಗ ಬೆಳೆ ಹಾನಿ

Last Updated 21 ಡಿಸೆಂಬರ್ 2017, 8:21 IST
ಅಕ್ಷರ ಗಾತ್ರ

ಮಾಗಡಿ: ತೊಗರಿ ತಾಲ್ಲೂಕಿನ ಮುಖ್ಯ ದ್ವಿದಳ ಧಾನ್ಯದ ಬೆಳೆ. ರೈತರು ಮುಖ್ಯವಾಗಿ ಬಿ.ಆರ್.ಜಿ.-1 ಮತ್ತು  ಬಿ.ಆರ್.ಜಿ.-2 ತಳಿಗಳನ್ನು ಬೆಳೆಯುತ್ತಿದ್ದು, ಇತ್ತೀಚಿನ ವರ್ಷಗಳಲ್ಲಿ ಈ ಎರಡೂ ತಳಿಗಳು ಹೂ ಬಿಡುವ ಹಂತದಲ್ಲಿ ಸೊರಗು ರೋಗಕ್ಕೆ ಸಿಲುಕಿ ಸುಮಾರು ಶೇ 60 ರಿಂದ 70 ಬೆಳೆ ಹಾನಿಯಾಗುತ್ತಿದೆ ಎಂದು ವಿಜ್ಞಾನಿ ಡಾ.ಕೇಶವ ರೆಡ್ಡಿ ತಿಳಿಸಿದರು.

ಹೊಸಪಾಳ್ಯದಲ್ಲಿ ನಡೆದ ಸೊರಗು ರೋಗದ ಬಗ್ಗೆ ಪ್ರಾತ್ಯಕ್ಷಿಕೆ ನೀಡಿ ಅವರು ಮಾತನಾಡಿದರು.

ರೈತರು ಮುಖ್ಯವಾಗಿ ಬೆಳೆಯುತ್ತಿದ್ದ ಬಿ.ಆರ್.ಜಿ.-1 ಮತ್ತು ಬಿ.ಆರ್.ಜಿ.-2 ತಳಿಗಳು ಸೊರಗು ರೋಗಕ್ಕೆ ಸಿಲುಕುವುದನ್ನು ಗಮನಿಸಿ ಸಂಶೋಧನೆ ಮಾಡಲಾಗಿದೆ. ಆಯ್ದ ರೈತರ ತಾಲ್ಲೂಕುಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ರೋಗ ನಿರೋಧಕ ತಳಿಯಾದ ಬಿ.ಆರ್. ಜಿ.-5 ಅನ್ನು ಪರಿಚಯಿಸಲಾಯಿತು ಎಂದು ತಿಳಿಸಿದರು.

ರೈತ ಕೃಷ್ಣಪ್ಪ ಮಾತನಾಡಿ, ಈ ಹಿಂದೆ ಸುಮಾರು 10-15 ವರ್ಷಗಳಿಂದ ಬಿ.ಆರ್.ಜಿ.-1 ಮತ್ತು ಬಿ.ಆರ್.ಜಿ.-2 ತಳಿಯನ್ನು ಬೆಳೆದಿದ್ದೇವೆ. 2-3 ವರ್ಷಗಳಿಂದ ಈ ತಳಿಗಳ ಬೆಳೆ ಸೊರಗು ರೋಗಕ್ಕೆ ಸಿಲುಕಿ ಗಿಡಗಳು ಸೊರಗುತ್ತಿದ್ದವು. ಇದರಿಂದ ಇಳುವರಿಯಲ್ಲಿ ತೀವ್ರ ನಷ್ಟವಾಗುತ್ತಿತ್ತು. ಕೆ.ವಿ.ಕೆ ವಿಜ್ಞಾನಿಗಳು ಪರಿಚಯಿಸಿದ ಸೊರಗು ರೋಗ ನಿರೋಧಕ ತಳಿ ಬಿ.ಆರ್.ಜಿ.-5 ಅನ್ನು ಬೆಳೆದಿದ್ದರಿಂದ ಒಂದು ಗಿಡವೂ ರೋಗಕ್ಕೆ ಸಿಲುಕಲಿಲ್ಲ. ಉತ್ತಮ ರೀತಿಯ ಕಾಯಿ ಕಚ್ಚಿ ಫಸಲನ್ನು ನೀಡಿದೆ ಎಂದರು.

ಈ ತಳಿಯ ಪರಿಚಯದ ಜೊತೆಗೆ ಸಮಗ್ರ ವೈಜ್ಞಾನಿಕ ಬೆಳೆ ನಿರ್ವಹಣಾ ಕ್ರಮ ಅಳವಡಿಸಿಕೊಂಡು ಯಾವುದೇ ಕೀಟ ಮತ್ತು ರೋಗ ಬಾಧೆಯಿಂದ ಇಳುವರಿ ಕುಂಠಿತಗೊಳ್ಳದೇ ಉತ್ತಮ ಫಸಲನ್ನು ಪಡೆದುಕೊಂಡೆವು ಎಂದು ತಿಳಿಸಿದರು. ಜತೆಗೆ ಅಲ್ಲಿ ಸೇರಿದ್ದ ಇತರೆ ರೈತರನ್ನು ಮುಂದಿನ ವರ್ಷಗಳಲ್ಲಿ ತಮ್ಮ ಹೊಲಗಳಲ್ಲಿಯೂ ಇದೇ ತಳಿಯನ್ನು ಬೆಳೆದುಕೊಂಡು ಅಧಿಕ ಇಳುವರಿ ಗಳಿಸಿಕೊಳ್ಳುವಂತೆ ಪ್ರೋತ್ಸಾಹಿಸಿದ್ದಾರೆ ಎಂದರು.

ಗೃಹ ವಿಜ್ಞಾನಿ ಡಾ.ಲತಾ ಆರ್.ಕುಲಕರ್ಣಿ ಅವರು ಮಾತನಾಡಿ, ಕಟಾವು ನಂತರ ತೊಗರಿಯ ಮೌಲ್ಯವರ್ಧನೆಯಿಂದ ಅಧಿಕ ಆದಾಯ ಗಳಿಸಬಹುದು ಎಂದು ತಿಳಿಸಿದರು.

ಕೃಷಿ ಅಧಿಕಾರಿ ಆನಂದ್ ಅವರು ಮಾತನಾಡಿ, ಈ ತಳಿಯನ್ನು ತಾಲ್ಲೂಕಿನ ಇತರೆ ರೈತರು ಬೆಳೆದು ಇತರೆ ತಳಿಗಳಲ್ಲಿ ಸೊರಗು ರೋಗದಿಂದ ಆಗುವ ನಷ್ಟ ತಪ್ಪಿಸಿ ಅಧಿಕ ಲಾಭ ಗಳಿಸಿ ಎಂದು ತಿಳಿಸಿದರು.

ವಿಜ್ಞಾನಿ ಡಾ.ಹನುಮಂತರಾಯ, ರೈತ ಚಂದ್ರಶೇಖರ್‌, ದಿಲೀಪ್‌ ಕುಮಾರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT