ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ಆಸ್ಪತ್ರೆಗೆ ರಾಷ್ಟ್ರೀಯ ಪ್ರಶಸ್ತಿ

Last Updated 23 ಡಿಸೆಂಬರ್ 2017, 6:05 IST
ಅಕ್ಷರ ಗಾತ್ರ

ತುಮಕೂರು: ಸರ್ಕಾರಿ ಆಸ್ಪತ್ರೆ ಎಂದರೆ ಮೂಗು ಮುರಿಯುವವರು, ಮಾರುದ್ದ ಹಾರುವವರೇ ಹೆಚ್ಚು. ಆದರೆ, ಇದಕ್ಕೆ ಅಪವಾದ ಎಂಬಂತೆ ತುಮಕೂರು ಜಿಲ್ಲಾ ಆಸ್ಪತ್ರೆ ರಾಷ್ಟ್ರೀಯ ಮಟ್ಟದಲ್ಲಿ ವಿಶೇಷ ಗೌರವಕ್ಕೆ ಪಾತ್ರವಾಗಿದೆ.

ಸರ್ಕಾರಿ ಆಸ್ಪತ್ರೆ ಎಂದರೆ ಹೀಗೂ ಇರಲು ಸಾಧ್ಯವೇ ಎಂದು ಸಾರ್ವಜನಿಕರು ಬೆರಗಾಗುವಷ್ಟರ ಮಟ್ಟಿಗೆ ಈ ಆಸ್ಪತ್ರೆ ಗಮನ ಸೆಳೆಯುತ್ತಿದ್ದು, ಈ ಆಸ್ಪತ್ರೆಯ ಅಚ್ಚುಕಟ್ಟುತನ ಗಮನಿಸಿ ತುಮಕೂರು ಜಿಲ್ಲಾ ಆಸ್ಪತ್ರೆಗೆ ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ‘ರಾಷ್ಟ್ರೀಯ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ’ಯು ಲಭಿಸಿದೆ.

ಆಸ್ಪತ್ರೆಯಲ್ಲಿ ಸ್ವಚ್ಛತೆ, ಮಹಿಳೆ, ಮಕ್ಕಳ ಬಗ್ಗೆ ವಿಶೇಷ ಆರೈಕೆ, ರೋಗಿಗಳು ಮತ್ತು ಅವರ ಸಂಬಂಧಿಕರೊಂದಿಗೆ ಉತ್ತಮ ನಡತೆ, ಗುಣಮಟ್ಟದ ಚಿಕಿತ್ಸೆ, ಚಿಕಿತ್ಸೆಗೆ ಅಗತ್ಯ ಸೌಕರ್ಯ ಹೊಂದಿರುವುದು ಸೇರಿದಂತೆ ಹಲವು ವಿಷಯಗಳಲ್ಲಿ ಅನುಸರಿಸಿದ ಕ್ರಮಗಳನ್ನು ಗಮನಿಸಿ ಈ ಪ್ರಶಸ್ತಿಯನ್ನು ಕೇಂದ್ರ ಸರ್ಕಾರ ನೀಡಿದೆ.

ಜೂನ್ ತಿಂಗಳಲ್ಲಿ ಆಸ್ಪತ್ರೆಗೆ ಭೇಟಿ ನೀಡಿದ್ದ ದ್ವಿಸದಸ್ಯರ ತಂಡವು ಆಸ್ಪತ್ರೆಯ ವಾತಾವರಣ, ಅಲ್ಲಿರುವ ಸಿಬ್ಬಂದಿ, ಸೌಕರ್ಯ, ಚಿಕಿತ್ಸಾ ವಿಧಾನ, ನಿತ್ಯ ಆಸ್ಪತ್ರೆ ಸ್ವಚ್ಛತೆ ಮತ್ತು ತ್ಯಾಜ್ಯ ನಿರ್ವಹಣೆಗೆ ಅನುಸರಿಸುತ್ತಿರುವ ಕ್ರಮಗಳು ಸೇರಿದಂತೆ ಅನೇಕ ವಿಷಯಗಳ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ನಡೆಸಿತ್ತು.

ತುಮಕೂರು ಜಿಲ್ಲಾ ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ರಾಜ್ಯದಲ್ಲಿರುವ ಇತರ ಜಿಲ್ಲೆಗಳ ಜಿಲ್ಲಾ ಆಸ್ಪತ್ರೆಗಳಿಗೂ ಭೇಟಿ ನೀಡಿ ಪರಿಶೀಲನೆ ನಡೆಸಿತ್ತು. ಆದರೆ, ಇಡೀ ರಾಜ್ಯದಲ್ಲಿಯೇ ತುಮಕೂರು ಜಿಲ್ಲಾ ಆಸ್ಪತ್ರೆಗೆ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಲಭಿಸಿದೆ.

‘ಆಸ್ಪತ್ರೆಯ 8 ವಿಭಾಗಗಳಿಗೆ ಒಟ್ಟಾರೆ ಶೇ 90ರಷ್ಟು ಅಂಕ ಲಭಿಸಿದ್ದರಿಂದ ರಾಷ್ಟ್ರೀಯ ಗುಣಮಟ್ಟ ಭರವಸೆ ಪ್ರಮಾಣೀಕೃತ (ಎನ್‌ಕ್ಯುಎಎಸ್) ಮಾನದಂಡಗಳನ್ನು ಪೂರೈಸಿ
ದಂತಾಗಿದ್ದು, ಅತ್ಯುತ್ತಮ ನಿರ್ವಹಣಾ ಪ್ರಶಸ್ತಿಗೆ ಭಾಜನವಾಗಿದೆ’ ಎಂದು ರಾಷ್ಟ್ರೀಯ ಆರೋಗ್ಯ ಮಿಷನ್ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ಝಲಾನಿ ಅವರು ಕರ್ನಾಟಕ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವಿಭಾಗ ನಿರ್ದೇಶನಾಲಯದ ರಾಷ್ಟ್ರೀಯ ಆರೋಗ್ಯ ಮಿಷನ್ ನಿರ್ದೇಶಕ ರಥನ್ ಕೇಲ್ಕರ್ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.

ವೈದ್ಯರು, ಸಿಬ್ಬಂದಿ ಕಾರ್ಯಕ್ಕೆ ಸಂದ ಗೌರವ

‘ಆಸ್ಪತ್ರೆಗೆ ಅತ್ಯುತ್ತಮ ನಿರ್ವಹಣಾ ಪ್ರಶಸ್ತಿ ಲಭಿಸಿರುವುದು ಆಸ್ಪತ್ರೆಯ 42 ವೈದ್ಯರು, 360ಕ್ಕೂ ಹೆಚ್ಚಿನ ಸಿಬ್ಬಂದಿಗೆ ಕೆಲಸ ಮಾಡುವ ಉತ್ಸಾಹ ಇಮ್ಮಡಿಸಿದೆ’ ಎಂದು ಜಿಲ್ಲಾ ಆಸ್ಪತ್ರೆ ಸರ್ಜನ್ ಡಾ.ವೀರಭದ್ರಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಆಸ್ಪತ್ರೆಯ ಈ ಸಾಧನೆಗೆ ಹಿಂದಿನ ಅಧಿಕಾರಿಗಳು, ಸಿಬ್ಬಂದಿ ವರ್ಗದವರ ಶ್ರಮ, ಜನಪ್ರತಿನಿಧಿಗಳು, ಆರೋಗ್ಯ ಇಲಾಖೆಯ ಉನ್ನತ ಅಧಿಕಾರಿಗಳ ಸಹಕಾರ ಮತ್ತು ಮಾರ್ಗದರ್ಶನವೂ ಕಾರಣವಾಗಿದೆ’ ಎಂದು ಹೇಳಿದರು.

‘ನಮ್ಮ ಆಸ್ಪತ್ರೆಯು 400 ಹಾಸಿಗೆ (ಬೆಡ್) ಹೊಂದಿದ ಆಸ್ಪತ್ರೆಯಾಗಿದೆ. ಈ ಪ್ರಶಸ್ತಿಗೆ ಆಯ್ಕೆಯಾಗಿರುವುದರಿಂದ ಕೇಂದ್ರ ಆರೋಗ್ಯ ಇಲಾಖೆಯು ಪ್ರತಿ ಹಾಸಿಗೆ ನಿರ್ವಹಣೆಗೆ ವಾರ್ಷಿಕ ₹ 10 ಸಾವಿರ ನೀಡಲಿದ್ದು, ವಾರ್ಷಿಕವಾಗಿ ₹ 4 ಕೋಟಿ ಅನುದಾನ ಲಭಿಸಲಿದೆ’ ಎಂದು ಹೇಳಿದರು.

ಆಸ್ಪತ್ರೆಯ 8 ವಿಭಾಗಗಳ ನಿರ್ವಹಣೆಗೆ ಒಟ್ಟು ಶೇ 90ರಷ್ಟು ಅಂಕಗಳು ಲಭಿಸಿವೆ. ಆವರಣದಲ್ಲಿ ಜಾನುವಾರು, ನಾಯಿಗಳು ಪ್ರವೇಶಿಸುತ್ತವೆ. ಈಗಾಗಲೇ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಇವುಗಳ ನಿಯಂತ್ರಣವಾಗಿದ್ದರೆ ಶೇ 95ಕ್ಕೂ ಹೆಚ್ಚು ಅಂಕ ಪಡೆಯುತ್ತಿತ್ತು ಎಂದು ಸರ್ಜನ್‌ ವೀರಭದ್ರಯ್ಯ ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT