ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆನೆ ಆಯ್ತು, ಚಿರತೆ ಕಾಟ ಶುರುವಾಯ್ತು

Last Updated 23 ಡಿಸೆಂಬರ್ 2017, 9:43 IST
ಅಕ್ಷರ ಗಾತ್ರ

ದಾವಣಗೆರೆ: ಕೆಲವು ದಿನಗಳ ಹಿಂದಷ್ಟೇ ಆನೆಯ ದಾಳಿಗೆ ಬೆಚ್ಚಿಬಿದ್ದಿದ್ದ ಹೊನ್ನಾಳಿ ತಾಲ್ಲೂಕಿನ ಜನರು, ಈಗ ಚಿರತೆ ಕಾಣಿಸಿಕೊಂಡ ಬೆನ್ನಲ್ಲೇ ಮತ್ತಷ್ಟು ಆತಂಕ ಎದುರಿಸುವಂತಾಗಿದೆ.

ತಾಲ್ಲೂಕಿನ ಕುಂದೂರು ಗ್ರಾಮದ ಹೊರವಲಯದ ಕೆಇಬಿ ಕಚೇರಿ ಬಳಿಯ ಅಡಿಕೆ ತೋಟ ಹಾಗೂ ಗದ್ದೆಗಳ ಸುತ್ತಮುತ್ತ ಶುಕ್ರವಾರ ಬೆಳಿಗ್ಗೆ ಚಿರತೆ ಕಾಣಿಸಿಕೊಂಡಿದೆ. ಜನರು ಆತಂಕಕ್ಕೀಡಾಗಿದ್ದಾರೆ.

ಚಿರತೆ ಕಂಡವರು ಕೂಲಂಬಿ ಪೊಲೀಸ್‌ ಠಾಣೆಗೆ ಹಾಗೂ ಉಪ ತಹಶೀಲ್ದಾರ್‌ಗೆ ಮಾಹಿತಿ ನೀಡಿದ್ದಾರೆ. ಅಧಿಕಾರಿಗಳು ಅರಣ್ಯಾಧಿಕಾರಿಗಳಿಗೆ ಚಿರತೆ ಬಂದಿರುವ ಬಗ್ಗೆ ವಿಷಯ ಮುಟ್ಟಿಸಿ, ಸ್ಥಳಕ್ಕೆ ಧಾವಿಸಿದ್ದಾರೆ.

ಡಂಗೂರ ಸಾರಿಸಿ ಜಾಗೃತಿ: ಚಿರತೆ ಕಾಣಿಸಿಕೊಂಡ ವಿಷಯ ತಿಳಿಯುತ್ತಿದ್ದಂತೆ ಕುಂದೂರು ಗ್ರಾಮದ ಸುತ್ತಮುತ್ತಲಿನ ಕೂಲಂಬಿ, ನೆಲಹೊನ್ನೆ, ಎಂ.ಹನುಮನಹಳ್ಳಿ, ಯಕ್ಕನಹಳ್ಳಿ, ನೇರಲಗುಂಡಿ, ಹರಿಹರ ತಾಲ್ಲೂಕಿನ ಕೊಪ್ಪ ಗ್ರಾಮಗಳಲ್ಲಿ ಡಂಗೂರ ಸಾರಿಸಿ ಜಾಗೃತಿ ಮೂಡಿಸಲಾಗಿದೆ. ಜನರು ಹೊಲಗದ್ದೆಗಳಿಗೆ ತೆರಳದಂತೆ ಎಚ್ಚರಕೆ ವಹಿಸುವಂತೆ ಮನವಿ ಮಾಡಲಾಗಿದೆ. ಒಂಟಿಯಾಗಿ ಗ್ರಾಮಗಳಲ್ಲಿ ಓಡಾಡದಂತೆಯೂ ಸೂಚನೆ ನೀಡಲಾಗಿದೆ.

ಹೊನ್ನಾಳಿಯ ಮುಖ್ಯರಸ್ತೆಯಲ್ಲಿ ಶುಕ್ರವಾರ ಬೆಳಿಗ್ಗೆ 7ರ ಸುಮಾರಿಗೆ ಮೂವರಿಗೆ ಚಿರತೆ ಕಾಣಸಿಕೊಂಡಿದೆ. ಬೆಳಿಗ್ಗೆ 9.30ರ ಸುಮಾರಿಗೆ ತೋಟದಲ್ಲಿ ಚಿರತೆ ಕಂಡಿದ್ದೇನೆ. ಭಯವಾಗಿ ಗ್ರಾಮಕ್ಕೆ ಬಂದು ವಿಷಯ ಮುಟ್ಟಿಸಿದೆ. ಅದೃಷ್ಟವಶಾತ್ ಯಾರ ಮೇಲೂ ದಾಳಿಗಳು ನಡೆದಿಲ್ಲ ಎಂದು ಪ್ರತ್ಯಕ್ಷದರ್ಶಿ ಕುಂದೂರು ಜಗದೀಶ್‌ ತಿಳಿಸಿದರು.

‘ಕುಂದೂರು ಗ್ರಾಮದ ಸುತ್ತಮುತ್ತಲಿನ ಐದಾರು ತೋಟಗಳನ್ನು ಸುತ್ತಾಡಿದ್ದೇವೆ. ಜನರು ಆತಂಕ ಪಡುವ ಅಗತ್ಯವಿಲ್ಲ. ಸದಾ ಜಾಗೃತರಾಗಿರಬೇಕು. ಚಿರತೆ ಕಂಡೊಡನೆ ಗಮನಕ್ಕೆ ತರಬೇಕು’ ಎಂದು ಅರಣ್ಯಾಧಿಕಾರಿ ಶ್ರೀಶೈಲ ಮನವಿ ಮಾಡಿದರು.

ಜಮೀನುಗಳಲ್ಲಿ ಚಿರತೆ ಹೆಜ್ಜೆ ಗುರುತು

ಜಮೀನುಗಳಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದೆ. ಪರಿಶೀಲನೆ ಬಳಿಕ ಹೆಜ್ಜೆ ಗುರುತು ಚಿರತೆಯದ್ದು ಎಂದು ಖಚಿತವಾಗಿದೆ. ಚಿರತೆ ಕಾಣಿಸಿಕೊಂಡಿರುವ ಭಾಗದಲ್ಲಿ ಇಲಾಖೆಯ ಐವರು ಸಿಬ್ಬಂದಿ ನಿಯೋಜಿಸಲಾಗಿದ್ದು, ಎರಡು ದಿನ ಕಾದು ನೋಡುತ್ತೇವೆ. ಮತ್ತೆ ಚಿರತೆ ಕಂಡರೆ ಸೆರೆ ಹಿಡಿಯಲು ಬೋನ್‌ಗಳನ್ನು ಅಳವಡಿಸುತ್ತೇವೆ ಎಂದು ಮಾವಿನಕಟ್ಟೆ ವಲಯ ಅರಣ್ಯ ಕಚೇರಿಯ ಡಿವೈಆರ್‌ಎಫ್‌ಒ ವಿಷ್ಣು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT