ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಚಂದನ’ದ ‘ರಕ್ತ’ ಹೀರುವ ಖದೀಮರು

Last Updated 26 ಡಿಸೆಂಬರ್ 2017, 12:01 IST
ಅಕ್ಷರ ಗಾತ್ರ

ಆಫ್ರಿಕಾದ ಬ್ಲ್ಯಾಕ್‌ವುಡ್‌ ಬಿಟ್ಟರೆ, ವಿಶ್ವದಲ್ಲೇ ಅಧಿಕ ಬೆಲೆ ಹಾಗೂ ಬೇಡಿಕೆ ಇರುವುದು ‘ರಕ್ತಚಂದನ’ಕ್ಕೆ. ಇಂಥ ಸಸ್ಯ ಸಂಪತ್ತು ಭಾರತದಲ್ಲಿ; ಅದರಲ್ಲೂ ದಕ್ಷಿಣದ  ಆಂಧ್ರಪ್ರದೇಶ, ಕರ್ನಾಟಕ, ತಮಿಳುನಾಡು ಹಾಗೂ ಕೇರಳ ರಾಜ್ಯಗಳಲ್ಲಷ್ಟೇ ಇರುವುದು ನಮ್ಮೆಲ್ಲರ ಹೆಮ್ಮೆ. ಆದರೆ, ಕೆಲವು ಪಾತಕಿಗಳು ಈ ಸಂಪತ್ತನ್ನು ಅಕ್ರಮವಾಗಿ ಲೂಟಿ ಹೊಡೆದು ಕೋಟ್ಯಂತರ ರೂಪಾಯಿ ವಹಿವಾಟು ನಡೆಸುತ್ತಿದ್ದಾರೆ.

ಕೇಂದ್ರದ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‍ಐ), ಜಾರಿ ನಿರ್ದೇಶನಾಲಯ (ಇ.ಡಿ), ಅರಣ್ಯ ಇಲಾಖೆ, ಆಂಧ್ರಪ್ರದೇಶದ ಐದು ಕಾರ್ಯಪಡೆಗಳು, ಕರ್ನಾಟಕದ ಸಿಐಡಿ ಹಾಗೂ ಸಿಸಿಬಿ ಅಧಿಕಾರಿಗಳು ಎಷ್ಟೇ ಕಸರತ್ತು ನಡೆಸಿದರೂ ಕಳ್ಳಸಾಗಣೆ ಜಾಲವನ್ನು ಬುಡಸಮೇತ ಕಿತ್ತೊಗೆಯಲು ಸಾಧ್ಯವಾಗಿಲ್ಲ.

ರಕ್ತಚಂದನ ಮರಕ್ಕೆ ಕೊಡಲಿ ಹಾಕುವವರು ಹಾಗೂ ಈ ಮರದ ತುಂಡುಗಳನ್ನು ಸಾಗಿಸುವವರು ಮಾತ್ರ ಪೊಲೀಸರಿಗೆ ಸಿಕ್ಕಿಬೀಳುತ್ತಿದ್ದಾರೆಯೇ ಹೊರತು, ವಿದೇಶದಲ್ಲಿ ಎಲ್ಲೋ ಕುಳಿತು ಈ ಮಾಫಿಯಾ ನಿರ್ವಹಣೆ ಮಾಡುವ ಕಿಂಗ್‌ಪಿನ್‌ಗಳು ಸೆರೆ ಸಿಗುತ್ತಿಲ್ಲ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ರಕ್ತಚಂದನಕ್ಕೆ ಹೆಚ್ಚಿನ ಬೇಡಿಕೆ ಇದೆ. ದೇಶದಲ್ಲಿ ಕೆ.ಜಿ.ಗೆ ₹10 ಸಾವಿರದಿಂದ ₹15 ಸಾವಿರ ಇದ್ದರೆ, ಅಂತರರಾಷ್ಟ್ರೀಯ ಮಟ್ಟದಲ್ಲಿ ₹25 ಸಾವಿರದಿಂದ ₹35 ಸಾವಿರ ಬೆಲೆ ಇದೆ. ಅದನ್ನೇ ಬಂಡವಾಳ ಮಾಡಿಕೊಂಡ ಮರಗಳ್ಳರು, ಸಸ್ಯ ಸಂಪತ್ತು ಲೂಟಿ ಮಾಡಿ ಕಳ್ಳ ಮಾರ್ಗದಲ್ಲಿ ವಿದೇಶಕ್ಕೆ ಸಾಗಿಸುತ್ತಿದ್ದಾರೆ. 

‘ರಕ್ತಹೊನ್ನೆ’, ‘ಕೆಂಪು ಗಂಧಗಿರಿ ಚಕ್ಕೆ’, ‘ಕೆಂಪು ಚಂದನ’ ಎಂಬ ಹೆಸರುಗಳಿಂದ ಕರೆಯಲಾಗುವ ‘ರಕ್ತಚಂದನ’ದ ವೈಜ್ಞಾನಿಕ ಹೆಸರು ‘ಟೆರೋಕಾರ್ಪಸ್ ಸ್ಯಾಂಟಲಿನಸ್’. ಆಂಧ್ರಪ್ರದೇಶದ ಕಡಪ, ಚಿತ್ತೂರು, ನೆಲ್ಲೂರು, ಕರ್ನೂಲು, ಪ್ರಕಾಶಂ ಹಾಗೂ ಅನಂತಪುರ ಜಿಲ್ಲೆಯಲ್ಲಿ ಇದು ಯಥೇಚ್ಛವಾಗಿ ಬೆಳೆಯುತ್ತದೆ.

ಕಡಪದ ಪಾಲಕೊಂಡ ಹಾಗೂ ಚಿತ್ತೂರಿನ ಶೇಷಾಚಲಂ ಅರಣ್ಯ ಪ್ರದೇಶಗಳು ರಕ್ತಚಂದನ ಮರಗಳಿಂದಲೇ ಕಂಗೊಳಿಸುತ್ತಿವೆ. ರಾಜ್ಯದ ಮಂಡ್ಯ ಜಿಲ್ಲೆ ಹುಲಿಕೆರೆಯ ವಿಶ್ವೇಶ್ವರಯ್ಯ ನಾಲೆಯ ಲೋಯರ್ ಟನಲ್ ಪ್ರದೇಶ, ಬಸವನಬೆಟ್ಟ; ಬೆಂಗಳೂರು ಬಳಿಯ ಬನ್ನೇರುಘಟ್ಟದ ಕೆಲವು ಪ್ರದೇಶ ಹಾಗೂ ನೆರೆ ರಾಜ್ಯಗಳಾದ ತಮಿಳುನಾಡು ಮತ್ತು ಕೇರಳದ ಕೆಲವೆಡೆ ರಕ್ತಚಂದನ ಮರಗಳು ವಿರಳವಾಗಿ ಕಾಣಸಿಗುತ್ತವೆ.

ಕಡಿಮೆ ಸಮಯದಲ್ಲೇ ಎತ್ತರವಾಗಿ ಬೆಳೆಯುವ ಈ ರಕ್ತಚಂದನದ ತೊಗಟೆ ಕೆತ್ತಿದರೆ ಕೆಂಪು ಬಣ್ಣದ ದ್ರಾವಣ ಒಸರುತ್ತದೆ. ಔಷಧಿ, ಆಟಿಕೆ ಸಾಮಗ್ರಿಗಳು, ದೇವರ ವಿಗ್ರಹಗಳು, ಸಂಗೀತ ಪರಿಕರಗಳು, ಸುಗಂಧ ದ್ರವ್ಯ, ಸೌಂದರ್ಯವರ್ಧಕ ಹಾಗೂ ನಾನಾ ವಸ್ತುಗಳ ತಯಾರಿಕೆಯಲ್ಲಿ ಇದನ್ನು ಉಪಯೋಗಿಸುತ್ತಾರೆ.

ವಿಷಕಾರಿ ಕೀಟಗಳ ಕಡಿತ, ತಲೆನೋವು, ಕಾಲು ಊತ, ಬಿಕ್ಕಳಿಕೆ, ಕುಷ್ಠರೋಗ, ಅಲ್ಸರ್ ಸೇರಿ ನಾನಾ ರೋಗಗಳನ್ನು ನಿವಾರಿಸುವ ಶಕ್ತಿ ರಕ್ತಚಂದನದಲ್ಲಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ. ರಕ್ತಚಂದನದಿಂದ ತಯಾರಿಸಿದ ವಿಗ್ರಹಗಳನ್ನು ಚೀನಾ, ಜಪಾನ್, ಮಲೇಷಿಯಾ ಹಾಗೂ ನೇಪಾಳದ ಜನ ಪೂಜಿಸುತ್ತಾರೆ. ಬೌದ್ಧ ಧರ್ಮೀಯರಿಗೆ ರಕ್ತಚಂದನವು ಬುದ್ಧನ ಪ್ರತಿರೂಪವಾಗಿದೆ. ಆದರೆ, ಈ ಎಲ್ಲ ದೇಶಗಳಲ್ಲಿ ರಕ್ತಚಂದನ ದೊರೆಯುವುದಿಲ್ಲ. ಹೀಗಾಗಿ, ಅವರೆಲ್ಲ ಭಾರತವನ್ನೇ ಅವಲಂಬಿಸಿದ್ದಾರೆ.

ಬೆಂಗಳೂರಿನ ಮಾಫಿಯಾ ಬೆಂಬತ್ತಿ:  ರಕ್ತಚಂದನ ಸಾಗಣೆ ಮಾಫಿಯಾ ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಹೆಚ್ಚು ಸಕ್ರಿಯವಾಗಿದೆ ಎಂಬ ಮಾಹಿತಿ ಬೆನ್ನುಹತ್ತಿ ಹೊರಟ ನಮಗೆ, ಆ ಬಗ್ಗೆ ಮಾಹಿತಿ ನೀಡಿದ್ದು ಸಿಐಡಿ ಅರಣ್ಯ ವಿಭಾಗದ ಒಬ್ಬ ಅಧಿಕಾರಿ.

ಮಾಫಿಯಾದ ಕಿಂಗ್‌ಪಿನ್‌ಗಳ ಇತಿಹಾಸ ಬಿಚ್ಚಿಟ್ಟ ಅವರು, ‘ಕಟ್ಟಿಗೇನಹಳ್ಳಿಯ ಹಮೀದ್, ಫಯಾಜ್ ಷರೀಫ್ ಹಾಗೂ ರಿಯಾಜ್ ಬೆಂಗಳೂರಿನಲ್ಲಿ ಈ ಮಾಫಿಯಾ ನಡೆಸುತ್ತಿದ್ದಾರೆ. ಈ ಕಳ್ಳ ವ್ಯವಹಾರದಲ್ಲಿ ಆಗಾಗ ಸಣ್ಣ–ಪುಟ್ಟ ಹುಡುಗರು ಬಂದು ಹೋಗುತ್ತಾರೆ. ಕೋಲಾರ, ಬಾಗೇಪಲ್ಲಿ, ಚಿಂತಾಮಣಿ, ಆನೇಕಲ್, ಹೊಸಕೋಟೆ ಹಾಗೂ ಸುತ್ತಮುತ್ತಲ ಹಲವು ಗೋದಾಮುಗಳೇ ಅಕ್ರಮ ಸಂಗ್ರಹದ ತಾಣಗಳಾಗಿವೆ. ಕಟ್ಟಿಗೇನಹಳ್ಳಿಯಲ್ಲಿ ಫಯಾಜ್‌ಗೆ ಸೇರಿದ್ದ ಹಲವು ಗೋದಾಮುಗಳಿವೆ. ಅಲ್ಲಿ ಹಲವು ಬಾರಿ ದಾಳಿ ಸಹ ನಡೆದಿದೆ. ಅಷ್ಟಾದರೂ ಸಾಗಣೆ ಮಾತ್ರ ನಿಂತಿಲ್ಲ. ತೆರೆಮರೆಯಲ್ಲಿ ನಡೆಯುತ್ತಲೇ ಇದೆ’ ಎಂದರು.

ಆ ಅಧಿಕಾರಿ, ಮಾತಿನ ಮಧ್ಯೆ ಕಿಂಗ್‌ಪಿನ್‌ಗಳ ಕೈಯಲ್ಲಿ ಕೆಲಸ ಮಾಡುವ ಕೆಲ ಹುಡುಗರ ಹೆಸರು ಹೇಳಿದರು. ‘ಅವರನ್ನು ಭೇಟಿಯಾಗಬೇಕಲ್ಲ’ ಎಂದಿದ್ದಕ್ಕೆ, ‘ನಮ್ಮ ಸಿಬ್ಬಂದಿ ಅವರ ಬಳಿ ಮಾರುವೇಷದಲ್ಲಿ ಹೋಗುತ್ತಾರೆ. ಬೇಕಾದರೆ ನೀವು ಅವರ ಜತೆ ಹೋಗಿ ಬನ್ನಿ’ ಎಂದರು.

ಮರುದಿನವೇ ಸಿಐಡಿಯ ಸಿಬ್ಬಂದಿ ಜತೆಗೆ ಹೊರಟೆ. ಅದಕ್ಕೂ ಮುನ್ನವೇ ಮಾಫಿಯಾದ ಹುಡುಗನೊಬ್ಬನಿಗೆ ಕರೆ ಮಾಡಿದ್ದ ಸಿಬ್ಬಂದಿ, ‘ನಾನು ಮಂಗಳೂರಿನವ. ಸುಗಂಧ ದ್ರವ್ಯ ತಯಾರಿಸುವುದು ನನ್ನ ವೃತ್ತಿ. ನನಗೆ ರಕ್ತಚಂದನ ಬೇಕಿತ್ತು’ ಎಂದು ಹೇಳಿದ್ದರು. ಅದಕ್ಕೆ ಒಪ್ಪಿದ್ದ ಆ ಹುಡುಗ, ‘ಮೈಸೂರು ರಸ್ತೆಯ ಕುಂಬಳಗೋಡು ಹಾಗೂ ದೊಡ್ಡ ಆಲದಮರ ನಡುವಿನ ರಸ್ತೆಯ ಪಕ್ಕದಲ್ಲಿದ್ದ ಹೋಟೆಲೊಂದಕ್ಕೆ ಬನ್ನಿ’ ಎಂದಿದ್ದ.

ನಿಗದಿತ ಸಮಯಕ್ಕೆ ಹೋಟೆಲ್‌ ತಲುಪಿದೆವು. ಕೆಲ ನಿಮಿಷದಲ್ಲೇ ಅಲ್ಲಿಗೆ ಬಂದ ಆ ಹುಡುಗ, ‘ನೀವೇನಾ ಫೋನ್‌ ಮಾಡಿದ್ದು’ ಎಂದ. ‘ಹ್ಞೂಂ’ ಎನ್ನುತ್ತಿದ್ದಂತೆ ನಮ್ಮ ಪೂರ್ವಾಪರ ಕೇಳಲು ಆರಂಭಿಸಿದ. ಜತೆಗಿದ್ದ ಸಿಬ್ಬಂದಿ, (ಮಂಗಳೂರು ಭಾಷೆಯಲ್ಲಿ) ‘ಬೇಗ ರಕ್ತಚಂದನ ತೋರಿಸು, ನಾವು ವಾಪಸ್‌ ಹೋಗಬೇಕು’ ಎಂದರು.

ಕಿಸೆಯಲ್ಲಿದ್ದ ರಕ್ತಚಂದನ ತುಂಡೊಂದನ್ನು ಹೊರಗೆ ತೆಗೆದ ಹುಡುಗ, ‘ತಗೊಳ್ಳಿ. ಇದು ಸ್ಯಾಂಪಲ್. ಉಳಿದ ಮಾಲು ಗೋದಾಮಿನಲ್ಲಿದೆ. ಕೆ.ಜಿ.ಗೆ ₹15 ಸಾವಿರ. ಕಡಿಮೆ ಮಾಡುವುದಿಲ್ಲ. ನೀವು ಓಕೆ ಅಂದು, ದುಡ್ಡು ಕೊಟ್ಟರೆ ಮಾಲು ತಂದುಕೊಡುತ್ತೇನೆ. ಅದೇ, ವಿದೇಶದವರು ಬಂದರೆ ₹20 ಸಾವಿರದಿಂದ ₹35 ಸಾವಿರ ಕೇಳ್ತೀವಿ. ನೀವು ನಮ್ಮವರು ಎಂದಿದ್ದಕ್ಕೆ ಕಡಿಮೆ’ ಎಂದ. 

ಆಗ ಸಿಬ್ಬಂದಿ, ತುಂಡು ಪರಿಶೀಲಿಸಿ ರಕ್ತಚಂದನ ಎಂಬುದನ್ನು ಖಾತ್ರಿ ಮಾಡಿಕೊಂಡರು. ಬಳಿಕವೇ ₹15 ಸಾವಿರ ಆತನ ಕೈಗಿಟ್ಟು, ‘ಒಂದು ಕೆ.ಜಿ. ತಂದುಕೊಡು. ಚೆನ್ನಾಗಿದ್ದರೆ ಜಾಸ್ತಿ ತೆಗೆದುಕೊಳ್ಳುತ್ತೇವೆ’ ಎಂದರು. ಹಣ ಪಡೆದ ಹುಡುಗ, ‘ಇಲ್ಲಿ ಟೀ ಕುಡೀತಾ ಇರೀ, ಬರ್ತೇನಿ’ ಎಂದು ಹೇಳಿ ಬೈಕ್‌ ಹತ್ತಿ ಹೋದ. 15 ನಿಮಿಷದ ಬಳಿಕ ವಾಪಸ್‌ ಬಂದ ಆತ, ಪ್ಲಾಸ್ಟಿಕ್‌ ಚೀಲದಲ್ಲಿ ತಂದಿದ್ದ ರಕ್ತಚಂದನವನ್ನು ನಮ್ಮ ಕೈಗಿಟ್ಟ.

ಸಿಬ್ಬಂದಿ, ‘ನಮಗೆ 100 ಕೆ.ಜಿ, 200 ಕೆ.ಜಿ ರಕ್ತಚಂದನ ಬೇಕಾದರೆ ಮಂಗಳೂರಿಗೆ ತಂದುಕೊಡುತ್ತೀರಾ’ ಎಂದು ಪ್ರಶ್ನಿಸಿದರು. ಆಗ ಮಾಫಿಯಾದ ಸಾಗಣೆ ಜಾಲದ ಬಗ್ಗೆ ಬಾಯ್ಬಿಟ್ಟ ಆತ, ‘ತಂದುಕೊಡ್ತೇವಿ. ಅದರ ಸಾಗಣೆಗೆ ಪ್ರತ್ಯೇಕ ದರವಿದೆ. ನೀವು ಕೊಡಲು ಒಪ್ಪಿದರೆ, ಸುರಕ್ಷಿತವಾಗಿ ನೀವು ಹೇಳಿದ ಸ್ಥಳಕ್ಕೆ ತಲುಪಿಸುತ್ತೇವೆ’ ಎಂದ.

‘ಆಂಧ್ರಪ್ರದೇಶದಲ್ಲಿ ನಮ್ಮ ಜನರಿದ್ದಾರೆ. ಅಲ್ಲಿಂದಲೂ ಬೇಕಾದರೆ ನೇರವಾಗಿ ಮಂಗಳೂರಿಗೆ ಕಳುಹಿಸಿಕೊಡುತ್ತೇವೆ. ಈ ಹಿಂದೆ ಗೋವಾಕ್ಕೆ 50 ಕೆ.ಜಿ ರಕ್ತಚಂದನ ಕಳಿಸಿದ್ದೆ. ಆಂಧ್ರಪ್ರದೇಶದಿಂದ ಹೊಸಕೋಟೆಗೆ ಬಂದಿದ್ದ ಅದನ್ನು, ಅಕ್ಕಿ ಹೊಟ್ಟಿನಲ್ಲಿ ಮುಚ್ಚಿ ಲಾರಿಯಲ್ಲಿ ತೆಗೆದುಕೊಂಡು ಹೋಗಿದ್ದರು. ರಸ್ತೆಯ ಮಧ್ಯದಲ್ಲಿ ಪೊಲೀಸರು ಕೈ ಮಾಡುತ್ತಾರೆ. ಅವರೊಂದಿಗೆ ಹೆಚ್ಚಿಗೆ ವಾದ ಮಾಡದೆ, ಕೇಳಿದಷ್ಟು ಕೈ ಬಿಸಿ ಮಾಡಿದರೆ ಬಿಟ್ಟು ಕಳುಹಿಸುತ್ತಾರೆ’ ಎಂದ.

‘ಸ್ವಲ್ಪ ಮಂದಿ, ಹೊಸಕೋಟೆ ಹಾಗೂ ಸುತ್ತಮುತ್ತಲ ಗೋದಾಮುಗಳಲ್ಲಿ ರಕ್ತಚಂದನ ಸಂಗ್ರಹಿಸಿದ್ದಾರೆ. ಆ ಕಟ್ಟಿಗೇನಹಳ್ಳಿ ಇದೆಯಲ್ಲ, ಅಲ್ಲಂತೂ ಸಿಕ್ಕಾಪಟ್ಟೆ ಇದೆ. ಇತ್ತೀಚೆಗೆ ಅಲ್ಲಿಯ ಗೋದಾಮು ಮಾಲೀಕನೊಬ್ಬನ ಜತೆ ನಾನು ಜಗಳ ಮಾಡಿಕೊಂಡಿದ್ದೇನೆ. ಅಂದಿನಿಂದ ಆ ಕಡೆ ಹೋಗಿಲ್ಲ. ಈಗ ನಾವೇ, ಆಂಧ್ರಪ್ರದೇಶದ ಮಧ್ಯವರ್ತಿಯೊಬ್ಬರಿಂದ ರಕ್ತ ಚಂದನ ತರುತ್ತಿದ್ದೇವೆ. ಆತ ಎಲ್ಲಿಂದ ತಂದುಕೊಡುತ್ತಾನೆ ಎಂಬುದು ನಮಗಂತೂ ಗೊತ್ತಿಲ್ಲ. ಬೆಂಗಳೂರಿಗೆ ಬಂದ ನಂತರ, ರಸ್ತೆ ಮಾರ್ಗವಾಗಿ ಅದು ಮುಂಬೈ ಹಾಗೂ ಗೋವಾಕ್ಕೆ ಹೋಗುತ್ತದೆ. ಅಲ್ಲಿಂದ ದೋಣಿಯಲ್ಲಿ ದುಬೈಗೆ ಹೋಗುತ್ತದೆ. ಅನ್ಯಜಾತಿಯ ಕಟ್ಟಿಗೆ, ಅಕ್ಕಿ ಹೊಟ್ಟು, ಬೀಡಿ ಎಲೆಗಳನ್ನು ಸಾಗಿಸುವ ವಾಹನಗಳಲ್ಲಿ ಬಚ್ಚಿಟ್ಟು ತುಂಡುಗಳನ್ನು ರವಾನಿಸುತ್ತಾರೆ. ಲಾರಿ, ಕಾರು, ಟ್ರ್ಯಾಕ್ಟರ್‌ಗಳನ್ನು ಇದಕ್ಕೆ ಬಳಸುತ್ತಾರೆ. ನಿಮಗೆ ಯಾವ ಮಾರ್ಗ ಸೂಕ್ತವೋ ಅದನ್ನು ಆರಿಸಿಕೊಳ್ಳಬಹುದು’ ಎಂದ.

‘ಚೀನಾ, ಜಪಾನ್, ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬರುವ ಮಧ್ಯವರ್ತಿಗಳು, ರಕ್ತಚಂದನ ಖರೀದಿ ವ್ಯವಹಾರ ನಡೆಸುತ್ತಾರೆ. ಅರಣ್ಯ ಇಲಾಖೆ ಹಾಗೂ ಪೊಲೀಸ್ ಇಲಾಖೆಯ ಕೆಲವು ಸಿಬ್ಬಂದಿ ನಮ್ಮ ಜತೆಗಿದ್ದಾರೆ. ಅವರ ಸಹಾಯದಿಂದಲೂ ಸಾಗಣೆ ಸರಾಗವಾಗುತ್ತಿದೆ. ಆದರೆ, ಕೆಲ ಅಧಿಕಾರಿಗಳು ಖಡಕ್‌ ಇದ್ದಾರೆ. ಅಂಥವರ ಕೈಗೆ ನಮ್ಮ ಕೆಲ ಹುಡುಗರು ಸಿಕ್ಕಿಬಿದ್ದಿದ್ದರು.  ಈಗ ಎಚ್ಚರಿಕೆಯಿಂದ ದಂಧೆ ನಡೆಸುತ್ತಿದ್ದೇವೆ. ಯಾರನ್ನೂ ಬೇಗನೇ ನಂಬುವುದಿಲ್ಲ. ನೀವು... ಅವರಿಂದ ಪರಿಚಯ ಆಗಿದ್ದಕ್ಕೆ ನಂಬಿದ್ದೇನೆ’ ಎಂದು ಆ ಹುಡುಗ ಹೇಳಿದ. 

‘ನಿಮ್ಮ ಬಾಸ್‌ ಯಾರು? ಎಷ್ಟು ಜನ ಈ ಕೆಲಸ ಮಾಡುತ್ತೀರಾ?‘ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಲು ಒಪ್ಪದ ಆತ, ‘ನಿಮಗೆ ರಕ್ತಚಂದನ ಬೇಕಲ್ಲವೇ? ಅದನ್ನಷ್ಟೇ ತಗೊಂಡು ಹೋಗಿ. ಬೇರೆ ಯಾವ ವಿಷಯವನ್ನೂ ಕೇಳಬೇಡಿ. ಪೊಲೀಸರಿಗೆ ಗೊತ್ತಾದರೆ ಎಲ್ಲರೂ ಸೇರಿ ಜೈಲಿಗೆ ಹೋಗಬೇಕಾಗುತ್ತದೆ’ ಎಂದ. ಅದಾದ ಬಳಿಕ ಹೆಚ್ಚು ಮಾತನಾಡದ ಆತ, ಅಲ್ಲಿಂದ ಹೊರಟುಹೋದ. ನಾವು ಸಹ ವಾಪಸ್‌ ಬೆಂಗಳೂರಿನತ್ತ ಹೊರಟೆವು.

ದಾರಿಯುದ್ದಕ್ಕೂ ‘ಆ ಹುಡುಗ ಯಾರು?’ ಎಂಬ ಪ್ರಶ್ನೆ ಕಾಡುತ್ತಿತ್ತು. ಆ ಬಗ್ಗೆ ಸಿಬ್ಬಂದಿಯನ್ನು ವಿಚಾರಿಸಿದಾಗ, ‘ಆತ ಬಾಲು ಅಂತ. ಗ್ಯಾರೇಜ್‌ ಇಟ್ಟುಕೊಂಡಿದ್ದಾನೆ. ಇತ್ತೀಚೆಗೆ ನಾವು ಬಂಧಿಸಿದ್ದ ಕಿರಣ್‌ಕುಮಾರ್‌ ಎಂಬಾತನ ಸಹಚರ. ಕೆಂಗೇರಿ ಹೋಬಳಿಯ ಭೀಮನಕೊಪ್ಪಲು ಹೊಲದ ಮನೆಯಲ್ಲಿ ಅಕ್ರಮವಾಗಿ ರಕ್ತಚಂದನ ಸಂಗ್ರಹಿಸಿದ್ದಾರೆ. ಒಂದು ಬಾರಿ ದಾಳಿ ಮಾಡಿ, ಮಾಲು ಸಮೇತ ಆತನ ಸ್ನೇಹಿತರನ್ನು ಬಂಧಿಸಿದ್ದೆವು. ಜಾಮೀನಿನ ಮೇಲೆ ಹೊರಗೆ ಬಂದ ಕಿರಣ್‌ಕುಮಾರ್ ಹಾಗೂ ಸಹಚರರು, ಹಳೇ ದಂಧೆಯನ್ನು ಮುಂದುವರಿಸಿದ್ದಾರೆ. ಹೊಸ ಹುಡುಗರನ್ನು ಸಹ ಸೇರಿಸಿಕೊಂಡಿದ್ದಾರೆ’ ಎಂದರು. ಅದಾದ ನಂತರ ಬಾಲುನನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಆದರೆ, ಸಿಐಡಿ ಅರಣ್ಯ ವಿಭಾಗದ ಸಿಬ್ಬಂದಿಯು‌ ಆತನ ಮೇಲೆ ಕಣ್ಣಿಟ್ಟಿದ್ದಾರೆ. 

ಕಟ್ಟಿಗೇನಹಳ್ಳಿಯ ಹಮೀದ್ ಅಥವಾ ಫಯಾಜ್‌ ಇಬ್ಬರಲ್ಲಿ ಒಬ್ಬರನ್ನಾದರೂ ಭೇಟಿಯಾಗಬೇಕೆಂದು ಅವರ ವಿಳಾಸ ಕೇಳಲು ಮರುದಿನ ಸಿಐಡಿ ಅರಣ್ಯ ವಿಭಾಗದ ಕಚೇರಿಗೆ ಹೋಗಿದ್ದೆ. ಅಲ್ಲಿದ್ದ ಅಧಿಕಾರಿ, ‘ಅವರಿಬ್ಬರ ಪತ್ತೆಗೆ ಎರಡು ತಂಡ ಮಾಡಿದ್ದೇವೆ. ಅವರಿಬ್ಬರೂ ಸದ್ಯ ಹೊರ ರಾಜ್ಯ ಅಥವಾ ಹೊರ ದೇಶದಲ್ಲಿ ಇರುವ ಮಾಹಿತಿ ಇದೆ. ಹುಡುಗರ ಮೂಲಕ ಈಗ ಮಾಫಿಯಾ ನಡೆಸುತ್ತಿದ್ದಾರೆ. ಅವರು ನಿಮಗೆ ಮಾತನಾಡಲು ಸಿಗುವುದಿಲ್ಲ’ ಎಂದು ಹೇಳಿದರು. ಆದರೆ, ಫಯಾಜ್‌ನ ಸಹಚರನೊಬ್ಬನ ಮೊಬೈಲ್‌ ನಂಬರ್‌ ಅನ್ನು ಆ ಅಧಿಕಾರಿ ಕೊಟ್ಟರು. ಅದಕ್ಕೆ ಕರೆ ಮಾಡಿ, ‘ನಾನು ಮಂಗಳೂರಿನಿಂದ ಮಾತನಾಡುವುದು. ಹೊಸಕೋಟೆ ಸಾದಿಕ್‌ ನಿಮ್ಮ ನಂಬರ್‌ ಕೊಟ್ಟ. ನನಗೆ ರಕ್ತಚಂದನ ಬೇಕಿತ್ತು. ಎಲ್ಲಿ ಸಿಗುತ್ತೀರಾ ಹೇಳಿ’ ಎಂದೆ. ಉತ್ತರಿಸಲು ತಡವರಿಸಿದ ಆತ, ‘ಯಾವ ಸಾದಿಕ್‌. ನನಗೆ ಯಾರೂ ಗೊತ್ತಿಲ್ಲ. ನಾನೀಗ ರಕ್ತಚಂದನ ಮಾರುತ್ತಿಲ್ಲ’ ಎಂದು ಕರೆ ಕಡಿತಗೊಳಿಸಿದ. ಆ ಬಗ್ಗೆ ಅಧಿಕಾರಿಯನ್ನು ಕೇಳಿದಾಗ, ‘ಇತ್ತೀಚೆಗಷ್ಟೇ ಆತನನ್ನು ವಶಕ್ಕೆ ಪಡೆದು ಬೆಂಡೆತ್ತಿದ್ದೇವೆ. ಅದಕ್ಕೆ ಆತ ಸೈಲೆಂಟ್‌ ಆಗಿರಬಹುದು. ಅದಕ್ಕೆ ನಿಮ್ಮ ಜತೆ ಮಾತನಾಡುತ್ತಿಲ್ಲ’ ಎಂದರು. ಅದಾದ ನಂತರ ಸಿಐಡಿಯ ಕೆಲ ಬಾತ್ಮಿದಾರರ ಮೊಬೈಲ್‌ ನಂಬರ್‌ ಪಡೆದು, ಅವರಿಂದಲೂ ಮಾಹಿತಿ ಕಲೆಹಾಕಿದೆ. ಮಾಫಿಯಾದಲ್ಲಿರುವ  ಸಣ್ಣ ಹುಡುಗನಿಂದ ಹಿಡಿದು, ದೊಡ್ಡ ಡಾನ್‌ವರೆಗಿನ ವ್ಯಕ್ತಿಗಳ ಬಗ್ಗೆ ಅವರು ಮಾಹಿತಿ ನೀಡಿದರು.

ಮಾಫಿಯಾ ಸೂತ್ರಧಾರರು
ಅರಣ್ಯದಲ್ಲಿ ಕೂಲಿಯಾಗಿ ಕೆಲಸ ಶುರು ಮಾಡಿದವರು ಇಂದು ರಕ್ತಚಂದನ ಕಳ್ಳಸಾಗಣೆ ಮಾಫಿಯಾವನ್ನು ತಮ್ಮ ಹಿಡಿತದಲ್ಲಿಟ್ಟುಕೊಂಡಿದ್ದಾರೆ!
ಅಂತರರಾಷ್ಟ್ರೀಯ ಮಟ್ಟದಲ್ಲಿ ‘ರೆಡ್ ಡಾನ್‌ಗಳು’ ಎಂದೇ ಗುರುತಿಸಿಕೊಂಡಿರುವ ಅವರೆಲ್ಲ, ಮನುಷ್ಯರ ರಕ್ತ ಹೀರುವ ತಿಗಣೆಯಂತೆ ‘ಚಂದನ’ದ ‘ರಕ್ತ’ ಹೀರುತ್ತಿದ್ದಾರೆ.

2004ರಲ್ಲಿ ತಿರುಪತಿ ಹಾಗೂ ಚಿತ್ತೂರು ನಡುವಿನ ಮುಂಗಲಿಪಟ್ಟು ರೈಲ್ವೆ ನಿಲ್ದಾಣದಲ್ಲಿ ಮೊದಲ ಬಾರಿಗೆ ರಕ್ತಚಂದನ ಸಾಗಣೆ ಪ್ರಕರಣ ಪತ್ತೆಯಾಗಿತ್ತು. ಅದಾದ ನಂತರ ಚಿತ್ತೂರಿನಲ್ಲೇ 2008ರಲ್ಲಿ ₹1.40 ಕೋಟಿ ಹಾಗೂ 2012ರ ಅ. 24ರಂದು ₹6 ಲಕ್ಷ ಮೌಲ್ಯದ ರಕ್ತಚಂದನ ಸಿಕ್ಕಿತ್ತು.

ಈ ವೇಳೆ ಸಿಕ್ಕಿಬಿದ್ದಿದ್ದ ಐವರು ಮರಗಳ್ಳರು, ಮಾಫಿಯಾದ ಚರಿತ್ರೆಯನ್ನು ಬಿಚ್ಚಿಟ್ಟಿದ್ದರು. ಆ ಮಾಹಿತಿಯ ಬೆನ್ನು ಬಿದ್ದ ಚಿತ್ತೂರು ಪೊಲೀಸರು, ‘ರೆಡ್ ಡಾನ್’ಗಳ ಭೂಗತ ಚಟುವಟಿಕೆ ತಿಳಿದು ಬೆಚ್ಚಿಬಿದ್ದಿದ್ದರು. ಆ ನಂತರವೇ ತನಿಖಾ ಏಜೆನ್ಸಿಗಳ ಸಂಖ್ಯೆ ಹೆಚ್ಚಾಗಿ, ಎಲ್ಲರೂ ‘ರೆಡ್ ಡಾನ್‌’ಗಳ ಬೇಟೆಗೆ ತಂತ್ರ ರೂಪಿಸಿದರು. ಆದರೆ, ಇದುವರೆಗೂ ಆ ಡಾನ್‌ಗಳ ಕೃತ್ಯಗಳಿಗೆ ಕಡಿವಾಣ ಬಿದ್ದಿಲ್ಲ.

ದುಬೈನ ಸಾಹುಲ್ ಹಮೀದ್, ರಾಜುಭಯ್ಯಾ ಅಲಿಯಾಸ್ ಚಿತ್ತು, ಇರ್ಫಾನ್, ಶಂಕರ್, ಆಶ್ರಫ್, ಅಲಿಭಾಯ್, ಚೀನಾದ ಚೇ, ಲೇ, ಚೈ, ಚಸ್‍ಬರ್ಗ್, ಸಿಂಗಪುರದಲ್ಲಿರುವ ಚೆನ್ನೈ ಸುಬ್ರಹ್ಮಣ್ಯಂ, ಜವಾಹರ್ ಹುಸೇನ್, ಡೇವಿಡ್, ಸಂತನ್ ಮೆರಾನ್ ಅಲಿಯಾಸ್ ಚಂದನ್ ಮೆರಾನ್ ಹಾಗೂ ದೆಹಲಿಯ ಲಕ್ಷ್ಮಣ ಅಂತರರಾಷ್ಟ್ರೀಯ ಮಟ್ಟದಲ್ಲಿ ಇಂದಿಗೂ ರಾಜಾರೋಷವಾಗಿ ರಕ್ತಚಂದನ ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪ ಇದೆ.

ಇವರೆಲ್ಲ ತಮ್ಮ ಸಹಚರರ ಮೂಲಕ ದೇಶದಿಂದ ಅಕ್ರಮವಾಗಿ ರಕ್ತಚಂದನವನ್ನು ಹೊರ ದೇಶಗಳಿಗೆ ಸರಬರಾಜು ಮಾಡಿಸುತ್ತಿದ್ದಾರೆ. ಈ ಡಾನ್‌ಗಳ ಕೈ ಕೆಳಗೆ ಸಾವಿರಾರು ಏಜೆಂಟ್‌ಗಳು ಕೆಲಸ ಮಾಡುತ್ತಿದ್ದಾರೆ. ಚೀನಾದ ಹೀ ಯಂಗ್ ಪಿನ್, ಚೆನ್ನೈನ ಸಾದಿಕ್ ಮನ್ಸೂರ್, ಅಹಮದ್ ತಂಬಿ ಮೈದೀನ್ ಅಲಿಯಾಸ್ ಎಟಿಎಂ, ಕಂದಸ್ವಾಮಿ, ಪಾರ್ತಿಬನ್, ಲತೀಫ್, ದೆಹಲಿಯ ಹಸನ್‌ಭಾಯ್‌, ಕಾನ್ಪುರದ ನಫೀಜ್ ಹುಸೇನ್, ಜೈಪುರದ ಅಶೋಕ್‌ ಅಗರವಾಲ್, ಬೆಂಗಳೂರಿನ ಕಟ್ಟಿಗೇನಹಳ್ಳಿಯ ಹಮೀದ್, ಫಯಾಜ್ ಷರೀಫ್ ಹಾಗೂ ರಿಯಾಜ್, ‘ರೆಡ್ ಡಾನ್’ಗಳ ಬಲಗೈ ಬಂಟರಾಗಿ ಮಾಫಿಯಾ ನಡೆಸುತ್ತಿದ್ದಾರೆ ಎನ್ನಲಾಗಿದೆ. ಈ ಮಾಫಿಯಾದ ವಾರ್ಷಿಕ ವಹಿವಾಟು ₹3,000 ಕೋಟಿಗೂ ಹೆಚ್ಚು.

ಹೆಡೆಮುರಿ ಕಟ್ಟಿದ ತನಿಖಾ ಏಜೆನ್ಸಿಗಳು
2015ರಲ್ಲಿ ಬೆಂಗಳೂರಿನ ಫಯಾಜ್ ಷರೀಫ್‌ನನ್ನು ಬಂಧಿಸಿದ್ದ ಕಡಪ ಪೊಲೀಸರು, ಆತನಿಂದ ₹2 ಕೋಟಿ ಮೌಲ್ಯದ ರಕ್ತ ಚಂದನ ಜಪ್ತಿ ಮಾಡಿದ್ದರು. 2016ರಲ್ಲಿ ಕಂದಸ್ವಾಮಿ ಪಾರ್ತಿಬನ್, ₹1 ಕೋಟಿ ಮಾಲು ಸಮೇತ ಸಿಕ್ಕಿಬಿದ್ದಿದ್ದ.

2015ರ ಸೆಪ್ಟೆಂಬರ್‌ನಲ್ಲಿ ಹಸನ್‌ಭಾಯ್‌, ನಫೀಜ್ ಹುಸೇನ್, ಅಶೋಕ್‌ ಅಗರವಾಲ್‌ನನ್ನು ಬಂಧಿಸಿ, 11.3 ಟನ್ ರಕ್ತಚಂದನ ಜಪ್ತಿ ಮಾಡಲಾಗಿತ್ತು. ಇವರನ್ನು ಬಂಧಿಸಲು ಹೋಗಿದ್ದ ವೇಳೆ ಕರ್ನಾಟಕದ ವಿಜಯಪುರ ಬಳಿ ಪೊಲೀಸರ ವಾಹನ ಅಪಘಾತವಾಗಿತ್ತು. ಕಡಪ ಕಾನ್‌ಸ್ಟೆಬಲ್‌ ಪ್ರಸಾದ್ ನಾಯ್ಡು ಮೃತಪಟ್ಟಿದ್ದರು.

ವೃತ್ತಿಯಲ್ಲಿ ಟೈಲರ್ ಆಗಿದ್ದ ಹಸನ್‌ಭಾಯ್‌, ತನ್ನ ಗೂಡ್ಸ್ ವಾಹನದಲ್ಲಿ ರಕ್ತಚಂದನವನ್ನು ದೆಹಲಿಯ ಮೂಲಕ ನೇಪಾಳ ಮಾರ್ಗವಾಗಿ ಚೀನಾಕ್ಕೆ ಸಾಗಿಸುತ್ತಿದ್ದ. ರಕ್ತಚಂದನ ತುಂಡುಗಳ ಮೇಲೆ ಚಿಂದಿ ಬಟ್ಟೆಗಳ ಮೂಟೆಗಳನ್ನು ಇರಿಸಿ ಚೆಕ್‌ಪೋಸ್ಟ್‌ ಸಿಬ್ಬಂದಿಯ ಕಣ್ತಪ್ಪಿಸುತ್ತಿದ್ದ.

ನಫೀಜ್ ಹಾಗೂ ಅಶೋಕ್‌, ಸ್ವಂತ ಕಟ್ಟಿಗೆಯ ಗೋದಾಮು ಹೊಂದಿದ್ದು, ಅನ್ಯ ಜಾತಿಯ ಕಟ್ಟಿಗೆ ಜತೆ ಸೇರಿಸಿ ರಕ್ತಚಂದನವನ್ನು ಹೊರದೇಶಕ್ಕೆ ಕಳುಹಿಸುತ್ತಿದ್ದರು ಎನ್ನುತ್ತಾರೆ ಕಡಪ ಕಾರ್ಯಪಡೆ ಅಧಿಕಾರಿಗಳು.

ಗಂಗಿರೆಡ್ಡಿಯ ಬಂಟನಾದ ಅಹಮದ್ ತಂಬಿ ಮೈದೀನ್‌ನನ್ನು ಕಡಪ ಪೊಲೀಸರು 2017ರ ಆ.23ರಂದು ಬಂಧಿಸಿದ್ದರು. ‘ಮೈದಿನ್ ಎಕ್ಸ್‌ಫೋರ್ಟ್‌’ ಕಂಪೆನಿ ಸ್ಥಾಪಿಸಿದ್ದ ಆತ, 30 ವರ್ಷಗಳಿಂದ ಕಳ್ಳಸಾಗಣೆಯಲ್ಲಿ ತೊಡಗಿದ್ದ. ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಮರಗಳ್ಳರು ಕೊಟ್ಟ ಮಾಹಿತಿಯಂತೆ ಪೊಲೀಸರು ಕಾರ್ಯಾಚರಣೆ ನಡೆಸಿದಾಗ, ಆತನ ಕೃತ್ಯ ಬಯಲಾಗಿತ್ತು. ಆತನ ವಿರುದ್ಧ ಡಿಆರ್‌ಐನಲ್ಲಿ 5, ಜಾರಿ ನಿರ್ದೇಶನಾಲಯದಲ್ಲಿ 2 ಹಾಗೂ ಆಂಧ್ರಪ್ರದೇಶದಲ್ಲಿ 68 ಪ್ರಕರಣಗಳು ದಾಖಲಾಗಿವೆ.

‘ಅಂಡಮಾನ್‌ನ ಹೋಟೆಲೊಂದರಲ್ಲಿ ಕೆಲಸಕ್ಕಿದ್ದ ಆತ, ಅಲ್ಲಿಯೇ ಅಂತರರಾಷ್ಟ್ರೀಯ ಕಳ್ಳ ಸಾಗಣೆದಾರರ ಪರಿಚಯ ಮಾಡಿಕೊಂಡಿದ್ದ. ಅವರ ಮೂಲಕ ಗಂಗಿರೆಡ್ಡಿಯ ಸಲುಗೆ ಬೆಳೆಸಿದ್ದ. ಬಳಿಕ ಆತನ ನಿರ್ದೇಶನದಂತೆ ಹಾಂಕಾಂಗ್, ದುಬೈ, ಸಿಂಗಪುರ, ಮಲೇಷಿಯಾಕ್ಕೆ ರಕ್ತಚಂದನ ಕಳುಹಿಸುವ ಜವಾಬ್ದಾರಿ ವಹಿಸಿಕೊಂಡಿದ್ದ’ ಎಂದು ಕಡಪ ಎಸ್ಪಿ ಬಾಬುಜೀ ಅಟ್ಟದ್ ಮಾಹಿತಿ ಹಂಚಿಕೊಂಡರು.

‘30 ವರ್ಷದಲ್ಲಿ ಈತ ಕಳುಹಿಸಿದ್ದ ರಕ್ತಚಂದನದ ಪ್ರಮಾಣ ಬರೋಬ್ಬರಿ 3,000 ಟನ್. ಇದರಿಂದ ಬಂದ ಹಣದಲ್ಲಿ ಆತ, ಒಂದು ಎಕರೆ ಜಾಗದಲ್ಲಿ ಬಂಗಲೆ ಕಟ್ಟಿಸಿದ್ದಾನೆ. ಎರಡು ಬಿಎಂಡಬ್ಲ್ಯು ಕಾರು, ಎರಡು ವ್ಯಾನ್‌ಗಳನ್ನು ಖರೀದಿಸಿದ್ದಾನೆ’ ಎಂದು ಅವರು ಆತ ಮುಖವಾಡ ಬಿಚ್ಚಿಟ್ಟರು. 2015ರ ಮೇನಲ್ಲಿ ಚೀನಾದ ಹೀ ಯಂಗ್ ಪಿನ್ ಕಾಗಾ, ಚೆನ್ನೈನ ಲತೀಫ್‌ ಸಹ ಸೆರೆಸಿಕ್ಕಿದ್ದರು. 8.5 ಟನ್ ರಕ್ತಚಂದನ ಜಪ್ತಿ ಮಾಡಲಾಗಿತ್ತು. ಮುಂಬೈನ ಅಜಿತ್ ಸತಮ್ ಹಾಗೂ ದೀಪಕ್ ಜರೆ ಎಂಬುವರನ್ನು ಡಿಆರ್‌ಐ ಅಧಿಕಾರಿಗಳು ಬಂಧಿಸಿದ್ದರು. ಬೋಟ್ ಹೊಂದಿದ್ದ ಇವರು, ಮುಂಬೈನಿಂದ ಹೊರದೇಶಗಳಿಗೆ ರಕ್ತಚಂದನ ಕಳುಹಿಸುತ್ತಿದ್ದರು. ಇದಕ್ಕೆ ಬಂದರು ಅಧಿಕಾರಿಗಳ ಹೆಸರಿನ ನಕಲಿ ಮುದ್ರೆಗಳನ್ನು ಬಳಸುತ್ತಿದ್ದರು. ಇನ್ನು ರೆಡ್ ಡಾನ್ ಲಕ್ಷ್ಮಣನ ಪತ್ನಿ ಸಂಗೀತಾಳನ್ನು ಬಂಧಿಸಿದ್ದ ಆಂಧ್ರಪ್ರದೇಶ ಪೊಲೀಸರು,  ಬ್ಯಾಂಕ್ ಖಾತೆ, ಬ್ಯಾಂಕ್ ಲಾಕರ್ ಜಪ್ತಿ ಮಾಡಿದ್ದರು. ಗಗನಸಖಿಯಾಗಿರುವ ಆಕೆ ಇದುವರೆಗೂ ಪತಿ ಇರುವ ಜಾಗದ ಬಗ್ಗೆ ಬಾಯ್ಬಿಟ್ಟಿಲ್ಲ. ನಮ್ಮ ದೇಶದ ಆಗ್ರಾ, ಲಖನೌ, ಪಟ್ನಾದಲ್ಲಿ; ಮಣಿಪುರ, ಅಸ್ಸಾಂದಲ್ಲಿ; ನೆರೆಯ ದೇಶಗಳಾದ ಬರ್ಮಾ, ಬಾಂಗ್ಲಾದೇಶದಲ್ಲಿ  ಗೋದಾಮು ಹೊಂದಿರುವ ಲಕ್ಷ್ಮಣ, ರಕ್ತಚಂದನದ ಲೂಟಿ ನಿಲ್ಲಿಸಿಲ್ಲ.

ರಸ್ತೆ, ಸಮುದ್ರ ಮಾರ್ಗವಾಗಿ ಸಾಗಣೆ: ಎಷ್ಟೇ ತನಿಖಾ ಏಜೆನ್ಸಿಗಳಿದ್ದರೂ ಕಳ್ಳರು, ರಸ್ತೆ ಹಾಗೂ ಸಮುದ್ರ ಮಾರ್ಗದ ಮೂಲಕ ಹೊರದೇಶಗಳಿಗೆ ನಿರಂತರವಾಗಿ ರಕ್ತಚಂದನವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದಾರೆ. ಈ ಬಗ್ಗೆ ಡಿಆರ್‍ಐ ಬಾತ್ಮಿದಾರರೊಬ್ಬರು ಮಾಹಿತಿ ನೀಡಿದ್ದಾರೆ.

‘ಆಂಧ್ರಪ್ರದೇಶದ ಶೇಷಾಚಲಂ ಅರಣ್ಯ, ಚಿತ್ತೂರು, ಕರ್ನೂಲು, ನೆಲ್ಲೂರು ಹಾಗೂ ಪ್ರಕಾಶಂ ಜಿಲ್ಲೆಯ ಅರಣ್ಯ ಪ್ರದೇಶದಿಂದ ರಸ್ತೆ ಮಾರ್ಗವಾಗಿ ಮಿಜೋರಾಂ ಹಾಗೂ ನೇಪಾಳಕ್ಕೆ ರಕ್ತಚಂದನ ಕಳುಹಿಸಿ, ಅಲ್ಲಿಂದ ಚೀನಾಕ್ಕೆ ಸಾಗಿಸುತ್ತಾರೆ. ಮೀಜೊರಾಂನಿಂದ ಸಮುದ್ರದ ಮೂಲಕ ಜಪಾನ್‌ಗೂ ರವಾನಿಸಲಾಗುತ್ತದೆ. ಚೆನ್ನೈ ಬಂದರಿನ ಮೂಲಕ ಮಲೇಷಿಯಾ ಹಾಗೂ ಸಿಂಗಪುರಕ್ಕೆ ರವಾನೆಯಾಗುತ್ತದೆ. ಜತೆಗೆ ರಸ್ತೆ ಮಾರ್ಗವಾಗಿ ಬೆಂಗಳೂರು, ಮುಂಬೈ ತಲುಪುವ ರಕ್ತಚಂದನ, ಅಲ್ಲಿಂದ ಸಮುದ್ರದ ಮೂಲಕ ದುಬೈಗೆ ಸಾಗಣೆಯಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಭಯಾನಕ ಎನ್‌ಕೌಂಟರ್
ರಕ್ತಚಂದನ ಸಾಗಣೆ ಜಾಲ ಪತ್ತೆಗಾಗಿ ರಚನೆಯಾಗಿದ್ದ ಆಂಧ್ರಪ್ರದೇಶದ ‘ರಕ್ತಚಂದನ ಕಳ್ಳಸಾಗಣೆ ನಿಗ್ರಹ ದಳ’ ಸಿಬ್ಬಂದಿ, 2015ರಲ್ಲಿ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ಕಾರ್ಯಾಚರಣೆ ನಡೆಸಿ 20 ಮಂದಿ ಶಂಕಿತ ಮರಗಳ್ಳರನ್ನು ಎನ್‌ಕೌಂಟರ್‌ ಮಾಡಿದ್ದರು. ಮೃತರೆಲ್ಲ ತಮಿಳುನಾಡಿನ ಬುಡಕಟ್ಟು ಜನಾಂಗಕ್ಕೆ ಸೇರಿದ್ದವರಾಗಿದ್ದರು.

‘ಕೂಲಿಗಾಗಿ ಕಾಡಿಗೆ ಹೋಗಿದ್ದ ಅಮಾಯಕರನ್ನು ಪೊಲೀಸರು ಕೊಂದಿದ್ದಾರೆ’ ಎಂದು ತಮಿಳುನಾಡು ಸರ್ಕಾರ ವಾದಿಸಿತ್ತು. ಇದೇ ವಿಷಯವಾಗಿ ಎರಡು ರಾಜ್ಯಗಳ ನಡುವೆ ತಿಕ್ಕಾಟ ನಡೆದಿತ್ತು. ಮಾನವ ಹಕ್ಕುಗಳ ಆಯೋಗವೂ ವಿಚಾರಣೆ ನಡೆಸಿತ್ತು. ವಿಶೇಷ ದಳ ಅಧಿಕಾರಿಗಳು, ‘ಮರಗಳ್ಳರ ದಾಳಿಯಿಂದ ಪಾರಾಗಲು ಆತ್ಮರಕ್ಷಣೆಗಾಗಿ ಗುಂಡು ಹಾರಿಸಿದೆವು’ ಎಂದು ಉತ್ತರ ನೀಡಿದ್ದರು.

ಅದಕ್ಕೂ ಮುನ್ನ 2013ರ ಡಿಸೆಂಬರ್‌ನಲ್ಲಿ ಶೇಷಾಚಲಂ ಅರಣ್ಯ ಪ್ರದೇಶದಲ್ಲಿ ರಕ್ತಚಂದನ ಕಳ್ಳ ಸಾಗಣೆದಾರರು ಇಬ್ಬರು ಅರಣ್ಯ ಅಧಿಕಾರಿಗಳನ್ನು ಕೊಂದಿದ್ದರು. ಅದೇ ಕಾರಣಕ್ಕೆ 2014ರ ಚುನಾವಣೆ ವೇಳೆ ಚಂದ್ರಬಾಬು ನಾಯ್ಡು, ‘ರಕ್ತಚಂದನ ಕಳ್ಳಸಾಗಣೆ ತಡೆಯುವುದು ನನ್ನ ಗುರಿ’ ಎಂದು ಪ್ರಣಾಳಿಕೆಯಲ್ಲಿ ಘೋಷಿಸಿದ್ದರು.

ರಕ್ತಚಂದನದ ಎಣ್ಣೆಗೂ ಬೇಡಿಕೆ ಇದ್ದು, ಐದು ಗ್ರಾಂಗೆ ₹1,500ರಿಂದ ₹2,000 ಬೆಲೆ ಇದೆ. ಆಯುರ್ವೇದ, ಚೀನಿ ಹಾಗೂ ಟಿಬೆಟಿಯನ್ ವೈದ್ಯ ಪದ್ಧತಿಯಲ್ಲಿ ಇದನ್ನು ಬಳಸುತ್ತಾರೆ.

ಇದುವರೆಗೂ ತನಿಖಾ ಏಜೆನ್ಸಿಗಳಷ್ಟೆ ರಕ್ತಚಂದನ ಕಳ್ಳಸಾಗಣೆ ಬಗ್ಗೆ ಹೆಚ್ಚು ಪ್ರಕರಣಗಳನ್ನು ದಾಖಲಿಸಿಕೊಂಡಿವೆ. ಆದರೆ, ಅರಣ್ಯ ಇಲಾಖೆಯ ಅಧಿಕಾರಿಗಳು ಮೌನ ವಹಿಸಿದ್ದಾರೆ. ಆಂಧ್ರಪ್ರದೇಶ, ತಮಿಳುನಾಡು, ಕೇರಳ ರಾಜ್ಯಗಳ ಪೊಲೀಸರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿದರೆ ಮಾತ್ರ ಈ ಮಾಫಿಯಾವನ್ನು ಬುಡಸಮೇತ ಕಿತ್ತುಹಾಕಬಹುದು

ಖತರ್‌ನಾಕ್‌ ವ್ಯಕ್ತಿ ಗಂಗಿರೆಡ್ಡಿ
ರಕ್ತಚಂದನ ಮಾಫಿಯಾವನ್ನು ಒಬ್ಬಂಟಿಯಾಗಿ ಆಳಿದ್ದು ಕೊಲ್ಲಂ ಗಂಗಿರೆಡ್ಡಿ. ಪೆಟ್ರೋಲ್ ಬಂಕ್, ನೂರಾರು ಎಕರೆ ಜಮೀನು, ಮೂರು ಅಂತಸ್ತಿನ ಬಂಗಲೆ ಸೇರಿ ಆತನ ಹೆಸರಿನಲ್ಲಿ ₹ 900 ಕೋಟಿ ಅಕ್ರಮ ಆಸ್ತಿ ಇರುವುದನ್ನು ಇ.ಡಿ ಅಧಿಕಾರಿಗಳು ಪತ್ತೆ ಮಾಡಿದ್ದಾರೆ. ಆತನ ವಿರುದ್ಧ 50ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ.

‘ಕಡಪ ಜಿಲ್ಲೆಯ ಪುಲ್ಲಮಪೇಟೆಯ ವಾತಲೂರಿನ ಗಂಗಿರೆಡ್ಡಿ, ಎಸ್ಸೆಸ್ಸೆಲ್ಸಿಗೆ ಶಾಲೆ ಬಿಟ್ಟವ. ಊರಿನಲ್ಲಿ ಸಂಬಂಧಿ ಮಹಿಳೆಯೊಬ್ಬರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಆತನನ್ನು ಊರಿನ ಜನ ಗಡಿಪಾರು ಮಾಡಿದ್ದರು. ಆನಂತರ ನಕ್ಸಲ್ ಚಳವಳಿಯಲ್ಲಿ ಗುರುತಿಸಿಕೊಂಡ ಆತ, ಬಾಂಬ್ ತಯಾರಿಕೆಯಲ್ಲಿ ಪರಿಣತಿ ಪಡೆದ. 1994ರಲ್ಲಿ ಹೈದರಾಬಾದ್‌ನ ಮಹಾವೀರ ಆಸ್ಪತ್ರೆ ಸಮೀಪ ಬಾಂಬ್ ಸ್ಫೋಟಗೊಂಡು ರೌಡಿ ಸುಬ್ಬಾರೆಡ್ಡಿ ಹತ್ಯೆಯಾದ ಪ್ರಕರಣದಲ್ಲಿ ಈತ ಪ್ರಮುಖ ಆರೋಪಿ.

ಈ ಪ್ರಕರಣದಲ್ಲಿ ಜೈಲಿಗೆ ಹೋಗಿದ್ದ ಆತನಿಗೆ ರಕ್ತಚಂದನದ ಕುಖ್ಯಾತ ಕಳ್ಳ ವೆಂಕಟರಮಣ ರಾಜು ಪರಿಚಯವಾದ. ಆತನೇ ಗಂಗಿರೆಡ್ಡಿಯನ್ನು ದುಬೈನ ಡಾನ್ ಸಾಹುಲ್ ಹಮೀದ್‌ಗೆ ಪರಿಚಯಿಸಿದ. ಬಳಿಕ ರಕ್ತಚಂದನದ ಬಗ್ಗೆ ತಿಳಿದುಕೊಂಡ ಗಂಗಿರೆಡ್ಡಿ, 2002ರಿಂದ ಲೂಟಿಗೆ ಇಳಿದ.

ಚಿತ್ತೂರು, ನೆಲ್ಲೂರು, ಕರ್ನೂಲು ಹಾಗೂ ಕಡಪ ಜಿಲ್ಲೆಯಲ್ಲಿ ಸಾಮ್ರಾಜ್ಯ ಕಟ್ಟಿಕೊಂಡು ಮೆರೆಯಲಾರಂಭಿಸಿದ್ದ. ಆತನ ಉಪಟಳ ಹೆಚ್ಚಾದಾಗ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ರಕ್ತಚಂದನ ರಕ್ಷಣೆಗೆ ವಿಶೇಷ ಕಾರ್ಯಪಡೆ  ರಚಿಸಿದ್ದರು. ಅದಾದ ಮರುವರ್ಷ ಅಲಿಪಿರಿಯಲ್ಲಿ ಬಾಂಬ್ ಸ್ಫೋಟಿಸಿ ಚಂದ್ರಬಾಬು ನಾಯ್ಡು ಅವರ ಕೊಲೆಗೆ ಯತ್ನಿಸಲಾಗಿತ್ತು. ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾದ ಗಂಗಿರೆಡ್ಡಿ, ತಲೆಮರೆಸಿಕೊಂಡು ಭೂಗತವಾಗಿ ರಕ್ತಚಂದನ ಮಾಫಿಯಾ ನಡೆಸುತ್ತಿದ್ದ.

2014ರ ಏಪ್ರಿಲ್ 5ರಂದು ಆಂಧ್ರಪ್ರದೇಶ ಪೊಲೀಸರಿಗೆ ಆತ ಸಿಕ್ಕಿಬಿದ್ದಿದ್ದ. ಹೈಕೋರ್ಟ್ ಜಾಮೀನು ಮೇಲೆ ಹೊರಬಂದಿದ್ದ ಆತ, ಅದೇ ವರ್ಷ ಮೇ 16ರಂದು ಗ್ರಾಮ ತೊರೆದು, ದುಬೈಗೆ ಹೋಗಿದ್ದ. ಕೆಲ ತಿಂಗಳ ಬಳಿಕ, ಅಲ್ಲಿಂದ ಮಾರಿಷಸ್‌ಗೆ ವಾಸ ಬದಲಾಯಿಸಿದ್ದ. ನಕಲಿ ಪಾಸ್‌ಪೋರ್ಟ್‌ ಹೊಂದಿದ್ದಕ್ಕಾಗಿ ಮಾರಿಷಸ್ ಇಂಟರ್‌ಪೋಲ್‌ ಪೊಲೀಸರು, 2015 ನವೆಂಬರ್ 13ರಂದು ಆತನನ್ನು ಸೆರೆಹಿಡಿದಿದ್ದರು. ಈ ವಿಚಾರ ತಿಳಿದ ಆಂಧ್ರಪ್ರದೇಶದ ಸಿಐಡಿ ಮುಖ್ಯಸ್ಥ ದ್ವಾರಕತಿರುಮಲರಾವ್ ನೇತೃತ್ವದ ತಂಡ, ಆತನನ್ನು ವಶಕ್ಕೆ ಪಡೆದು ಆಂಧ್ರಪ್ರದೇಶಕ್ಕೆ ಕರೆತಂದಿತ್ತು.

‘ಕಮಿಷನ್ ಆಸೆಗಾಗಿ ಗಂಗಿರೆಡ್ಡಿ ಜತೆ ಆಂಧ್ರಪ್ರದೇಶ ಹಾಗೂ ತಮಿಳುನಾಡಿನ ಹಲವು ನಟರು, ರಾಜಕಾರಣಿಗಳು ಷಾಮೀಲಾಗಿದ್ದಾರೆ. ಕೂಲಿ ಆಸೆ ತೋರಿಸಿ ಅಮಾಯಕ ಬಡವರನ್ನು ಮರ ಕತ್ತರಿಸಲು ಹಚ್ಚಲಾಗುತ್ತಿದೆ’ ಎಂದು ಅಧಿಕಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT