ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇದೆಲ್ಲಾ ನಮಗಿಷ್ಟ...

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹುಟ್ಟುಹಬ್ಬ ಅಥವಾ ಇನ್ನು ಯಾವುದಾದರೂ ವಿಶೇಷ ಸಂದರ್ಭಗಳಲ್ಲಿ ಮಕ್ಕಳಿಗೆ ಉಡುಗೊರೆ ಕೊಡಬೇಕಾದಾಗ ನಾವು ಬಹಳ ಆಲೋಚನೆ ಮಾಡುತ್ತೇವೆ. ಅವರಿಗೆ ಏನು ಇಷ್ಟವಾಗಬಹುದು, ನಾನು ಕೊಟ್ಟ ಉಡುಗೊರೆ ಇಷ್ಟವಾಗದೇ ಇರಬಹುದು. ಅದಕ್ಕಾಗಿ ಅವರು ಬೇಸರಕೊಳ್ಳಬಹುದು ಎಂದೆಲ್ಲಾ ಯೋಚಿಸುತ್ತೇವೆ. ಕೊನೆಗೆ ನಮಗೆ ಇಷ್ಟವಾದ, ಬೆಲೆಬಾಳುವ ಒಂದು ಉಡುಗೊರೆಯನ್ನು ತಂದುಕೊಡುತ್ತೇವೆ. ನಮ್ಮ ಮನೆಯ ಮಕ್ಕಳಾದರೆ ಅವರ ಇಷ್ಟಾನಿಷ್ಟಗಳ ಕಲ್ಪನೆ ನಮಗಿರುತ್ತದೆ. ಆದರೆ ಬೇರೆ ಮಕ್ಕಳ ವಿಚಾರಕ್ಕೆ ಬಂದಾಗ ನಮಗೆ ಅವರ ಇಷ್ಟಗಳ ಬಗ್ಗೆ ಏನೇನೂ ಕಲ್ಪನೆ ಇರುವುದಿಲ್ಲ. ನಮ್ಮ ಪ್ರಾಯ, ಅಂತಸ್ತು, ಆರ್ಥಿಕ ಪರಿಸ್ಥಿತಿಗಳು ನಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ದುಬಾರಿ ವಸ್ತುವನ್ನು ಉಡುಗೊರೆಯಾಗಿ ನೀಡುವಂತೆ ಪ್ರೇರೇಪಿಸುತ್ತದೆ. ಅಂದರೆ ನಾವು ನೀಡುವ ಉಡುಗೊರೆ ನಮ್ಮ ಅಂತಸ್ತಿನ ಸೂಚಕವಾಗಿರುತ್ತದೆ. ಮಗುವಿನ ಮನಸ್ಸು, ಇಷ್ಟ ಇವುಗಳ ಕುರಿತು ಯೋಚಿಸುವವರು ಬಹಳ ಕಡಿಮೆ.

ಬಣ್ಣದ ಮಣಿಗಳು, ಗರಿಗಳು, ಕಲ್ಲುಗಳು ಇತ್ಯಾದಿ ಮಕ್ಕಳ ಸಂಗ್ರಹದಲ್ಲಿರುತ್ತವೆ. ಬಣ್ಣದ ಪೆನ್ಸಿಲ್, ಚಿತ್ರದ ಪುಸ್ತಕ, ಕಥೆಯ ಪುಸ್ತಕಗಳನ್ನು ಅವರು ಬಹಳಷ್ಟು ಇಷ್ಟಪಡುತ್ತಾರೆ.

ಮಕ್ಕಳಿಗಾಗಿ ಉಡುಗೊರೆ ಖರೀದಿಸುವಾಗ ನಾವು ಕೆಲವು ವಿಷಯಗಳನ್ನು ನೆನಪಲ್ಲಿಡುವುದು ಒಳಿತು.

* ಮಕ್ಕಳಿಗೆ ಬಣ್ಣದ ವ್ಯಾಮೋಹ ಹೆಚ್ಚು. ಬಣ್ಣಗಳು ಮಕ್ಕಳ ಕಣ್ಣಿನ ಮೇಲೂ, ಮನಸ್ಸಿನ ಮೇಲೂ ಪ್ರಭಾವ ಬೀರುತ್ತವೆ. ಹಾಗಾಗಿ ಮಕ್ಕಳಿಗಾಗಿ ಆರಿಸುವ ಬಣ್ಣಗಳು ಕಲರ್ ಫುಲ್ ಆಗಿರಲಿ. ಆದರೆ ಅತಿ ತೀಕ್ಷ್ಣ ಬಣ್ಣಗಳು ಬೇಡ. ಬೇಬಿ ಪಿಂಕ್, ತಿಳಿನೀಲಿ, ತಿಳಿ ಹಳದಿ ಈ ರೀತಿ ತಿಳಿಯಾದ ಕೂಲ್ ಬಣ್ಣಗಳನ್ನು ಆಯ್ಕೆ ಮಾಡಿ.

* ಚಿತ್ರಗಳನ್ನು ಇಷ್ಟಪಡದ ಮಕ್ಕಳು ಇಲ್ಲವೇ ಇಲ್ಲ. ಶಾಲೆಗೆ ಹೋಗುತ್ತಿರುವ ಸಣ್ಣ ಮಕ್ಕಳಿಗೆ ಚಿತ್ರಪುಸ್ತಕ ಹಾಗೂ ಕ್ರೆಯಾನ್ಸ್‌/ ಕಲರ್ ಪೆನ್ಸಿಲ್‌ಗಳನ್ನು ಉಡುಗೊರೆ ನೀಡಿದರೆ ಅವರಿಗಾಗುವ ಸಂತೋಷ ಬಹಳ ಹೆಚ್ಚು.

* ಹೆಣ್ಣುಮಕ್ಕಳಿಗೆ ಹೆಚ್ಚಾಗಿ ಗೊಂಬೆಗಳೆಂದರೆ ಇಷ್ಟ. ಅವರಿಗೆ ಅಂತಹ ಉಡುಗೊರೆಗಳನ್ನು ಆರಿಸಿ. ಗಂಡು ಮಕ್ಕಳಿಗೆ ಆಟಿಕೆ ವಾಹನಗಳು ಇನ್ನಿತರ ಆಟದ ವಸ್ತುಗಳು ಖುಷಿ ಕೊಡುತ್ತವೆ.

* ಮನೆಪಾಠಕ್ಕೆ ಬರುವ ಮಕ್ಕಳಿಗೆ ಅವರು ಕಲಿಯುತ್ತಿರುವ ಭಾಷಾ ಮಾಧ್ಯಮದಲ್ಲಿರುವ ಕಥೆಯ ಪುಸ್ತಕಗಳನ್ನು ನೀಡಿ.

* ಮಕ್ಕಳು ದೊಡ್ಡವರಾಗಿದ್ದರೆ ವಾಟರ್ ಕಲರ್ ಹಾಗೂ ಡ್ರಾಯಿಂಗ್ ಪುಸ್ತಕಗಳನ್ನು ಉಡುಗೊರೆ ನೀಡಬಹುದು.

* ಉಡುಗೊರೆ ಸ್ವೀಕರಿಸಲಿರುವ ಮಗುವಿನ ಆಸಕ್ತಿಯ ವಿಷಯವನ್ನು ತಿಳಿದುಕೊಂಡು ಅದಕ್ಕೆ ಸಂಬಂಧಿಸಿದ ಉಡುಗೊರೆ ನೀಡಿದರೆ ಅದು ಬಹಳ ಖುಷಿಪಡುತ್ತದೆ.

* ಸ್ಕೂಲ್ ಬ್ಯಾಗ್, ಬಣ್ಣದ ಛತ್ರಿ ಇತ್ಯಾದಿ ಉಡುಗೊರೆಗಳು ಮಕ್ಕಳಿಗೆ ಮೆಚ್ಚುಗೆಯಾಗುತ್ತದೆ.

* ಪಿಗ್ಗಿಬ್ಯಾಂಕ್ ನೀಡುವುದು ಮಕ್ಕಳಲ್ಲಿ ಉಳಿತಾಯ ಪ್ರಜ್ಞೆಯನ್ನು ಮೂಡಿಸುತ್ತದೆ. ಆಕರ್ಷಕ ಪಿಗ್ಗಿಬ್ಯಾಂಕನ್ನು ಮಕ್ಕಳು ಇಷ್ಡಪಡುತ್ತಾರೆ.

* ಹೆಣ್ಣುಮಕ್ಕಳಿಗೆ ಬಳೆ, ಮಣಿಸರ, ಕಿವಿಯೋಲೆ, ಹೇರ್ ಬ್ಯಾಂಡ್, ಕ್ಲಿಪ್ಸ್ ಇತ್ಯಾದಿಯನ್ನು ನೀಡಿದರೆ ಅವರು ಸಂಭ್ರಮಿಸುತ್ತಾರೆ.

* ತೀರಾ ಸಣ್ಣಮಕ್ಕಳಿಗೆ ನೀಡುವ ಉಡುಗೊರೆಗಳು ಅವರ ಸುರಕ್ಷತೆಗೆ ತೊಂದರೆಯಾಗದಂತಿರಬೇಕು. ಗೊಂಬೆಯನ್ನು ಉಡುಗೊರೆಯಾಗಿ ನೀಡಬಹುದು. ಆದರೆ ಕಳಚಿ ಬೀಳುವ ಸಣ್ಣ ಬಿಡಿಭಾಗಗಳಿರುವ ವಸ್ತುವನ್ನು ಅವರಿಗೆ ನೀಡಬಾರದು.

* ವಸ್ತುವಿನ ಮೌಲ್ಯವಲ್ಲ, ಮಗು ಅದಕ್ಕೆ ಕಲ್ಪಿಸುವ ಮೌಲ್ಯವನ್ನು ಗಣನೆಗೆ ತೆಗೆದುಕೊಂಡು ಉಡುಗೊರೆ ನೀಡಿ. ಆ ಉಡುಗೊರೆಯನ್ನು ಅಂದವಾದ, ಆಕರ್ಷಕವಾದ ಪ್ಯಾಕ್‌ನಲ್ಲಿ ನೀಡಿದರೆ ಇನ್ನೂ ಉತ್ತಮ.

ಇನ್ನು ಮುಂದೆ ಮಕ್ಕಳಿಗೆ ಉಡುಗೊರೆ ನೀಡುವಾಗ ನಮ್ಮ ಇಷ್ಟದ ಉಡುಗೊರೆ ನೀಡುವ ಬದಲು ಅವರು ಇಷ್ಟಪಡುವ, ಅವರಿಗೆ ಖುಷಿ ನೀಡುವ ಉಡುಗೊರೆಯನ್ನು ನೀಡೋಣ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT