ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೇತ್ರಾಣಿಯಲ್ಲಿ ಸ್ಕೂಬಾ ಡೈವಿಂಗ್‌ ಉತ್ಸವ

Last Updated 23 ಡಿಸೆಂಬರ್ 2017, 7:14 IST
ಅಕ್ಷರ ಗಾತ್ರ

ಕಾರವಾರ: ಭಟ್ಕಳ ತಾಲ್ಲೂಕಿನ ಮುರ್ಡೇಶ್ವರದ ನೇತ್ರಾಣಿ ದ್ವೀಪದಲ್ಲಿ ಜನವರಿ 6 ಮತ್ತು 7ರಂದು ಅಂತರರಾಷ್ಟ್ರೀಯ ಸ್ಕೂಬಾ ಡೈವಿಂಗ್‌ ಉತ್ಸವವನ್ನು ಮೊದಲ ಬಾರಿಗೆ ಆಯೋಜಿಸಲಾಗಿದ್ದು, ನೀಲಿ ಕಡಲಿನಾಳದ ವಿಷ್ಮಯಗಳನ್ನು ಕಣ್ತುಂಬಿಕೊಳ್ಳುವ ಅವಕಾಶವನ್ನು ಇದು ಮಾಡಿಕೊಡಲಿದೆ.

ನೀಲಿ ಸಮುದ್ರದಿಂದ ಸುತ್ತುವರೆದಿರುವ ನೇತ್ರಾಣಿ ದ್ವೀಪ ತನ್ನ ಒಡಲಲ್ಲಿ ಅದ್ಭುತ ಜಗತ್ತನ್ನೇ ಇರಿಸಿಕೊಂಡಿದೆ. ಸ್ಪಷ್ಟವಾಗಿ ಕಾಣುವ ನೀರಿನಾಳದಲ್ಲಿನ ಹವಳ ದಿಬ್ಬಗಳು, ಅಪರೂಪದ ಜೀವವೈವಿಧ್ಯ ‘ಸ್ಕೂಬಾ ಡೈವಿಂಗ್‌’ ಚಟುವಟಿಕೆಗೆ ಪ್ರಶಸ್ತ ತಾಣವಾಗಿದೆ. ಇಲ್ಲಿ ಚಿಟ್ಟೆ ಮೀನು, ಕ್ಯಾಟ್ ಫಿಶ್, ಟೈಗರ್ ಫಿಶ್, ಬಂದೂಕು ಮೀನು, ಗಿಳಿ ಮೀನು, ಹಾವು ಮೀನು, ಸ್ಟಿಂಗ್‌ ರೇ, ಕಡಲಾಮೆ ಸೇರಿದಂತೆ 35ಕ್ಕೂ ಅಧಿಕ ಪ್ರಭೇದದ ಜಲಚರಗಳು ಕಾಣಸಿಗಲಿದ್ದು, ಇಂಥ ಅಪರೂಪದ ಜೀವರಾಶಿಗಳು ಇಲ್ಲಿನ ಹವಳ ದಿಬ್ಬಗಳನ್ನೇ ಆಶ್ರಯಿಸಿದೆ.

₹ 20 ಲಕ್ಷ ಬಿಡುಗಡೆ: ಉತ್ಸವಕ್ಕೆ ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ವತಿಯಿಂದ ₹ 20 ಲಕ್ಷ ಬಿಡುಗಡೆಯಾಗಿದ್ದು, ಉತ್ಸವದ ಸಂಪೂರ್ಣ ಜವಾಬ್ದಾರಿಯನ್ನು ಪುಣೆಯ ಫಿನ್‌ಕಿಕ್‌ ಅಡ್ವೆಂಚರ್ಸ್‌ ಸಂಸ್ಥೆ ವಹಿಸಿಕೊಂಡಿದೆ. ಉತ್ಸವದ ಯಶಸ್ವಿಗೆ ಈಗಿನಿಂದಲೇ ತಯಾರಿ ಆರಂಭವಾಗಿದೆ.

‘ಸ್ಕೂಬಾ ಡೈವಿಂಗ್‌ ಉತ್ಸವಕ್ಕೆ ಜಗತ್ತಿನ ನಾನಾ ಕಡೆಗಳಿಂದ ಒಟ್ಟು 150 ಮಂದಿ ಭಾಗವಹಿಸುತ್ತಿದ್ದಾರೆ. ಅಳ ಸಮುದ್ರದೊಳಗೆ ಇಳಿದು ಹವಳ ದಿಬ್ಬ ಹಾಗೂ ಜಲಚರಗಳನ್ನು ಕಣ್ತುಂಬಿಕೊಳ್ಳುವ ಜತೆಗೆ ಉತ್ಸವಕ್ಕೆ ಪೂರಕವಾದ ಹಲವು ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಸ್ಥಳೀಯ ಸಮುದಾಯ, ಮೀನುಗಾರರು, ಆಳಸಮುದ್ರ, ಕಡಲತೀರ ಕುರಿತು ಕಿರು ಚಿತ್ರ ಪ್ರದರ್ಶನ, ಛಾಯಾಚಿತ್ರ ಪ್ರದರ್ಶನ, ಸ್ನೋರ್ಕಲಿಂಗ್‌ ಹಾಗೂ ಜಲ ಕ್ರೀಡೆಗಳು ಇರಲಿದೆ. ಉತ್ಸವದಲ್ಲಿ ಭಾಗವಹಿಸುವವರಿಗೆ ಆಕರ್ಷಕ ಹಾಗೂ ರಿಯಾಯಿತಿ ದರದಲ್ಲಿ ಪ್ರವೇಶ ಅವಕಾಶ ಕಲ್ಪಿಸುತ್ತಿದ್ದೇವೆ’ ಎಂದು ಫಿನ್‌ಕಿಕ್‌ ಅಡ್ವೆಂಚರ್ಸ್‌ ಸಂಸ್ಥೆಯ ಸಹ ಸಂಸ್ಥಾಪಕ ಅಂಕಿತ್ ಸಬೂ ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ಸವದ ಪ್ರವೇಶಕ್ಕ ಸೀಮಿತ ಟಿಕೆಟ್‌ಗಳು ಲಭ್ಯವಿದ್ದು, ಮಾಹಿತಿಗಾಗಿ ಮೊಬೈಲ್‌ 8380087062 ಅಥವಾ ಇದೇ ಸಂಖ್ಯೆಗೆ ವಾಟ್ಸ್‌ಆ್ಯಪ್‌ ಕೂಡಾ ಮಾಡಬಹುದು. ವೆಬ್‌ಸೈಟ್‌ www.netraniscubafest.com ಸಂಪರ್ಕಿಸಬಹುದು. ಮಂಗಳೂರಿನಿಂದ ಮುರ್ಡೇಶ್ವರ 154 ಕಿ.ಮೀ ದೂರವಿದೆ. ಬೆಂಗಳೂರಿನಿಂದ ಬರಬೇಕೆಂದರೆ 500 ಕಿ.ಮೀ ಕ್ರಮಿಸಬೇಕು’ ಎಂದು ನುಡಿದರು.
*****

ನೇತ್ರಾಣಿ ಪ್ರಶಸ್ತ ಸ್ಥಳ
ಅಂಡಮಾನ್‌- ನಿಕೋಬಾರ್‌, ಲಕ್ಷದ್ವೀಪ, ಪಾಂಡಿಚೇರಿ ಹಾಗೂ ಗೋವಾ ಹೊರತುಪಡಿಸಿದರೆ ಸ್ಕೂಬಾ ಡೈವಿಂಗ್‌ ಹೇಳಿ ಮಾಡಿಸಿದ ಜಾಗವಿರುವುದು ನೇತ್ರಾಣಿಯಲ್ಲಿ ಮಾತ್ರ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡುವ ದಿಸೆಯಲ್ಲಿ ಉತ್ತರ ಕನ್ನಡ ಜಿಲ್ಲಾಡಳಿತ ಸ್ಕೂಬಾ ಡೈವಿಂಗ್‌ ಚಟುವಟಿಕೆ ನಡೆಸಲು ಡೈವ್‌ ಗೋವಾ, ಮುಂಬೈನ ವೆಸ್ಟ್‌ ಕೋಸ್ಟ್‌ ಮತ್ತು ಮುರ್ಡೇಶ್ವರದ ನೇತ್ರಾಣಿ ಅಡ್ವೆಂಚರ್ ಸಂಸ್ಥೆಗೆ ಅನುಮತಿ ನೀಡಿದೆ.

ಟೀಸರ್‌ ಬಿಡುಗಡೆ ಇಂದು
ಸ್ಕೂಬಾ ಡೈವಿಂಗ್‌ ಉತ್ಸವದ ಟೀಸರ್‌ ಹಾಗೂ ಪೋಸ್ಟರನ್ನು ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಆರ್‌.ವಿ.ದೇಶಪಾಂಡೆ ಅವರು ಕುಮಟಾದಲ್ಲಿ ಬಿಡುಗಡೆ ಮಾಡುವರು ಹಾಗೂ ಉತ್ಸವದ ಕುರಿತು ಹೆಚ್ಚಿನ ಮಾಹಿತಿ ನೀಡಲಿದ್ದಾರೆ.

* * 

ನೇತ್ರಾಣಿಯಲ್ಲಿನ ನೀಲಿಗಡಲು ಹಾಗೂ ವೈವಿಧ್ಯಮಯ ಜಲಚರಗಳು ನಿಮ್ಮ ಜೀವನದ ಅವಿಸ್ಮರಣೀಯ ಕ್ಷಣಗಳನ್ನು ಸೃಷ್ಟಿಸಲಿದೆ.
ಎಚ್‌.ಪ್ರಸನ್ನ, ಹೆಚ್ಚುವರಿ ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT