ರಾಮಾಯಣ ರಸಯಾನ 19

ಕವಿಯ ಕಣ್ಣಲ್ಲಿ ರಾಮಾಯಣ

ವಾಲ್ಮೀಕಿ ನಾರದರಿಂದ ಕೇಳಿದ್ದು ‘ಧರ್ಮಾರ್ಥಸಹಿತವಾದ ರಾಮಚರಿತೆಯನ್ನು’; ಹೀಗೆ ಕೇಳಿದ ಅವನ ಪ್ರತಿಭೆಯ ಕಣ್ಣಿಗೆ ರಾಮಾಯಣವು ಗೋಚರಿಸಿದ್ದು ಕೂಡ ಕವಿ ‘ಧರ್ಮಾತ್ಮ’ನಾದುದರಿಂದಲೇ. ಮಾತ್ರವಲ್ಲ, ಈ ಕಾವ್ಯವು ಒದಗಿಸುವ ಫಲವೂ ಕೂಡ ‘ಧರ್ಮಾರ್ಥ’ವೇ...

ಚಿತ್ರ: ಬಿ.ಕೆ.ಎಸ್. ವರ್ಮಾ

ಇಡಿಯ ರಾಮಾಯಣದ ಕಥೆಯೆಲ್ಲವೂ ಕವಿ ವಾಲ್ಮೀಕಿಗೆ ಗೋಚರಿಸಿತು. ‘ಬಾಲಕಾಂಡ’ದ ಮೂರನೆಯ ಸರ್ಗದಲ್ಲಿ ಇಡಿಯ ರಾಮಾಯಣ ಮತ್ತೊಮ್ಮೆ ವರ್ಣಿತವಾಗಿದೆ, ಮೂವತ್ತೇಳು ಶ್ಲೋಕಗಳಲ್ಲಿ. ರಾಮಾಯಣದ ಪ್ರಮುಖ ಘಟನೆಗಳನ್ನು ಸಂಗ್ರಹವಾಗಿ ನಿರೂಪಿಸಲಾಗಿದೆ. ಈಗಾಗಲೇ ನಾರದರಿಂದ ರಾಮಾಯಣವನ್ನು ವಾಲ್ಮೀಕಿ ಕೇಳಿಯಾಗಿದೆ; ಈಗ ಕೇಳಿದ ಅದೇ ಕಥೆಯನ್ನು ಕವಿ ಹೇಗೆ ತನ್ನಲ್ಲಿ ಸಾಕ್ಷಾತ್ಕರಿಸಿಕೊಂಡು ಅದನ್ನು ಕಾವ್ಯವಾಗಿಸಿದ ಎಂದು ಇಲ್ಲಿ ಹೇಳಲಾಗಿದೆ. ಒಂದೊಂದು ಪಾತ್ರದ ಎಲ್ಲ ಚಲನವಲನಗಳೂ ವಾಲ್ಮೀಕಿಯ ಕಣ್ಣಿಗೆ ಗೋಚರವಾಗಿವೆ. ಒಬ್ಬೊಬ್ಬರ ವ್ಯಕ್ತಿತ್ವದ ಸಮಗ್ರ ವಿವರವೂ ಅವನಿಗೆ ದಕ್ಕಿದೆ. ‘ಅವರು ನಕ್ಕದ್ದು, ಮಾತನಾಡಿದ್ದು, ಹೋದದ್ದು, ಮಾಡಿದ್ದು – ಇವೆಲ್ಲವೂ ಯಥಾವತ್ತಾಗಿ ಕಂಡಿದೆ’ (‘ಹಸಿತಂ ಭಾಷಿತಂ ಚೈವ ಗತಿರ್ಯಾ ಯಚ್ಚ ಚೇಷ್ಟಿತಮ್‌ | ತತ್ಸರ್ವಂ ಧರ್ಮವೀರ್ಯೇಣ ಯಥಾವತ್‌ ಸಂಪ್ರಪಶ್ಯತಿ ||).

‘ರವಿ ಕಾಣದ್ದನ್ನು ಕವಿ ಕಂಡ’ ಎಂಬ ಮಾತು ನಮ್ಮ ಸಾಮಾನ್ಯ ಆಡುನುಡಿಯಲ್ಲೂ ಬಳಕೆಯಲ್ಲಿದೆಯಷ್ಟೆ. ಸೂರ್ಯನನ್ನು ಜಗತ್ತಿನ ಕಣ್ಣು – ಎಂದು ಕರೆಯಲಾಗಿದೆ. ಆದರೆ ಅವನ ಕಣ್ಣಿಗೂ ಕಾಣದ ಲೋಕವಿವರಗಳೂ ವ್ಯಕ್ತಿವಿವರಗಳೂ ಕವಿಯ ಕಣ್ಣಿಗೆ ಕಾಣಿಸುತ್ತವೆ. ಕವಿಯದು ಪ್ರತಿಭಾಚಕ್ಷು; ಅದು ಕಾಣಿಸುವ ಲೋಕಜಗತ್ತು ಸೂರ್ಯನ ಬೆಳಕು ಕಾಣಿಸುವ ಪ್ರಪಂಚಕ್ಕಿಂತಲೂ ವಿಶಿಷ್ಟವಾದುದೂ ವಿಲಕ್ಷಣವಾದುದೂ ಆಗಿರುತ್ತದೆ. ಆದರೆ ಕವಿಯು ಈ ಪ್ರತಿಭಾಪ್ರಕಾಶವನ್ನು ದಕ್ಕಿಸಿಕೊಳ್ಳಲು ಅವನು ಪ್ರಯತ್ನಿಸಬೇಕಾಗುತ್ತದೆ. ಈ ಪ್ರಯತ್ನವನ್ನು ತಪಸ್ಸು ಎನ್ನಿ, ಸಾಧನೆ ಎನ್ನಿ, ಸಿದ್ಧತೆ ಎನ್ನಿ – ಅಂತೂ ಅದಕ್ಕಾಗಿ ಪರಿಶ್ರಮವನ್ನು ಮಾಡಲೇಬೇಕು. ರಾಮಾಯಣ ಇದನ್ನೇ ‘ಯೋಗಸ್ಥಿತಿ’ ಎಂದು ಒಕ್ಕಣಿಸಿದೆ (ತತಃ ಪಶ್ಯತಿ ಧರ್ಮಾತ್ಮಾ ತತ್‌ ಸರ್ವಂ ಯೋಗಮಾಸ್ಥಿತಃ). ಮಹಿಮಭಟ್ಟನ ‘ವ್ಯಕ್ತಿವಿವೇಕ’ದ ಪದ್ಯವೊಂದು ಕವಿಯ ‘ಅಲೌಕಿಕ’ ಪ್ರತಿಭಾಶಕ್ತಿಯನ್ನು ಹೀಗೆ ವ್ಯಾಖ್ಯಾನಿಸಿದೆ:

ರಸಾನುಗುಣಶಬ್ದಾರ್ಥಚಿಂತಾಸ್ತಿಮಿತಚೇತಸಃ |

ಕ್ಷಣಂ ಸ್ವರೂಪಸ್ಪರ್ಶೋತ್ಥಾ ಪ್ರಜ್ಞೈವ ಪ್ರತಿಭಾ ಕವೇಃ ||

ಸಾ ಹಿ ಚಕ್ಷುರ್ಭಗವತಃ ತೃತೀಯಮಿತಿ ಗೀಯತೇ |

ಯೇನ ಸಾಕ್ಷತ್ಕರೋತ್ಯೇಷ ಭಾವಾಂಸ್ತ್ರೈಕಾಲ್ಯವರ್ತಿನಃ ||

‘(ತನ್ನಲ್ಲಿ ತುಂಬಿರುವ) ರಸಕ್ಕೆ ಅನುಗುಣವಾದ ಶಬ್ದಾರ್ಥಗಳನ್ನು ಕುರಿತ ಚಿಂತನೆಯಲ್ಲಿ ಕವಿಯ ಚೇತಸ್ಸು ನಿಶ್ಚಲವಾಗಿರುವಾಗ, ವಸ್ತುವಿನ ನಿಜಸ್ವರೂಪವನ್ನು ಮುಟ್ಟಿದ ಪ್ರಜ್ಞೆ ಅವನಲ್ಲಿ ಥಟ್ಟನೆ ಹೊಮ್ಮುತ್ತದೆ. ಇದೇ ಕವಿಯ ಪ್ರತಿಭೆ. ಇದನ್ನು ಪರಮೇಶ್ವರನ ಮೂರನೆಯ ಕಣ್ಣೆಂದೇ ಕೀರ್ತಿಸುತ್ತಾರೆ. ಏಕೆಂದರೆ, ಅವನು ಇದರ ಮೂಲಕ ತ್ರಿಕಾಲದಲ್ಲಿ ನಡೆಯುವ ಸಂಗತಿಗಳನ್ನೂ ಸಾಕ್ಷಾತ್ತಾಗಿ ಕಾಣಬಲ್ಲನು’.

(ಅನುವಾದ: ತೀ. ನಂ. ಶ್ರೀ.)

ಶಿಲ್ಪವೊಂದನ್ನು ಕಂಡರಿಸುವ ಮೊದಲು ಶಿಲ್ಪಿ ಕೂಡ ಹೀಗೆ ಧ್ಯಾನಸ್ಥನಾಗಬೇಕು ಎಂಬ ವಿವರಣೆ ಶಾಸ್ತ್ರಗಳಲ್ಲಿ ದೊರೆಯುತ್ತದೆ. ಅವನು ಕೆತ್ತಲಿರುವ ಮೂರ್ತಿಯ ಸ್ವರೂಪವನ್ನು ಧ್ಯಾನಶ್ಲೋಕದ ಅನುಸಂಧಾನದ ಮೂಲಕ ಸಾಕ್ಷಾತ್ಕರಿಸಿಕೊಳ್ಳುತ್ತಿದ್ದ. ಆನಂದ ಕುಮಾರಸ್ವಾಮಿ ಈ ಬಗ್ಗೆ ಗಹನವಾದ ಚರ್ಚೆಯನ್ನು ನಡೆಸಿದ್ದಾರೆ. ಕಾಶ್ಮೀರಶೈವದರ್ಶನದಲ್ಲಿ ‘ಕವಿಪ್ರತಿಭೆ’ಗೆ ಒದಗಿಸಿರುವ ವ್ಯಾಪ್ತಿ ತುಂಬ ಮಹತ್ವದ್ದು; ಪ್ರತಿಭೆ ಬೇರೆ ಅಲ್ಲ, ಶಿವನ ಶಕ್ತಿ ಬೇರೆ ಅಲ್ಲ – ಎಂಬ ಸಮೀಕರಣವನ್ನು ಅಲ್ಲಿ ಕಾಣುತ್ತೇವೆ.

ವಾಲ್ಮೀಕಿ ನಾರದರಿಂದ ಕೇಳಿದ್ದು ‘ಧರ್ಮಾರ್ಥಸಹಿತವಾದ ರಾಮಚರಿತೆಯನ್ನು’ (‘ಶ್ರುತ್ವಾ ವಸ್ತು ಸಮಗ್ರಂ ತದ್ಧರ್ಮಾತ್ಮಾ ಧರ್ಮಸಂಹಿತಮ್‌|); ಹೀಗೆ ಕೇಳಿದ ಅವನ ಪ್ರತಿಭೆಯ ಕಣ್ಣಿಗೆ ರಾಮಾಯಣವು ಗೋಚರಿಸಿದ್ದು ಕೂಡ ಕವಿ ‘ಧರ್ಮಾತ್ಮ’ನಾದುದರಿಂದಲೇ (‘ತತಃ ಪಶ್ಯತಿ ಧರ್ಮಾತ್ಮಾ ತತ್ ಸರ್ವಂ ಯೋಗಮಾಸ್ಥಿತಃ). ಮಾತ್ರವಲ್ಲ, ಈ ಕಾವ್ಯವು ಒದಗಿಸುವ ಫಲವೂ ಕೂಡ ‘ಧರ್ಮಾರ್ಥ’ವೇ (‘ಧರ್ಮಾರ್ಥಗುಣವಿಸ್ತರಮ್‌). ರಾಮಾಯಣದಲ್ಲಿ ಮತ್ತೆ ಮತ್ತೆ ಬರುವ ಮಾತು ‘ಧರ್ಮ’, ‘ಧರ್ಮಾತ್ಮಾ’. ‘ಧರ್ಮ’ ಎಂದ ಕೂಡಲೇ ನಮ್ಮ ಮನಸ್ಸು ಈಗ ಸಣ್ಣದಾಗುತ್ತದೆ; ಬುದ್ಧಿ ದಾರಿ ತಪ್ಪುತ್ತದೆ. ಇದಕ್ಕೆ ಕಾರಣ ‘ಧರ್ಮ’ದ ಬಗ್ಗೆ ನಮಗಿರುವ ಅಜ್ಞಾನವೇ ಹೌದು. ಈ ಮಾತನ್ನು ತುಂಬ ಮಿತಿಯಾದ ನೆಲೆಯಲ್ಲಿ ತಪ್ಪಾಗಿ ಅರ್ಥ ಮಾಡಿಕೊಳ್ಳುತ್ತಿದ್ದೇವೆ. ಜರ್ಮನಿಯ ಕವಿ ರೈನರ್‌ ರಿಲ್ಕೆಯ ಮಾತೊಂದು ಇಲ್ಲಿ ನಮ್ಮ ನೆರವಿಗೆ ಬರಬಹುದು.

‘Don't be confused by surfaces; in depths everything becomes law.’ ಮೇಲ್ಮೈಯನ್ನು ನೋಡಿ ದಿಕ್ಕು ತಪ್ಪಬಾರದು; ಆಳವಾದ ನೆಲೆಯಲ್ಲಿ ಪ್ರತಿಯೊಂದೂ ನಿಯಮವೇ ಆಗಿರುತ್ತದೆ’. ಹೀಗೆ ಎಲ್ಲೆಲ್ಲೂ ಎಲ್ಲರಲ್ಲೂ ಇರುವ ‘ನಿಯಮ’ಗಳನ್ನು ಹೊರಬಲ್ಲ ಧಾರಣಶಕ್ತಿಯೇ ‘ಧರ್ಮ’; ಈ ನಿಯಮಗಳನ್ನು ಅನುಸರಿಸುವವನು ‘ಧರ್ಮಾತ್ಮಾ’. (ಧರ್ಮದ ಬಗ್ಗೆ ರಾಮಾಯಣದ ಉದ್ದಕ್ಕೂ ವಿಶ್ಲೇಷಣೆ ನಡೆದಿದೆ; ಆಯಾ ಸಂದರ್ಭದಲ್ಲಿ ಅವುಗಳ ಸ್ವಾರಸ್ಯವನ್ನು ನೋಡೋಣವಾಗುತ್ತದೆ.) ‘The hero is he who is immovably centred’. ಇದು ಎಮರ್‌ಸನ್‌ನ ಮಾತು. ‘ಅಚಲವಾದ ಕೇಂದ್ರಬಿಂದುವಿನಂತೆ ಇರುವವನೇ ಲೋಕನಾಯಕ’. ಹೀಗೆ ಲೋಕನಾಯಕನಾದವನು ರಾಮ; ಅವನನ್ನು ಹೀಗೆ ಹಿಡಿದಿಟ್ಟ ನಿಶ್ಚಲಬಿಂದುವೇ ಧರ್ಮ. ರಾಮನನ್ನು ರಾಮತ್ವದಿಂದ ಜಾರದಂತೆ ಕಾಪಾಡಿದ ಕೇಂದ್ರಶಕ್ತಿಯೇ ಧರ್ಮ. ಧರ್ಮಬುದ್ಧನಾದ ಕವಿಯಿಂದ ರಚಿತವಾದ ಧರ್ಮಾತ್ಮನ ಚರಿತೆಯು ಧರ್ಮಾರ್ಥಕ್ಕೆ ಒದಗುವುದು ಸಹಜವೇ ಸರಿ. ಈ ಚರಿತೆಯು ವ್ಯಕ್ತಿಚರಿತೆಯಲ್ಲ, ತತ್ತ್ವಚರಿತೆ; ರಾಮನನ್ನು ವಾಲ್ಮೀಕಿಯು ಧರ್ಮದ ವಿಗ್ರಹಸ್ವರೂಪ ಎಂದೇ ವರ್ಣಿಸಿದ್ದಾನೆ. ಹೀಗೆ ಎಲ್ಲ ಕಾಲಕ್ಕೂ ಸಲ್ಲುವ ಕಾವ್ಯವಾದುದರಿಂದಲೇ ಅದು ಶಾಶ್ವತವಾಗಿರುತ್ತದೆ; ಇದು ಕಾವ್ಯವನ್ನು ಕುರಿತು ಕಾವ್ಯಕ್ಕೇ ಇರುವ ಆತ್ಮವಿಶ್ವಾಸ. ಬ್ರಹ್ಮನು ವಾಲ್ಮೀಕಿಗೆ ಕೊಟ್ಟ ವರವಾದರೂ ಇದೇ:

ಯಾವತ್‌ ಸ್ಥಾಸ್ಯಂತಿ ಗಿರಯಃ ಸರಿತಶ್ಚ ಮಹೀತಲೇ |

ತಾವದ್ರಾಮಾಯಣಕಥಾ ಲೋಕೇಷು ಪ್ರಚರಿಷ್ಯತಿ ||

ಯಾವದ್ರಾಮಾಯಣಕಥಾ ತ್ವತ್ಕೃತಾ ಪ್ರಚರಿಷ್ಯತಿ |

ತಾವದೂರ್ಧ್ವಮಧಶ್ಚ ತ್ವಂ ಮಲ್ಲೋಕೇಷು ನಿವತ್ಸ್ಯಸಿ ||

(ಈ ಭೂಮಿಯಲ್ಲಿ ಪರ್ವತಗಳೂ ನದಿಗಳೂ ಎಲ್ಲಿಯವರೆಗೂ ಇರುವುವೋ ಅಲ್ಲಿಯವರೆಗೂ ನಿನ್ನ ರಾಮಾಯಣವೂ ಪ್ರಚಾರದಲ್ಲಿರುವುದು. ಇದು ಪ್ರಚಾರದಲ್ಲಿರುವವರೆಗೂ ನೀನು ನನ್ನ ಬ್ರಹ್ಮಲೋಕದಲ್ಲಿ ವಿಹರಿಸಿಕೊಂಡು ವಾಸಿಸುವೆ.)

ಭರ್ತೃಹರಿಯ ಪದ್ಯವೊಂದು ಮೇಲಣ ಮಾತಿನಿಂದಲೇ ಸ್ಫೂರ್ತಿಯನ್ನು ಪಡೆದಂತಿದೆ:

ಜಯಂತಿ ತೇ ಸುಕೃತಿನೋ ರಸಸಿದ್ಧಾಃ ಕವೀಶ್ವರಾಃ |

ನಾಸ್ತಿ ತೇಷಾಂ ಯಶಃಕಾಯೇ ಜರಾಮರಣಜಂ ಭಯಂ||

‘ರಸಗಳಲ್ಲಿ ಸಿದ್ಧರೂ ಧನ್ಯರಾದ ಕವಿಗಳು ಗೆಲುವನ್ನು ಹೊಂದುತ್ತಾರೆ; ಮುಪ್ಪು–ಮರಣಗಳಿಂದ ಉಂಟಾಗುವ ಭಯ ಅವರ ಕೀರ್ತಿಶರೀರಕ್ಕೆ ಇರದು’.

ಧರ್ಮದೃಷ್ಟಿಯ ರಸಋಷಿಗಳು ಯಶಃಕಾಯರಾಗುತ್ತಾರೆ ಎನ್ನುವುದು ಕೂಡ ರಾಮಾಯಣದ ಉದ್ದೇಶವೇ ಆಗಿರುವಂತಿದೆ.

Comments
ಈ ವಿಭಾಗದಿಂದ ಇನ್ನಷ್ಟು

ವೈಶಾಖದ ಹುಣ್ಣಿಮೆ
ಬಾಲರು ಯಾರು?

ಶಿವರಾತ್ರಿಯಂದು ನಾವು ಜಾಗರಣೆ ಮಾಡುತ್ತೇವೆ, ಅಲ್ಲವೆ? ರಾತ್ರಿ ಮುಂದುವರೆದಂತೆ ನಮಗೆ ನಿದ್ರೆಯ ಸೆಳೆತ ಹೆಚ್ಚುತ್ತಹೋಗುವುದು ಸಹಜ. ಆಗ ‘ಈ ರಾತ್ರಿ ಇನ್ನೂ ಮುಗಿಯುತ್ತಲೇ ಇಲ್ಲ!...

20 Jan, 2018
ಗಾಯನಕ್ಕೆ ಸಿದ್ಧವಾದ ರಾಮಕಥೆ

ರಾಮಾಯಣ ರಸಯಾನ
ಗಾಯನಕ್ಕೆ ಸಿದ್ಧವಾದ ರಾಮಕಥೆ

20 Jan, 2018
’ನಮಗೆ ಕಾವೇರಿ ನೀರೇ ಬೇಡ! ’

ವಿಡಂಬನೆ
’ನಮಗೆ ಕಾವೇರಿ ನೀರೇ ಬೇಡ! ’

13 Jan, 2018

ಅಧ್ಯಯನ
ಸೂರ್ಯ: ಜಗತ್ತಿನ ಕಣ್ಣು

ಸೂರ್ಯನು ಹುಟ್ಟಿದ ಕೂಡಲೇ ಕತ್ತಲು ಸರಿಯುತ್ತದೆ; ಎಲ್ಲರ ಕಣ್ಣಿಗೂ ಕಾಣುವಂಥವನು ಅವನು; ಅವನ ಹುಟ್ಟಿಗೂ ಜಗತ್ತಿನ ಆಗುಹೋಗುಗಳಿಗೂ ನೇರ ಸಂಬಂಧವಿದೆ. ಇವೆಲ್ಲವೂ ಸೂರ್ಯನ ಭೌತಿಕ ವಿವರಗಳು. ...

13 Jan, 2018
ಕಲೆಗಾಗಿ ಕಲೆ ಅಲ್ಲ!

ರಾಮಾಯಣ ರಸಾಯನ 22
ಕಲೆಗಾಗಿ ಕಲೆ ಅಲ್ಲ!

13 Jan, 2018