ಸವಿರುಚಿ

ಘಮಘಮಿಸುವ ಸಾಂಬಾರ್-ರಸಂ ಪುಡಿಗಳು

ಬಹುತೇಕ ಮಹಿಳೆಯರು ಮನೆಯಲ್ಲಿಯೇ ಸಾರಿನಪುಡಿ, ಹುಳಿಪುಡಿ, ಪಲ್ಯದಪುಡಿ, ಗರಂಮಸಾಲೆಪುಡಿ, ಬಿಸಿಬೇಳೆಭಾತ್‌ಪುಡಿ ಸೇರಿದಂತೆ ನಿತ್ಯ ಬಳಕೆಗೆ ಅಗತ್ಯವಿರುವ ಹಲಬಗೆಯ ಪುಡಿಗಳನ್ನು ತಯಾರಿಸಿಟ್ಟುಕೊಂಡಿರುತ್ತಾರೆ. ಪುಡಿಗಳಿಗೆ ಬಳಸುವ ಮಸಾಲೆಗಳ ಪ್ರಮಾಣ ಹೆಚ್ಚುಕಡಿಮೆಯಾದರೆ ರುಚಿಯಲ್ಲಿಯೂ ವ್ಯತ್ಯಾಸ ಕಂಡುಬರುತ್ತದೆ. ದಿನಬಳಕೆಗೆ ಅಗತ್ಯವಿರುವ ಕೆಲ ಸಾಂಬಾರುಪುಡಿಗಳ ತಯಾರಿ ಮಾಹಿತಿ ಹಂಚಿಕೊಂಡಿದ್ದಾರೆ ಮೀನಾಕ್ಷಿ ರಮೇಶ್.

ಘಮಘಮಿಸುವ ಸಾಂಬಾರ್-ರಸಂ ಪುಡಿಗಳು

ಸಾರಿನ ಪುಡಿ

ಬೇಕಾಗುವ ಸಾಮಗ್ರಿಗಳು: 1 ಚಮಚ ಮೆಂತೆ, 2 ಚಮಚ ಜೀರಿಗೆ, 4 ಚಮಚ ಧನಿಯಾ, 1 ಚಮಚ ಸಾಸಿವೆ, 2 ಚಮಚ ಉದ್ದಿನಬೇಳೆ, 2 ಚಮಚ ಕಡಲೇಬೇಳೆ, ಕಾಲುಚಮಚ ಪುಡಿಹಿಂಗು, 1 ಕಪ್‌ನಷ್ಟು ಕರಿಬೇವಿನ ಸೊಪ್ಪು, 20ರಿಂದ 25 ಬ್ಯಾಡಗಿ ಮೆಣಸಿನಕಾಯಿ ಹಾಗೂ ಹುರಿಯಲು 2 ಚಮಚ ಎಣ್ಣೆ.

ಮಾಡುವ ವಿಧಾನ: ಒಂದು ಬಾಣಲಿಗೆ ಮೆಂತೆ ಹಾಕಿ ಬಿಸಿಮಾಡಿಕೊಳ್ಳಿ. ನಂತರ ಸ್ವಲ್ಪ ಎಣ್ಣೆ ಹಾಕಿ, ಹಿಂಗು ಹಾಕಿ ಹುರಿದುಕೊಳ್ಳಿ. ಅದನ್ನು ತೆಗೆದಿಟ್ಟುಕೊಂಡು ಅದೇ ಬಾಣಲಿಗೆ ಜೀರಿಗೆ ಹಾಕಿ ಹುರಿಯಿರಿ. ನಂತರ ಧನಿಯಾ ಹಾಗೂ ಸಾಸಿವೆಯನ್ನು ಹುರಿದುಕೊಳ್ಳಬೇಕು. ಅದೇ ರೀತಿ ಉದ್ದಿನ ಬೇಳೆ ಹಾಗೂ ಕಡಲೇಬೇಳೆಯನ್ನು ಕೆಂಪಗೆ ಹುರಿದುಕೊಳ್ಳಬೇಕು. ಕರಿಬೇವಿನ ಸೊಪ್ಪನ್ನು ಕುರುಕುರು ಆಗುವವರೆಗೆ ಹುರಿಯಬೇಕು. ನಂತರ ಒಣಮೆಣಸಿನ ಕಾಯಿಯನ್ನು ಹುರಿದುಕೊಳ್ಳಬೇಕು. ಹುರಿದ ಸಾಮಗ್ರಿಗಳೆಲ್ಲವನ್ನೂ ಸೇರಿಸಿ ಮಿಕ್ಸಿಗೆ ಹಾಕಿ ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ಗಾಳಿಯಾಡದ ಡಬ್ಬದಲ್ಲಿ ಹಾಕಿಟ್ಟರೆ ತಿಂಗಳಾದರೂ ಅದೇ ತಾಜಾತನ ಉಳಿದುಕೊಳ್ಳುತ್ತದೆ.

ಸಾಂಬಾರ್ ಪುಡಿ

ಬೇಕಾಗುವ ಸಾಮಗ್ರಿಗಳು: ಅರ್ಧ ಚಮಚ ಮೆಂತೆ, 1 ಚಮಚ ಜೀರಿಗೆ, 2 ಚಮಚ ಧನಿಯಾ, 1 ಇಂಚು ಉದ್ದದ ಚೆಕ್ಕೆ, ಸ್ವಲ್ಪ ಹಿಂಗು, 3 ಚಮಚ ಉದ್ದಿನಬೇಳೆ, 3 ಚಮಚ ಕಡಲೇಬೇಳೆ, ಒಂದು ಹಿಡಿ ಕರಿಬೇವಿನ ಸೊಪ್ಪು, 4 ಒಣಮೆಣಸಿನಕಾಯಿ, 20ರಿಂದ 25 ಬ್ಯಾಡಗಿ ಮೆಣಸಿನಕಾಯಿ ಹಾಗೂ 2 ಚಮಚ ಎಣ್ಣೆ.

ಮಾಡುವ ವಿಧಾನ: ಮೇಲೆ ಹೇಳಿದ ಎಲ್ಲಾ ಸಾಮಗ್ರಿಗಳನ್ನು ಬೇರೆಬೇರೆಯಾಗಿ ಹುರಿದುಕೊಳ್ಳಬೇಕು. ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಂಡರೆ ಯಾವುದೇ ಸಾಂಬಾರ್ ತಯಾರಿಸುವಾಗಲೂ ಈ ಪುಡಿಯನ್ನು ಉಪಯೋಗಿಸಬಹುದು. ಘಮಘಮಿಸುವ ರುಚಿಕರ ಸಾಂಬಾರ್ ತಯಾರು.

ಪಲ್ಯದ ಪುಡಿ

ಬೇಕಾಗುವ ಸಾಮಗ್ರಿಗಳು: ಅರ್ಧ ಚಮಚ ಮೆಂತೆ, 1 ಚಮಚ ಜೀರಿಗೆ, 2 ಚಮಚ ಧನಿಯಾ, 2 ಮರಾಠಿ ಮೊಗ್ಗು, 2 ಚಮಚ ಉದ್ದಿನಬೇಳೆ, 2 ಚಮಚ ಕಡಲೇಬೇಳೆ, 20ರಿಂದ 25 ಒಣಮೆಣಸಿನಕಾಯಿ, 1 ಹಿಡಿಯಷ್ಟು ಕರಿಬೇವು, 1 ಕಪ್‌ನಷ್ಟು ಒಣ ಕೊಬ್ಬರಿ, 2 ಚಮಚ ಗಸಗಸೆ, ಸ್ವಲ್ಪ ಹಿಂಗು ಹಾಗೂ ಹುರಿಯಲು 2 ಚಮಚ ಎಣ್ಣೆ.

ಮಾಡುವ ವಿಧಾನ: ಮೇಲೆ ಹೇಳಿದ ಸಾಮಗ್ರಿಗಳನ್ನು ಸ್ವಲ್ಪ ಎಣ್ಣೆ ಹಾಕಿಕೊಂಡು ಬೇರೆಬೇರೆಯಾಗಿ ಹುರಿದುಕೊಳ್ಳಿ. ತಣ್ಣಗಾದ ಬಳಿಕ ಮಿಕ್ಸಿ ಜಾರಿಗೆ ಹಾಕಿ ನುಣ್ಣಗೆ ಪುಡಿ ಮಾಡಿಟ್ಟುಕೊಂಡರೆ, ತಿಂಗಳಾದರೂ ಪರಿಮಳ ಹಾಗೂ ರುಚಿ ಹಾಗೇ ಇರುತ್ತದೆ. ಯಾವುದೇ ತರಕಾರಿ ಬಳಸಿ ಪಲ್ಯ ಮಾಡಿದರೂ ಈ ಪುಡಿಯನ್ನು ಉಪಯೋಗಿಸಬಹುದು. ಕೆಲವು ಪಲ್ಯಗಳಿಗೆ ಇದರ ಜೊತೆಗೆ ಹುರಿದ ನೆಲಗಡಲೆ ಪುಡಿಯನ್ನು ಸೇರಿಸಿಕೊಳ್ಳಬಹುದು. ಕೆಲವು ಪಲ್ಯಗಳಿಗೆ ಎಳ್ಳನ್ನು ಹುರಿದು ಪುಡಿ ಮಾಡಿ ಸೇರಿಸಿ, ಈ ಪುಡಿಯನ್ನು ಹಾಕಿದರೆ ವಿಭಿನ್ನ ರುಚಿಯ ಪಲ್ಯ ತಯಾರು.

Comments
ಈ ವಿಭಾಗದಿಂದ ಇನ್ನಷ್ಟು
ಮಾಡಿ ತಿನ್ನಿ ಚಿಕನ್‌ ಸುಕ್ಕ!

ನಳಪಾಕ
ಮಾಡಿ ತಿನ್ನಿ ಚಿಕನ್‌ ಸುಕ್ಕ!

21 Apr, 2018
ಹೊಸರುಚಿ ಆಸ್ವಾದಿಸಲು ಸದಾ ರೆಡಿ

ಸೆಲೆಬ್ರಿಟಿ ಅಡುಗೆ
ಹೊಸರುಚಿ ಆಸ್ವಾದಿಸಲು ಸದಾ ರೆಡಿ

19 Apr, 2018
ಕನ್ನಡ ಚಿಕನ್ ಫುಡ್

ಇ ರುಚಿ
ಕನ್ನಡ ಚಿಕನ್ ಫುಡ್

19 Apr, 2018
ಸ್ಟಾರ್ ಹೋಟೆಲ್‌ನಲ್ಲಿ ಪಂಜಾಬಿ ಸ್ವಾದ

ರಸಸ್ವಾದ
ಸ್ಟಾರ್ ಹೋಟೆಲ್‌ನಲ್ಲಿ ಪಂಜಾಬಿ ಸ್ವಾದ

19 Apr, 2018
ದಿಢೀರ್‌ ತಿಂಡಿ

ಸವಿರುಚಿ
ದಿಢೀರ್‌ ತಿಂಡಿ

19 Apr, 2018