ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅತ್ಯಾಚಾರ ಖಂಡಿಸಿ ಬೀದಿಗಿಳಿದ ವಿದ್ಯಾರ್ಥಿನಿಯರು

Last Updated 22 ಡಿಸೆಂಬರ್ 2017, 5:48 IST
ಅಕ್ಷರ ಗಾತ್ರ

ವಿಜಯಪುರ: ದಲಿತ ವಿದ್ಯಾರ್ಥಿನಿ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿ, ಬರ್ಬರವಾಗಿ ಕೊಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರವೂ ಸೇರಿದಂತೆ ಜಿಲ್ಲೆಯ ವಿವಿಧೆಡೆ ಗುರುವಾರವೂ ಪ್ರತಿಭಟನೆ ಮುಂದುವರೆದಿವೆ. ವ್ಯಾಪಕ ಪ್ರಮಾಣದ ಖಂಡನೆ ವ್ಯಕ್ತವಾಗುತ್ತಿದೆ. ವಿವಿಧ ಸಂಘಟನೆ ಪದಾಧಿಕಾರಿಗಳು ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುಷ್ಕೃತ್ಯ ಎಸಗಿದ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸುವಂತೆ ಆಗ್ರಹಿಸಿದ್ದಾರೆ.

ಎಬಿವಿಪಿ: ಅತ್ಯಾಚಾರದ ಘಟನೆ ಖಂಡಿಸಿ ಅಪಾರ ಸಂಖ್ಯೆಯ ವಿದ್ಯಾರ್ಥಿನಿಯರು ಗುರುವಾರ ಎಬಿವಿಪಿ ನೇತೃತ್ವದಲ್ಲಿ ವಿಜಯಪುರದಲ್ಲಿ ಪ್ರತಿಭಟಿಸಿದರು. ಎಬಿವಿಪಿ ರಾಜ್ಯ ಕಾರ್ಯದರ್ಶಿ ರಾಜೇಶ ಗುರಾಣಿ ಮಾತನಾಡಿ ‘ಈ ಪ್ರಕರಣವನ್ನು ಮುಚ್ಚಿ ಹಾಕಲು ಪ್ರಯತ್ನಿಸಲಾಗುತ್ತಿದೆ. ಅತ್ಯಾಚಾರ, ಕೊಲೆಯಲ್ಲಿ ಭಾಗಿಯಾದ ಆರೋಪಿ ಗಳನ್ನು ತಕ್ಷಣವೇ ಬಂಧಿಸಬೇಕು’ ಎಂದು ಆಗ್ರಹಿಸಿದರು.

‘ಮುಖ್ಯಮಂತ್ರಿ ಪ್ರವಾಸದ ನೆಪವೊಡ್ಡಿ ಇಡೀ ಪ್ರಕರಣವನ್ನು ಮುಚ್ಚಿ ಹಾಕಲು ವಿಜಯಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಯತ್ನ ನಡೆಸಿದ್ದಾರೆ. ಆರಂಭದಲ್ಲಿ ದೂರು ದಾಖಲಿಸಿಕೊಳ್ಳಲು ಹಿಂದೇಟು ಹಾಕಿದ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು’ ಎಂದು ಇದೇ ಸಂದರ್ಭ ಒತ್ತಾಯಿಸಿದರು.

ಜಿಲ್ಲಾ ಸಹ ಸಂಚಾಲಕ ಸಚಿನ ಕುಳಗೇರಿ ಮಾತನಾಡಿ ‘ಘಟನೆ ನಡೆದು ಮೂರು ದಿನ ಗತಿಸಿದರೂ ಪೊಲೀಸ್ ಇಲಾಖೆ ಆರೋಪಿಗಳನ್ನು ಬಂಧಿಸುವಲ್ಲಿ ವಿಫಲವಾಗಿದೆ. ಇದರಲ್ಲಿ ರಾಜಕೀಯದ ಹಸ್ತಕ್ಷೇಪವಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ’ ಎಂದು ಆರೋಪಿಸಿದರು.

ನಗರ ಕಾರ್ಯದರ್ಶಿ ಸಚಿನ್‌ ಬಾಗೇವಾಡಿ, ಪಾಂಡು ಮೋರೆ, ಶಂಕರಸಿಂಗ ಹಲವಾಯಿ, ರಾಜಗುರು ದೇವರ, ಪ್ರತೀಪ ಬೇನೂರ, ಬಸವರಾಜ ಪೂಜಾರಿ, ವರ್ಧಾ ಗಲಗಲಿ, ಐಶ್ವರ್ಯ ಕುಲಕರ್ಣಿ, ವಿನೋದ ಮನಗೊಂಡ, ತೇಜಸ್ವಿನಿ ರಾಠೋಡ, ಲತಾ ಬಿರಾದಾರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.

ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸಿ: ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪ ರಾಧಿಗಳನ್ನು ಶಿಕ್ಷಿಸಲು, ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸಿ, ತಪ್ಪಿತಸ್ಥರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಸಕಲ ಮರಾಠಾ ಮೋರ್ಚಾ, ಕ್ಷತ್ರೀಯ ಮರಾಠಾ ಸಮಾಜದ ವತಿಯಿಂದ ಆಗ್ರಹಿಸಲಾಯಿತು.

ವಿಜಯಪುರದ ಶಿವಾಜಿ ವೃತ್ತದ ಮುಂಭಾಗದಲ್ಲಿ ಶ್ರದ್ಧಾಂಜಲಿ ಸಭೆ ನಡೆಸಿ, ಮೃತ ಬಾಲಕಿಯ ಆತ್ಮಕ್ಕೆ ಶಾಂತಿ ಕೋರಲಾಯಿತು. ಮುಖಂಡ ಜ್ಯೋತಿರಾಮ ಪವಾರ ಮಾತನಾಡಿ ‘ವಿಜಯಪುರ ನಗರದಲ್ಲಿ ನಡೆದ ಘಟನೆ ನಾಗರಿಕ ಸಮಾಜ ತಲೆ ತಗ್ಗಿಸುವ ವಿಷಯವಾಗಿದೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಅಪ ನಂಬಿಕೆಯಿಂದ ನೋಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಪ್ರಕರಣ ದಾರಿತಪ್ಪಲು ಬಿಡದೆ ಆರೋಪಿಗಳನ್ನು ಗಲ್ಲು ಶಿಕ್ಷೆಗೆ ಗುರಿ ಪಡಿಸಬೇಕು. ಕಾಮುಕರಿಗೆ ಗಲ್ಲು ಶಿಕ್ಷೆ ವಿಧಿಸಲು ತ್ವರಿತಗತಿಯ ನ್ಯಾಯಾಲಯ ಸ್ಥಾಪಿಸಿ, ಖ್ಯಾತ ವಕೀಲರನ್ನು ಈ ಪ್ರಕರಣ ನಿಭಾಯಿಸಲು ನೇಮಿಸಬೇಕು’ ಎಂದು ಆಗ್ರಹಿಸಿದರು.

ಉಪ ಮೇಯರ್ ರಾಜೇಶ ದೇವಗಿರಿ ಮಾತನಾಡಿ ‘ಶಾಲೆ, ಕಾಲೇಜುಗಳ ಮುಂದೆ ಪಡ್ಡೆ ಹುಡುಗರ ಹಾವಳಿ ಹೆಚ್ಚುತ್ತಿದೆ, ಈ ಪಡ್ಡೆ ಹುಡುಗುರು ವಿದ್ಯಾರ್ಥಿಗಳೊಂದಿಗೆ ಅನುಚಿತವಾಗಿ ವರ್ತನೆ ಮಾಡುವ ಪ್ರಕರಣಗಳು ಕೇಳಿ ಬರುತ್ತಿವೆ. ಕೂಡಲೇ ಇಂತಹ ಹಾವಳಿಯನ್ನು ಮಟ್ಟ ಹಾಕಲು ಇಲಾಖೆ ಮುಂದಾಗಬೇಕು’ ಎಂದು ಆಗ್ರಹಿಸಿದರು.

ಪ್ರಭಾಕರ ಭೋಸಲೆ, ದೀಪಕ ಶಿಂತ್ರೆ, ಮಹಾದೇವ ಪವಾರ, ಅರುಣ ಕದಂ, ಸದಾಶಿವ ಪವಾರ, ಶಂಕರ ಕನಸೆ, ಜ್ಯೋತಿಬಾ ಮೋರೆ, ಅಮೀತ ಗರುಡಕರ, ಗುರುನಾಥ ಕನ್ನೊಳ್ಳಿ, ಭೀಮರಾವ ಆಸಂಗಿ, ಸತೀಶ ಢೋಬಲೆ, ಪರಶುರಾಮ ಜಾಧವ, ಹರಿಬಾ ಮೋರೆ, ಎಂ.ಕೆ.ಭೋಸಲೆ, ಎಸ್.ಬಿ.ಮಸ್ಕೆ, ಎ.ಎ.ಶಿಂಧೆ, ಪೂರ್ಣಿಮಾ ಜಗದಾಳೆ, ಮುಕುಂದ ಸಾಳುಂಕೆ, ಎಸ್.ಎಲ್.ವಿಕ್ರಮ, ಸಂಜಯ ಜಾಧವ, ಲಕ್ಷ್ಮಣ ಜಾಧವ, ಸಂಜು ದಾರೆಕರ, ನಿತಿನ್‌ ಮೋರೆ, ಆಕಾಶ ಪಾಟಣೆ, ಉದಯ ಸಾಳುಂಕೆ, ವಿನೋದ ಗಾಯಕವಾಡ ಉಪಸ್ಥಿತರಿದ್ದರು.

ವಕಾಲತ್ತು ವಹಿಸಿಕೊಳ್ಳಬೇಡಿ; ಮನವಿ: ‘ದುಷ್ಕೃತ್ಯ ಎಸಗಿದ ಆರೋಪಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಆದ್ದರಿಂದ ಈ ಪ್ರಕರಣದಲ್ಲಿ ಭಾಗಿಯಾದ ಅಪರಾಧಿಗಳ ಪರವಾಗಿ ಯಾವೊಬ್ಬ ವಕೀಲರು ವಕಾಲತ್ತು ವಹಿಸಿಕೊಳ್ಳದಂತೆ’ ವಿವಿಧ ದಲಿತ ಸಂಘಟನೆಗಳ ವತಿಯಿಂದ ಜಿಲ್ಲಾ ವಕೀಲರ ಸಂಘಕ್ಕೆ ಮನವಿ ಸಲ್ಲಿಸಲಾಯಿತು.

ಸಂಘದ ಅಧ್ಯಕ್ಷ ಈರಣ್ಣ ಗಾಳಿ ಮಾತನಾಡಿ ‘ಇದೊಂದು ಅಮಾ ನವೀಯ ಕೃತ್ಯ. ನಾಗರಿಕ ಸಮಾಜ ತಲೆ ತಗ್ಗಿಸುವ ಸಂಗತಿ. ಪ್ರಕರಣದಲ್ಲಿ ಭಾಗಿಯಾದ ಕೊಲೆಗಡುಕರ ಪರವಾಗಿ ನ್ಯಾಯಾಲಯದಲ್ಲಿ ಜಾಮೀನಿಗೆ ವಕಾಲತ್ತು ವಹಿಸದಂತೆ ಮನವೊಲಿಸುವ ಪ್ರಯತ್ನವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ’ ಎಂದು ನಿಯೋಗಕ್ಕೆ ಭರವಸೆ ನೀಡಿದರು.

ವಕೀಲರಾದ ಸುತಾರ, ಎಸ್.ಬಿ.ಯಂಭತ್ನಾಳ, ತಿಪ್ಪಣ್ಣ ದೊಡಮನಿ, ವಿಠ್ಠಲ ಒಡೆಯರ, ವಿಠ್ಠಲ ಕಡೇಮನಿ, ದವಲಪ್ಪ ಶಿವಪುರ, ಸಂಗಮೇಶ ಹೌದೆ, ವಿವಿಧ ಸಂಘಟನೆಗಳ ಮುಖಂಡರಾದ ವೆಂಕಟೇಶ ವಗ್ಗೆನವರ, ಶ್ರೀನಾಥ ಪೂಜಾರಿ, ಅಲ್ತಾಪ, ಡ್ಯಾನಿ, ವಿಕಾಸ ಹೊಸಮನಿ, ರವೀಂದ್ರ ಸುಂಟಾನಕರ, ಸತೀಶ ಹೊಸಮನಿ, ಸುರೇಶ ಚಲವಾದಿ, ಖಲೀಲ ಹುಸೇನ, ಯಶವಂತ ರಣದೇವಿ, ಮನೋಹರ ಚಲವಾದಿ ಈ ಸಂದರ್ಭ ಉಪಸ್ಥಿತರಿದ್ದರು.

ಬಂಧಿಸಿ; ಕಠಿಣ ಶಿಕ್ಷೆ ವಿಧಿಸಿ: ತ್ವರಿತಗತಿ ಯಲ್ಲಿ ಪ್ರಕರಣದ ತನಿಖೆ ನಡೆಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ಒದಗಿಸುವಂತೆ ಆಗ್ರಹಿಸಿ ಎಐಡಿಎಸ್ಓ, ಅಖಿಲ ಭಾರತ ಪ್ರಜಾಸತ್ತಾತ್ಮಕ ವಿದ್ಯಾರ್ಥಿ ಸಂಘಟನೆ, ಎಐಡಿವೈಓ, ಎಐಎಂಎಸ್ಎಸ್ ಸಂಘಟನೆಗಳ ನೇತೃತ್ವದಲ್ಲೂ ಪ್ರತಿಭಟನೆ ನಡೆಸಲಾಯಿತು.

ನಗರದ ಲಾಲ್‌ ಬಹಾದ್ದೂರ್‌ ಶಾಸ್ತ್ರಿ ಮಾರುಕಟ್ಟೆ ಮುಂಭಾಗ ಜಮಾಯಿಸಿದ ಅಪಾರ ಸಂಖ್ಯೆಯ ವಿದ್ಯಾರ್ಥಿನಿಯರು, ಸಂಘಟನೆಯ ಕಾರ್ಯಕರ್ತರು ಮೇಣದ ಬತ್ತಿ ಬೆಳಗಿಸಿ ಅಗಲಿದ ವಿದ್ಯಾರ್ಥಿನಿಗೆ ಶ್ರದ್ಧಾಂಜಲಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT