ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಸ್‌ಮಸ್‌ ಹಬ್ಬಕ್ಕೆ ಭರ್ಜರಿ ತಯಾರಿ

Last Updated 23 ಡಿಸೆಂಬರ್ 2017, 8:37 IST
ಅಕ್ಷರ ಗಾತ್ರ

ವಿಜಯಪುರ : ಕ್ರಿಸ್‌ಮಸ್‌ ಹಬ್ಬದ ಸಡಗರ ಎಲ್ಲೆಡೆ ಕಂಡು ಬರುತ್ತಿದೆ. ಹೊಸ ವರ್ಷವೂ ಸಮೀಪದಲ್ಲಿರುವ ಕಾರಣ ಬೇಕರಿಗಳಲ್ಲಿ ನವನವೀನ ಮಾದರಿ ಕೇಕ್‌ಗಳ ಪ್ರದರ್ಶನ ಗಮನ ಸೆಳೆಯುತ್ತಿದೆ. ಅಲ್ಲಲ್ಲಿ ಸಾಂತಾಕ್ಲಾಸ್‌ ವೇಷಗಳು ಜನರನ್ನು ಕೈ ಬೀಸಿ ಕರೆಯುತ್ತಿವೆ.

ಇಲ್ಲಿನ ಇಮ್ಮಾನುವೇಲ್ ಚರ್ಚ್, ಚಂದೇನಹಳ್ಳಿ ಗೇಟ್ ನಲ್ಲಿರುವ ಯೇಸು ಪ್ರೇಮಾಲಯ ಚರ್ಚ್, ಬಾಲಯೇಸು ದೇವಾಲಯ, ಮಂಡಿಬೆಲೆ ರಸ್ತೆಯಲ್ಲಿರುವ ಮಾರ್ಥೋಮಾ ಚರ್ಚ್, ಬಿಜ್ಜವಾರ, ಗಂಗವಾರ, ಸಿ.ಎನ್.ಹೊಸೂರು, ಬುಳ್ಳಹಳ್ಳಿ ಒಳ್ಳೆ ಕುರುಬನ ಸಭೆ, ದೊಡ್ಡಸಾಗರಹಳ್ಳಿ, ಸೇರಿದಂತೆ ಹಲವಡೆ ಚರ್ಚ್ ಗಳಿಗೆ ಸುಣ್ಣ ಬಣ್ಣಗಳನ್ನು ಬಳಿದು, ವಿವಿಧ ಬಗೆಯ ಬಣ್ಣ ಬಣ್ಣದ ಕಾಗದಗಳಿಂದ ಸಿಂಗರಿಸಲಾಗಿದೆ.

ಪಾಸ್ಟರ್ ರಾಜಪ್ಪ ಮಾತನಾಡಿ, ಕ್ರಿಸ್ತ ಯೇಸು ಹುಟ್ಟಿದ ದಿನವನ್ನು ಕ್ರೈಸ್ತರು ಕ್ರಿಸ್‌ಮಸ್‌ ಹಬ್ಬವಾಗಿ ಆಚರಿಸುತ್ತಾರೆ. ಡಿ. 24 ರಂದು ಮಧ್ಯರಾತ್ರಿ ಕ್ರಿಸ್ತ ಹುಟ್ಟಿದ ನಂಬಿಕೆಯಿಂದ ಇಡೀ ರಾತ್ರಿ ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಯೇಸು ಕ್ರಿಸ್ತ ಹುಟ್ಟಿದ ಸಂಧರ್ಭದಲ್ಲಿ ಆಕಾಶದಲ್ಲಿ ನಕ್ಷತ್ರ ಹುಟ್ಟಿತ್ತು. ಸ್ವತಃ ದೇವ ದೂತರೇ ಇದನ್ನು ದೃಢೀಕರಿಸಿದ್ದರು ಎನ್ನುವ ನಂಬಿಕೆಯಿಂದ ಪ್ರತಿ ಮನೆಯ ಮೇಲೆ ನಕ್ಷತ್ರವನ್ನು ಕಟ್ಟುತ್ತಾರೆ. ಕ್ರಿಸ್ ಮಸ್ ಆಚರಣೆ ಮಾಡುವ ಮುನ್ನವೇ ಚರ್ಚ್ ಗೆ ಬಂದು ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳುವ ಮೂಲಕ ಸಾಂಪ್ರದಾಯಿಕ ಚಾಲನೆ ನೀಡಲಾಗುತ್ತದೆ ಎಂದರು.

ಕ್ರಿಸ್ತ ಗೋದಲಿಯಲ್ಲಿ ಜನಿಸಿದ ಎನ್ನುವ ಕಾರಣಕ್ಕೆ ಅದನ್ನು ನೆನಪಿಸಿಕೊಳ್ಳಲು ಹಲವರು ಮನೆ ಮುಂದೆ, ಮನೆಯೊಳಗೆ ಗೋದಲಿ ನಿರ್ಮಾಣ ಮಾಡುತ್ತಾರೆ. ಅದರೊಳಗೆ ಕುರಿ ಮರಿಗಳ ಆಟಿಕೆಗಳನ್ನು ಇಟ್ಟು, ದೀಪಾಲಂಕಾರ ಮಾಡುತ್ತಾರೆ. ತುಂಬಾ ಆಕರ್ಷಕವಾಗಿ ಕಾಣುವ ಗೋದಲಿ ನೋಡಲು ಬೇರೆ ಸಮುದಾಯದ ನೆರೆಹೊರೆಯವರು ಹೋಗುತ್ತಾರೆ ಎಂದರು.

ಕ್ರಿಸ್ ಮಸ್ ಆಚರಣೆಯ ಮುಂಚೆ ಕೆರೋಲ್ ಮಾಡಲಾಗುತ್ತದೆ. ಸೌಹಾರ್ದತೆಯ ಸಂದೇಶ ಸಾರುವ ಕ್ರಿಸ್ ಮಸ್ ಹಾಡುಗಳು, ಕ್ರಿಸ್ ಮಸ್ ಗಿಂತ ಹಲವು ದಿನಗಳ ಮುಂಚೆಯೇ ಆರಂಭವಾಗುವ ಈ ಒಂದು ಸಂಪ್ರದಾಯದಲ್ಲಿ ಯುವಕರ ಗುಂಪುಗಳು ತಮ್ಮ ಪ್ರದೇಶದ ಮನೆ ಮನೆಗೂ ಕೆರೋಲ್ ಗಳನ್ನು ಹಾಡುತ್ತಾ ತೆರಳಿ ಈ ಸಂಭ್ರಮದ ಹಬ್ಬದ ಸೌಹಾರ್ದತೆಯ ಸಂದೇಶವನ್ನು ಸಾರುತ್ತಾರೆ ಎಂದರು.

ಇಲ್ಲಿನ ಬಹುತೇಕ ಫ್ಯಾನ್ಸಿ ಸ್ಟೋರ್ ಗಳಲ್ಲಿ ವಿವಿಧ ಬಗೆಯ ಅಲಂಕಾರಿಕ ವಸ್ತುಗಳು, ಕೃತಕ ನಕ್ಷತ್ರಗಳು, ಉಡುಗೊರೆಗಳು, ಕ್ರಿಸ್ ಮಸ್ ಟ್ರೀ ವ್ಯಾಪಾರ ಜೋರಾಗಿ ನಡೆಯುತ್ತಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT