ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

2ಜಿ ತರಂಗಾಂತರ ಹಂಚಿಕೆ ಹಗರಣ: ಪ್ರಾಸಿಕ್ಯೂಷನ್ ವೈಫಲ್ಯ

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಸ್ವಾತಂತ್ರ್ಯಾನಂತರ ಕಾಲದ ಅತಿ ದೊಡ್ಡ ಹಗರಣ ಎಂದು ಹೇಳಲಾದ 2ಜಿ ತರಂಗಾಂತರ ಹಂಚಿಕೆ ಪ್ರಕರಣದ ಎಲ್ಲಾ 17 ಆರೋಪಿಗಳನ್ನು ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆ ಮಾಡಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸನಾತ್ಮಕವಾಗಿ ಒಪ್ಪಿತವಾಗಬಹುದಾದ ಯಾವುದೇ ಸಾಕ್ಷ್ಯ ಇಲ್ಲ ಎಂದು 1552 ಪುಟದ ತೀರ್ಪಿನಲ್ಲಿ ಹೇಳಲಾಗಿದೆ. ‘ಆರೋಪಿಗಳ ವಿರುದ್ಧ ಅತ್ಯಂತ ಎಚ್ಚರಿಕೆಯಿಂದ ಸಲ್ಲಿಸಲಾದ ಆರೋಪಪಟ್ಟಿಯ ಯಾವುದೇ ಆರೋಪವನ್ನು ಸಾಬೀತು ಮಾಡುವಲ್ಲಿ ಪ್ರಾಸಿಕ್ಯೂಷನ್ ದಯನೀಯವಾಗಿ ವಿಫಲವಾಗಿದೆ ಎಂದು ಹೇಳಲು ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದು ನ್ಯಾಯಧೀಶ ಒ.ಪಿ.ಸೈನಿ ಹೇಳಿದ್ದಾರೆ.

ಸಿಬಿಐ ತನಿಖೆ ಕಳಪೆ ಮಟ್ಟದ್ದಾಗಿದ್ದು ‘ವದಂತಿ, ಹರಟೆ ಅಥವಾ ಊಹಾಪೋಹದ ಮಟ್ಟದಲ್ಲಿ ಉಳಿದಿದೆ’ ಎಂದು ಪ್ರಾಸಿಕ್ಯೂಷನ್ ವಾದವನ್ನು ಕಟುಮಾತುಗಳಲ್ಲಿ ಕೋರ್ಟ್ ತಳ್ಳಿಹಾಕಿದೆ. ನ್ಯಾಯಾಂಗದ ಕಲಾಪಗಳಲ್ಲಿ ಸಾರ್ವಜನಿಕ ಗ್ರಹಿಕೆಗಳಿಗೆ ಸ್ಥಾನವಿಲ್ಲ ಎಂದು ನ್ಯಾಯಾಧೀಶರು ಹೇಳಿರುವುದು ಮುಖ್ಯವಾದದ್ದು. ಪ್ರಾಸಿಕ್ಯೂಷನ್‌ನ ಈ ವೈಫಲ್ಯವನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇದು ನಮ್ಮ ಸಾರ್ವಜನಿಕ ಸಂಸ್ಥೆಗಳಲ್ಲಿನ ದೋಷಗಳನನ್ನು ಎತ್ತಿಹೇಳುತ್ತದೆ. ಸಿಬಿಐ ಆಡಳಿತ ನಿರ್ವಹಣೆಯೂ ಪರಿಶೀಲನಾರ್ಹ. ಈ ಹಗರಣ ಸೃಷ್ಟಿಸಿದ ರಾಜಕೀಯ ಬಿರುಗಾಳಿಯನ್ನು ಮರೆಯುವಂತಿಲ್ಲ. ಅಣ್ಣಾ ಹಜಾರೆ ನೇತೃತ್ವದ ಭ್ರಷ್ಟಾಚಾರ ವಿರೋಧಿ ಆಂದೋಲನಕ್ಕೂ ಇದು ನಾಂದಿಯಾಯಿತು. ನಂತರದ ವಿದ್ಯಮಾನ ಗೊತ್ತಿರುವಂತಹದ್ದೇ. 2014ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದ ಸ್ಥಾನಗಳ ಸಂಖ್ಯೆ ಕೇವಲ 44ಕ್ಕೆ ಕುಸಿಯಿತು.

ಹಗರಣವೇ ಇಲ್ಲದಿದ್ದಲ್ಲಿ 2012ರಲ್ಲಿ ಸುಪ್ರೀಂ ಕೋರ್ಟ್ 122 ಟೆಲಿಕಾಂ ಲೈಸೆನ್ಸ್‌ಗಳನ್ನು ಏಕೆ ರದ್ದು ಮಾಡಿತು ಎಂಬುದು ಇಲ್ಲಿ ಪ್ರಶ್ನೆ. 2008ರಲ್ಲಿ ಲೈಸೆನ್ಸ್‌ಗಳು ಹಾಗೂ ತರಂಗಾಂತರ ಹಂಚಿಕೆ ಮಾಡಿದ ವಿಧಾನದಲ್ಲಿ ಅಕ್ರಮಗಳಾಗಿವೆ ಎಂಬುದನ್ನು ತೋರಿಸಲು ಸಾಕಷ್ಟು ಪುರಾವೆಗಳಿವೆ ಎಂದು ಸುಪ್ರೀಂ ಕೋರ್ಟ್ ನಿರ್ಧರಿಸಿತ್ತು. ಪ್ರಮುಖ ರಾಷ್ಟ್ರೀಯ ಸಂಪನ್ಮೂಲವಾದ ತರಂಗಾಂತರ ಹಂಚಿಕೆಯಲ್ಲಿ ಸರಿಯಾದ ಯೋಜನೆಯೇ ಇರದಿರುವಂತಹ ಆಡಳಿತಾತ್ಮಕ ದೋಷಗಳನ್ನು ಸುಪ್ರೀಂಕೋರ್ಟ್ ಗಮನಕ್ಕೆ ತೆಗೆದುಕೊಂಡಿತ್ತು. ಸುಪ್ರೀಂ ಕೋರ್ಟ್‌ನ ತೀರ್ಪು, ಬೊಕ್ಕಸಕ್ಕೆ ನಷ್ಟ ಉಂಟು ಮಾಡುವ ಕ್ರಿಮಿನಲ್ ಸಂಚಿಗೆ ಸಂಬಂಧಪಟ್ಟಿರಲಿಲ್ಲ ಎಂಬುದನ್ನು ಗಮನಿಸಬೇಕು. ಆಡಳಿತಾತ್ಮಕ ನೀತಿ ನಿರ್ಧಾರಗಳಲ್ಲಿನ ತಪ್ಪುಗಳು ಹಾಗೂ ಅಕ್ರಮಗಳು, ಕ್ರಿಮಿನಲ್ ನ್ಯಾಯಾಲಯದ ದೃಷ್ಟಿಕೋನದಲ್ಲಿ ಹಣ ವಂಚಿಸುವ ಹಗರಣಗಳಾಗಬೇಕೆಂದೇನೂ ಇಲ್ಲ ಎಂಬುದು ಈ ತೀರ್ಪಿನಲ್ಲಿ ಸ್ಪಷ್ಟವಾಗಿದೆ. ಈ ತೀರ್ಪಿನಲ್ಲಿ ಮಹತ್ವದ ಪಾಠವೂ ಇದೆ. ಸಾರ್ವಜನಿಕ ಸಂಸ್ಥೆಗಳ ಮುಖ್ಯಸ್ಥರು ಗಮನಿಸಬೇಕಾದಂತಹ ಅಂಶ ಇದು.

ತರಂಗಾಂತರಗಳನ್ನು ಹರಾಜು ಹಾಕದ ಪರಿಣಾಮವಾಗಿ ಬೊಕ್ಕಸಕ್ಕೆ ₹1,76 ಲಕ್ಷ ಕೋಟಿ ನಷ್ಟವಾಗಿದೆ ಎಂಬಂಥ ಮಾಜಿ ಮಹಾಲೇಖಪಾಲ ವಿನೋದ್ ರಾಯ್ ಅವರ ತರ್ಕ, ರಾಷ್ಟ್ರದಲ್ಲಿ ಭಾರಿ ಹಗರಣವಾಗಿರುವ ಕಲ್ಪನೆಯನ್ನು ರಾಷ್ಟ್ರದ ಪ್ರಜ್ಞೆಯಲ್ಲಿ ಬಿತ್ತಿತ್ತು. ಇದು ಈಗ ಹೆಚ್ಚು ಗಮನ ಸೆಳೆದುಕೊಳ್ಳುವ ಸಂಗತಿಯಾಗಿದೆ. ರಾಷ್ಟ್ರ ರಾಜಕಾರಣದಲ್ಲಿ ಹಲವು ಏಳುಬೀಳುಗಳು ಹಾಗೂ ಅಲ್ಲೋಲಕಲ್ಲೋಲಗಳಿಗೆ ಇದು ಕಾರಣವಾದದ್ದು ಇತಿಹಾಸ. ಜಾಗತಿಕವಾಗಿ ರಾಷ್ಟ್ರದ ಪ್ರತಿಷ್ಠೆಗೂ ಕುಂದುಂಟಾಗಿ ಹಹಹೂಡಿಕೆಗಳಿಗೆ ಹಿನ್ನಡೆಯಾಗಿದ್ದು ಕಹಿ ವಾಸ್ತವ. ಈ ಗ ವಿಶೇಷ ನ್ಯಾಯಾಲಯದ ಈ ತೀರ್ಪಿನ ರಾಜಕೀಯ ಪರಿಣಾಮಗಳ ಬಗ್ಗೆಯೂ ಈಗ ಚರ್ಚೆ ಶುರುವಾಗಿದೆ. ಯುಪಿಎ ಮತ್ತು ಎನ್‌ಡಿಎ ಮಧ್ಯೆ ಸಹಜವಾಗಿಯೇ ಮಾತಿನ ಚಕಮಕಿ ಶುರುವಾಗಿದೆ. ಬಹುಶಃ 2019ರವರೆಗೂ ರಾಜಕಾರಣಿಗಳ ನಡುವೆ ಈ ಮಾತಿನ ಚಕಮಕಿಗಳು ತೀವ್ರವಾಗಲಿವೆ. ಈ ಮಧ್ಯೆ ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಸಿಬಿಐ ಮತ್ತು ಜಾರಿ ನಿರ್ದೇಶನಾಲಯ ಮುಂದಾಗಿವೆ. ಹೀಗಿದ್ದೂ ಒಂದು ಪ್ರಶ್ನೆಯಂತೂ ಉಳಿಯುತ್ತದೆ. ನಮ್ಮ ರಾಜಕೀಯ ನಾಯಕರು ತಾವು ಪ್ರತಿಪಾದಿಸಿಕೊಳ್ಳುವಷ್ಟು ಶುದ್ಧಹಸ್ತರಾಗಿದ್ದಾರೆಯೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT