ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೈಗರ್ ಜಿಂದಾ ಹೈ / ಹಳೆಯದಕ್ಕಿಂತ ಸಶಕ್ತ ಈ ಹೊಸ ‘ಹುಲಿ’

Last Updated 22 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

‘ಏಕ್ ಥಾ ಟೈಗರ್’ ಹಿಂದಿ ಚಿತ್ರ ತೆರೆಕಂಡು ಐದು ವರ್ಷಗಳಾಗಿವೆ. ಕಬೀರ್ ಖಾನ್ ನಿರ್ದೇಶನದ ಆ ಚಿತ್ರ ಅಷ್ಟೇನೂ ಬಿಗುವಾಗಿ ಇಲ್ಲದಿದ್ದರೂ ಕೆಲವು ರೋಮಾಂಚಕ ಸಾಹಸ ಸನ್ನಿವೇಶಗಳಿಂದಲೇ ಜನಮನ ಗೆದ್ದಿತ್ತು. 

ಅದರ ಮುಂದುವರಿದ ಭಾಗವಾದ ‘ಟೈಗರ್ ಜಿಂದಾಹೈ’ ಗಟ್ಟಿಶಿಲ್ಪದ ಥ್ರಿಲ್ಲರ್. ಹಾಲಿವುಡ್ ಶೈಲಿಯ ತಾಂತ್ರಿಕ ಕಸುಬುದಾರಿಕೆ ಚಿತ್ರದ ಸಕಾರಾತ್ಮಕ ಅಂಶ. ಚಿತ್ರಕಥೆಯಲ್ಲಿ ಭಾರತೀಯ ಮಸಾಲೆ ಸೇರಿಸಿರುವುದು ವಾಣಿಜ್ಯಿಕ ಜಾಣತನ. ಭಾರತ– ಪಾಕಿಸ್ತಾನ ಬಾಂಧವ್ಯದ ಲೇಪ ಹಚ್ಚಿರುವುದು ಒಗ್ಗರಣೆ. ಎಲ್ಲವೂ ಸೇರಿ ಚಪ್ಪರಿಸಿಕೊಂಡು ತಿನ್ನಬಹುದಾದ ‘ಥಾಲಿ’ಯಂತೆ ಆಗಿರುವುದು ನಿರ್ದೇಶಕ ಅಲಿ ಅಬ್ಬಾಸ್ ಜಫರ್ ತಮ್ಮ ತಲೆ ಹಾಗೂ ಹೃದಯಕ್ಕೆ ಕೊಟ್ಟಿರುವ ಕೆಲಸದಿಂದ.

ಭಯೋತ್ಪಾದಕರು 25 ಭಾರತೀಯ ಹಾಗೂ 15 ಪಾಕಿಸ್ತಾನಿ ನರ್ಸ್‌ಗಳನ್ನು ಇರಾಕ್‌ನಲ್ಲಿ ಒತ್ತೆಯಾಳಾಗಿ ಇಟ್ಟುಕೊಂಡ ನಿಜ ಘಟನೆಯನ್ನು ಸಿನಿಮೀಯಗೊಳಿಸಿ ಚಿತ್ರ ರೂಪಿಸಲಾಗಿದೆ. ‘RAW’ (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಏಜೆಂಟ್ ಟೈಗರ್ ಹಾಗೂ ಆತನ ಪತ್ನಿ (ಪಾಕಿಸ್ತಾನದ ಏಜೆನ್ಸಿಯವಳು) ಬೆರಳೆಣಿಕೆಯಷ್ಟು ಸಹೋದ್ಯೋಗಿಗಳ ಜತೆಗೂಡಿ ಒತ್ತೆಯಾಳುಗಳನ್ನು ಬಚಾವ್ ಮಾಡುವುದು ಚಿತ್ರದ ಸಾರಾಂಶ. ನಾಯಕನು ಖಳನ ಸದೆಬಡಿಯುವುದು ಭಾರತೀಯ ಚಿತ್ರಗಳಲ್ಲಿ ಸಹಜವೇ ಹೌದು.

ಈ ಚಿತ್ರದಲ್ಲಿ ಆಗುವುದೂ ಅದೇ. ಆದರೆ, ಅದನ್ನು ತೋರಿಸುವಲ್ಲಿ ನಿರ್ದೇಶಕರು ತೋರಿರುವ ಸಾವಧಾನದ ಧೋರಣೆ ಹಿಡಿದಿಡುತ್ತದೆ. ಮುಂದಿನ ಸನ್ನಿವೇಶದಲ್ಲಿ ಏನಾಗಬಹುದು ಎಂಬ ಕುತೂಹಲವನ್ನು ಮೂಡಿಸಿ, ಅದು ಊಹೆಯನ್ನು ಮೀರುವಂತೆ ಮಾಡುವ ಚಾಕಚಕ್ಯತೆ ಅಲಿ ಅಬ್ಬಾಸ್ ಜಫರ್ ಅವರಿಗಿದೆ. ಹಿಂದಿನ ‘ಸುಲ್ತಾನ್’ ಚಿತ್ರದಲ್ಲಿಯೂ ಅವರು ಇಂಥ ಜಾಣ್ಮೆ ತೋರಿದ್ದರು.

ಮಾರ್ಸಿನ್ ಲಸ್ಕವೀಕ್ ನೇತೃತ್ವದ ತಂಡದ ಕ್ಯಾಮೆರಾ ಚಲನೆಗಳು ಹಾಗೂ ಲೈಟಿಂಗ್ ಚಿತ್ರದ ತಾಂತ್ರಿಕ ಔಚಿತ್ಯವನ್ನು ಹೆಚ್ಚಿಸಿವೆ. ಜೂಲಿಯಸ್ ವ್ಯಾಕಿಯಮ್ ಹಿನ್ನೆಲೆ ಸಂಗೀತ ವೇಗವರ್ಧಕ. ವಿಶಾಲ್– ಶೇಖರ್ ಸ್ವರ ಸಂಯೋಜಿಸಿರುವ ಹಾಡುಗಳು ಸಾಹಸ ಪ್ರಧಾನ ಚಿತ್ರದ ನಡುವೆ ಮನ
ರಂಜನೆಯ ಅಗತ್ಯ ‘ರಿಲೀಫ್’ಗಳಾಗಿ ಒದಗಿಬಂದಿವೆ.

‌ಗಡ್ಡ– ಮೀಸೆ ಬಿಟ್ಟ ಸಲ್ಮಾನ್ ಖಾನ್ ಇಡೀ ಚಿತ್ರವನ್ನು ತಮ್ಮ ಗಂಭೀರ ವದನ ಹಾಗೂ ಹುರಿಗಟ್ಟಿದ ದೇಹದಿಂದ ಆವರಿಸಿಕೊಂಡಿದ್ದಾರೆ. ಇರಾನ್ ನಟ ಸಜ್ಜದ್ ದೆಲ್‌ಫ್ರೂಜ್ ತಣ್ಣನೆಯ ಕ್ರೌರ್ಯ ತುಳುಕಿಸುವ ಖಳನ ಪಾತ್ರದ ಪರಕಾಯ ಪ್ರವೇಶ ಮಾಡಿದ್ದಾರೆ. ಕತ್ರೀನಾ ಕೈಫ್ ಸೊಗಸುಗಾರಿಕೆಗಿಂತ ಅವರ ಒಂದೆರಡು ಹೊಡೆದಾಟಗಳಿಗೆ ಶಿಳ್ಳೆ ಬಿದ್ದಾವು. ನರ್ಸ್ ಪಾತ್ರದಲ್ಲಿ ಅಂಜಲಿ ಗುಪ್ತಾ ಅಭಿನಯ ಗಮನಾರ್ಹ. ಸಾಹಸ ದೃಶ್ಯಗಳಂತೂ ಕುರ್ಚಿ ತುದಿಗೆ ತಂದು ಕೂರಿಸುವಷ್ಟು ಶಕ್ತವಾಗಿವೆ. ತುಸು ಮಸಾಲೆ, ಮೆಲೋಡ್ರಾಮಾದ ಅಂತ್ಯ, ಆಗೀಗ ಸಣ್ಣ ಭಾಷಣ ಇವನ್ನೆಲ್ಲ ಸಹಿಸಿಕೊಂಡು ಸಾಹಸ ನೋಡಲು ಇಷ್ಟಪಡುವವರಿಗೆ ‘ಏಕ್ ಥಾ ಟೈಗರ್’ ಹಸನಾದ ಭೋಜನವಂತೂ ಹೌದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT