ಸಲಹೆ

ಕ್ಷಯರೋಗದ ಸವಾಲುಗಳು

ಕ್ಷಯರೋಗದ ನಿರ್ಮೂಲನೆಗೆ ಸರ್ಕಾರ, ಸಮುದಾಯ ಮತ್ತು ಖಾಸಗಿ ವೈದ್ಯಕೀಯ ವ್ಯವಸ್ಥೆ ಒಂದಾಗಿ ಕ್ರಿಯಾಶೀಲವಾಗಬೇಕಿದೆ. ಇದೊಂದು ಸಾರ್ವಜನಿಕ ಜವಾಬ್ದಾರಿ ಎಂದು ಸರ್ಕಾರ ಪರಿಗಣಿಸಬೇಕಿದೆ.

ಕ್ಷಯರೋಗದ ಸವಾಲುಗಳು

ಪರಿಚಿತರೊಬ್ಬರು ಹೆಜ್ಜೆ ಹಾಕುವಷ್ಟು ಶಕ್ತಿಯಿಲ್ಲದೆ, ನಿತ್ರಾಣರಾಗಿ ಅನಾರೋಗ್ಯದಿಂದ ಬಳಲುತ್ತಿದ್ದರು. ಅದಾಗಲೇ ಸುಮಾರು ಒಂದು ಲಕ್ಷಕ್ಕೂ ಮೀರಿ ಹಣ ಖರ್ಚು ಮಾಡಿ, ಸಿಟಿ, ಎಂಆರ್‌ಐ, ಪೆಟ್ ಸ್ಕ್ಯಾನ್ ಜೊತೆಗೆ ಪ್ರಯೋಗಾಲಯದಿಂದ ಪ್ರಯೋಗಾಲಯಕ್ಕೆ ಸುತ್ತಾಡಿ, ಅನೇಕ ರೀತಿಯ ಪರೀಕ್ಷೆಗಳಿಗೆ ಒಳಪಡಿಸಿದ್ದರು.

ಕ್ಯಾನ್ಸರ್ ಕಾಯಿಲೆಯೇ ಎಂದು ಹೆಚ್ಚಿನವರು ಹೇಳಿ ಇಲ್ಲಿನ ಪ್ರತಿಷ್ಠಿತ ಸರ್ಕಾರಿ ಆಸ್ಪತ್ರೆಯವರೂ ಅದನ್ನೇ ದೃಢಪಡಿಸಿ, ವಿಕಿರಣ (radiation) ಚಿಕಿತ್ಸೆಯನ್ನು ಪ್ರಾರಂಭಿಸಿದರು. ಜೊತೆಗೆ ಕೀಮೊಥೆರಪಿ ಬೇರೆ ಶುರುವಾಗಿತ್ತು. ಅಷ್ಟರಲ್ಲಿ ಸ್ನೇಹಿತರ ಸಲಹೆಯಂತೆ ನುರಿತ ಕ್ಯಾನ್ಸರ್ ತಜ್ಞೆಯೊಬ್ಬರೊಂದಿಗೆ ಸಮಾಲೋಚಿಸಿದಾಗ, ಅವರು ಇವೆಲ್ಲವನ್ನೂ ಅಲ್ಲಗಳೆದು ಬೆನ್ನೆಲುಬಿನ ಸ್ಯಾಂಪಲ್ ಅನ್ನು ತೆಗೆದು ಪ್ರಯೋಗಾಲಯಕ್ಕೆ ಕಳುಹಿಸಿದರು. ಆಗ ತಿಳಿದುಬಂದದ್ದು ಅವರಿಗಿರುವ ಕಾಯಿಲೆ ಬೇರೆಯೇನೂ ಅಲ್ಲ, ಬೆನ್ನುಮೂಳೆಯ ಕ್ಷಯರೋಗವೆಂದು!

ಸಾಮಾನ್ಯವಾಗಿ ಇಂತಹ ಪುರಾತನವಾದ ಸಾಮಾನ್ಯ ಕಾಯಿಲೆ ಎಲ್ಲರ ಕಣ್ಣು ತಪ್ಪಿ, ಅನವಶ್ಯಕವಾಗಿ ರೇಡಿಯೇಷನ್ ಮಾಡಿಸಬೇಕಾಗುತ್ತಿತ್ತು. ಇಲ್ಲದ ಕಾಯಿಲೆಗೆ ಮಾರಕ ಔಷಧದಿಂದಲೇ ಅನಾಹುತಗಳಾಗಬಹುದಿತ್ತು. ಕ್ಷಯರೋಗ ಈ ರೀತಿ ಕೂಡ ಪತ್ತೆಹಚ್ಚಲು ಕಷ್ಟಕರವೆನ್ನುವುದು ಆಗಲೇ ಅರಿವಾಗಿದ್ದು. ಇದು ಎಲ್ಲ ಕ್ಷಯರೋಗಕ್ಕೂ ಸಂಬಂಧಿಸಿದ್ದಲ್ಲ ಎನ್ನುವುದು ಸಮಾಧಾನ.

ಕ್ಷಯರೋಗವನ್ನು ಪತ್ತೆಹಚ್ಚುವಲ್ಲಿ ಇಂದಿಗೂ ನಮ್ಮಲ್ಲಿ ಉಗುಳನ್ನು ಸೂಕ್ಷ್ಮದರ್ಶಕದಲ್ಲಿ ಅವಲೋಕಿಸುವುದು ಮತ್ತು ಏಕ್ಸ್‌ರೇ ಮೂಲಕ ಕಂಡುಹಿಡಿಯುವುದು ಸಾಮಾನ್ಯವಾಗಿದೆ. ಅನೇಕ ದೇಶಗಳು ಇದಾಗಲೇ ಪಿಸಿಆರ್ ತಂತ್ರಜ್ಞಾನ ಅಳವಡಿಸಿಕೊಂಡಿವೆ. ನಮ್ಮಲ್ಲಿ ಅದು ಇನ್ನೂ ವ್ಯಾಪಕವಾಗಿ ಲಭ್ಯವಿಲ್ಲದಿರುವುದು ದೊಡ್ಡ ಸಮಸ್ಯೆಯೇ ಆಗಿದೆ. ಭಾರತದಲ್ಲಿ ಇಂದು ಸುಮಾರು 28 ಲಕ್ಷ ಕ್ಷಯರೋಗಿಗಳಿದ್ದಾರೆಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸುತ್ತದೆ. 2030ಕ್ಕೆ ಜಗತ್ತಿನಿಂದ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿಯನ್ನು ಹೊಂದಿದೆ. ಭಾರತ ಕ್ಷಯರೋಗಕ್ಕೆ ತವರೂರಾಗಿರುವುದು ವಿಪರ್ಯಾಸವೇ.

ಸರ್ಕಾರ ಈಗ 2025ಕ್ಕೆ ಈ ಕಾಯಿಲೆಯನ್ನು ನಿರ್ಮೂಲನ ಮಾಡಬೇಕೆಂದು ಯೋಜನೆಯನ್ನು ಹಾಕಿಕೊಂಡಿದೆ. ಇಂದಿಗೂ ಸುಮಾರು 10 ಲಕ್ಷ ಕ್ಷಯರೋಗಿಗಳು ಪತ್ತೆಯಾಗದೆ ಉಳಿದಿದ್ದಾರೆ ಎಂದು ಅಂದಾಜು ಮಾಡಲಾಗಿದೆ. ಇನ್ನು ಪತ್ತೆ ಹಚ್ಚಿಯೂ ಔಷಧವನ್ನು ಸರಿಯಾಗಿ ತೆಗೆದುಕೊಳ್ಳದಿರುವುದು ರೋಗ ಹೆಚ್ಚು ಮಾರಕವಾಗಿ ಔಷಧಗಳಿಗೆ ಒಗ್ಗದಂತೆ ಉಲ್ಬಣಿಸುವುದು ಕಂಡುಬರುತ್ತಿದೆ. ರೋಗದ ತೀವ್ರತೆಯಂತೆ 6 ತಿಂಗಳಿನಿಂದ 2 ವರ್ಷದವರೆಗೆ ಔಷಧ ಪಡೆಯುವಂಥದ್ದು. ಸರ್ಕಾರ ಉಚಿತವಾಗಿ ಔಷಧವನ್ನು ವಿತರಿಸುತ್ತಿದೆ. ಈಗ ಆಶಾ ಕಾರ್ಯಕರ್ತೆಯರ ಮೂಲಕ ಮನೆಮನೆಗೂ ಹೋಗಿ ತಪಾಸಣೆ ಮಾಡುವ ಯೋಜನೆ ಹಾಕಿಕೊಂಡಿದೆ. ಈ ನಡುವೆ ಸುಮಾರು ಶೇ.50ರಷ್ಟು ರೋಗಿಗಳಿಗೆ ಚಿಕಿತ್ಸೆ ಕೊಡುತ್ತಿರುವ ಖಾಸಗಿ ವೈದ್ಯರು ಕ್ಷಯರೋಗವನ್ನು ಪತ್ತೆ ಹಚ್ಚಿದ ಮೇಲೆ ಸರ್ಕಾರಕ್ಕೆ ಕಾನೂನಿನ ಪ್ರಕಾರ ಕಡ್ಡಾಯವಾಗಿ ವರದಿ ಸಲ್ಲಿಸಬೇಕು.

ಹಾಗೆಯೇ ಔಷಧದ ಅಂಗಡಿಯವರು ಸಹ ಕಡ್ಡಾಯವಾಗಿ ಸರ್ಕಾರಕ್ಕೆ ವರದಿ ಕೊಡಬೇಕು. ಆದರೆ ಇಲ್ಲಿ, ವಿವರ ಸಿಗುತ್ತಿರುವುದು ಕೇವಲ ಒಂದು ಲಕ್ಷ ಮಾತ್ರ. ಅಷ್ಟೇ ಏನು? ಭಾರತ ದೇಶದಲ್ಲಿ ಕೇವಲ ಶೇ.10ರಷ್ಟು ಜನರ ಸಾವು ಮಾತ್ರವೇ ವೈದ್ಯಕೀಯವಾಗಿ ದೃಢೀಕರಣಗೊಳ್ಳುವುದಾಗಿದೆ. ಅಂದರೆ, ಇನ್ನುಳಿದ ಶೇ.90ರಷ್ಟು ಜನ ನಿಖರವಾಗಿ ಅಸುನೀಗಿದ ಕಾರಣವಿಲ್ಲ. ಕೆಲವು ರಾಜ್ಯಗಳಲ್ಲಿ ಖಾಸಗಿ ವೈದ್ಯರಿಗೆ ಉಚಿತವಾಗಿ ಕ್ಷಯರೋಗ ಔಷಧವನ್ನು ಒದಗಿಸುವ ಸೌಲಭ್ಯವನ್ನು ಹಮ್ಮಿಕೊಳ್ಳಲಾಗಿದೆ. ಈ ಸೌಲಭ್ಯವನ್ನು ಪಡೆಯದೆ ಇದ್ದಲ್ಲಿ, ಕಡುಬಡವರು, ಹಣಕಾಸಿನ ಕೊರತೆಯಿಂದಾಗಿ, ಅಥವಾ ಅನೇಕ ತಿಂಗಳು ಸತತವಾಗಿ ಔಷಧ ತೆಗೆದುಕೊಳ್ಳುವ ನಿಯಮದಿಂದ ಜಾರಿಕೊಳ್ಳುವ ಸಾಧ್ಯತೆಗಳು ಹೆಚ್ಚು. ಇಂತಹ ಸಂದರ್ಭಗಳಲ್ಲಿ ರೋಗ ತನ್ನ ತೀವ್ರ ಸ್ವರೂಪ ಪಡೆಯುವ ಸಾಧ್ಯತೆ ಇದೆ. ಇದೇ ಕಾರಣಕ್ಕೇನೋ ಚೀನಾ ಮತ್ತು ಬ್ರೆಜಿಲ್ ದೇಶಗಳಲ್ಲಿ ಸರ್ಕಾರಿ ವ್ಯವಸ್ಥೆಯಲ್ಲಿ ಮಾತ್ರ ಕ್ಷಯರೋಗದ ಔಷಧ ಮತ್ತು ಚಿಕಿತ್ಸೆ ಲಭ್ಯವಿರುವುದು.

ಬಯಲು ಶೌಚಾಲಯ, ಸ್ವಚ್ಛತೆಯ ಕೊರತೆ, ಜನಸಂಖ್ಯೆಯ ಸಾಂದ್ರತೆ ಹೆಚ್ಚಿರುವ ಕೊಳಚೆ ಪ್ರದೇಶ, ಜೊತೆಗೆ ಅಪೌಷ್ಟಿಕತೆಯು ಕ್ಷಯರೋಗಕ್ಕೆ ಹೆದ್ದಾರಿಯಾಗಿವೆ. ಕೊಳಚೆ ಪ್ರದೇಶದಿಂದ ಇತ್ತೀಚೆಗೆ ಜನರನ್ನು ಅಪಾರ್ಟ್‍ಮೆಂಟಿಗೆ ಸಾಗಿಸಿ ಮರುವಸತಿ ಕಲ್ಪಿಸುತ್ತಿದ್ದರೂ, ಅಲ್ಲಿ ಬೆಳಕು ಮತ್ತು ಗಾಳಿಯ ವ್ಯವಸ್ಥೆ ಕೊಳಚೆ ಪ್ರದೇಶಕ್ಕಿಂತ ಅವ್ಯವಸ್ಥೆಯಿಂದ ಕೂಡಿದ್ದು, ರೋಗ ಹರಡಲು ಸಹಕಾರವಾಗುವಂತಿದೆ. ಕ್ಷಯರೋಗಕ್ಕೆ ಇದುವರೆಗೂ ಸಂಪೂರ್ಣವಾಗಿ ಅವಲಂಬಿಸಬಹುದಾದ ಲಸಿಕೆ ಇಲ್ಲದಿರುವುದು ದುರಂತ. ಸರ್ಕಾರವು ಕ್ಷಯರೋಗ ನಿರ್ಮೂಲನೆಗೆ ವಿಶ್ವ ಆರೋಗ್ಯ ಸಂಸ್ಥೆ ಹೇಳುವ ಹಣಕಾಸಿನ ಲೆಕ್ಕಾಚಾರಕ್ಕೆ ಹೋಲಿಸಿದರೆ, ಕೇವಲ ಅರ್ಧದಷ್ಟು ಮಾತ್ರ ಒದಗಿಸುತ್ತಿದೆ. ಕ್ಷಯರೋಗದ ನಿರ್ಮೂಲನೆಗೆ ಸರ್ಕಾರ, ಸಮುದಾಯ ಮತ್ತು ಹೆಚ್ಚಿನದಾಗಿ ಖಾಸಗಿ ವೈದ್ಯಕೀಯ ವ್ಯವಸ್ಥೆ ಕೇವಲ ಇದು ತನ್ನ ಖಾಸಗಿ ವಿಷಯವೆಂದು ಪರಿಗಣಿಸದೆ, ಸಾರ್ವಜನಿಕ ಜವಾಬ್ದಾರಿ ಎಂದು ಕಾಣುವುದು ಅತ್ಯವಶ್ಯಕ. ಹಾಗೆಯೇ ಕ್ಷಯರೋಗವನ್ನು ಜಗತ್ತಿನಿಂದ ಇಲ್ಲದಂತೆ ಮಾಡಬೇಕು ಎಂದಾದಲ್ಲಿ ಯಾವ ದೇಶದಲ್ಲೂ ಅದನ್ನು ಉಳಿಸಿಕೊಳ್ಳುವಂತಿಲ್ಲವಷ್ಟೆ! ಇದು ಗಾಳಿಯ ಮೂಲಕ ಹರಡುವ ಕಾಯಿಲೆ ಎನ್ನುವುದನ್ನು ಮರೆಯುವಂತಿಲ್ಲ.

Comments
ಈ ವಿಭಾಗದಿಂದ ಇನ್ನಷ್ಟು
ಉಪಶಮನವಿಲ್ಲದೆ ದಯಾಮರಣವೇ?

ಆರೋಗ್ಯ
ಉಪಶಮನವಿಲ್ಲದೆ ದಯಾಮರಣವೇ?

17 Mar, 2018
ಹಬ್ಬಗಳು ಮತ್ತು ಆರೋಗ್ಯ ತತ್ವಗಳು

ವಿಚಾರ
ಹಬ್ಬಗಳು ಮತ್ತು ಆರೋಗ್ಯ ತತ್ವಗಳು

17 Mar, 2018
ಮಾತು: ವ್ಯಕ್ತಿತ್ವದ ಭಾವಸೂಚಕ

ಮಾತಿನ ಲಹರಿ
ಮಾತು: ವ್ಯಕ್ತಿತ್ವದ ಭಾವಸೂಚಕ

14 Mar, 2018
‘ಕರ್ತವ್ಯದ ನಿರ್ವಹಣೆಯಷ್ಟೇ ನಮ್ಮ ಜವಾಬ್ದಾರಿ’

ಸೆಲೆಬ್ರಿಟಿ ಅ–ಟೆನ್ಶನ್‌
‘ಕರ್ತವ್ಯದ ನಿರ್ವಹಣೆಯಷ್ಟೇ ನಮ್ಮ ಜವಾಬ್ದಾರಿ’

14 Mar, 2018
ತುತ್ತಿಗೂ ಬಂತು ಪ್ಲಾಸ್ಟಿಕ್ ಕುತ್ತು

ಆರೋಗ್ಯ
ತುತ್ತಿಗೂ ಬಂತು ಪ್ಲಾಸ್ಟಿಕ್ ಕುತ್ತು

10 Mar, 2018