ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತರಾತುರಿಯಲ್ಲಿ ಸಮಿತಿ ರಚನೆ, ಧರ್ಮ ಒಡೆಯುವ ವ್ಯವಸ್ಥಿತ ಸಂಚು: ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ

Last Updated 23 ಡಿಸೆಂಬರ್ 2017, 9:15 IST
ಅಕ್ಷರ ಗಾತ್ರ

ಗದಗ: ‘ವೀರಶೈವ–ಲಿಂಗಾಯತ ಸ್ವತಂತ್ರ ಧರ್ಮ ಮಾನ್ಯತೆ ವಿಷಯದಲ್ಲಿ ಸರ್ಕಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ತರಾತುರಿಯಲ್ಲಿ ಸಮಿತಿ ರಚಿಸಿದೆ. ಇದರ ಹಿಂದೆ ಧರ್ಮ ಒಡೆಯುವ ವ್ಯವಸ್ಥಿತ ಸಂಚು ಅಡಗಿದೆ. ಪಂಚಪೀಠಗಳ ಜಗದ್ಗುರುಗಳು ಇದನ್ನು ತೀವ್ರವಾಗಿ ಖಂಡಿಸುತ್ತೇವೆ’ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಾಶಿ ಪೀಠದ ಡಾ.ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಗದುಗಿನಲ್ಲಿ ಶನಿವಾರ ವೀರಶೈವ–ಲಿಂಗಾಯತ ಜನ ಜಾಗೃತಿ ಪಾದಯಾತ್ರೆಯಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆಗೆ ಅವರು ಮಾತನಾಡಿದರು.

‘ಸರ್ಕಾರ ಏಕಪಕ್ಷೀಯವಾಗಿ ಸಮಿತಿ ರಚಿಸಿದೆ. ಈ ವಿಷಯದಲ್ಲಿ ವೀರಶೈವರ ಏಕೈಕ ಸಂಸ್ಥೆಯಾದ ಅಖಿಲ ಭಾರತ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಅವರ ಅಭಿಪ್ರಾಯವನ್ನೂ ಕೇಳಿಲ್ಲ. ಸಮಿತಿಯಲ್ಲಿರುವ 7 ಮಂದಿ ಸದಸ್ಯರಿಗೆ ಅಖಂಡ ವೀರಶೈವ–ಲಿಂಗಾಯತ ಧರ್ಮ ಮತ್ತು ಸಂಸ್ಕೃತಿ ಬಗ್ಗೆ ಸರಿಯಾದ ತಿಳಿವಳಿಕೆಯೂ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ವೀರಶೈವ–ಲಿಂಗಾಯತ ಎರಡೂ ಒಂದೇ ಎಂದು ಸ್ವತಂತ್ರ ಧರ್ಮಕ್ಕೆ ಶಿಫಾರಸು ಮಾಡಿದರೆ ಅಭ್ಯಂತರ ಇಲ್ಲ. ಆದರೆ, ಲಿಂಗಾಯತಕ್ಕೆ ಮಾತ್ರ ಪ್ರತ್ಯೇಕ ಧರ್ಮದ ಮಾನ್ಯಗೆ ಶಿಫಾರಸು ಮಾಡಿದರೆ ಅದಕ್ಕೆ ನಮ್ಮ ಪ್ರಬಲ ವಿರೋಧವಿದೆ. ಡಿ. 24ರಂದು ಗದುಗಿನಲ್ಲಿ ನಡೆಯಲಿರುವ ಸಮನ್ವಯ ಸಮಾವೇಶದಲ್ಲಿ ಎಲ್ಲ ಮಠಾಧೀಶರು ಸೇರಿ ಈ ಕುರಿತು ಸ್ಪಷ್ಟ ನಿರ್ಣಯ ತೆಗೆದುಕೊಳ್ಳುತ್ತೇವೆ’ ಎಂದರು.  ಶ್ರೀಶೈಲ ಪೀಠದ ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಸ್ವಾಮೀಜಿ, ಬಾಲೆಹೊಸೂರಿನ ದಿಂಗಾಲೇಶ್ವರ ಸ್ವಾಮೀಜಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT