ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿಗೆ ಕೆರೆನೀರು, ಭತ್ತದ ನಾಟಿ ಜೋರು

Last Updated 23 ಡಿಸೆಂಬರ್ 2017, 7:24 IST
ಅಕ್ಷರ ಗಾತ್ರ

ನಂಗಲಿ: ತೀವ್ರ ಬರಗಾಲದಿಂದ ತತ್ತರಿಸಿ ಹೋಗಿದ್ದ ಈ ಭಾಗದಲ್ಲಿ ಅಂತರ್ಜಲ ವೃದ್ಧಿಯಾಗಬೇಕು ಎನ್ನುವ ಕಾರಣಕ್ಕೆ ಯಾವುದೇ ಕಾರಣಕ್ಕೂ ಕೆರೆಗಳಿಂದ ನೀರನ್ನು ಹೊರತೆಗೆದು ವ್ಯವಸಾಯಕ್ಕೆ ಬಳಸಬಾರದು ಎನ್ನುವ ಆದೇಶವಿದ್ದರೂ ಗ್ರಾಮದ ಸುತ್ತಮುತ್ತ ಕೆಲವರು ಕೆರೆಗಳ ನೀರನ್ನು ಕೃಷಿ ಕೆಲಸಕ್ಕೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.

ಸುಮಾರು 13-14 ವರ್ಷಗಳಿಂದ ಈ ಭಾಗದಲ್ಲಿ ತೀವ್ರ ಬರಗಾಲ ಆವರಿಸಿದ್ದರಿಂದ ಅಂತರ್ಜಲ ಮಟ್ಟ ಕುಸಿದು ಹೋಗಿತ್ತು. ಇದರಿಂದ ಅಂತರ್ಜಲ ಸುಮಾರು 1,200 ಅಡಿಗಳಿಂದ 1,500 ಅಡಿಗಳವರೆಗೆ ಕುಸಿದಿದೆ. ಕೊಳವೆ ಭಾವಿಗಳಲ್ಲಿ ಕುಡಿಯಲೂ ನೀರು ಸಿಗದೆ ಜನರು ಸಮಸ್ಯೆ ಎದುರಿಸಿದ್ದರು. ಆದರೆ ಇತ್ತೀಚೆಗೆ ಬಿದ್ದ ಮಳೆಯಿಂದ ಕೆರೆಗಳು ತುಂಬಿದ್ದವು.

ಅಂತರ್ಜಲ ವೃದ್ದಿಯಾಗಲಿ ಎನ್ನುವ ಕಾರಣಕ್ಕೆ ಯಾವುದೇ ಕೆರೆಗಳ ನೀರನ್ನು ವ್ಯವಸಾಯಕ್ಕೆ ಬಳಸಿಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಆದೇಶ ಮಾಡಿದ್ದರು. ಆದರೆ ಈ ಆದೇಶವನ್ನು ದಿಕ್ಕರಿಸಿ ಈ ಭಾಗದ ಶ್ರೀರಂಗಪುರ, ಬಾಚಮಾಕನಹಳ್ಳಿ, ಪದ್ಮಘಟ್ಟ, ತಾತಿಕಲ್ಲು ಸೇರಿದಂತೆ ಹಲವೆಡೆ ಕೆರೆಗಳ ತೂಬುಗಳನ್ನು ತೆಗೆದು ಭತ್ತದ ಬೆಳೆ ಬೆಳೆಯಲು ನೀರನ್ನು ಬಳಸಿಕೊಳ್ಳುತ್ತಿದ್ದಾರೆ.

ಕೆರೆಗಳು ತುಂಬಿರುವುದರಿಂದ ರೈತರು ಭತ್ತವನ್ನು ನಾಟಿ ಮಾಡುವ ಖುಷಿಯಲ್ಲಿದ್ದಾರೆಯೇ ಹೊರತು ಸರ್ಕಾರದ ಆದೇಶದ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಕೆರೆಗಳು ತುಂಬಿರುವುದರಿಂದ ಈಗಾಗಲೇ ಬಾಚಮಾಕನಹಳ್ಳಿ, ತಾತಿಕಲ್ಲು ಮತ್ತು ಶ್ರೀರಂಗಪುರ ಮುಂತಾದ ಕೆರೆಗಳಿಂದ ನೀರನ್ನು ಹೊರತೆಗೆದು ಭತ್ತವನ್ನು ನಾಟಿ ಮಾಡುತ್ತಿದ್ದಾರೆ.

ಇನ್ನು ಕೆಲವು ಕೆರೆಗಳಿಗೆ ತೂತು ಬಿದ್ದಿದ್ದು, ನೀರು ಪೋಲಾಗತ್ತಿದೆ. ಕೆಲವು ಕೆರೆಗಳಲ್ಲಿ ನೀರನ್ನು ಬಳಸದಿದ್ದರೂ ಸೋರಿಕೆಯಿಂದಾಗಿ ನೀರು ಪೋಲಾಗುತ್ತಿರುವುದರಿಂದ ರೈತರ ಉಪಯೋಗಕ್ಕೂ ಬರದೇ, ಇತ್ತ ಅಂತರ್ಜಲ ವೃದ್ಧಿಗೆ ಪೂರಕವೂ ಆಗದೇ ಖಾಲಿಯಾಗುತ್ತಿದೆ.

ಕೆರೆಯ ನೀರನ್ನು ಬಳಸಬಾರದು ಎಂಬ ಆದೇಶದ ಬಗ್ಗೆ ರೈತರಿಗೆ ಮಾಹಿತಿಯಿಲ್ಲ. ಹೀಗಾಗಿ ಕೆಲವು ಕಡೆ ರಾಜಾರೋಷವಾಗಿ ಕೆರೆಯ ನೀರನ್ನು ಬಳಸಿಕೊಳ್ಳಲಾಗುತ್ತಿದೆ. ಕೆಲವರು ರಾತ್ರಿ ಹೊತ್ತಿನಲ್ಲಿ ನೀರನ್ನು ತೆಗೆದು ಭತ್ತ ನಾಟಿ ಮಾಡಿದ್ದಾರೆ ಮತ್ತು ಕೆಲವು ಕಡೆ ನಾಟಿ ಮಾಡಲು ಭೂಮಿಯನ್ನು ಹದಮಾಡಿಕೊಳ್ಳುತ್ತಿದ್ದಾರೆ. ಹೀಗೆ ಕೆರೆಯ ನೀರನ್ನು ಕೃಷಿ ಚಟುವಟಿಕೆಗಳಿಗೆ ಬಳಸಿಕೊಂಡರೆ ಅಂತರ್ಜಲ ಹೇಗೆ ವೃದ್ದಿಯಾಗುತ್ತದೆ? ಎಂದು ಪ್ರಶ್ನಿಸುತ್ತಾರೆ ಹೆಸರು ಹೇಳಲು ಇಚ್ಚಿಸದ ಗ್ರಾಮಸ್ಥರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT