ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ರಹಿತ ಸಮಾಜದ ನಿರ್ಮಾಪಕ ಪಟ್ಟದ್ದೇವರು

ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ 128ನೇ ಜಯಂತ್ಯುತ್ಸವ ನಾಳೆ
Last Updated 21 ಡಿಸೆಂಬರ್ 2017, 10:38 IST
ಅಕ್ಷರ ಗಾತ್ರ

ಭಾಲ್ಕಿ: ಇಲ್ಲಿಯ ಚನ್ನಬಸವಾಶ್ರಮದಲ್ಲಿ ಶುಕ್ರವಾರ ನಡೆದಾಡುವ ದೇವರೆಂದು ಪ್ರಖ್ಯಾತಿ ಪಡೆದಿರುವ ಲಿಂ.ಚನ್ನಬಸವ ಪಟ್ಟದ್ದೇವರ 128ನೇ ಜಯಂತ್ಯುತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಲಿದ್ದು, ಪಟ್ಟಣದ ಎಲ್ಲ ಮನೆಗಳು ನೆಂಟರಿಷ್ಟರಿಂದ ತುಂಬಿ ಹಬ್ಬದ ಸಂಭ್ರಮ ಮನೆ ಮಾಡಿದೆ.

12ನೇ ಶತಮಾನದಲ್ಲಿ ಬಸವಣ್ಣನವರು ಕಂಡ ಜಾತಿ, ವರ್ಣ, ವರ್ಗರಹಿತ ಸಮಾನತೆಯ ಸಮಾಜದ ಕನಸನ್ನು ಸಾಕಾರಗೊಳಿಸಲು ಚನ್ನಬಸವ ಪಟ್ಟದ್ದೇವರು ತಮ್ಮ ಜೀವಿತಾವಧಿಯ 109 ವರ್ಷಗಳಲ್ಲಿ ಸಾಕಾರಗೊಳಿಸಲು ಅವಿರತವಾಗಿ ಶ್ರಮಿಸಿ ಇತರ ಸ್ವಾಮೀಜಿಗಳಿಗೆ ಆದರ್ಶ ಪ್ರಾಯರಾಗಿದ್ದಾರೆ.

ಬಾಲ್ಯ ಜೀವನ: 22.12.1890 ರಂದು ಕಮಲನಗರ ಗ್ರಾಮದ ಬುಳ್ಳಾ ಮನೆತನದ ಸಂಗಮ್ಮಾ, ರಾಚಪ್ಪಾ ದಂಪತಿಗಳ ಮಗನಾಗಿ ಜನಿಸಿದರು. ಮೂಲನಾಮ ಮಹಾರುದ್ರ. ಅಂದಿನ ಪೀಠಾಧಿಪತಿ ಸಿದ್ಧಬಸವ ಸ್ವಾಮೀಜಿ ಚೆನ್ನಬಸವ ಎಂದು ಕರೆದರು. 1924 ರಲ್ಲಿ ಹಾನಗಲ್ಲ ಕುಮಾರಸ್ವಾಮೀಜಿ ನೇತೃತ್ವದಲ್ಲಿ ಭಾಲ್ಕಿಯ ಐತಿಹಾಸಿಕ ಹಿರೇಮಠಕ್ಕೆ ಪೀಠಾಧಿಪತಿಯಾದರು.

ಸಾಮಾಜಿಕ ಕಾರ್ಯ: ಜಾತಿ ವ್ಯವಸ್ಥೆಯಲ್ಲಿ ನಂಬಿಕೆ ಇಡದ ಶ್ರಿಗಳು ಎಲ್ಲ ಜನಾಂಗದವರನ್ನು, ಶರಣರ ಪ್ರತಿರೂಪ ಎಂದು ಭಾವಿಸಿದ್ದರು. 1948ರಲ್ಲಿ ಹಿರೇಮಠದ ಬಾವಿ ಯನ್ನು ಹರಿಜನರಿಗಾಗಿ ಮುಕ್ತ ಮಾಡಿದ್ದರು. 15 ಹರಿಜನ ವಿದ್ಯಾರ್ಥಿಗಳಿಗೆ ಲಿಂಗಧಾರಣ ಮಾಡಿಸಿ ಹಿರೇಮಠದಲ್ಲಿಟ್ಟುಕೊಂಡಿದ್ದರು.

1972–73ರಲ್ಲಿ ಬೀದರ್‌ನ ಬಸವ ಮಂಟಪದಲ್ಲಿ ಓರ್ವ ಲಿಂಗಧಾರಿ ಶಿಕ್ಷಕನೊಂದಿಗೆ–ಸಮಗಾರ ಹೆಣ್ಣು ಮಗಳಿಗೆ ಲಿಂಗದೀಕ್ಷೆ ಕೊಟ್ಟು ವಿವಾಹ ನೆರವೇರಿಸಿಕೊಟ್ಟಿದ್ದರು. ಜಿಲ್ಲೆಯ ಹುಮನಾಬಾದ್‌ ಪಟ್ಟಣದ ಜಂಗಮ ಹುಡುಗನಿಗೆ ಮುಸ್ಲಿಂ ಹುಡುಗಿಯೊಂದಿಗೆ, ಔರಾದ್‌ ತಾಲ್ಲೂಕಿನ ಡಾ.ಸಚ್ಚಿದಾನಂದರೊಂದಿಗೆ ಲಿಂಗದೀಕ್ಷೆ ಪಡೆದ ಕ್ರಿಶ್ಚಿಯನ್‌ ಹುಡುಗಿಯೊಂದಿಗೆ ಸಂಭ್ರಮದ ಮದುವೆ ಮಾಡಿಸಿದ್ದರು. ಜಾತೀಯತೆಯನ್ನು ತೊಡೆದು ಹಾಕಲು ಇಂತಹ ಅಸಂಖ್ಯ ಕಾರ್ಯಗಳನ್ನು ಮಾಡಿದ್ದಾರೆ ಎಂದು ಪೂಜ್ಯರನ್ನು ಸಮೀಪದಿಂದ ಕಂಡ ರಮೇಶ ಪಟ್ನೆ ತಿಳಿಸುತ್ತಾರೆ.

ನೂತನ ಅನುಭವ ಮಂಟಪದ ನಿರ್ಮಾಪಕ: 12ನೇ ಶತಮಾನದಲ್ಲಿ ಜಾತ್ಯತೀತ, ಸರ್ವ ಸಮಾನತೆ, ವರ್ಣಮುಕ್ತ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ರಚಿತವಾಗಿದ್ದ ಅನುಭವ ಮಂಟಪ ಪಟ್ಟಭದ್ರ ಹಿತಾಸಕ್ತರ, ಜಾತಿವಾದಿಗಳ ಕುತಂತ್ರಕ್ಕೆ ಬಲಿಯಾಗಿ ವಿನಾಶ ಕಂಡಿತ್ತು.
ಅಂತಹದೆ ಮಾದರಿಯ ಅನುಭವ ಮಂಟಪವನ್ನು ಅದರ ಮೂಲ ನೆಲೆಯಲ್ಲಿ ಅಲ್ಲದಿದ್ದರು, ಕಲ್ಯಾಣ ನಗರದ ಪ್ರಶಾಂತ ಸ್ಥಳದಲ್ಲಿ ಅದನ್ನು ಕಟ್ಟಬೇಕು ಎನ್ನುವ ಮಹದಾಸೆ ಶರಣರ ಮನದಲ್ಲಿ ಮೂಡಿತ್ತು.

ಶರಣರ ಈ ಆಸೆ ಈಡೇರಿಸಲೂ ಎಷ್ಟೇ ಸಮಸ್ಯೆ ಬಂದರೂ ಧೃತಿಗೆಡದೆ ಜಿಲ್ಲೆಯ ಬಸವಕಲ್ಯಾಣದಲ್ಲಿ ನೂತನ ಅನುಭವ ಮಂಟಪವನ್ನು ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರು ನಿರ್ಮಿಸಿದರು. ಪೂಜ್ಯರು ತಮ್ಮ ಜೀವನದ ಬಹುಭಾಗವನ್ನು ಅನುಭವ ಮಂಟಪ ನಿರ್ಮಾಣ ಕಾರ್ಯಕ್ಕೆ ಸಮರ್ಪಣೆ ಮಾಡದೆ ಇದ್ದಿದ್ದರೆ, ಇಂದಿನ ಜನರಿಗೆ ಅನುಭವ ಮಂಟಪ ಕೇವಲ ಕಲ್ಪನೆ ಮಾತ್ರ ಆಗಿರುತ್ತಿತ್ತು ಎನ್ನುತ್ತಾರೆ ಹಿರೇಮಠದ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು.

ಶೈಕ್ಷಣಿಕ ಕಾರ್ಯ: ಅನೇಕ ಕಷ್ಟ ಕಾರ್ಪಣ್ಯಗಳ ನಡುವೆಯೇ ಈಗಿನ ತೆಲಂಗಾಣದ ಮೋರಗಿಯಲ್ಲಿ ಹಿರೇಮಠ ಸಂಸ್ಥಾನ ವತಿಯಿಂದ 1936 ರಲ್ಲಿ ಪ್ರಥಮ ಕನ್ನಡ ಶಾಲೆಯಾಗಿ ಶಾಂತಿವರ್ಧಕ ಗುರುಕುಲಾಶ್ರಮ ಸ್ಥಾಪಿಸಿ ಜಿಲ್ಲೆಯಲ್ಲಿ ಕನ್ನಡ ಶಾಲೆಗಳಿಗೆ ಬುನಾದಿ ಹಾಕಿದರು. ನಿಜಾಮಷಾಹಿ ಆಡಳಿತ ಕನ್ನಡ ಶಾಲೆಗೆ ಮಾನ್ಯತೆ ಕೊಡುವುದಿಲ್ಲ ಎಂದು ಹೇಳಿತು. ಆದರೂ ಛಲಬಿಡದ ಅವರು ಶಾಲೆಯ ಹೊರಗಡೆ ಉರ್ದು ಫಲಕ ಹಾಕಿ ಒಳಗಡೆ ನಾಲ್ಕನೇ ವರ್ಗದವರೆಗೆ ಕನ್ನಡದಲ್ಲಿ ಶಿಕ್ಷಣ ಪ್ರಾರಂಭಿಸಿದರು.

ಮೊದಲನೇ ವರ್ಷ ಇದ್ದ 50 ವಿದ್ಯಾರ್ಥಿಗಳ ಸಂಖ್ಯೆ ಮರು ವರ್ಷ 120ಕ್ಕೆ ತಲುಪಿತು. ಐದಾರು ವರ್ಷಗಳ ನಂತರ ಕಾರಣಾಂತರಗಳಿಂದ ಶಾಲೆಯನ್ನು ಸಂಗಮಕ್ಕೆ ಸ್ಥಳಾಂತರಿಸಲಾಯಿತು. ಸಂಗಮದಲ್ಲಿ ಐದನೇ ವರ್ಗದವರೆಗೆ ಕನ್ನಡ ಓದಿದ ವಿದ್ಯಾರ್ಥಿಗಳಿಗೆ ಮುಂದಿನ ವಿದ್ಯಾಭ್ಯಾಸಕ್ಕೆ ಆಗ ಸರ್ಕಾರವೇ ನಡೆಸುತ್ತಿದ್ದ ಉದಗೀರ್‌, ಜಹೀರಾಬಾದ್‌, ಬೀದರ್‌ ಶಾಲೆಗಳಲ್ಲಿ ಪ್ರವೇಶ ನಿರಾಕರಿಸಲಾಯಿತು. ಆ ಕಾಲಕ್ಕೆ ಲಾತೂರಿನ ‘ಮಾರವಾಡಿ ರಾಜಸ್ತಾನಿ ಹೈಸ್ಕೂಲ್‌’ನಲ್ಲಿ ಸ್ವಾಮೀಜಿ ಅವರ ಪ್ರಯತ್ನದಿಂದ ವಿದ್ಯಾರ್ಥಿಗಳಿಗೆ ಪ್ರವೇಶ ದೊರೆಯಿತು. ಇಲ್ಲಿ ಕನ್ನಡವನ್ನು ಎರಡನೇ ಭಾಷೆಯನ್ನಾಗಿ ಕಲಿಯಲು ಅವಕಾಶವಿತ್ತು.

1948 ರಲ್ಲಿ ರಜಾಕರ ಹಾವಳಿ ಪ್ರಾರಂಭವಾದಾಗ ಸಂಗಮ ಶಾಲೆಯ ವಿದ್ಯಾರ್ಥಿಗಳನ್ನು ಮುಂಬಯಿ ಪ್ರಾಂತ್ಯದ ಸೊಲ್ಲಾಪುರದ ಕಾಡಾದಿ ಹೈಸ್ಕೂಲ್‌ನಲ್ಲಿ ಸಂಜೆ ಹೊತ್ತಿನಲ್ಲಿ ಹೈದರಾಬಾದ್‌ ಕರ್ನಾಟಕ ನಿವಾಸಿಗಳಿಗಾಗಿ ಶಾಲೆ ಪ್ರಾರಂಭಿಸಿ 1,500 ಮಕ್ಕಳಿಗೆ ಕನ್ನಡದ ಅಮೃತ ಉಣಬಡಿಸಿದರು. ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಅಡಿಯಲ್ಲಿ ಸುಮಾರು 40ಕ್ಕೂ ಹೆಚ್ಚು ಶಾಲಾ ಕಾಲೇಜುಗಳನ್ನು ಸ್ಥಾಪಿಸಿ ಕನ್ನಡದ ಉಳಿವು, ಏಳಿಗೆಗಾಗಿ ದುಡಿದರು. ಗಂಧದಂತೆ ತಮ್ಮ ಬದುಕನ್ನು ಸವೆಸಿ ಹೈದರಾಬಾದ್‌ ಕರ್ನಾಟಕ ಭಾಗದಲ್ಲಿ ಕನ್ನಡ ಜೀವಂತವಾಗಿರಿಸಿದರು.

ಚನ್ನಬಸವ ಪಟ್ಟದ್ದೇವರ ವಿಶಿಷ್ಟ ಕಾರ್ಯಗಳನ್ನು ಗುರುತಿಸಿ ಗುಲಬರ್ಗಾ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪ್ರಶಸ್ತಿ ನೀಡಿದೆ. ರಾಜ್ಯ ಸರ್ಕಾರ ಕರ್ನಾಟಕ ರಾಜ್ಯೋತ್ಸವ, ಏಕೀಕರಣ ಪ್ರಶಸ್ತಿ ನೀಡಿ ಗೌರವಿಸಿದೆ.
–ಬಸವರಾಜ್‌ ಎಸ್‌.ಪ್ರಭಾ

*
ಎಲ್ಲ ಮಠಾಧೀಶರಿಗೂ ಲಿಂಗೈಕ್ಯ ಚನ್ನಬಸವ ಪಟ್ಟದ್ದೇವರ ಜೀವನ ಸಾಧನೆ, ತತ್ವಾದರ್ಶ ಮಾದರಿ. ಅವರು ಹಾಕಿಕೊಟ್ಟ ಮಾರ್ಗದಲ್ಲಿಯೇ ನಡೆಯುತ್ತಿದ್ದೇವೆ.
ಬಸವಲಿಂಗ ಪಟ್ಟದ್ದೇವರು,ಅನುಭವ ಮಂಟಪದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT