ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ಬಾಲಕಿ ಮೇಲೆ ಅತ್ಯಾಚಾರ ನಾಲ್ವರು ಆರೋಪಿಗಳ ಬಂಧನ

Last Updated 23 ಡಿಸೆಂಬರ್ 2017, 6:36 IST
ಅಕ್ಷರ ಗಾತ್ರ

ವಿಜಯಪುರ: ನಗರದ ದಲಿತ ವಿದ್ಯಾರ್ಥಿನಿ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ನಗರ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ.

ಪ್ರಮುಖ ಆರೋಪಿ ದೀಪಕ ಮುಳಸಾವಳಗಿ, ಆತನ ಸ್ನೇಹಿತರಾದ ಸಾಗರ ಮೋರೆ, ಶ್ರೀಶೈಲ ಮುಚ್ಚುಂಡಿ, ಕೈಲಾಸ ರಾಠೋಡ ಬಂಧಿತರು. ಇನ್ನೂ ಮೂವರು ನಾಪತ್ತೆಯಾಗಿದ್ದಾರೆ. ಈ ವಿಷಯವನ್ನು ಸಿಐಡಿ ಎಸ್ಪಿ ಎಚ್.ಡಿ.ಆನಂದಕುಮಾರ್‌ ಶುಕ್ರವಾರ ರಾತ್ರಿ ಸುದ್ದಿಗಾರರಿಗೆ ತಿಳಿಸಿದರು. ಆರೋಪಿಗಳನ್ನು ಸಿಐಡಿ ಪೊಲೀಸರಿಗೆ ಹಸ್ತಾಂತರಿಸಲಾಗಿದೆ.

‘ಪ್ರಮುಖ ಆರೋಪಿ ದೀಪಕನ ವಯಸ್ಸು ನಿಖರವಾಗಿ ಎಷ್ಟು ಎಂಬುದು ಇನ್ನೂ ಖಚಿತವಾಗಿಲ್ಲ’ ಎಂದು ಆನಂದಕುಮಾರ್‌ ತಿಳಿಸಿದರು. ‘ಮಹಾರಾಷ್ಟ್ರ ಸೇರಿದಂತೆ ರಾಜ್ಯದ ವಿವಿಧೆಡೆ ಸಂಚರಿಸಿ, ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅವರು ವಿವರಿಸಿದರು.

ಅತ್ಯಾಚಾರ ಖಚಿತ: ‘ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿರುವುದು ಖಚಿತಪಟ್ಟಿದೆ. ಮರಣೋತ್ತರ ಪರೀಕ್ಷೆಯ ಪ್ರಾಥಮಿಕ ವರದಿ ಪ್ರಕಾರ ಸಾಮೂಹಿಕ ಅತ್ಯಾಚಾರ ಖಚಿತವಾಗಿಲ್ಲ. ವಿಸ್ತೃತ ವರದಿ ಬಂದ ಬಳಿಕ ನಿಖರವಾಗಿ ಹೇಳಬಹುದು’ ಎಂದು ಸಿಐಡಿ ಎಸ್ಪಿ ಹೇಳಿದರು.

ಆರೋಪಿಗಳಿಗೆ ಬಿಜೆಪಿ ನಂಟಿದೆ ಎಂಬ ದೂರಿನ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಎಸ್‌ಪಿ, ‘ಕೂಲಂಕಷವಾಗಿ ತನಿಖೆ ನಡೆಸಲಾಗುವುದು. ನಮ್ಮದೇ ಸೈಬರ್‌ ಸೆಲ್‌ ಇದೆ. ಅವಶ್ಯಕತೆ ಬಿದ್ದರೆ ಬಳಸಿಕೊಳ್ಳುತ್ತೇವೆ. ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಂಡು ಸಾಕ್ಷಿ ಸಂಗ್ರಹಿಸಲಾಗುವುದು. ತಪ್ಪಿತಸ್ಥರಿಗೆ ಶಿಕ್ಷೆಯಾಗುವಂತೆ ನೋಡಿಕೊಂಡು ಬಾಲೆಗೆ ನ್ಯಾಯ ಒದಗಿಸಲಾಗುವುದು’ ಎಂದರು.

ಉ.ಕ ವಿವಿಧ ಜಿಲ್ಲೆಗಳಲ್ಲಿ ತೀವ್ರಗೊಂಡ ಪ್ರತಿಭಟನೆ

ಹುಬ್ಬಳ್ಳಿ: ವಿಜಯಪುರದ ದಲಿತ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ, ಕೊಲೆ ಪ್ರಕರಣ ಖಂಡಿಸಿ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಜನರ ಆಕ್ರೋಶ ಮುಗಿಲುಮುಟ್ಟಿದೆ. ಗದಗ, ಹುಬ್ಬಳ್ಳಿ– ಧಾರವಾಡ, ಹೊಸಪೇಟೆ, ಹಾವೇರಿ, ಬೆಳಗಾವಿ ಹಾಗೂ ಕರಾವಳಿಯ ಕಾರವಾರದಲ್ಲಿ ಶುಕ್ರವಾರ ಪ್ರತಿಭಟನೆಗಳು ನಡೆದವು.

ವಿಜಯಪುರ ಜಿಲ್ಲೆಯ ತಾಳಿಕೋಟೆ, ದೇವರಹಿಪ್ಪರಗಿ, ಇಂಡಿ ಪಟ್ಟಣದಲ್ಲಿ ಶುಕ್ರವಾರ ನಡೆದ ಬಂದ್‌ ಸಂಪೂರ್ಣ ಯಶಸ್ವಿಯಾಗಿದೆ.  ವಿಜಯಪುರ, ಸಿಂದಗಿ, ಮುದ್ದೇಬಿಹಾಳ, ತಿಕೋಟಾ ಸೇರಿದಂತೆ ಪಟ್ಟಣ, ಗ್ರಾಮೀಣ ಪ್ರದೇಶಗಳಲ್ಲಿ ಪ್ರತಿಭಟನೆಯ ಕಾವು ತೀವ್ರಗೊಂಡಿದೆ.

ವಿದ್ಯಾರ್ಥಿಗಳು ಎಲ್ಲೆಡೆ ಸ್ವಯಂಪ್ರೇರಿತರಾಗಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದಾರೆ. ಆರೋಪಿಗಳನ್ನು ಗೆಲ್ಲಿಗೇರಿಸಬೇಕು ಎಂದು ಒತ್ತಾಯಿಸಿದ್ದಾರೆ. ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಸಿಐಡಿ ಎಸ್ಪಿ ಎಚ್.ಡಿ.ಆನಂದಕುಮಾರ್‌ ನೇತೃತ್ವದ ತಂಡ ಸಂತ್ರಸ್ತೆಯ ಮನೆಗೆ ಭೇಟಿ ನೀಡಿ ತಂದೆ–ತಾಯಿಯಿಂದ ಮಾಹಿತಿ ಕಲೆ ಹಾಕಿತು. ನಂತರ ಅಪಹರಣ ನಡೆದ ಸ್ಥಳ, ಅತ್ಯಾಚಾರ ನಡೆದ ಮನೆ, ಬಾಲಕಿ ಓದುತ್ತಿದ್ದ ಶಾಲೆಗೂ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿತು.

ಬಿಜೆಪಿ ಕಾರ್ಯಕರ್ತರಿಂದಲೇ ಅತ್ಯಾಚಾರ: ಶಾಸಕರ ಆರೋಪ

ವಿಜಯಪುರ: ‘ಬಜರಂಗದಳ, ಆರ್‌ಎಸ್‌ಎಸ್‌, ಬಿಜೆಪಿ ನಾಯಕರ ಬೆಂಬಲಿಗರೇ ದಲಿತ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ, ಹತ್ಯೆ ಮಾಡಿದ್ದಾರೆ’ ಎಂದು ನಾಗಠಾಣ ಶಾಸಕ ಪ್ರೊ.ರಾಜು ಆಲಗೂರ ಆರೋಪ ಮಾಡಿದರು.

‘ಸಂತ್ರಸ್ತೆ ಜತೆಗಿದ್ದ ವಿದ್ಯಾರ್ಥಿನಿ, ಆರೋಪಿಗಳನ್ನು ಗುರುತಿಸಿದ್ದಾಳೆ. ಅವರೆಲ್ಲರೂ ಬಿಜೆಪಿ ಸೇರಿದಂತೆ ಅದರ ಅಂಗಸಂಸ್ಥೆಗಳಲ್ಲಿ ಸಕ್ರಿಯರಾಗಿದ್ದವರು’ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿ ದೂರಿದರು. ಸಾಮಾಜಿಕ ಜಾಲತಾಣದಲ್ಲಿ ಶಂಕಿತ ಆರೋಪಿಗಳು ಶೇರ್‌ ಮಾಡಿಕೊಂಡಿದ್ದ ಫೋಟೊಗಳ ಪ್ರತಿಗಳನ್ನು ಅವರು ಪತ್ರಿಕಾಗೋಷ್ಠಿಯಲ್ಲಿ ಪ್ರದರ್ಶಿಸಿದರು.

‘ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಫೇಸ್‌ಬುಕ್‌ ಅಕೌಂಟ್‌ನಲ್ಲಿದ್ದ ಎಲ್ಲ ಫೋಟೊಗಳನ್ನು ಡಿಲಿಟ್‌ ಮಾಡಲಾಗಿದೆ. ಸೈಬರ್‌ ಕ್ರೈಂ ವಿಭಾಗದ ಪೊಲೀಸ್ ಅಧಿಕಾರಿಗಳು ಈ ಕುರಿತು ಸಮಗ್ರ ತನಿಖೆ ನಡೆಸಿದರೆ ಬಿಜೆಪಿಯ ಬಣ್ಣ ಬಯಲಾಗಲಿದೆ’ ಎಂದು ಹೇಳಿದರು.

ಶಾಸಕರು ಬಿಡುಗಡೆಗೊಳಿಸಿದ ಪೋಸ್ಟರ್‌ಗಳಲ್ಲಿ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ವಿಧಾನ ಪರಿಷತ್ತಿನ ಪಕ್ಷೇತರ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ಸೇರಿದಂತೆ ಇನ್ನಿತರ ಕೆಲ ಸ್ಥಳೀಯ ಮುಖಂಡರ ಚಿತ್ರಗಳಿವೆ.

ಸಂಬಂಧವೇ ಇಲ್ಲ: ‘ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಫೋಟೊಗಳಿಗೂ, ಈ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ. ಯಾವೊಬ್ಬ ಆರೋಪಿಯೂ ಬಿಜೆಪಿ, ಅದರ ಅಂಗ–ಸಂಸ್ಥೆಗಳ ಕಾರ್ಯಕರ್ತರಲ್ಲ’ ಎಂದು ಬಿಜೆಪಿ ಮುಖಂಡ ಅಪ್ಪಾಸಾಹೇಬ ಪಟ್ಟಣಶೆಟ್ಟಿ ಸ್ಪಷ್ಟಪಡಿಸಿದರು. ‘ಆರೋಪಿಗಳಿಗೂ ನನಗೂ ಯಾವುದೇ ಸಂಬಂಧವಿಲ್ಲ’ ಎಂದು ವಿಧಾನ ಪರಿಷತ್‌ ಸದಸ್ಯ ಬಸನಗೌಡ ಪಾಟೀಲ ಯತ್ನಾಳ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.

‘ಆರೋಪಿಗಳನ್ನು ಗಲ್ಲಿಗೇರಿಸಿ’

ವಿಜಯಪುರ: ‘ನನ್ನ ಮಗಳನ್ನು ಹತ್ಯೆ ಮಾಡಿದ ಆರೋಪಿಗಳನ್ನು ಗಲ್ಲಿಗೇರಿಸಬೇಕು’ ಎಂದು ಸಂತ್ರಸ್ತೆಯ ತಂದೆ– ತಾಯಿ ಸಿಐಡಿ ಪೊಲೀಸರಲ್ಲಿ ಮನವಿ ಮಾಡಿದರು. ಸಿಐಡಿ ಅಧಿಕಾರಿಗಳು ತಮ್ಮ ನಿವಾಸಕ್ಕೆ ಭೇಟಿ ನೀಡುತ್ತಿದ್ದಂತೆ, ಗದ್ಗದಿತರಾದ ಪೋಷಕರು ‘ಕೈ ಮುಗಿದು, ನ್ಯಾಯ ಕೊಡಿಸಿ’ ಎಂದು ಕೇಳಿದರು.

ಸಂತ್ರಸ್ತೆಯ ಮನೆಗೆ ಸಚಿವೆ ಉಮಾಶ್ರೀ ಭೇಟಿ ನೀಡಿ ಸಾಂತ್ವನ ಹೇಳಿದರು. ಮರಣೋತ್ತರ ಪರೀಕ್ಷೆಯ ವರದಿ ಬರುತ್ತಿದ್ದಂತೆ, ತನಿಖೆಯನ್ನು ಚುರುಕುಗೊಳಿಸಿ, ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳುವೆ ಎಂದು ಭರವಸೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT