ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ಹಸ್ತಕ್ಷೇಪ: ಶೋಲಾ ಅರಣ್ಯ ನಾಶ

Last Updated 23 ಡಿಸೆಂಬರ್ 2017, 7:16 IST
ಅಕ್ಷರ ಗಾತ್ರ

ಮಡಿಕೇರಿ: ‘ಕಾವೇರಿ ನದಿಯ ಉಗಮಸ್ಥಳ ತಲಕಾವೇರಿ ವ್ಯಾಪ್ತಿಯ ಬೆಟ್ಟಗಳ ಅತಿಕ್ರಮಣ ಹಾಗೂ ನಾಶ ತಡೆಯಬೇಕು’ ಎಂದು ವಿವಿಧ ಪರಿಸರ ಸಂಘಟನೆಗಳ ಮುಖಂಡರು ಆಗ್ರಹಿಸಿ, ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ. ‘ಬ್ರಹ್ಮಗಿರಿಯ ಜೀವವೈವಿಧ್ಯ ಉಳಿಸಲು ಅರಣ್ಯ ಇಲಾಖೆ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕ್ರಮ ಕೈಗೊಳ್ಳಬೇಕು’ ಎಂದೂ ಒತ್ತಾಯಿಸಿದ್ದಾರೆ.

‘ತಲಕಾವೇರಿಯಿಂದ ಭಾಗಮಂಡಲದ ತನಕ 8 ಕಿ.ಮೀ ಘಟ್ಟ ಇಳಿಯಲು ರಸ್ತೆಯಿದ್ದು ಭಾರೀ ತಿರುವುಗಳಿವೆ. ಈ ರಸ್ತೆಯ ಅಕ್ಕಪಕ್ಕ ಶೋಲಾ ಅರಣ್ಯವಿದ್ದು, ಕಳೆದ 15 ವರ್ಷಗಳಲ್ಲಿ ಮಾನವ ಹಸ್ತಕ್ಷೇಪ ಅತಿಯಾಗಿ ಅರಣ್ಯ ನಾಶವಾಗಿದೆ. ಇದು ಸೂಕ್ಷ್ಮ ಅರಣ್ಯ ಪ್ರದೇಶವಾಗಿದ್ದು, ನಾಶ ತಡೆಗಟ್ಟಬೇಕು’ ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

‘ತಿರುವುಗಳಲ್ಲಿ ಕಟ್ಟಡ ನಿರ್ಮಾಣ, ಅರಣ್ಯೇತರ ಚಟುವಟಿಕೆಗಳ ಹಾವಳಿ ಹೆಚ್ಚಾಗಿದೆ. ಅದಕ್ಕೆ ಕಡಿವಾಣ ಹಾಕಬೇಕು. ಪರಿಸರ ನಾಶದಿಂದ ಭೂಕುಸಿತ, ನದಿ ಮೂಲಕ್ಕೆ ಧಕ್ಕೆ ಉಂಟಾಗಿ ನದಿಯ ಮೂಲವೇ ಬತ್ತಿ ಹೋಗುವ ಅಪಾಯವಿದೆ’ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ.

‘ಖಾಸಗಿ ಭೂಮಿ ಹೊರತುಪಡಿಸಿ ಉಳಿದ ಅರಣ್ಯ ಭೂಮಿಯ ಗಡಿ ಗುರುತಿಸಬೇಕು. ಗಡಿ ಕಂದಕ, ಬೇಲಿ ನಿರ್ಮಿಸಬೇಕು. ಚೇರಂಗಾಲದಲ್ಲಿ ಅರಣ್ಯ ಸಮಿತಿ ರಚಿಸಬೇಕು’ ಎಂಬ ಬೇಡಿಕೆ ಇಟ್ಟಿದ್ದಾರೆ.

‘ಭಾಗಮಂಡಲ, ನಾಪೋಕ್ಲು, ಕರಿಕೆ, ಅಯ್ಯಂಗೇರಿ, ಕಕ್ಕಬ್ಬೆ ಒಳಗೊಂಡಂತೆ ಒಟ್ಟು 8 ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ತಲಕಾವೇರಿ ಬೆಟ್ಟಗಳ ಸಾಲಿನಲ್ಲಿ 60ಕ್ಕೂ ಹೊಳೆಗಳು ಹರಿಯುತ್ತವೆ. ಈ ಹೊಳೆಗಳೇ ಕಾವೇರಿ ನದಿಗೆ ಮೂಲ. ಅವುಗಳ ರಕ್ಷಣೆಯಾದರೆ ಮಾತ್ರ ನದಿ ಸಮೃದ್ಧವಾಗಿ ಹರಿಯಲು ಸಾಧ್ಯ. ಈ ಎಲ್ಲ ಹೊಳೆಗಳ ರಕ್ಷಣೆಯಾಗಬೇಕು. ಭಾಗಮಂಡಲ ವ್ಯಾಪ್ತಿಯಲ್ಲಿರುವ ದೇವರು ಕಾಡುಗಳು ನಾಶವಾಗುತ್ತಿದ್ದು ಉಳಿಸಲು ಕ್ರಮ ಕೈಗೊಳ್ಳಬೇಕು' ಎಂದು ಆಗ್ರಹಿಸಿದ್ದಾರೆ.

ಡಿ.15ರಂದು ಸಂಘಟನೆಯ ಪ್ರಮುಖರು ತಲಕಾವೇರಿಯಿಂದ ಭಾಗಮಂಡಲದ ತನಕ ಪಾದಯಾತ್ರೆ ನಡೆಸಿ ಅರಣ್ಯ ಸಚಿವ ರಮಾನಾಥ್‌ ರೈ, ಕೊಡಗು ಜಿಲ್ಲಾಧಿಕಾರಿ ಶ್ರೀವಿದ್ಯಾ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಹಕ್ಕೊತ್ತಾಯದ ಮನವಿ ಸಲ್ಲಿಸಿದ್ದಾರೆ.

ವೃಕ್ಷಲಕ್ಷ ಆಂದೋಲನದ ಅಧ್ಯಕ್ಷ ಅನಂತ ಹೆಗಡೆ ಅಶೀಸರ, ಭಾರತೀಯ ವಿಜ್ಞಾನ ಸಂಸ್ಥೆ ಪರಿಸರ ವಿಜ್ಞಾನಿ ಡಾ.ಟಿ.ವಿ.ರಾಮಚಂದ್ರ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮಾಜಿ ಅಧ್ಯಕ್ಷ ಡಾ.ವಾಮನಾಚಾರ್ಯ, ಡಾ.ಕೇಶವ, ಪರಿಸರ ಬರಹಗಾರ ನಾಗೇಶ ಹೆಗಡೆ, ವೈ.ಬಿ.ರಾಮಕೃಷ್ಣ, ರವಿ ಚೆಂಗಪ್ಪ, ಪ್ರೊ.ಬಿ.ಎಂ.ಕುಮಾರಸ್ವಾಮಿ, ಡಾ.ಶಂಕರ ಶರ್ಮ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT