ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿರುಬಿಸಿಲ ದಾರಿಯಲ್ಲಿ ಚೂರು ಪಾರು ನೆರಳು

Last Updated 21 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

2017 ಕುಣಿದು ದಣಿದು ವೇದಿಕೆಯಿಂದ ನಿರ್ಗಮಿಸುವ ಹೊತ್ತು ಹತ್ತಿರವಾಗುತ್ತಿರುವಂತೆಯೇ ಇನ್ನೊಂದು ಹೊಸ ವರ್ಷ ಅನತಿ ದೂರದಲ್ಲಿ ಮೈಮುರಿದು ಎದ್ದು ನಿಲ್ಲುತ್ತಿದೆ. ಪರದೆಯ ಹಿಂದಿನ ಅದರ ಮುಖ ಇನ್ನೂ ಅಸ್ಪಷ್ಟ, ಚಹರೆಗಳು ಮಸುಕು ಮಸುಕು... ಆದ ಕಾರಣದಿಂದಲೇ ಅದನ್ನು ಕಾಣುವ ಕುತೂಹಲವೂ ಇಮ್ಮಡಿಗೊಳ್ಳುತ್ತಿದೆ. ಡಿಸೆಂಬರ್‌ ತಿಂಗಳು ಹೀಗೆ ಒಂದನ್ನು ಕಳೆದು ಇನ್ನೊಂದನ್ನು ಕೂಡಿಕೊಳ್ಳುವ ಸಂಧಿಕಾಲ. ಈ ಕಳೆದು ಕೂಡುವುದು ಬರೀ ಒಂದನ್ನು ದಾಟಿ ಇನ್ನೊಂದಕ್ಕೆ ಹೆಜ್ಜೆಯಿಕ್ಕುವುದಷ್ಟೇ ಅಲ್ಲ, ವರ್ಷಾಂತ್ಯದಲ್ಲಿ ನಿಂತೊಮ್ಮೆ ತಿರುಗಿ ನೋಡಿ ಕಳೆದಿದ್ದು, ಗಳಿಸಿದ್ದರ ಲೆಕ್ಕ ಪಕ್ಕಾ ಮಾಡಿಕೊಳ್ಳುವ ಸಂದರ್ಭವೂ ಹೌದು.

ಚಿತ್ರರಂಗದ ಪಾಲಿಗಂತೂ ಡಿಸೆಂಬರ್‌ ಮಾರ್ನಿಂಗ್ ಮತ್ತು ಮ್ಯಾಟಿನಿ ಷೋಗಳ ನಡುವಿನ ಬಿಡುವಿನ ಕಾಲ ಎನ್ನಬಹುದು. ಮಾರ್ನಿಂಗ್‌ ಷೋ ಲೆಕ್ಕಾಚಾರಗಳನ್ನು ಮುಗಿಸಿ ಮ್ಯಾಟಿನಿ ಷೋ ಬಗೆಗಿಷ್ಟು ನಿರೀಕ್ಷೆ, ನೈಟ್‌ ಷೋ ಬಗೆಗಿನ ಆಶಾಭಾವನೆ ತುಂಬಿಕೊಂಡು ಕಾಯುವ ನಡುಹಗಲು. ಇದು ಬರೀ ಉದಾಹರಣೆ ಅಷ್ಟೇ ಅಲ್ಲ. ಈ ವರ್ಷದ ಚಂದನವನದ ಪರಿಸ್ಥಿತಿ ಬಿಸಿಲಗಾಲದ ನಡುಮಧ್ಯಾಹ್ನದ ಬಯಲ ದಾರಿಯಂತೆಯೇ ಇದೆ. ಉರಿಬಿಸಿಲ ನಡುವೆ ಅಲ್ಲೊಂದು ಇಲ್ಲೊಂದು ನೆರಳ ನಿಲ್ದಾಣ. ಸೋಲಿನ ಸಾಗರದ ನಡುವೆ ಅಪರೂಪಕ್ಕೆ ತೇಲಿವೆ ಗೆಲುವಿನ ತೆಪ್ಪ.

ವರ್ಷಾಂತ್ಯದ ತಿಟ್ಹತ್ತಿ 2017ರ ‘ಚಂದನವನ’ದತ್ತ ಒಮ್ಮೆ ತಿರುಗಿ ನೋಡಿದರೆ ಚಿತ್ರಗಳ ಸಾಲು ಸಾಲು ಸಂದಣಿಯನ್ನೇ ಕಾಣಬಹುದು. ಆದರೆ ಅಂಥ ಸಂದಣಿಯ ನಡುವೆ ಗೆಲುವಿನ ನಗುಮುಖ ಹೊತ್ತ ಸಿನಿಮಾಗಳನ್ನು ಹುಡುಕುವುದು ಕಷ್ಟ ಕಷ್ಟ. ದಣಿದು ಧರೆಗೆ ಒರಗಿದ ಅಸಂಖ್ಯಾತ ಕಳೇಬರಗಳ ನಡುವೆ ಅಪರೂಪಕ್ಕೆ ಅಲ್ಲೊಂದು ಇಲ್ಲೊಂದು ಅರಳಿದ ಯಶದ ನಗು, ಅಬ್ಬಾ, ಬದುಕಿಕೊಂಡೆವು ಎಂದು ನಿಟ್ಟುಸಿರು ಬಿಡುತ್ತ ನಿಂತ ಇನ್ನಷ್ಟು ಬಡಪಾಯಿಗಳು, ಸೋತರೆ ಹೋಯ್ತು ಬಿಡಿ, ಜನ ಮೆಚ್ಚಿಕೊಂಡಿದ್ದಾರಲ್ಲಾ ಎಂದು ಸಮಾಧಾನ ಪಟ್ಟುಕೊಳ್ಳುತ್ತಿರುವ ಅಲ್ಪಸಂಖ್ಯಾತರ ಜತೆಗೇ ಎಷ್ಟು ಕಷ್ಟಪಟ್ಟು ಸಿನಿಮಾ ಮಾಡಿದ್ದೇವೆ. ಆದರೂ ಜನರು ಗುರ್ತಿಸಲಿಲ್ಲ ಎಂದು ಕೊರಗುವ ಬಹುಸಂಖ್ಯಾತರ ಸಮೂಹವೂ ಇದ್ದೇ ಇದೆ.

ಬಂದಿದ್ದೆಷ್ಟು ನಿಂತಿದ್ದೆಷ್ಟು?: 2017ರ ವರ್ಷಾರಂಭ ಆಗಿದ್ದು ರಮೇಶ್‌ ಅರವಿಂದ್‌ ಅವರ 200ನೇ ಸಿನಿಮಾ ‘ಪುಷ್ಟಕ ವಿಮಾನ’ ಮತ್ತು ಶಿವರಾಜ ಕುಮಾರ್‌ ಅವರ ’ಶ್ರೀಕಂಠ’ ಸಿನಿಮಾದ ಮೂಲಕ. ಆದರೆ ಈ ಎರಡೂ ಸಿನಿಮಾಗಳೂ ಜಾಸ್ತಿ ಹೊತ್ತು ಕಣದಲ್ಲಿ ನಿಲ್ಲಲಾಗದೇ ಸೋಲಿನ ಪೆವಿಲಿಯನ್‌ಗೆ ವಾಪಸಾದವು. ಪುಷ್ಟಕ ವಿಮಾನವನ್ನು ಹಾಗೂ ಹೀಗೆ ಐವತ್ತು ದಿನಗಳ ಕಾಲ ಓಡಿಸಿದ್ದು ಚಿತ್ರತಂಡವೇ ಹೊರತು ಪ್ರೇಕ್ಷಕಪ್ರಭುವಲ್ಲ. ಈ ಆರಂಭಿಕ ಜೋಡಿಯ ನೀರಸ ಜತೆಯಾಟದ ನಂತರ ಕೊಂಚ ಗಮನ ಸೆಳೆದಿದ್ದು ಅದೇ ತಿಂಗಳ ಮೂರನೇ ವಾರ ಬಿಡುಗಡೆಯಾದ ಜಯತೀರ್ಥ ನಿರ್ದೇಶನದ ‘ಬ್ಯೂಟಿಫುಲ್‌ ಮನಸುಗಳು’ ಸಿನಿಮಾ. ಈ ಚಿತ್ರ ಸೂಕ್ಷ್ಮ ಸಂವೇದನೆಯ ಕಥೆಯುಳ್ಳ ಪ್ರಶಂಸನಾರ್ಹ ಪ್ರಯತ್ನ ಎಂದು ಬೆನ್ನುತಟ್ಟಿಸಿಕೊಂಡಿದ್ದಲ್ಲದೆ ರಾಜ್ಯಪ್ರಶಸ್ತಿಯ ಗರಿಯನ್ನೂ ಸಿಕ್ಕಿಸಿಕೊಂಡಿತು. ಆದರೆ ಜನರೇನೂ ಗಲ್ಲಾಪೆಟ್ಟಿಗೆಯಲ್ಲಿ ಕಿರೀಟ ತೊಟ್ಟುಕೊಳ್ಳುವಷ್ಟು ಎತ್ತಿ ಮೆರೆಸಲಿಲ್ಲ.  ಜನವರಿ ಕೊನೆಯ ವಾರದಲ್ಲಿ ತೆರೆಗೆ ಬಂದ ನಾಗಾಭರಣ ನಿರ್ದೇಶನದ ‘ಅಲ್ಲಮ’ ಸಿನಿಮಾ ಕೂಡ ರಾಷ್ಟ್ರಪ್ರಶಸ್ತಿಗಳ ಕಾರಣಕ್ಕೆ ಸುದ್ದಿ ಮಾಡಿತೇ ವಿನಾ, ಗಲ್ಲಾಪೆಟ್ಟಿಗೆಯಲ್ಲಿ ಸದ್ದು ಮಾಡಲಿಲ್ಲ.

ಇದು ಜನವರಿಯ ವಾರ್ತೆಯಾದರೆ ವರ್ಷವಿಡೀ ಪರಿಸ್ಥಿತಿ ಇದಕ್ಕಿಂತ ತುಂಬ ಭಿನ್ನವೇನೂ ಇರಲಿಲ್ಲ. ಫೆಬ್ರುವರಿಯಲ್ಲಿ ಬಿಡುಗಡೆಯಾದ ಸುದೀಪ್‌ ನಟನೆಯ ‘ಹೆಬ್ಬುಲಿ’ ತೆರೆಯ ಆಚೆ ಗರ್ಜಿಸಿದ್ದೇ ಹೆಚ್ಚು. ಸೂಪರ್‌ ಸ್ಟಾರ್‌ ಒಬ್ಬರ ಬಹುನಿರೀಕ್ಷಿತ ಚಿತ್ರವೊಂದು ಬಿಡುಗಡೆಯಾಗುವಾಗ ಸಹಜವಾಗಿಯೇ ಇರುವ ಉತ್ಸಾಹ ಈ ಚಿತ್ರ ಬಿಡುಗಡೆಯ ಸಂದರ್ಭದಲ್ಲಿಯೂ ಇತ್ತು. ಬಿಡುಗಡೆಯ ನಂತರವೂ ಕೊಂಚ ಸದ್ದು ಮಾಡಿದರೂ ಬಿಗ್‌ ಬಜೆಟ್‌ನ ಈ ಸಿನಿಮಾದ ಹೊಟ್ಟೆಗೆ ಗಲ್ಲಾಪೆಟ್ಟಿಗೆಯಲ್ಲಿ ಸಿಕ್ಕಿದ್ದು ಅರೆಕಾಸಿನ ಮಜ್ಜಿಗೆಯೇ ಎನ್ನುವುದು ಒಳಗುಟ್ಟಿನ ಮಾತು. ಹಾಗೆ ನೋಡಿದರೆ ವ್ಯಾಪಾರಿ ಚೌಕಟ್ಟಿನಲ್ಲಿಯೇ ನಾಲ್ಕು ಭಿನ್ನ ಮೂಲೆಯ ನಡುವೆ ತರುಣ್‌ ಸುಧೀರ್‌ ಕಟ್ಟಿದ ‘ಚೌಕ’ ಸಿನಿಮಾದ ಓಟವೇ ನಿರ್ಮಾಪಕರಿಗೆ ಹೆಚ್ಚು ಸಂತೃಪ್ತಿ ಕೊಟ್ಟಿರುವಂತಿದೆ. ಇದೇ ತಿಂಗಳು ಬಿಡುಗಡೆಯಾದ ಗಿರಿರಾಜ್‌ ನಿರ್ದೇಶನದ ‘ಅಮರಾವತಿ’ ಪೌರಕಾರ್ಮಿಕರ ಬದುಕಿನ ಕಥನವನ್ನು ಸಂವೇದನಾಶೀಲವಾಗಿ ಹೇಳುವ ಕಾರಣಕ್ಕೆ ಗಮನಾರ್ಹ ಪ್ರಯತ್ನವಾಗಿದ್ದರೂ ಗಲ್ಲಾಪೆಟ್ಟಿಗೆಯಲ್ಲಿ ಉಳಿಗಾಲ ಸಿಕ್ಕಲಿಲ್ಲ.

ಈ ನಡುವೆಯೇ ಬಂದುಹೋದ ಗುರುಪ್ರಸಾದ್‌ ಅವರ ‘ಎರಡನೇ ಸಲ’ ನಿರ್ಮಾಪಕ ಮತ್ತು ನಿರ್ದೇಶಕರ ನಡುವಿನ ಕಚ್ಚಾಟದಲ್ಲಿ ಬಡವಾದರೆ, ಹೊಸ ಹುಡುಗರ ಗಮನಾರ್ಹ ಪ್ರಯತ್ನವಾದ ‘ಕಾಲ್‌ ಕೇಜಿ ಪ್ರೀತಿ’ ಎಂಬ ಚಿತ್ರ ಪ್ರಚಾರದ ಕೊರತೆಯಿಂದ ಹೇಳ ಹೆಸರಿಲ್ಲದೇ ಕೊಚ್ಚಿಕೊಂಡುಹೋಯಿತು.

‘ರಾಜಕುಮಾರ’ನ ದರ್ಬಾರು!: ಮಾರ್ಚ್‌ ತಿಂಗಳಲ್ಲಿಯೂ ಸೋಲಿನ ಹಾದಿಯಲ್ಲಿಯೇ ಗಜಗುಟ್ಟುತ್ತ ಸಾಗುತ್ತಿದ್ದ ಚಿತ್ರರಂಗವನ್ನು ಎತ್ತಿ ಗೆಲುವಿನ ರಾಜಮಾರ್ಗಕ್ಕೆ ಹತ್ತಿಸಿದ್ದು ಸಂತೋಷ್ ಆನಂದ್‌ರಾಮ್‌ ನಿರ್ದೇಶನದ ಪುನೀತ್‌ ರಾಜಕುಮಾರ್‌ ಅಭಿನಯದ ‘ರಾಜಕುಮಾರ’ ಸಿನಿಮಾ. ಈ ವರ್ಷ ದೊಡ್ಡಮಟ್ಟದ ಗೆಲುವಿನ ಆಮ್ಲಜನಕ ಊಡಿಸಿ, ಶೀರ್ಷಿಕೆಗೆ ಅನ್ವರ್ಥಕವೂ ಆದ ಸಿನಿಮಾ ಇದು. ಅಪ್ಪು– ಸಂತೋಷ್‌ ಆನಂದ್‌ರಾಮ್‌ ಜೋಡಿ ಮಾಡಿದ ಮೋಡಿ ಬಹುಕಾಲದ ನಂತರ ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರರಂಗದತ್ತ ಸೆಳೆದ ಅಗ್ಗಳಿಕೆಯನ್ನೂ ಗಳಿಸಿಕೊಂಡಿತು. ಇದೇ ತಿಂಗಳ ಆರಂಭದಲ್ಲಿ ಬಂದ ಹೊಸ ನಿರ್ದೇಶಕರ ‘ಶುದ್ಧಿ’, ಮತ್ತು ‘ಉರ್ವಿ’ ಪ್ರಯೋಗಾತ್ಮಕ ದೃಷ್ಟಿಯಿಂದ ಗಮನ ಸೆಳೆದವು.

ಏಪ್ರಿಲ್‌ನಲ್ಲಿ ತೆರೆಕಂಡ ದರ್ಶನ್‌ ಅಭಿನಯದ ಬಹುನಿರೀಕ್ಷಿತ ಚಿತ್ರ ‘ಚಕ್ರವರ್ತಿ’ ಏಪ್ರಿಲ್‌ನಲ್ಲಿ ಬಿಡುಗಡೆಯಾದ ದುನಿಯಾ ವಿಜಯ್‌ ಅವರ ‘ಮಾಸ್ತಿ ಗುಡಿ’, ಗಣೇಶ್‌ ಅವರ ‘ಪಟಾಕಿ’ ಮೂರೂ ಸಿನಿಮಾಗಳು ನೆಲಕಚ್ಚಿ ಸ್ಟಾರ್‌ ನಟರಿಗೆ ಪರಮಸೋಲಿನ ರುಚಿ ತೋರಿಸಿದವು. ಶಿವರಾಜ್‌ ಕುಮಾರ್‌ ಅವರ ‘ಬಂಗಾರು s/o ಬಂಗಾರದ ಮನುಷ್ಯ’ ಬಂಡವಾಳಕ್ಕೆ ಮೋಸವಿಲ್ಲದಷ್ಟು ಸಂಪಾದನೆ ಮಾಡಿದ್ದೇ ಸಾಧನೆ. 

ಜೂನ್‌ ತಿಂಗಳು ಕೂಡ ಚಂದನವನದ ಅಂಗಳದಲ್ಲಿ ಗೆಲುವಿನ ಮಳೆ ಸುರಿಸದೇ ವರ್ಷವಿಡೀ ಕಾಡಲಿರುವ ಬರಗಾಲದ ಸೂಚನೆಯನ್ನಷ್ಟೇ ನೀಡಿತು. ಚಿತ್ರಮಂದಿರಗಳಿಗೆ ’ಹೋದ ಪುಟ್ಟ ಬಂದ ಪುಟ್ಟ’ ಮಾಡುತ್ತಿದ್ದ ಸಿನಿಮಾಗಳ ನಡುವೆ ವಿಕ್ರಂ ಸೂರಿ ನಿರ್ದೇಶನದ ’ಎಳೆಯರು ನಾವು ಗೆಳೆಯರು’ ಎಂಬ ಮಕ್ಕಳ ಸಿನಿಮಾ ವ್ಯಾಪಾರದಲ್ಲಿ ಸೋತರೂ ಕಲಾತ್ಮಕವಾಗಿ ಗುರ್ತಿಸಬಹುದಾದ ಸಿನಿಮಾ.

ಮೊಟ್ಟೆ ಕಥೆಯ ಆಪರೇಷನ್‌ ಸಕ್ಸಸ್‌!

ಜುಲೈನಲ್ಲಿ ನೆಲ ಕೊಂಚ ಹಸಿಯಾಗಿ ಹಸಿರು ಚಿಗುರುವ ಸೂಚನೆ ನೀಡಿದ್ದು ರಾಜ್‌ ಶೆಟ್ಟಿ ನಿರ್ದೇಶನದ ‘ಒಂದು ಮೊಟ್ಟೆಯ ಕಥೆ’ ಮತ್ತು ಸುನಿ ನಿರ್ದೇಶನದ ’ಆಪರೇಷನ್‌ ಅಲಮೇಲಮ್ಮ’. ಮೊಟ್ಟೆ ಕಥೆ ಹೊಸ ಅಲೆಯ ಪ್ರಯೋಗಾತ್ಮಕತೆಯ ಸಮರ್ಥ ವಾರಸುದಾರನಾಗಿ ಮತ್ತು ವ್ಯಾಪಾರಿ ಲೆಕ್ಕಾಚಾರ ಎರಡೂ ದೃಷ್ಟಿಯಿಂದ ‘ಗೆದ್ದ’ ಸಿನಿಮಾ. ಸಿನಿಮಾ ವ್ಯಾಮೋಹ ಇರುವ ಪ್ರತಿಭಾವಂತ ಹುಡುಗರ ತಂಡ ಮಿತ ಬಜೆಟ್‌ನಲ್ಲಿ ಕಟ್ಟಿದ ಈ ಸಿನಿಮಾ ಗೆಲ್ಲುವಲ್ಲಿ ಪವನ್‌ ಕುಮಾರ್‌ ಅವರ ಪ್ರಚಾರ ಲೆಕ್ಕಾಚಾರದ ಪಾತ್ರವೂ ಸಾಕಷ್ಟಿದೆ. ತೆಳು ಹಾಸ್ಯ, ಥ್ರಿಲ್ಲರ್‌ ಎರಡನ್ನೂ ಹದವಾಗಿ ಬೆರೆಸಿದ್ದ ಅಲಮೇಲಮ್ಮ ಆಪರೇಷನ್‌ ಕೂಡ ಯಶಸ್ವಿಯಾಯಿತು. ಅಷ್ಟೇ ಅಲ್ಲ, ರಿಷಿಯಂಥ ನಾಯಕನಟ, ಜೂಡಾ ಸ್ಯಾಂಡಿಯಂಥ ಯುವ ಸಂಗೀತ ನಿರ್ದೇಶಕ, ಅಭಿಷೇಕ್‌ ಕಾಸರಗೋಡು ಅವರಂಥ ಪ್ರಯೋಗಶೀಲ ಛಾಯಾಗ್ರಾಹಕನನ್ನು ಕೊಟ್ಟ ಹೆಗ್ಗಳಿಕೆಯೂ ಈ ಚಿತ್ರದ್ದು.

ಆಗಸ್ಟ್‌ ಮೊದಲಾರ್ಧದಲ್ಲಿ ತೆರೆಕಂಡ ಶಿವರಾಜ್‌ ಕುಮಾರ್‌ ಅಭಿನಯದ ‘ಮಾಸ್‌ ಲೀಡರ್‌’ ಗಳಿಸಿಕೊಂಡಿದ್ದು ಲಾಸ್‌ ಲೀಡರ್‌ ಎಂಬ ಅನ್ವರ್ಥಕ ನಾಮವನ್ನಷ್ಟೆ. ಸದಭಿರುಚಿಯ ಧಾರಾವಾಹಿಗಳಿಂದ ಜನಪ್ರಿಯರಾಗಿದ್ದ ಟಿ.ಎನ್‌. ಸೀತಾರಾಮ್‌ ಅವರ ‘ಕಾಫಿ ತೋಟ’ದಲ್ಲಿಯೂ ಇಳುವರಿ ಸಿಕ್ಕಿದ್ದು ಅಷ್ಟಕ್ಕಷ್ಟೆ. ಈ ತಿಂಗಳ ಅಂತ್ಯಕ್ಕೆ ತೆರೆಕಂಡ ರವಿಚಂದ್ರನ್‌ ಮಗ ಮನೋರಂಜನ್‌ ಅವರ ‘ಸಾಹೇಬ’ನಿಗೆ ಗೆಲುವಿನ ದರ್ಬಾರು ನಡೆಸುವ ಅವಕಾಶ ಸಿಗಲಿಲ್ಲ.

‘ಭರ್ಜರಿ’ ಸದ್ದು!: ಸೆಪ್ಟೆಂಬರ್‌ ಆರಂಭದಲ್ಲಿ ಬಂದ ಯೋಗರಾಜ್‌ ಭಟ್ಟರ ‘ಮುಗುಳು ನಗೆ’ ಗಹಗಹಿಸಲು ಸಾಧ್ಯವಾಗದೇ ನಸುನಕ್ಕು ಸುಮ್ಮನಾಯಿತು. ತಮ್ಮ ಮೊದಲೆರಡೂ ಸಿನಿಮಾದಲ್ಲಿ ಗೆಲುವಿನ ಬಾವುಟ ಹಾರಿಸಿದ್ದ ಧ್ರುವ ಸರ್ಜಾ ‘ಭರ್ಜರಿ’ಯಲ್ಲಿಯೂ ಅಬ್ಬರಿಸಿದ್ದೇ ಚಿತ್ರರಂಗದ ಗ್ರಾಫ್‌ ಕೊಂಚ ಏರಿಕೆ ಕಂಡಿತು. ಉಸಿರುಗಟ್ಟಿಕೊಂಡು ಹೇಳುವ ಉದ್ದುದ್ದ ಡೈಲಾಗ್‌ಗಳು, ದೂಳೆಬ್ಬಿಸುವ ಫೈಟ್‌, ಲೆಕ್ಕಾಚಾರದ ಹಾಸ್ಯಗಳ ನಡುವೆ ಕಥೆ ಕಾಣೆಯಾಗಿದ್ದರೂ ಸಿನಿಮಾ ಜನರಿಗೆ ಇಷ್ಟವಾಯ್ತು. ವರ್ಷಾರಂಭದಲ್ಲಿ ’ಚಕ್ರವರ್ತಿ’ಯಾಗಲು ಹೋಗಿ ನಿರಾಶರಾಗಿದ್ದ ದರ್ಶನ್‌ ತಮ್ಮನ್ನು ನಿರ್ದೇಶಕ ‘ಮಿಲನ’ ಪ್ರಕಾಶ್‌ ಕೈಗೆ ಒಪ್ಪಿಸಿಕೊಂಡು ಕಟ್ಟಿದ್ದ ‘ತಾರಕ್‌’ ಸಿನಿಮಾ ತೆರೆಕಂಡಿದ್ದೂ ಇದೇ ತಿಂಗಳಲ್ಲಿ. ಚಕ್ರವರ್ತಿಯ ಸೋಲಿನ ಗಾಯವನ್ನು ಮರೆಸದಿದ್ದರೂ ನಿರ್ಮಾಪಕರ ಜೇಬಿಗೆ ನಷ್ಟ ಮಾಡದಷ್ಟು ಗಳಿಕೆಯನ್ನು ‘ತಾರಕ್‌’ ಮಾಡಿತು.

ಅಕ್ಟೋಬರ್‌ನಲ್ಲಿ ಬಿಡುಗಡೆಯಾದ ಸಿನಿಮಾಗಳಲ್ಲಿ ಬಹುತೇಕ ಹೊಸಬರ ಪ್ರಯತ್ನಗಳು. ಯಾವುದೂ ಚಿತ್ರಮಂದಿರದಲ್ಲಿ ನೆಲಕಚ್ಚಿ ನಿಲ್ಲಲಿಲ್ಲ. ಇರುವುದರಲ್ಲಿಯೇ ಪ್ರಯೋಗಶೀಲ ಪ್ರಯತ್ನಗಳು ಎಂದು ಗಮನ ಸೆಳೆದವು ‘ಹುಲಿರಾಯ’, ‘ಕಟಕ’ ಮತ್ತು ‘ದಯವಿಟ್ಟು ಗಮನಿಸಿ’.

ನವೆಂಬರ್‌ನಲ್ಲಿನ ನಿರೀಕ್ಷಿತ ಚಿತ್ರಗಳಾದ ‘ಕಾಲೇಜ್‌ ಕುಮಾರ’, ‘ಉಪೇಂದ್ರ ಮತ್ತೆ ಹುಟ್ಟಿ ಬಾ’ ಬಂದ ಹಾಗೆಯೇ ತಿರುಗಿ ಹೋಗಿಬಿಟ್ಟವು. ವರ್ಷದ ಕಡೆಯ ತಿಂಗಳ ಮೊದಲ ದಿನ ತೆರೆಕಂಡ ನರ್ತನ್‌ ನಿರ್ದೇಶನದ ‘ಮಫ್ತಿ’ ಜನರನ್ನು ಚಿತ್ರಮಂದಿರದತ್ತ ಸೆಳೆಯುತ್ತಿದೆ. ಶಿವರಾಜ ಕುಮಾರ್‌ ಮತ್ತು ಶ್ರೀಮುರಳಿ ಜೋಡಿಯಲ್ಲಿನ ಭೂಗತಲೋಕದ ಹಳೆ ಎಳೆಯನ್ನು ಹೊಸತಾಗಿ ಕಟ್ಟಿದ ರೀತಿ ಪ್ರೇಕ್ಷರಿಗೆ ಇಷ್ಟವಾದಂತಿದೆ.

ಅಂಜನಿಪುತ್ರನಿಗೆ ಸಿಗಬಹುದೇ ಗೆಲುವಿನ ‘ಚಮಕ್‌’: ನಿನ್ನೆಯಷ್ಟೇ ಪುನೀತ್‌ ರಾಜಕುಮಾರ್‌ ಅಭಿನಯದ, ಎ. ಹರ್ಷ ನಿರ್ದೇಶನದ ‘ಅಂಜನಿಪುತ್ರ’ ತೆರೆಕಂಡಿದೆ. ‘ರಾಜಕುಮಾರ’ನ ಹೆಸರಿನಲ್ಲಿ ದೊಡ್ಡ ಯಶಸ್ಸನ್ನು ನೀಡಿರುವ ಪುನೀತ್‌ ಅವರನ್ನು ‘ಅಂಜನಿಪುತ್ರ’ ಇನ್ನೂ ಎತ್ತರಕ್ಕೆ ಹೊತ್ತೊಯ್ಯಲಿದ್ದಾನಾ ಇಲ್ಲವಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ. ಮುಂದಿನ ವಾರ (ಡಿ. 29) ಸುನಿ ನಿರ್ದೇಶನದ ‘ಚಮಕ್‌’ ತೆರೆಕಾಣುತ್ತಿದೆ. ಸುನಿ ಮತ್ತು ಗಣೇಶ್‌ ಕಾಂಬಿನೇಷನ್‌ ಗೆಲುವಿನ ಚಮಕ್‌ ನೀಡಿದರೆ ಚಂದನವನದ ಪಾಲಿಗೆ ಈ ವರ್ಷ ಸುಖಾಂತ್ಯವಾಗಬಹುದು.

ಒಟ್ಟಾರೆ 2017ರ ಚಂದನವನವನ್ನು ವ್ಯಾಪಾರಿ ಲೆಕ್ಕಾಚಾರದಲ್ಲಿ ನೋಡಿದರೆ ‘ಸಾಸುವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ’ ಎಂಬ ಅಲ್ಲಮನ ಸಾಲು ನೆನಪಾಗುತ್ತದೆ. ಆದರೆ ಈ ಬಣ್ಣದ ಜಗತ್ತಿನ ಮಾಯೆಯ ತೆಕ್ಕೆಗೆ ಬೀಳುವವರ ಸಂಖ್ಯೆ ಮಾತ್ರ ಕಡಿಮೆ ಆಗುವ ಯಾವ ಲಕ್ಷಣವೂ ಕಾಣುವುದಿಲ್ಲ.

*

ಬಿಡುಗಡೆಯಾದ ಒಟ್ಟು ಸಿನಿಮಾಗಳು: (ಡಿ. 22) 190 ಸಿನಿಮಾಗಳು

ತುಳು ಸಿನಿಮಾಗಳು: 4

ಕೊಂಕಣಿ ಸಿನಿಮಾಗಳು: 3

**

ನೋಟು ರದ್ದತಿ ಲಗಾಮು ತಾಕಲಿಲ್ಲ: ಕಳೆದ ವರ್ಷಾಂತ್ಯಕ್ಕೆ ದೇಶದಲ್ಲಿ ಸಂಚಲನ ಮೂಡಿಸಿದ್ದ ‘ನೋಟು ರದ್ದತಿ’ ಚಿತ್ರರಂಗವನ್ನೂ ದಿಕ್ಕೆಡಿಸಿದ್ದು ನಿಜ. ಬಣ್ಣದ ಜಗತ್ತಿನ ದೊಡ್ಡಪಾಲು ವ್ಯವಹಾರದ ಬಣ್ಣ ‘ಕಪ್ಪು’ ಎಂಬುದು ಹತ್ತಿರದಿಂದ ಬಲ್ಲ ಎಲ್ಲರಿಗೂ ತಿಳಿದ ವಿಷಯ. ಅದೇ ಕಾರಣಕ್ಕೆ 2017ರಲ್ಲಿ ಸಿನಿಮಾಗಳ ನಿರ್ಮಾಣ ಪ್ರಮಾಣದಲ್ಲಿ ಗಣನೀಯ ಇಳಿಕೆ ಆಗುತ್ತದೆ ಎಂಬ ಮಾತುಗಳೂ ಕೇಳಿಬಂದವು. ಆದರೆ ಅದು ಹುಸಿ ಎಂಬುದು ಬಹುಬೇಗ ಮನವರಿಕೆಯಾಯಿತು. ಕಳೆದ ವರ್ಷದ ದಾಖಲೆಯನ್ನೂ ಮುರಿದು ಇನ್ನೂರರ ಗಡಿಯ ಹತ್ತಿರಕ್ಕೆ ಬಂದು ನಿಂತಿದೆ ಈ ವರ್ಷದ ಸಿನಿಮಾಗಳ ಸಂಖ್ಯೆ. ಈ ವರ್ಷದಲ್ಲಿ ಜಾರಿಗೆ ಬಂದ ಜಿ.ಎಸ್‌.ಟಿ ಕೂಡ ಚಿತ್ರರಂಗದ ಮೇಲೆ ಅಂಥ ಪರಿಣಾಮವನ್ನು ಬೀರಿದಂತಿಲ್ಲ.

ಅಗಲುವಿಕೆಯ ನೆನಪು...

ಕನ್ನಡ ಚಿತ್ರರಂಗಕ್ಕೆ ‘ಅಮ್ಮ’ನಂತಿದ್ದ ಪಾರ್ವತಮ್ಮ ರಾಜಕುಮಾರ್‌ ಅವರ ಸಾವಿನ ನೋವೂ ಈ ವರ್ಷದ ನೆನಪಿನೊಟ್ಟಿಗೆ ಸೇರಿಹೋಗಿದೆ. ಹಲವು ದಶಕಗಳ ಕಾಲ ತೆರೆಮರೆಯಲ್ಲಿ ಸಕ್ರಿಯರಾಗಿ ಸದಭಿರುಚಿಯ ಚಿತ್ರಗಳನ್ನು ನೀಡಿದ, ಹೊಸ ಕಲಾವಿದರನ್ನು ಬೆಳೆಸಿದ, ‘ರಾಜಕುಮಾರ ಕುಟುಂಬ’ದ ಆಧಾರಸ್ಥಂಭವಾಗಿದ್ದ ಪಾರ್ವತಮ್ಮ ಮೇ 31ರಂದು ನಿಧನರಾದಾಗ ಚಿತ್ರರಂಗದಲ್ಲಿ ಸೂತಕದ ವಾತಾವರಣ ಏರ್ಪಟ್ಟಿತ್ತು.

ಹಿರಿಯ ನಟಿಯರಾದ ಪದ್ಮಾ ಕುಮಟಾ (ಮಾರ್ಚ್‌ 6) ಮತ್ತು ಬಿ.ವಿ. ರಾಧಾ (ಸೆ.10) ಅವರನ್ನೂ ಚಿತ್ರರಂಗ ಕಳೆದುಕೊಂಡಿತು.

ಹೊಸ ಅಲೆ: ಸದ್ದಿನಷ್ಟು ಸತ್ವ ಇಲ್ಲ

ಕಳೆದ ವರ್ಷ ಕನ್ನಡ ಚಿತ್ರರಂಗದಲ್ಲಿ ‘ತಿಥಿ’, ‘ರಾಮಾ ರಾಮಾ ರೇ..’, ‘ಗೋಧಿ ಬಣ್ಣ ಸಾಧಾರಣ ಮೈಕಟ್ಟು’ ಚಿತ್ರಗಳು ಸ್ಪಷ್ಟವಾಗಿ ಹೊಸತನದ ಗುರುತನ್ನು ಮೂಡಿಸಿದ್ದವು. ಆದರೆ ಆ ಅಲೆಯನ್ನುಉಳಿಸಿಕೊಳ್ಳುವ ಗಮನಾರ್ಹ ಪ್ರಯತ್ನ ಈ ವರ್ಷ ನಡೆಯಲಿಲ್ಲ ಎಂದೇ ಹೇಳಬೇಕು. ರಾಜ್‌ ಶೆಟ್ಟಿ ನಿರ್ದೇಶನದ ‘ಒಂದು ಮೊಟ್ಟೆಯ ಕಥೆ’ ಮಾತ್ರವೇ ಹೊಸತನದ ನೊಗವನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದು.

ಇನ್ನು ‘ಬ್ಯೂಟಿಫುಲ್‌ ಮನಸುಗಳು’, ‘ಶುದ್ಧಿ’, ‘ಅಮರಾವತಿ’ಗಳಂಥ ಕೆಲವು ಸಿನಿಮಾಗಳು ವ್ಯಾಪಾರಿ ಚೌಕಟ್ಟಿನೊಳಗೇ ಸಮಕಾಲೀನ ವಸ್ತುವನ್ನು ಸೂಕ್ಷ್ಮವಾಗಿ ನಿರ್ವಹಿಸಿದ ರೀತಿಯ ಮೂಲಕ ಗಮನಸೆಳೆದಿವೆ.

‘ಹೊಸ ಅಲೆ’ ಸೋಗಿನಡಿಯಲ್ಲಿ ಬಂದು ಜನರನ್ನು ಆಕರ್ಷಿಸಲು ಪ್ರಯತ್ನಿಸಿ ಮಣ್ಣುಮುಕ್ಕಿದ ಸಿನಿಮಾಗಳ ಸಂಖ್ಯೆಯೂ ಕಮ್ಮಿಯೇನಿಲ್ಲ. ಪ್ರಯೋಗಶೀಲತೆಯ ದೃಷ್ಟಿಯಿಂದ ನೋಡಿದರೆ ಈ ವರ್ಷ ಕಾಳಿಗಿಂತ ಜೊಳ್ಳೇ ಜಾಸ್ತಿ ಎಂದು ಹೇಳಿದರೂ ತಪ್ಪಿಲ್ಲ.

‘ಕಲಾತ್ಮಕ’ ಪ್ರಕಾರದತ್ತ ದೃಷ್ಟಿ ಹಾಯಿಸಿದರೂ ಈ ವರ್ಷ ಉತ್ಸಾಹದಾಯಿಯೇನೂ ಆಗಿಲ್ಲ. ‘ಮಾರಿಕೊಂಡವರು’,  ‘ಲಿಫ್ಟ್‌ ಮ್ಯಾನ್‌’, ‘ಭೇಟಿ’, ‘ಮೂಕಹಕ್ಕಿ’ಯಂಥ ಕೆಲವು ಸಿನಿಮಾಗಳನ್ನು ಹೆಸರಿಸಬಹುದಾದರೂ ಕಲಾತ್ಮಕ ಸಿನಿಮಾ ಪ್ರಕಾರದ ಸಿದ್ಧಚೌಕಟ್ಟನ್ನು ವಿಸ್ತರಿಸಬಲ್ಲ, ಹೊಸ ಜಿಗಿತವನ್ನು ನೀಡಬಲ್ಲ ಸಿನಿಮಾಗಳು ಬಂದಿಲ್ಲ. ಈ ವಾರವೇ ಬಿಡುಗಡೆಯಾಗಿರುವ ‘ರೈಲ್ವೆ ಚಿಲ್ಡ್ರನ್ಸ್‌’ ನಿರ್ದೇಶಕರ ಮೊದಲ ಸಿನಿಮಾ ಎಂಬುದನ್ನು ಪರಿಗಣಿಸಿ ನೋಡಿದರೆ ಗಮನಾರ್ಹ ಪ್ರಯತ್ನ ಎಂದು ಹೇಳಬಹುದು.

ನಾಳೆಯ ಬೆಳೆ ಹೇಗಿರಬಹುದು?

ಈ ವರ್ಷದ ಸೋಲು ಗೆಲುವಿನ ಲೆಕ್ಕಾಚಾರ ಮುಗಿಯುತ್ತಿದ್ದಂತೆಯೇ ಕಣ್ಣು ಮುಂದಿನ ವರ್ಷದತ್ತ ಹೊರಳುತ್ತದೆ. 2018 ‘ಚಂದನವನ’ದ ಪಾಲಿಗೆ ಆಶಾದಾಯಕವಾಗಿರಬಹುದು ಎನ್ನಲು ಹಲವು ಸುಳಿವುಗಳು ಸಿಗುತ್ತವೆ. ಮೊದಲನೇ ಕಾರಣ ಕಳೆದ ವರ್ಷ ಪ್ರಯೋಗಶೀಲತೆಯ ಕಾರಣಕ್ಕೆ ಮೊದಲ ಸಿನಿಮಾದಲ್ಲಿಯೇ ಗಮನಸೆಳೆದಿದ್ದ, ಹೇಮಂತ್‌ ರಾವ್‌, ಡಿ. ಸತ್ಯಪ್ರಕಾಶ್‌, ಅರವಿಂದ ಶಾಸ್ತ್ರಿ ಕಾರ್ತೀಕ್‌ ಸರಗೂರು ಅವರ ಎರಡನೇ ಸಿನಿಮಾಗಳು ಮುಂದಿನ ವರ್ಷ ಬಿಡುಗಡೆಯಾಗುತ್ತಿವೆ.

ಹೇಮಂತ್‌ ರಾವ್‌ ‘ಕವಲು ದಾರಿ’ ಎಂಬ ಹೊಸ ಚಿತ್ರ ಪೂರ್ಣಗೊಳಿಸುವಲ್ಲಿ ಬ್ಯುಸಿಯಾಗಿದ್ದಾರೆ. ಅರವಿಂದ ಶಾಸ್ತ್ರಿ ಅವರು ನಿರ್ದೇಶಿಸುತ್ತಿರುವ ‘ಅಳಿದುಳಿದವರು’ ಕೂಡ ಕುತೂಹಲ ಹುಟ್ಟಿಸಿದೆ. ಸತ್ಯಪ್ರಕಾಶ್‌ ಅವರು ಮಕ್ಕಳ ಮನಸ್ಸನ್ನು ಕೇಂದ್ರೀಕರಿಸಿಕೊಂಡು ಹೊಸಥರದ ಕಥೆಯೊಂದನ್ನು ಹೆಣೆದು ಚಿತ್ರವಾಗಿಸುವ ಧ್ಯಾನದಲ್ಲಿ ಮುಳುಗಿದ್ದಾರೆ. ಇವರ ಜತೆ ಸಾದ್‌ ಖಾನ್‌ ನಿರ್ದೇಶನದ 'ಹಂಬಲ್ ಪೊಲಿಟೀಶಿಯನ್ ನೋಗರಾಜ್’ ಟ್ರೈಲರ್‌ನಿಂದಲೇ ಗಮನ ಸೆಳೆಯುತ್ತಿದೆ. ರಿಷಭ್‌ ಶೆಟ್ಟಿ ಅವರ ‘ಸಹಿಪ್ರಾ ಶಾಲೆ ಕಾಸರಗೋಡು’ ಕೂಡ ನಿರೀಕ್ಷೆ ಇಟ್ಟುಕೊಳ್ಳಬಹುದಾದ ಸಿನಿಮಾ. 

ಇದು ಹೊಸ ಹುಡುಗರ ಕುರಿತ ಮಾತುಗಳಾದರೆ ಕೆಲವು ಘಟಾನುಘಟಿಗಳ ಚಿತ್ರಗಳೂ 2018ರಲ್ಲಿ ಕಣಕ್ಕಿಳಿಯಲಿವೆ. ಸೂರಿ ಮತ್ತು ಶಿವರಾಜಕುಮಾರ್‌ ಕಾಂಬಿನೇಷನ್‌ನ ‘ಟಗರು’ ಕುರಿತು ಈಗಾಗಲೇ ನಿರೀಕ್ಷೆ ಗರಿಗೆದರಿದೆ.

2016ರಲ್ಲಿ ತೆರೆಕಂಡ ‘ಕಿರಿಕ್‌ ಪಾರ್ಟಿ’ಯಲ್ಲಿ ಯಶದ ಉತ್ತುಂಗ ಕಂಡ ರಕ್ಷಿತ್‌ ಶೆಟ್ಟಿ ಈ ವರ್ಷವಿಡೀ ತೆರೆಯ ಮೇಲೆ ಕಾಣಿಸಿಕೊಂಡಿಲ್ಲ. 2018ರಲ್ಲಿ ಅವರು ‘ಅವನೇ ಶ್ರೀಮನ್ನಾರಾಯಣ’ನಾಗಿ ಅವತಾರ ಎತ್ತಲು ಸಜ್ಜಾಗಿದ್ದಾರೆ. ಹಾಗೆಯೇ ಈ ವರ್ಷವಿಡೀ ಅಭಿಮಾನಿಗಳನ್ನು ಕಾಯಿಸಿದ ಯಶ್‌, ‘ಕೆ.ಜಿ.ಎಫ್‌’ನಲ್ಲಿ ಅಬ್ಬರಿಸಿ ಬಂಗಾರದ ಬೆಳೆ ತೆಗೆಯುವ ನಿರೀಕ್ಷೆಯಲ್ಲಿದ್ದಾರೆ. ‘ಮುನಿರತ್ನ ಕುರುಕ್ಷೇತ್ರ’ ಬಿಗ್‌ ಬಜೆಟ್‌ ಮತ್ತು ಬಹುತಾರಾಗಣದ ಕಾರಣಕ್ಕೆ ಸುದ್ದಿ ಮಾಡುತ್ತಿದೆ. ‘ದಿ ವಿಲನ್‌’ ಸಿನಿಮಾ ಮೂಲಕ ಪ್ರೇಮ್‌ ಮತ್ತೆ ಗೆಲುವಿನ ರುಚಿ ಕಾಣುವ ತವಕದಲ್ಲಿದ್ದಾರೆ. ಇವಿಷ್ಟು ನೋಟಕ್ಕೆ ಸ್ಪಷ್ಟ ನಿಲುಕುತ್ತಿರುವ ಚಿತ್ರಗಳು.

ಇದಕ್ಕೂ ಆಚೆಗೆ ಒಂಚೂರು ಗಮನ ಹರಿಸಿ ನೋಡಿದರೆ ಪುನೀತ್‌ ಹೋಂ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ, ಶಶಾಂಕ್‌ ನಿರ್ದೇಶನದ ಸಿನಿಮಾ, ಯೋಗರಾಜ ಭಟ್ಟರು ಮಾಡುತ್ತಿರುವ ಹೊಸ ಸಿನಿಮಾ, ಅಂಬರೀಷ್‌ ಅವರ ‘ಅಂಬಿ ನಿಂಗೆ ವಯಸ್ಸಾಯ್ತೋ’, ಶ್ರುತಿ ಹರಿಹರನ್‌ ತೊಡಗಿಸಿಕೊಂಡಿರುವ ಹಲವು ಪ್ರಯೋಗಾತ್ಮಕ ಸಿನಿಮಾಗಳು, ಮಂಸೋರೆ ನಿರ್ದೇಶನದ ಹೊಸ ಸಿನಿಮಾ ಹೀಗೆ ಗಮನಾರ್ಹ ಎನಿಸಬಲ್ಲ ಸಿನಿಮಾಗಳ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಆದರೆ ಇವುಗಳಲ್ಲಿ ಪ್ರೇಕ್ಷಕಪ್ರಭು ಯಾರಿಗೆ ಆಶೀರ್ವಾದ ಮಾಡುತ್ತಾನೆ, ಯಾರನ್ನು ತಿರಸ್ಕರಿಸುತ್ತಾನೆ ಎಂಬುದನ್ನು ಮಾತ್ರ ಹೇಳುವುದು ಕಷ್ಟ.

ಡಬ್ಬಿಂಗ್‌ ಭೂತ ಉಚ್ಛಾಟನೆ!

ಡಬ್ಬಿಂಗ್‌ ವಿರೋಧಿ ಹೋರಾಟಗಳ ನಡುವೆಯೇ ತೆರೆಕಂಡ ‘ಸತ್ಯದೇವ ಐಪಿಎಸ್‌’, ಚಿತ್ರಮಂದಿರದಿಂದ ಹೇಳಹೆಸರಿಲ್ಲದಂತೆ ನಾಪತ್ತೆಯಾದದ್ದು ಕೂಡ ಈ ವರ್ಷದ ಗಮನಾರ್ಹ ಸಂಗತಿಯೇ. ‘ಸತ್ಯ ಐಪಿಎಸ್‌’ ಬೆಳವಣಿಗೆ ಡಬ್ಬಿಂಗ್ ಸಿನಿಮಾ ಪರ ಮತ್ತು ವಿರೋಧಿ ಬಣದವರ ಭ್ರಮೆಗಳನ್ನು ಹುಸಿಗೊಳಿಸಿದ್ದಂತೂ ಸತ್ಯ. ಈ ವರ್ಷ ತೆರೆಕಂಡ ಮೂರು ಡಬ್ಬಿಂಗ್‌ ಸಿನಿಮಾಗಳಿಗೂ ಹೀನಾಯ ಸೋಲೇ ಗತಿಯಾಯಿತು. ಈ ಕಾರಣದಿಂದ ಇದನ್ನು ಡಬ್ಬಿಂಗ್‌ ಭೂತ ಉಚ್ಚಾಟನೆಗೊಂಡ ವರ್ಷ ಎಂದೂ ಹೇಳಬಹುದು.

ನಾಯಕಿಯ ಪಾಲಿಗೆ ಉಪ್ಪು–ಹುಳಿ–ಖಾರ

2017 ಹಲವು ಹೊಸ ನಾಯಕಿರಯನ್ನು ಚಿತ್ರರಂಗಕ್ಕೆ ಪರಿಚಯಿಸಿದೆ. ಆದರೆ ಇಲ್ಲಿಯೇ ನೆಲೆಯೂರುವ ಭರವಸೆ ಹುಟ್ಟಿಸಿದವರು ಮಾತ್ರ ವಿರಳ. ಹಾಗೆ ನೋಡಿದರೆ ಈಗಾಗಲೇ ಪರಿಚಿತರಾಗಿರುವ ಹಲವು ನಟಿಯರ ಪಾಲಿಗೆ ಇದು ಅದೃಷ್ಟದ ವರ್ಷವಾಗಿರುವುದಂತೂ ಹೌದು.

ಅವರಲ್ಲಿ ಮೊದಲಿಗರು ‘ಕಿರಿಕ್‌ ಪಾರ್ಟಿ’ಯ ಹುಡುಗಿ ರಶ್ಮಿಕಾ ಮಂದಣ್ಣ. ಈ ವರ್ಷ ರಕ್ಷಿತ್‌ ಶೆಟ್ಟಿ ಅವರಷ್ಟೇ ಅಲ್ಲ, ಅದೃಷ್ಟವೂ ಅವರ ಕೈ ಹಿಡಿದಿದೆ. ಈ ತಿಂಗಳಲ್ಲಿ ಅವರು ನಾಯಕಿಯಾಗಿ ನಟಿಸಿರುವ ‘ಅಂಜನಿಪುತ್ರ’, ‘ಚಮಕ್‌’ ಮತ್ತು ತೆಲುಗಿನ ‘ಚಲೊ’ ಮೂರು ಸಿನಿಮಾಗಳು ತೆರೆ ಕಾಣುತ್ತಿರುವುದೇ ಇದಕ್ಕೆ ಸಾಕ್ಷಿ. ಹಾಗೆಯೇ ‘ಯೂ ಟರ್ನ್‌’ ಮೂಲಕ ಪರಿಚಿತರಾಗಿದ್ದ ಶ್ರದ್ಧಾ ಶ್ರೀನಾಥ್‌, ‘ಶುದ್ಧಿ’ ಮತ್ತು ‘ಆಪರೇಷನ್‌ ಅಲಮೇಲಮ್ಮ’ ಮೂಲಕ ಗಮನಸೆಳೆದರಲ್ಲದೇ ತಮಿಳಿನ ‘ವಿಕ್ರಂ ವೇದ’ ಸಿನಿಮಾದಲ್ಲಿಯೂ ಮಿಂಚಿ ಬಂದರು.

‘ಬ್ಯೂಟಿಫುಲ್‌ ಮನಸುಗಳು’ ಚಿತ್ರದ ನಟನೆಗಾಗಿ ಶ್ರುತಿ ಹರಿಹರನ್‌ ರಾಜ್ಯ ಪ್ರಶಸ್ತಿ ಪಡೆದುಕೊಂಡರು. ‘ತಾರಕ್‌’ ಚಿತ್ರದಲ್ಲಿ ದರ್ಶನ್‌ ಜತೆ ತೆರೆ ಹಂಚಿಕೊಂಡ ಅವರ ಮನಸ್ಸು ಹೆಚ್ಚು ಪ್ರಯೋಗಮುಖಿ ಸಿನಿಮಾಗಳತ್ತಲೇ ನೆಟ್ಟಿದೆ. ಶಾನ್ವಿ ಶ್ರೀವಾಸ್ತವ್‌ ಅವರ ಪಾಲಿಗೆ ‘ಸಾಹೇಬ’ ಸೋಲಿನ ಕಹಿ ಉಣಿಸಿದರೆ, ‘ಮಫ್ತಿ’ ಗೆಲುವಿನ ಸಿಹಿ ತಿನಿಸಿದೆ. ಆಶಿಕಾ ರಂಗನಾಥ್‌ ಮುಖದಲ್ಲಿ ಹಲವು ಅವಕಾಶಗಳ ‘ಮುಗುಳು ನಗೆ’ ಅರಳುತ್ತಿದೆ. ‘ಚೌಕ’ದಲ್ಲಿ ಹೀಗೆ ಬಂದು ಹಾಗೆ ಹೋದ ಕೆಂಡಸಂಪಿಗೆ ಬೆಡಗಿ ಮಾನ್ವಿತಾ ಹರೀಶ್‌ ಕೂಡ ಕೈತುಂಬ ಅವಕಾಶಗಳನ್ನು ತುಂಬಿಕೊಂಡು ಉಜ್ವಲ ಭವಿಷ್ಯನ ನಿರೀಕ್ಷೆಯಲ್ಲಿದ್ದಾರೆ. ‘ಭರ್ಜರಿ’ ಸಿನಿಮಾದಲ್ಲಿ ಗೆಲುವಿನ ದಡಕ್ಕೆ ತಾಕಿರುವ ಹರಿಪ್ರಿಯಾ ಮುಂದಿನ ವರ್ಷ ಹಲವು ಭಿನ್ನ ಪಾತ್ರಗಳಲ್ಲಿ ಜನರನ್ನು ತಲುಪಲು ಸಿದ್ಧರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT