ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಕಲು ಮನೆ, ಹರಕಲು ಗುಡಿಸಲು...

Last Updated 23 ಡಿಸೆಂಬರ್ 2017, 5:25 IST
ಅಕ್ಷರ ಗಾತ್ರ

ಪಿರಿಯಾಪಟ್ಟಣ: ಅಲ್ಲಿಗೆ ಕಾಲಿಟ್ಟ ಕೂಡಲೇ ಹಂದಿಗಳ ಮಲ– ಮೂತ್ರದ ದರ್ಶನ, ಪಕ್ಕದಲ್ಲೇ ಹರಿಯುತ್ತಿರುವ ಚರಂಡಿ ನೀರಿನ ದುರ್ವಾಸನೆ, ಗುಂಡಿಯೊಳಗಿನ ಮಲೆತ ನೀರಿನ ವಾಸನೆ ಸೇರಿ ವಾತಾವರಣದಲ್ಲಿ ಸೃಷ್ಟಿ ಯಾಗಿರುವ ದುರ್ನಾತ, ಮುರುಕಲು ಮನೆ, ಹರಕಲು ಗುಡಿಸಲುಗಳು...

ಇದು ಪಟ್ಟಣದ ಹಂದಿಜೋಗಿ ಕಾಲೊನಿಯ ಚಿತ್ರಣ. ಕೋಟೆಯ ಕಂದಕ ಮುಚ್ಚಿ ಅದರ ಮೇಲೆ ಮನೆ ನಿರ್ಮಿಸಿ ಕೊಂಡು 50ಕ್ಕೂ ಹೆಚ್ಚು ಕುಟುಂಬಗಳು ದಶಕಗಳಿಂದ ಇಲ್ಲಿ ನೆಲೆಸಿವೆ. ಆದರೂ ಮೂಲಸೌಕರ್ಯಗಳಿಂದ ದೂರವೇ ಉಳಿದಿವೆ. ಬಿರುಕು ಬಿಟ್ಟ ಮನೆಗಳು, ಒಡೆದು ಹೋಗಿರುವ ಚಾವಣಿ ಇಲ್ಲಿನ ಶೋಚನೀಯ ಸ್ಥಿತಿ ತೋರಿಸುತ್ತಿದೆ.

ಒಂದು ಬದಿಯಲ್ಲಿ ಮನೆ ನಿರ್ಮಿಸಿಕೊಂಡಿದ್ದರೆ, ಮತ್ತೊಂದು ಬದಿ ಹಂದಿಗೂಡುಗಳಿವೆ. ಮನೆಗಳು ಹಂದಿಗೂಡುಗಳಿಗಿಂತ ಉತ್ತಮವಾಗೇನೂ ಇಲ್ಲ. ಕುಡಿಯುವ ನೀರು, ಬೀದಿದೀಪ, ಚರಂಡಿ, ರಸ್ತೆ, ಶೌಚಾಲಯ ಕೇಳುವಂತೆಯೇ ಇಲ್ಲ. ಮನೆಗಳ ಎರಡೂ ಬದಿಯಲ್ಲಿ ದೊಡ್ಡ ಮೋರಿ ನೀರು ಹರಿಯುತ್ತಿದೆ. ಇದರ ದುರ್ವಾಸ ನೆಯಲ್ಲಿಯೇ ಜೀವನ ಸಾಗಿಸುತ್ತಿದ್ದಾರೆ. ಮಳೆಗಾಲದಲ್ಲಿ ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗುವುದರಿಂದ ಬದುಕು ಸಾಗಿಸುವುದೇ ದುಸ್ತರವಾಗಿದೆ ಎಂದು ಇಲ್ಲಿನ ನಿವಾಸಿಗಳು ಹೇಳುತ್ತಾರೆ.

ಕಾಲೊನಿಯ ಬಹುತೇಕ ಹೆಂಗಸರು ಕಲ್ಯಾಣಮಂಟಪಗಳಲ್ಲಿ ಶುಚಿ ಕಾರ್ಯಕ್ಕೆ ತೆರಳಿದರೆ, ಗಂಡಸರು ಮತ್ತು ಯುವಕರು ಹಂದಿ ಸಾಕಾಣಿಕೆ, ಗಾರೆ ಕೆಲಸ, ಕೂಲಿ ಕೆಲಸ ಅವಲಂಬಿಸಿದ್ದಾರೆ. ಹಂದಿಗಳಿಗೆ ಹೋಟೆಲ್‌ ಮತ್ತು ಕಲ್ಯಾಣಮಂಟಪಗಳ ಊಟದ ತ್ಯಾಜ್ ನೀಡುತ್ತಾರೆ.

‘ರಾಜಕಾರಣಿಗಳು ಕೇವಲ ಚುನಾವಣಾ ಸಮಯದಲ್ಲಿ ಬಂದು ಇಲ್ಲಿನ ನಿವಾಸಿಗಳನ್ನು ನಂಬಿಸಿ ಮತ ಪಡೆಯುವುದನ್ನು ಬಿಟ್ಟರೆ ಕಾಲೊನಿ ಸಮಸ್ಯೆಗೆ ಸ್ಪಂದಿಸುವುದಿಲ್ಲ’ ಎಂದು ನಿವಾಸಿ ವೆಂಕಟಸ್ವಾಮಿ ದೂರಿದ್ದಾರೆ.

ಗುಡಿಸಲಿನಲ್ಲಿಯೇ ಅಂಗನವಾಡಿ ಕೇಂದ್ರ: ಇಲ್ಲಿ ಮರುಕಲು ಗುಡಿಸಲಿ ನಲ್ಲಿಯೇ ಅಂಗನವಾಡಿ ಕೇಂದ್ರ ನಡೆಸಲಾಗುತ್ತಿದೆ. 9 ಮಕ್ಕಳು ದಾಖಲಾ ಗಿದ್ದಾರೆ. ಸುತ್ತಮುತ್ತಲಿನ ವಾತಾವರಣ ಸಂಪೂರ್ಣ ಧೂಳು, ದುರ್ವಾಸನೆ, ಅಶುಚಿತ್ವದಿಂದ ಕೂಡಿದೆ. ಇಲ್ಲಿನ ಸ್ಥಿತಿ ನೋಡಿ ಬೇರೆ ಬೀದಿಯ ಪೋಷಕರು ಮಕ್ಕಳನ್ನು ಕಳುಹಿಸುತ್ತಿಲ್ಲ ಎಂದು ಅಂಗನವಾಡಿ ಸಹಾಯಕಿ ಭಾಗ್ಯಮ್ಮ ಹೇಳುತ್ತಾರೆ.

‘ಅಂಗನವಾಡಿ ಸ್ಥಳಾಂತರಿಸಲು ಹಲವು ಬಾರಿ ನಿವಾಸಿಗಳ ಮನ ವೊಲಿಸಲು ಯತ್ನಿಸಿದ್ದರೂ ಪ್ರಯೋಜನ ವಾಗಿಲ್ಲ. ಸರ್ಕಾರ ಹೊಸ ಅಂಗನವಾಡಿ ಕಟ್ಟಡ ನಿರ್ಮಿಸಲು ₹ 8 ಲಕ್ಷ ಅನುದಾನ ನೀಡಿದ್ದು, ನಿವೇಶನ ನೀಡುವಂತೆ ಪುರಸಭೆಗೆ ಹಲವು ಬಾರಿ ಮನವಿ ಮಾಡಲಾಗಿದೆ’ ಎಂದು ಸಿಡಿಪಿಒ ಇಂದಿರಾ ‘ಪ್ರಜಾವಾಣಿ’ಗೆ ತಿಳಿಸಿದರು.

ಇಲ್ಲಿಂದ ಅಂಗನವಾಡಿ ಸ್ಥಳಾಂತರಿಸಲು ನಿವಾಸಿಗಳು ಒಪ್ಪುತ್ತಿಲ್ಲ. ದೇವಾಲಯ ಮತ್ತು ಛತ್ರಗಳು ಹತ್ತಿರವಿರುವ ಕಾರಣ ದೂರಕ್ಕೆ ಸ್ಥಳಾಂತರಗೊಂಡರೆ ಹಂದಿ ಸಾಕಾಣಿಕೆಗೆ ತೊಂದರೆಯಾಗಲಿದೆ ಎಂಬುದು ನಿವಾಸಿಗಳ ಮಾತು.

ಚುನಾವಣೆ ಬಹಿಷ್ಕಾರದ ಎಚ್ಚರಿಕೆ: ಕಾಲೊನಿ ಸ್ಥಳಾಂತರಕ್ಕೆ ಯೋಜನೆ ರೂಪಿಸಿದ್ದರೂ ಕಾರ್ಯಗತವಾಗಿಲ್ಲ. 2012ರಲ್ಲಿ ಪಟ್ಟಣ ಹೊರವಲಯದ ಹುಣಸೇಕುಪ್ಪೆ ರಸ್ತೆ ಬಳಿ ಒಂದ ಎಕರೆ ಭೂಮಿ ಖರೀದಿಸಿ ಪುನ ರ್ವಸತಿ ಕಲ್ಪಿಸಲು ಯೋಜನೆ ರೂಪಿಸಿ ದ್ದರೂ ಅನುಷ್ಠಾನಕ್ಕೆ ಬಂದಿಲ್ಲ.ಸಮಸ್ಯೆಗೆ ಮೂರು ತಿಂಗಳಲ್ಲಿ ಸ್ಪಂದಿಸದಿದ್ದರೆ ಮುಂಬರುವ ವಿಧಾನಸಭೆ ಚುನಾವಣೆ ಬಹಿಷ್ಕರಿಸು ವುದಾಗಿ ಇಲ್ಲಿನ ಹಂದಿಜೋಗಿಗಳು ಎಚ್ಚರಿಕೆ ನೀಡಿದ್ದಾರೆ.

* * 

₹ 3.33 ಕೋಟಿಯಲ್ಲಿ 74 ಮನೆ ನಿರ್ಮಿಸಲು ನಿರ್ಮಿತಿ ಕೇಂದ್ರಕ್ಕೆ ವಹಿಸಿದ್ದು, ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗಲಿದೆ
ಕೃಷ್ಣ, ಪುರಸಭೆ ಮುಖ್ಯಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT