ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸ್ವರ ಮಧುರವಾಗಬೇಕು!’

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

1. ನಾನು ಉದ್ಯಮಿ, ವಯಸ್ಸು 25. ನನ್ನ ಧ್ವನಿ ತುಂಬಾ ಕರ್ಕಶವಾಗಿದೆ. ಇದರಿಂದ ಸಭೆ–ಸಮಾರಂಭಗಳಲ್ಲಿ ಸ್ನೇಹಿತರೊಂದಿಗೆ ಸೇರಿದಾಗ ನಾನು ಆಡುವ ಮಾತುಗಳು ಯಾರಿಗೂ ಅರ್ಥವಾಗುವುದಿಲ್ಲ. ಧ್ವನಿ ಒಂಥರ ಗಡುಸು, ಒರಟಾಗಿರುತ್ತದೆ. ಯಾರು ಕೂಡ ನನ್ನ ಮಾತನ್ನು ಕೇಳಿಸಿಕೊಳ್ಳುವುದಿಲ್ಲ. ಇದರಿಂದ ಜೀವನವೇ ಬೇಸರವೆನಿಸಿದೆ. ಇದಕ್ಕೆ ವೈದ್ಯರ ಬಳಿ ಹೋಗಬೇಕೆ? ನನ್ನ ಧ್ವನಿಯನ್ನು ಸ್ಪಷ್ಟ ಹಾಗೂ ಮಧುರವಾಗಿಸಿಕೊಳ್ಳಲು ಏನು ಮಾಡಬೇಕು. 

–ಹೆಸರು ಬೇಡ, ಸೊರಬ

ನನಗೆ ನಿಮ್ಮ ಪರಿಸ್ಥಿತಿ ಅರ್ಥವಾಗುತ್ತದೆ. ಆದರೆ, ನಿಮ್ಮ ಧ್ವನಿ ಮೊದಲಿನಿಂದಲೂ ಇದೇ ರೀತಿ ಇದ್ದರೆ, ಹೆಚ್ಚಿಗೆ ಏನೂ ಮಾಡಲು ಸಾಧ್ಯವಿಲ್ಲ. ನೀವು ಒಮ್ಮೆ ಸ್ವರಚಿಕಿತ್ಸಕರನ್ನು ಭೇಟಿ ಮಾಡಿ ಪರಿಶೀಲಿಸಿ. ಓಕಲ್ ಕಾರ್ಡ್ ವ್ಯಾಯಾಮದಿಂದ ನಿಮಗೆ ಸಹಾಯವಾಗಬಹುದು. ಈಗಾಗಲೇ ಸುತ್ತಲಿನ ಜನರಿಗೆ ನಿಮ್ಮ ಧ್ವನಿ ರೂಢಿಯಾಗಿದೆ. ಆ ಬಗ್ಗೆ ಹೆಚ್ಚಿಗೆ ತಲೆ ಕೆಡಿಸಿಕೊಳ್ಳಬೇಡಿ. ನಿಮ್ಮ ಧ್ವನಿ ಹೇಗಿದೆಯೋ ಹಾಗೆ ಒಪ್ಪಿಕೊಳ್ಳಿ ಮತ್ತು ಜನ ಏನು ಹೇಳುತ್ತಾರೆ ಎಂಬುದರ ಬಗ್ಗೆ ತಲೆ ಕೆಡಿಸಿಕೊಳ್ಳಬೇಡಿ. ಆದರೆ ಇತ್ತೀಚೆಗೆ ಯಾವುದೋ ಕಾರಣದಿಂದ ನಿಮ್ಮ ಧ್ವನಿ ಬದಲಾಗಿದ್ದರೆ ಖಂಡಿತ ನೀವು ಡಾಕ್ಟರ್ ಅನ್ನು ನೋಡಲೇಬೇಕು.

2. ನನಗೆ ಮದುವೆಯಾಗಿ ನಾಲ್ಕು ವರ್ಷವಾಯಿತು. ಇಷ್ಟವಿಲ್ಲದ ಮದುವೆಯಿಂದಾಗಿ ನನಗೆ ನನ್ನ ಗಂಡನ ಜೊತೆ ಹೊಂದಿಕೊಳ್ಳಲು ಆಗುತ್ತಿಲ್ಲ. ಉನ್ನತ ವ್ಯಾಸಂಗದ ಕಾರಣಕ್ಕಾಗಿ ತವರುಮನೆಯಲ್ಲಿ ಇದ್ದೇನೆ. ನನಗೆ ಅವರ ಮೇಲೆ ಪ್ರೀತಿನೇ ಹುಟ್ಟುತ್ತಿಲ್ಲ. ಈಗ ನಾನು ಏನು ಮಾಡಬೇಕು?

–ಹೆಸರು, ಊರು ಬೇಡ

ಮದುವೆ ಎನ್ನುವುದು ಒಂದು ಸುಂದರ ಸಂಸ್ಥೆ. ಒಬ್ಬರೇ ಖಂಡಿತ ಈ ಸಂ‌ಸ್ಥೆಯನ್ನು ಮುನ್ನೆಡಿಸಿಕೊಂಡು ಹೋಗಲು ಸಾಧ್ಯವಿಲ್ಲ. ಇದರಲ್ಲಿ ಇಬ್ಬರು ಕೂಡಿ ನಡೆಯಲೇಬೇಕು. ಇಬ್ಬರ ಪಾತ್ರವೂ ಇಲ್ಲಿ ತುಂಬಾ ಮುಖ್ಯ. ನಿಮಗೆ ಮದುವೆಯಾಗಿ ನಾಲ್ಕು ವರ್ಷ ಕಳೆದಿದೆ. ಈಗಿನ ಕಾಲದಲ್ಲಿ ಸಾಮಾನ್ಯವಾಗಿ ಇಬ್ಬರ ಒಪ್ಪಿಗೆ ಪಡದೇ ಮದುವೆ ಮಾಡುತ್ತಾರೆ. ಆದರೆ, ನೀವು ಈಗ ಹೇಗೆ ನನಗೆ ಹೊಂದಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಹೇಳುತ್ತಿದ್ದೀರಿ?

ಅನೇಕರ ಜೀವನದಲ್ಲಿ ಮದುವೆಯ ನಂತರದ ಜೀವನ ನಿಜಕ್ಕೂ ಚಾಲೆಂಜಿಂಗ್ ಆಗಿರುತ್ತದೆ. ಮದುವೆಯ ನಂತರ ಮೊದಲಿಗೆ ಅವರು ನಮ್ಮೊಂದಿಗೆ ಹೊಂದಿಕೊಳ್ಳಲಿ, ಬಿಡಲಿ – ಹೊಸ ಸಂಸಾರದೊಂದಿಗೆ ಬಾಂಧವ್ಯವನ್ನು ರೂಪಿಸಿಕೊಳ್ಳಬೇಕು. ಸಮಯ ಸರಿದಂತೆ ಇಬ್ಬರೂ ಆ ಬಾಂಧವ್ಯವನ್ನು ಆರೋಗ್ಯಕರವಾಗಿ ಬೆಳೆಸಿಕೊಳ್ಳಬೇಕು. ಮದುವೆಯು ಗಂಡ ಹಾಗೂ ಹೆಂಡತಿ ಇಬ್ಬರ ಜೀವನಶೈಲಿಯಲ್ಲೂ ಕೆಲವು ಬದಲಾವಣೆಗಳನ್ನು ಮಾಡುತ್ತದೆ. ಇದೊಂದು ದೊಡ್ಡ ಜವಾಬ್ದಾರಿ ಹಾಗೂ ಇದನ್ನು ಪ್ರೌಢತೆಯಿಂದ ನಿಭಾಯಿಸಬೇಕು. ಸಮಯದ ಒಪ್ಪಿಗೆಯೊಂದಿಗೆ ಸಂಬಂಧವನ್ನು ಸುಂದರವಾಗಿ ರೂಪಿಸಿಕೊಳ್ಳಬೇಕು. ಜೀವನದ ಈ ಹಂತವನ್ನು ಬದ್ಧತೆ, ಹೊಂದಾಣಿಕೆ ಹಾಗೂ ಪ್ರೀತಿಯಿಂದ ಒಪ್ಪಿಕೊಳ್ಳಿ.

ಇಬ್ಬರೂ ಜೊತೆಗಿರುವುದು, ಮಾತನಾಡುವುದು, ನಿರೀಕ್ಷೆಗಳ ಹಂಚಿಕೆ ಹಾಗೂ ಪರಸ್ಪರ ಅರ್ಥ ಮಾಡಿಕೊಳ್ಳುವುದು ಮಾಡುವುದರಿಂದ ಇಬ್ಬರ ನಡುವೆ ಒಂದು ಸುಂದರ ಬಾಂಧವ್ಯ ಏರ್ಪಡುತ್ತದೆ.

ಪ್ರತಿಯೊಬ್ಬರಲ್ಲೂ ಒಳ್ಳೆಯ ಹಾಗೂ ಕೆಟ್ಟಗುಣಗಳಿರುತ್ತವೆ. ಅವೆಲ್ಲವನ್ನು ಅಪ್ಪಿಕೊಂಡು ಮುಂದೆ ಸಾಗಿದಾಗ ನಿಮಗೆ ಬೇಕೆನಿಸಿದ ರೀತಿಯಲ್ಲಿ ಸಂಬಂಧವನ್ನು ರೂಪಿಸಿಕೊಳ್ಳಬಹುದು.

ಹಾಗಾಗಿ ಇದರ ಮೇಲೆ ಕೆಲಸ ಮಾಡಿ. ಮನೆಯ ಹಿರಿಯರ ಸಹಾಯ ಪಡೆದುಕೊಳ್ಳಿ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಅವರು ನಿಮಗೆ ಸಹಾಯ ಮಾಡಬಹುದು. ಒಂದು ಸಂಬಂಧ ಸುಂದರವಾಗಿ ರೂಪುಗೊಳ್ಳಲು ಮೊದಲು ನಾವು ಆಂತರಿಕವಾಗಿ ಸಂತೋಷವಾಗಿರಬೇಕು. ನೀವೇ ನಿಮ್ಮ ಸಂತೋಷಕ್ಕೆ ಮೂಲವಾದರೆ  ಖಂಡಿತ ಸಂಬಂಧ  ಸಂತೋಷವನ್ನು ಹಂಚುತ್ತದೆ. ಆಗ ನೀವು ಸುಂದರ ಸಂಬಂಧವನ್ನು ಹೊಂದುತ್ತೀರಿ.

ಸಂಬಂಧದಲ್ಲಿ ಒಬ್ಬರ ಕಡೆಯಿಂದಲೇ ಅತಿಯಾದ ನಿರೀಕ್ಷೆ ಇದ್ದರೆ ಆ ಸಂಬಂಧ ಸುಧಾರಿಸುವುದಿಲ್ಲ ಮತ್ತು ಸಮಸ್ಯೆಗಳು ಪರಿಹಾರವಾಗುವುದಿಲ್ಲ. ಅಲ್ಲಿ ತೊಂದರೆ ಸ್ಥಿರವಾಗಿರುತ್ತದೆ. ಸಂಬಂಧದಲ್ಲಿ ನೀಡುವ ಮನೋಭಾವವೂ ಇದ್ದರೆ ಖಂಡಿತ ಸುಂದರವಾಗಿರುತ್ತದೆ. ಇವೆಲ್ಲವೂ ನೆರವೇರಲು ನೀವು ಆದಷ್ಟು ಅವರ ಜೊತೆಯಲ್ಲೇ ಇರಲು ಪ್ರಯತ್ನಿಸಿ.

3. ನಾನು ಕಂಪನಿಯೊಂದರಲ್ಲಿ ಉದ್ಯೋಗಿ. ನನಗೆ ನಿದ್ದೆಯ ಸಮಸ್ಯೆ ಇದೆ. ರಾತ್ರಿಯೆಲ್ಲಾ ಚೆನ್ನಾಗಿ ನಿದ್ದೆ ಮಾಡಿದ್ದರೂ ಆಫೀಸ್‌ನಲ್ಲಿ ಮತ್ತೆ ನಿದ್ದೆ ಬರುತ್ತದೆ. ಯಾವಾಗಲೂ ಮಂಪರಿನಲ್ಲೇ ಇರುತ್ತೇನೆ. ಚಟುವಟಿಕೆಯಿಂದ ಇರಲು ಸಾಧ್ಯವಾಗುತ್ತಿಲ್ಲ. ಯಾವ ಕಾರಣಕ್ಕೆ ಹೀಗಾಗುತ್ತದೆ ದಯವಿಟ್ಟು ತಿಳಿಸಿ.

–ತನ್ವಿ, ಬೆಂಗಳೂರು

ಮೊದಲು ಡಾಕ್ಟರ್ ಅನ್ನು ಕಂಡು ನಿಮಗೆ ಯಾವುದೇ ವೈದ್ಯಕೀಯ ಸಮಸ್ಯೆ ಇಲ್ಲ ಹಾಗೂ ನೀವು ಆರೋಗ್ಯವಾಗಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಏನೂ ಸಮಸ್ಯೆ ಇಲ್ಲದಿದ್ದರೆ ದಿನಪೂರ್ತಿ ನೀವು ಎಚ್ಚರಿಕೆಯಿಂದ ಇರಲು ಕೆಲವು ಟಿಪ್ಸ್‌ಗಳನ್ನು ಪಾಲಿಸಿ. ಅದಕ್ಕಾಗಿ ನೀವು ಕೆಲವು ಒಳ್ಳೆಯ ವ್ಯಾಯಾಮಗಳನ್ನು ಮಾಡಿ. ಯೋಗ, ಧ್ಯಾನ ಅಥವಾ ಪ್ರತಿದಿನ ಮುಂಜಾನೆ ಕನಿಷ್ಠ 45 ನಿಮಿಷಗಳ ಕಾಲ ವಾಕ್ ಮಾಡಿ. ಆಗ ನಿಮ್ಮ ದೇಹ ಅಲಸ್ಯವನ್ನು ಬದಿಗೊತ್ತಿ ಉತ್ಸಾಹದಿಂದಿರುತ್ತದೆ. ಅಲ್ಲದೇ ಅದು ನಿಮ್ಮನ್ನು ಇಡೀ ದಿನ ಎಚ್ಚದಿಂದಿರುವಂತೆ ನೋಡಿಕೊಳ್ಳುತ್ತದೆ. ಆರೋಗ್ಯಕರ ಡಯೆಟ್ ಹಾಗೂ ಉತ್ತಮ ವ್ಯಾಯಾಮಗಳಿಂದ ಮಾತ್ರ ನಿಮ್ಮ ಸಮಸ್ಯೆಗೆ ಪರಿಹಾರ ಸಿಗಲು ಸಾಧ್ಯ.

4. ನನ್ನ ಚಿಕ್ಕಮ್ಮ ಯಾವಾಗಲೂ ಸತ್ತವರ ಬಗ್ಗೆ ಮಾತನಾಡುತ್ತಾರೆ. ನನ್ನ ಮೇಲೆ ಅಪ್ಪ ಬಂದಿದ್ದಾರೆ, ಅಣ್ಣ ಬಂದಿದ್ದಾರೆ. ಸತ್ತ ಅವರಿಗೆ ಸದ್ಗತಿ ಇಲ್ಲ ಎನ್ನುತ್ತಿರುತ್ತಾರೆ. ಇದು ಯಾವ ರೀತಿಯ ಸಮಸ್ಯೆ. ಅವರನ್ನು ಮನೋವೈದ್ಯರಲ್ಲಿ ತೋರಿಸಿ, ಔಷಧ ಕೊಡಿಸಿದ್ದೇವೆ. ಔಷಧವನ್ನು ತೆಗೆದುಕೊಳ್ಳುತ್ತಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ. ಕಾರಣ ತಿಳಿಸಿ.

–ರಮೇಶ್, ಶಿವಮೊಗ್ಗ

ನೀವು ಅವರನ್ನು ನಿರಂತರವಾಗಿ ಒಳ್ಳೆಯ ಮನೋವೈದ್ಯರಿಗೆ ತೋರಿಸಿ, ಜೊತೆಗೆ ಮನಃಶಾಸ್ತ್ರಜ್ಞರನ್ನು ನೋಡಿ. ಅವರು ಬೇರೆ ಬೇರೆ ರೀತಿ ಥೆರಪಿಯ ಮೂಲಕ ನಿಮ್ಮ ಚಿಕ್ಕಮ್ಮ ಸಹಜಸ್ಥಿತಿಗೆ ಮರಳುವಂತೆ ಮಾಡುತ್ತಾರೆ. ಇದಕ್ಕೆ ಸ್ವಲ್ಪ ಸಮಯ ಹಿಡಿಯುತ್ತದೆ. ಈ ತರಹದ ಚಿಕಿತ್ಸೆಗೆ ಹೆಚ್ಚು ಸಮಯ ಹಾಗೂ ತಾಳ್ಮೆ ಬೇಕು.

**

ಪ್ರಶ್ನೆ ಕೇಳಲು

ಕೌಟುಂಬಿಕ ಸಮಸ್ಯೆ, ವೈಯಕ್ತಿಕ ಹಾಗೂ ಮಾನಸಿಕ ಸಮಸ್ಯೆಗಳ ಕುರಿತು ನಿಮ್ಮ ಪ್ರಶ್ನೆಗಳನ್ನು ನಮಗೆ ಕಳುಹಿಸಿ. ನಿಮ್ಮ ಪ್ರಶ್ನೆಗಳಿಗೆ ಆಪ್ತ ಸಮಾಲೋಚಕಿ ಸುನೀತಾ ರಾವ್ ಉತ್ತರಿಸಲಿದ್ದಾರೆ. ನಿಮ್ಮ ಪ್ರಶ್ನೆಗಳನ್ನು ಇಮೇಲ್ ಹಾಗೂ ವಾಟ್ಸ್ಯಾಪ್‌ ಮೂಲಕವು ಕಳುಹಿಸಬಹುದು. ಇಮೇಲ್ ವಿಳಾಸ; bhoomika@prajavani.co.in ವಾಟ್ಸ್ಯಾಪ್ ಸಂಖ್ಯೆ: 9482006746

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT