ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುದ್ದು ಕಂದಮ್ಮಗೆ ಎಣ್ಣೆಸ್ನಾನ

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ತೊಟ್ಟಿಲ ಒಳಗೊಂದು ತೊಳೆದ ಮುತ್ತನು ಕಂಡೆ

ಹೊಟ್ಟೆ ಅಕ್ಕಳಿಸಿ ನಗುವೋನ | ನನ್ನಯ್ಯ

ನೆತ್ತೀಲಿ ಕಂಡೆ ಹರಳೆಲೆ||

ನಗರ ಪ್ರದೇಶದ ಆಧುನಿಕ ಅಜ್ಜಿಯರಿಗೆ ಎಳೆಯ ಮಗುವಿಗೆ ಎಣ್ಣೆಸ್ನಾನ ಮಾಡಿಸುವುದೊಂದು ಸವಾಲಿನ ಸಂಗತಿ. ಮಗಳನ್ನು ಹೆರಿಗೆಗೆಂದು ಮನೆಗೆ ಕರೆತಂದ ಕೂಡಲೇ ಮಗುವಿಗೆ ಸ್ನಾನ ಮಾಡಿಸುವುದು ಹೇಗೆಂಬ ಚಿಂತೆ ಕಾಡತೊಡಗುತ್ತದೆ. ಆದರೆ ಗ್ರಾಮೀಣ ಪ್ರದೇಶದ ಅಜ್ಜಿಯರು ಸುಲಭವಾಗಿ, ಸುಲಲಿತವಾಗಿ ಮಗುವನ್ನು ಕಾಲಿನ ಮೇಲೆ ಮಲಗಿಸಿಕೊಂಡು ಬೆಚ್ಚಗಿನ ಎಣ್ಣೆಯನ್ನು ಮೈ, ಕೈಗೆಲ್ಲ ಹಚ್ಚಿ ನೀವುತ್ತಾ ಬೆನ್ನಿನ ಭಾಗ, ತಲೆಯ ಭಾಗಕ್ಕೆ ತಟ್ಟುತ್ತಾ ಮೃದುವಾಗಿ ಮಸಾಜ್ ಮಾಡುತ್ತಾರೆ. ಅವರಿಗೆ ಅದೊಂದು ಪ್ರೀತಿಯ ಕಾರ್ಯ, ಸ್ನಾನ ಮಾಡಿಸುವಾಗ ನೀರು ಮಗುವಿನ ಕಣ್ಣು, ಮೂಗು, ಬಾಯಿಗೆ ಹೋಗದಂತೆ ಹುಷಾರಾಗಿ ಹಣೆಯ ಮೇಲೆ ಕೈ ಹಿಡಿದು ಸ್ನಾನ ಮಾಡಿಸುತ್ತಾರೆ. ಸ್ನಾನ ಮಾಡಿದ ಮಗು ಸಾಂಬ್ರಾಣಿ ಧೂಪ ಹಾಕಿಸಿಕೊಂಡು ಹಾಯಾಗಿ ನಿದ್ರೆ ಹೋಗುತ್ತದೆ. ಆ ಮಗುವಿಗೆ ಅಜ್ಜಿಯ ಅಭ್ಯಂಗದೊಂದಿಗೆ ಸ್ಪರ್ಶಾನಂದವೂ ದೊರಕಿ ಕನಸಿನಲೋಕಕ್ಕೆ ಜಾರುತ್ತದೆ. ಪುಟ್ಟ ಕಂದಮ್ಮನಿಗೆ ಎಣ್ಣೆಸ್ನಾನ ಮಾಡಿಸುವುದೊಂದು ಕಲೆಯೇ ಸೈ.

ಇಂತಹ ಅಪೂರ್ವ ಆನಂದ ನೀಡುವ ಎಣ್ಣೆಸ್ನಾನ ಹುಟ್ಟಿದ ಮಗುವಿಗೆ ವರ್ಷ ತುಂಬುವವರೆಗೂ ಪ್ರತಿದಿನ ಮಾಡಿಸಿದಲ್ಲಿ ಒಳ್ಳೆಯದು.

ಎಳ್ಳೆಣ್ಣೆ, ಹರಳೆಣ್ಣೆ, ಕೊಬ್ಬರಿ ಎಣ್ಣೆ ಇಲ್ಲವೇ ಕೆಲವು ಗಿಡಮೂಲಿಕೆಗಳಿಂದ ತಯಾರಿಸಿದ ಎಣ್ಣೆ ಒಳ್ಳೆಯದು. ಗಿಡದ ಬೇರಿಗೆ ನೀರು ಹಾಕುತ್ತಿದ್ದರೆ ಗಿಡದ ರೆಂಬೆ-ಕೊಂಬೆ, ಹೂ-ಕಾಯಿ, ಹಣ್ಣುಗಳು ಹೇಗೆ ಬೆಳೆಯುತ್ತವೆಯೋ ಹಾಗೆಯೇ ಅಭ್ಯಂಗದಿಂದ ಮಗುವಿನ ಮಾಂಸಖಂಡಗಳ ಬೆಳವಣಿಗೆ ದೃಢವಾಗುತ್ತದೆ. ಬಳಲಿಕೆ ಕಡಿಮೆಯಾಗಿ ಬಲವುಂಟಾಗುತ್ತದೆ.

ಎಣ್ಣೆಸ್ನಾನವು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಚರ್ಮದ ಕಾಂತಿ ಹೆಚ್ಚಿಸುತ್ತದೆ. ಜೀರ್ಣಶಕ್ತಿ ಹೆಚ್ಚಿಸುತ್ತದೆ ಮಲಬದ್ಧತೆಯನ್ನು ನಿವಾರಿಸುತ್ತದೆ. ಗಾಢವಾದ ನಿದ್ರೆಯನ್ನು ಬರಿಸುತ್ತದೆ.

ಮಗುವಿಗೆ ಹುಟ್ಟಿದಂದಿನಿಂದ ಕನಿಷ್ಠ ಒಂದು ವರ್ಷದವರೆಗೂ ಪ್ರತಿದಿನ ಎಣ್ಣೆಸ್ನಾನ ಮಾಡಿಸಬೇಕು. ನಂತರವೂ ಮುಂದುವರೆಸಬಹುದು. ನೆಗಡಿಯಾಗಿದ್ದಲ್ಲಿ, ಕೆಮ್ಮು, ಜ್ವರ ಮುಂತಾದ ಕಾಯಿಲೆಗಳಿಂದ ಬಳಲುವಾಗ ಹೊರತುಪಡಿಸಿದರೆ ಉಳಿದಂತೆ ಪ್ರತಿದಿನ ಎಣ್ಣೆಸ್ನಾನ ಮಾಡಿಸಬೇಕು. ಒಂದು ವರ್ಷದ ನಂತರ ಹೆಚ್ಚು ಆಟವಾಡಿ ದಣಿಯುವ ಮಗುವಿಗೆ ದಿನಕ್ಕೆರಡು ಬಾರಿ ಬಿಸಿನೀರಿನ ಸ್ನಾನ ಮಾಡಿಸುವುದು ಮತ್ತು ವಾರಕೊಮ್ಮೆ ಎಣ್ಣೆಸ್ನಾನ ಮಾಡಿಸಬೇಕು.

ಎಣ್ಣೆ ಬಿಸಿ ಮಾಡುವ ವಿಧಾನ: ಒಲೆಯ ಮೇಲೆ ಒಂದು ಪಾತ್ರೆಯಲ್ಲಿ ನೀರು ಹಾಕಿ ಕಾಯಿಸಿ, ಆ ಪಾತ್ರೆಯಲ್ಲಿ ಎಣ್ಣೆಯ ಬಟ್ಟಲನ್ನಿಟ್ಟು ಕಾಯಿಸಬೇಕು. ಹೀಗೆ ಮಾಡದೆ ಎಣ್ಣೆ ಬಟ್ಟಲನ್ನು ಒಲೆಯ ಮೇಲಿಟ್ಟು ಕಾಯಿಸಿದಲ್ಲಿ ಎಣ್ಣೆಯಲ್ಲಿನ ಔಷಧೀಯ ಅಂಶಗಳು ನಷ್ಟವಾಗುತ್ತವೆ.

ಎಣ್ಣೆ ಹಚ್ಚುವ ವಿಧಾನ: ಬೆಚ್ಚಗಿನ ಎಣ್ಣೆಯನ್ನು ಕೈಕಾಲುಗಳ ಮೇಲೆ ಮೇಲಿನಿಂದ ಕೆಳಗೆ ಹಚ್ಚಬೇಕು. ಕೀಲುಗಳ ಮತ್ತು ಹೊಟ್ಟೆಯ ಭಾಗದಲ್ಲಿ ವೃತ್ತಾಕಾರವಾಗಿಯೂ, ತಲೆಯ ಮೇಲೆ ಬೆರಳುಗಳ ತುದಿಯಿಂದಲೂ, ಬೆನ್ನಿನ ಮೇಲೆ ಮೃದುವಾಗಿ ತಟ್ಟುವುದರಿಂದಲೂ, ಪಾದಗಳಿಗೆ ಮೃದುವಾಗಿ ಸವರಬೇಕು. ನರಮಂಡಲದ ಕಾರ್ಯ ಪಂಚೇಂದ್ರಿಯಗಳಲ್ಲಿ (ಕಣ್ಣು, ಕಿವಿ, ಮೂಗು, ನಾಲಿಗೆ, ಚರ್ಮ, ಚುರುಕಾಗುತ್ತವೆ) ಸರಿಯಾಗುವುದರಿಂದ ಪಾದಗಳಲ್ಲಿ ಶಕ್ತಿ ಹೆಚ್ಚುತ್ತದೆ.

ಎಣ್ಣೆಯ ತಯಾರಿಕೆ: ಗರಿಕೆರಸ, ಅಮೃತಬಳ್ಳಿ ರಸ, ಕೊಬ್ಬರಿ ಎಣ್ಣೆ/ ಎಳ್ಳೆಣ್ಣೆ, ಹಸುವಿನ ಹಾಲು ಇವುಗಳನ್ನು ಸಮ ಪ್ರಮಾಣದಲ್ಲಿ ಸೇರಿಸಿ. ಇದಕ್ಕೆ 1/8 ಭಾಗದಷ್ಟು ಜೇಷ್ಠಮಧು, ಭದ್ರಮುಷ್ಟಿಗಳನ್ನು ಕುಟ್ಟಿ ಚಟ್ನಿ ತಯಾರಿಸಿ ಸೇರಿಸಿ ಕುದಿಸಿ, ತೈಲ ತಯಾರಿಸಿಟ್ಟಿಸಿಕೊಂಡು ಮೈಗೆ ಹಚ್ಚಲು ಬಳಸಬೇಕು.

ಆಲ, ಅರಳಿ, ಬಸರಿ, ಅತ್ತಿ, ಬೇಲದ ಮರಗಳ ತೊಗಟೆಯಪುಡಿಯನ್ನು ಎಳ್ಳೆಣ್ಣೆ/ಕೊಬ್ಬರಿ ಎಣ್ಣೆಗೆ ಸೇರಿಸಿ ತಯಾರಿಸುವ ತೈಲ ಅತ್ಯಂತ ಶ್ರೇಷ್ಠವಾದದ್ದು. ಇದರಿಂದ ಚರ್ಮದ ಕಾಯಿಲೆಗಳೂ ಬಾಧಿಸುವುದಿಲ್ಲ.

ತಲೆಗೆ ಹಚ್ಚಲು: ತುಳಸಿರಸ, ಭೃಂಗರಾಜ (ಗರುಗದ ಸೊಪ್ಪಿನ ರಸ), ಬಿಲ್ವಪತ್ರೆಯ ರಸ, ಎಳ್ಳೆಣ್ಣೆ ಇವುಗಳನ್ನು ಸಮನಾಗಿ ಸೇರಿಸಬೇಕು. ಇದಕ್ಕೆ ಜೀರಿಗೆ, ಕಂಕುಷ್ಟ, ಕಟುಕ ರೋಹಿಣಿ – ಹೀಗೆ ಪ್ರತಿಯೊಂದನ್ನು 10 ಗ್ರಾಂನಂತೆ ಸೇರಿಸಿ ಚಟ್ನಿ ತಯಾರಿಸಿ ಬೆರಸಿ ಒಲೆಯ ಮೆಲೆ ಇಟ್ಟು ಕಾಯಿಸಿ ತೈಲ ತಯಾರಿಸಬೇಕು. ಈ ತೈಲವನ್ನು ಮಗುವಿನ ತಲೆಗೆ ಹಚ್ಚಿದರೆ ಕೂದಲಿನ ಬೆಳವಣಿಗೆ ಚೆನ್ನಾಗಿರುತ್ತದೆ.

ಸ್ನಾನ: ಬೆಚ್ಚಗಿನ ನೀರಿನ ಸ್ನಾನ ಒಳ್ಳೆಯದು, ಕೆಲವರು ಅತಿಯಾದ ಬಿಸಿನೀರಿನ ಸ್ನಾನ ಮಾಡಿಸುತ್ತಾರೆ. ಅತಿಯಾದ ಬಿಸಿನೀರಿನ ಸ್ನಾನ ಬೇಡ. ಸ್ನಾನದ ನೀರಿಗೆ ಸ್ವಲ್ಪ ನಿಂಬೆರಸ ಇಲ್ಲವೆ ಗುಲಾಬಿ ಜಲ ಇಲ್ಲವೆ ಏಲಕ್ಕಿ, ನಾಗಕೇಶರದ ಪುಡಿ ಬೆರೆಸಿ ಸ್ನಾನ ಮಾಡಿಸಬೇಕು. ಅನೇಕ ಮಕ್ಕಳು ಸ್ನಾನದ ಸಮಯದಲ್ಲಿ ಅಳುತ್ತವೆ. ಕೆಲವು ಮಕ್ಕಳು ಸಂತೋಷದಿಂದ ಮಾಡಿಸಿಕೊಳ್ಳುತ್ತವೆ. ಕೆಲವು ಮಕ್ಕಳು ಮೌನಕ್ಕೆ ಶರಣಾದರೆ, ಕೆಲವು ತುಂಬ ಹಟ ಮಾಡುತ್ತವೆ.

ಧೂಪ: ಸ್ನಾನದ ನಂತರ ಮೆತ್ತಗಿನ ಹತ್ತಿ ಬಟ್ಟೆಯಿಂದ ಮೈ ಒರೆಸಿ ಶ್ರೀಗಂಧದ ಪುಡಿ, ಒಣಗಿದ ಗುಲಾಬಿ ದಳಗಳ ಪುಡಿಯನ್ನು ಮೈಗೆ ಸಿಂಪಡಿಸಬೇಕು. ಬೇಸಿಗೆಯಲ್ಲಿ ಬೆವರುವಿಕೆ ಹೆಚ್ಚಾಗಿರುವುದರಿಂದ ದಿನಕ್ಕೆರಡು ಬಾರಿ ಸ್ನಾನ ಮಾಡಿಸಬೇಕು. ಮಳೆಗಾಲ, ಚಳಿಗಾಲದಲ್ಲಿ ಒಂದು ಬಾರಿ ಎಣ್ಣೆಸ್ನಾನವನ್ನು ಮಾಡಿಸಬೇಕು. ಆಯುರ್ವೇದದಲ್ಲಿ ಮಕ್ಕಳ ತಜ್ಞ ಕಶ್ಯಪನ ಪ್ರಕಾರ ಮಗುವಿಗೆ ಸಂಜೆ ಸಮಯ ಎಣ್ಣೆಸ್ನಾನ ಮಾಡಿಸುವುದು ಒಳ್ಳೆಯದು.

ಮಗುವಿನ ಸ್ನಾನದ ಕಾಳಜಿ ಹೀಗಿರಲಿ

* ಸ್ನಾನಕ್ಕೆ: ಹೆಸರುಕಾಳಿನ ಹಿಟ್ಟು, ಕಡಲೆಹಿಟ್ಟು ಸಮಭಾಗ ಬೆರೆಸಿ ಅದಕ್ಕೆ ಕಡಲೆಹಿಟ್ಟಿಗೆ ಸ್ವಲ್ಪ ಮೆಂತ್ಯಹಿಟ್ಟುನ್ನು ಬೆರೆಸಿ ಸ್ನಾನ ಮಾಡಿಸಬಹುದು.

* ಸೂರ್ಯಸ್ನಾನ: ಚಿಕ್ಕ ಮಕ್ಕಳನ್ನು ಎಣ್ಣೆ ಹಚ್ಚಿ ಇಲ್ಲವೆ ಹಾಗೆಯೇ ಬೆಳಗಿನ ಅರುಣನ ಕಿರಣಗಳಿಗೆ ಎಳೆಯ ಬಿಸಿಲಿಗೆ ಬರೀ ಮೈಯಲ್ಲಿ ನಿಲ್ಲಿಸುವುದರಿಂದ ಆ ಕಿರಣಗಳಿಂದ ವಿಟಮಿನ್ ‘ಎ’ ಮತ್ತು ‘ಡಿ’ ಧಾರಾಳವಾಗಿ ಸಿಗುತ್ತವೆ. ಇದರಿಂದ ಮಗುವಿಗೆ ರಿಕೆಟ್ಸ್‍ನಂತಹ ಕಾಯಿಲೆಗಳು ಬಾರದಂತೆ ತಡೆಗಟ್ಟಬಹುದು.

* 1 ರಿಂದ 4ನೇ ತಿಂಗಳು: ಮಗುವನ್ನು ಕಾಲಿನ ಮೇಲೆ ಮಲಗಿಸಿಕೊಂಡು ಎಣ್ಣೆ ಹಚ್ಚಿ ನೀವಿ ಸ್ನಾನ ಮಾಡಿಸಬೇಕು.

* 9ನೇ ತಿಂಗಳಿಂದ 12 ತಿಂಗಳು: ಮಗು ನಿಂತುಕೊಳ್ಳುವುದರಿಂದ ನಿಲ್ಲಿಸಿಯೇ ಸ್ನಾನ ಮಾಡಿಸಬಹುದು.

* ರೋಮ ನಿವಾರಣೆಗೆ: ಹೆಣ್ಣುಮಗುವಿಗೆ ಮೈಮೇಲೆ ರೋಮಗಳು ಹೆಚ್ಚಾಗಿದ್ದಲ್ಲಿ ಎಳ್ಳೆಣ್ಣೆಯಲ್ಲಿ ಸ್ವಲ್ಪ ಅರಶಿಣ ಹಾಕಿ ಕಾಯಿಸಿ, ಆರಿಸಿ ಆ ಎಳ್ಳೆಣ್ಣೆಯನ್ನು ಮೈಗೆ ಹಚ್ಚಿ ಮಸಾಜ್ ಮಾಡಬೇಕು. ರೋಮಗಳ ವಿರುದ್ಧ ದಿಕ್ಕಿನಲ್ಲಿ ಮಸಾಜ್ ಮಾಡುವುದರಿಂದ ರೋಮಗಳ ಬೆಳವಣಿಗೆ ತಗ್ಗುತ್ತದಲ್ಲದೇ ದಿನ ಕಳೆದಂತೆಲ್ಲ ಉದುರುತ್ತವೆ.

* ಶಾಂಪೂ ಬಳಕೆ ಬೇಡ: ಮುದ್ದು ಕಂದಮ್ಮಗಳಿಗೆ ಶಾಂಪೂ ಬಳಕೆ ಸಲ್ಲದು. ರಾಸಾಯನಿಕಗಳ ಬಳಕೆ ಮಾಡಿರುವ ಯಾವುದೇ ಕ್ರೀಂ ಲೋಶನ್‍ಗಳನ್ನು ಲೇಪಿಸುವುದು ಬೇಡ. ಮಗುವಿಗೆ ಅಮ್ಮ, ಅಜ್ಜಿ, ಅಪ್ಪ, ಕುಟುಂಬದ ಯಾರೇ ನೀಡುವ ಪ್ರೀತಿ ಅದಕ್ಕೆ ಒಳಿತನ್ನುಂಟುಮಾಡಬೇಕೇ ಹೊರತು ಕೆಡಕನ್ನುಂಟುಮಾಡಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT