ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಮಾನವೀಯ

Last Updated 21 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ವಿವಸ್ತ್ರಗೊಳಿಸಿ ದಲಿತ ಮಹಿಳೆ ಮೇಲೆ ಹಲ್ಲೆ’ ಎಂಬ ವರದಿ (ಪ್ರ.ವಾ., ಡಿ. 21) ಓದಿ ದುಃಖವಾಯಿತು. ಹೆಣ್ಣುಮಕ್ಕಳ ಮಾನಭಂಗ, ಅತ್ಯಾಚಾರ, ವಿವಸ್ತ್ರಗೊಳಿಸಿ ಅವಮಾನ– ಇತ್ಯಾದಿ ವರದಿಗಳು ನಿತ್ಯವೋ ಎಂಬಂತೆ ನಮ್ಮ ಪತ್ರಿಕೆಗಳಲ್ಲಿ ವರದಿಯಾಗುತ್ತಿವೆ.

ಒಂದು ಕಡೆ ದೇಶಪ್ರೇಮ, ಭಾರತೀಯ ಸಂಸ್ಕೃತಿ ಎಂದು ಅಬ್ಬರಿಸಿ ಮಾತನಾಡುತ್ತಿರುವ ನಾಯಕರುಗಳಾದರೆ, ಇನ್ನೊಂದೆಡೆ ಸ್ತ್ರೀಯರ ಮೇಲೆ ಅತ್ಯಾಚಾರ, ವಿವಸ್ತ್ರಗೊಳಸಿ
ಅವಮಾನದ ಘಟನೆಗಳು. ನಮಗೆ ಈಗ ಎಲ್ಲಾ ಪ್ರೇಮಕ್ಕಿಂತ ಹೆಚ್ಚಾಗಿ ಮಾನವ ಪ್ರೇಮ ಬೇಕಾಗಿದೆ. ಮನುಷ್ಯ ಘನತೆಗಾಗಿ ಎಲ್ಲರನ್ನೂ ಸಮಾನರೆಂದು ಕಾಣುವುದು ಬೇಕಾಗಿದೆ.

ಮಹಾಭಾರತದಲ್ಲಿ, ತುಂಬಿದ ಸಭೆಯಲ್ಲಿ ದ್ರೌಪದಿಯ ವಸ್ತ್ರಾಪಹರಣ ಮಾಡುವಾಗ ಆಕೆ ಅಲ್ಲಿದ್ದ ಹಿರಿಯರನ್ನು, ‘ಸ್ತ್ರೀಮತವನುತ್ತರಿಸಲಾಗದೇ?’ಎಂದು ಕೇಳಿದಳು. ಅಂದಿನಿಂದ ಇಂದಿನವರೆಗೆ ನಾವು ಒಂದು ಸಾಂಸ್ಕೃತಿಕ ಸಮುದಾಯವಾಗಿ ದ್ರೌಪದಿಯ ಪ್ರಶ್ನೆಗೆ ಸಮಂಜಸವಾದ ಒಂದು ಉತ್ತರ ನೀಡಲಿಲ್ಲ. ಇಂದು ದೇಶದಾದ್ಯಂತ ಮಹಿಳೆಯರನ್ನು ನಿರಂತರವಾಗಿ ಅಪಮಾನಗೊಳಿಸುತ್ತಿದ್ದೇವೆ. ಇಂತಹ ಪತ್ರಿಕಾ ವರದಿಗಳನ್ನು ನೋಡಿದಾಗ ನಮ್ಮ ಮನೆಗಳಲ್ಲಿ ತಾಯಿ, ಮಗಳು, ಅಕ್ಕ, ತಂಗಿಯರನ್ನು ನಾವು ಗೌರವಿಸಿದ ಹಾಗೆ ಇತರ ಹೆಣ್ಣುಮಕ್ಕಳನ್ನೂ ಗೌರವಿಸುವುದು ನಮ್ಮ ಸಂಸ್ಕೃತಿ ಅಲ್ಲವೇ ಎಂಬ ಪ್ರಶ್ನೆ ಮೂಡುತ್ತದೆ. ನಮಗೀಗ ಸನಾತನ ಸಂಸ್ಕೃತಿಗಿಂತ ಮೊದಲು ಮಹಿಳೆಯರನ್ನು ಗೌರವಿಸುವ ಸಮಕಾಲೀನ ಸಂಸ್ಕೃತಿಯೊಂದು ಬೇಕಾಗಿದೆ. ಸ್ತ್ರೀಯರನ್ನು ಹೀಗೆ ಅವಮಾನಿಸುವವರಿಗೆ ಕಠಿಣ ಶಿಕ್ಷೆ ಆಗಬೇಕು. ಅದರ ಮೊದಲ ಹೆಜ್ಜೆಯಾಗಿ ಅಂಥ ಹೇಯ ಕೃತ್ಯಗಳನ್ನೆಸಗುವವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲು ಪ್ರಯತ್ನಿಸುವುದೇ ನಮ್ಮ ಮೊದಲ ಪ್ರಯತ್ನವಾಗಬೇಕು.

ಎಸ್‌.ಆರ್‌. ವಿಜಯಶಂಕರ್‌, ಬೆಂಗಳೂರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT