ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೇಡಕಿಹಾಳ–ಬೋರಗಾಂವ ರಸ್ತೆ ಕಾಮಗಾರಿ ಆಮೆಗತಿ

Last Updated 22 ಡಿಸೆಂಬರ್ 2017, 6:20 IST
ಅಕ್ಷರ ಗಾತ್ರ

ಚಿಕ್ಕೋಡಿ: ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಜೋಡಿಸುವ ಚಿಂಚಣಿ–ಇಚಲರಂಜಿ ರಸ್ತೆಯನ್ನು ಬೇಡಕಿಹಾಳದಿಂದ ಬೋರಗಾಂವ ವರೆಗೆ ಸುಧಾರಣೆ ಮಾಡುವ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ.

ಗುತ್ತಿಗೆದಾರರು ರಸ್ತೆಯನ್ನು ಅಗೆದು ಹಾಕಿರುವುದರಿಂದ ಸಂಚಾರಕ್ಕೆ ತೀವ್ರ ಆಡಚಣೆಯಾಗಿದೆ. ಸಾರ್ವಜನಿಕರು ನಿತ್ಯವೂ ದೂಳಿನಲ್ಲೇ ಪ್ರಯಾಣಿಸಬೇಕಾದ ಅನಿವಾರ್ಯತೆ ಎದುರಾಗಿದೆ.

ತಾಲ್ಲೂಕಿನ ಬೋರಗಾಂವ–ಬೇಡಕಿಹಾಳ, ಬೋರಗಾಂವ–ಐಕೋ ಮತ್ತು ಬೋರಗಾಂವ– ಪಾಂಚ್‌ಮೈಲ್‌ವರೆಗೆ ರಸ್ತೆ ಅಭಿವೃದ್ಧಿಗಾಗಿ ಲೋಕೋಪಯೋಗಿ ಇಲಾಖೆಯಿಂದ ₹ 11.05 ಕೋಟಿ ಅನುದಾನ ಮಂಜೂರಾಗಿದ್ದು, ಬಹಳ ವರ್ಷಗಳಿಂದ ಹದಗೆಟ್ಟಿದ್ದ ರಸ್ತೆ ಶೀಘ್ರವಾಗಿ ಸುಧಾರಣೆಯಾಗುತ್ತದೆ ಎಂಬ ಆಸೆ ಗಡಿಭಾಗದ ಜನರದ್ದಾಗಿತ್ತು. ಆದರೆ, ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿರುವುದರಿಂದ ಪ್ರಯಾಣಿಕರು ನಿತ್ಯವೂ ತೊಂದರೆ ಅನುಭವಿಸುವಂತಾಗಿದೆ.

ಸದ್ಯ ಕಬ್ಬು ನುರಿಸುವ ಹಂಗಾಮು ಆರಂಭಗೊಂಡಿರುವುದರಿಂದ ಒಂದರ ಹಿಂದೆ ಒಂದರಂತೆ ನೂರಾರು ಟ್ಯಾಕ್ಟರ್‌ಗಳು ಕಬ್ಬು ತುಂಬಿಕೊಂಡು ಸಂಚರಿಸುತ್ತವೆ. ಅಲ್ಲದೇ, ಕರ್ನಾಟಕ ಮತ್ತು ಮಹಾರಾಷ್ಟ್ರವನ್ನು ಜೋಡಿಸುವ ಮಾರ್ಗ ಇದಾಗಿರುವುದರಿಂದ ನಿತ್ಯವೂ ನೂರಾರು ಬಸ್ಸು, ಕಾರು ಸೇರಿದಂತೆ ಮತ್ತಿತರರ ವಾಹನಗಳ ಸಂಚರಿಸುತ್ತವೆ. ರಸ್ತೆಯನ್ನು ಅಗೆದು ಹಾಕಿರುವುದರಿಂದ ಜಲ್ಲಿಕಲ್ಲುಗಳು ಚಲ್ಲಾಪಿಲ್ಲಿಯಾಗಿವೆ.

ಭಾರಿ ವಾಹನಗಳು ದೂಳೆಬ್ಬಿಸುತ್ತಾ ಸಾಗುತ್ತಿದ್ದರೆ ದ್ವಿಚಕ್ರ ವಾಹನ ಸವಾರರು ದೂಳಿನಲ್ಲೇ ಮಜ್ಜನ ಮಾಡುತ್ತಾ, ಕಣ್ಣೊರೆಸಿಕೊಳ್ಳುತ್ತಾ ಪ್ರಯಾಸದೊಂದಿಗೆ ಪ್ರಯಾಣ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ. ರಸ್ತೆ ದೂಳು ಏಳದಂತೆ ಕನಿಷ್ಠ ನೀರು ಸುರಿಯುವ ಕೆಲಸವನ್ನೂ ಗುತ್ತಿಗೆದಾರರು ಮಾಡುತ್ತಿಲ್ಲ ಎಂಬ ಆಕ್ರೋಶ ಪ್ರಯಾಣಿಕರಿಂದ ವ್ಯಕ್ತವಾಗುತ್ತಿದೆ.

"ರಸ್ತೆಯಲ್ಲಿ ಜಲ್ಲಿಕಲ್ಲುಗಳು ಹರಡಿಕೊಂಡಿರುವುದರಿಂದ ವಾಹನ ಸಂಚಾರ ದುಸ್ತರವಾಗಿದೆ. ಕೊಂಚ ಆಯ ತಪ್ಪಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಜೊತೆಗೆ ರಸ್ತೆ ಇಕ್ಕೆಲಗಳಲ್ಲಿ ಬೆಳೆದಿರುವ ಬೆಳೆಗಳೂ ದೂಳಿನಲ್ಲಿ ಮುಳುಗಿ ಹೋಗಿವೆ' ಎಂದು ರೈತ ರಾಯಗೌಡ ಪಾಟೀಲ ದೂರಿದರು.

‘ಬೇಡಕಿಹಾಳ–ಬೋರಗಾಂವ ರಸ್ತೆ ಅವ್ಯವಸ್ಥೆಯಿಂದ ಹೈರಾಣಾಗಿರುವ ಬೋರಗಾಂವದಿಂದ ನಿಪ್ಪಾಣಿ, ಬೇಡಕಿಹಾಳ ಮೊದಲಾದೆಡೆ ಹೋಗಲು ಪರ್ಯಾಯ ಮಾರ್ಗವಾಗಿ ಸದಲಗಾ, ಶಮನೇವಾಡಿ ಮೂಲಕ ಸಂಚರಿಸುವ ಅನಿವಾರ್ಯತೆ ಎದುರಾಗಿದೆ. ಗುತ್ತಿಗೆದಾರರು ಕೂಡಲೇ ರಸ್ತೆಯನ್ನು ಸುಧಾರಣೆ ಮಾಡಿ ಸಾರ್ವಜನಿಕರಿಗೆ ಅನುಕೂಲ ಕಲ್ಪಿಸಬೇಕು’ ಎಂದು ಅಜಿತ ಕಾಂಬಳೆ ಒತ್ತಾಯಿಸಿದರು.

ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದ ಲೋಕೋಪಯೋಗಿ ಇಲಾಖೆ ಸಹಾಯಕ ಎಂಜಿನಿಯರ್‌ ವಿಜಯ ಸಂಗಪ್ಪಗೋಳ, ‘ ಬೆಳಗಾವಿ ಮೂಲದ ಜೋಗಿ ಎಂಬುವವರಿಗೆ ರಸ್ತೆ ಸುಧಾರಣೆ ಕಾಮಗಾರಿ ಟೆಂಡರ್ ಆಗಿದೆ. ಕಾಮಗಾರಿ ಆರಂಭಿಸಿ ಒಂದು ತಿಂಗಳಾಗಿದೆ. ಆದರೆ, ಕಾಮಗಾರಿ ನಿಧಾನವಾಗಿ ನಡೆಯುತ್ತಿರುವುದರಿಂದ ಗುತ್ತಿಗೆದಾರರಿಗೆ ಈಗಾಗಲೇ ನೋಟಿಸ್‌ ನೀಡಲಾಗಿದೆ. ಆರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅವರಿಗೆ ಕಾಲಾವಕಾಶವಿದೆ. ನಿಗದಿತ ಕಾಲಾವಧಿಯಲ್ಲಿ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ಹೇಳಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT