ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗರಿಗರಿ ತುಪ್ಪದ್ ದ್ವಾಸಿ

Last Updated 23 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ನನ್ನ ತವರೂರು ಉದ್ಯಾನ ನಗರಿಯಾದರೆ ಗಂಡನ ಮನೆ ಸಾಹಿತ್ಯ, ಸಂಗೀತದ ತವರೂರು, ವಿದ್ಯಾಕಾಶಿಯೆಂದೇ ಪ್ರಸಿದ್ಧಿ ಹೊಂದಿರುವ ಪೇಡಾ ಕಂಪಿನ ಸುಂದರ ಧಾರವಾಡ. ಮಕ್ಕಳ ಬೇಸಿಗೆ ರಜೆಯಲ್ಲಿ ತವರಿಗೆ ಹೋದಾಗಲೆಲ್ಲಾ ಅಪ್ಪ ತನ್ನ ನೆನಪಿನ ಗಂಟು ಬಿಚ್ಚಿ ಸವಿನೆನಪುಗಳನ್ನು ನಮ್ಮೆಲ್ಲರಿಗೂ ಉಣಬಡಿಸುತ್ತಿದ್ದ.

ಧಾರವಾಡಕ್ಕೂ ಅಪ್ಪನಿಗೂ ವಿಶೇಷ ನಂಟಿತ್ತು. 1948- 49ರಲ್ಲಿ ಅವ ಕಲಿತ ಕೆ.ಸಿ.ಡಿ., ಎದುರಿಗಿರುವ ಹಾಸ್ಟೆಲ್, ಶಿವಪ್ಪ ಕ್ಯಾಂಟೀನ್, ಬಸಪ್ಪನ ಖಾನಾವಳಿಯ ಒಡನಾಟದ ಸುಂದರ ಸ್ವಚ್ಛಂದ ದಿನಗಳ ಜೊತೆಗೆ ‘ಬಾಂಬೆ ರೆಸ್ಟೋರೆಂಟ್’ನ ತುಪ್ಪದ ದೋಸೆ ರುಚಿಯ ಕುರಿತಾಗಿ ಹೇಳುವಾಗಲಂತೂ ಎಲ್ಲರ ಬಾಯೂರುತ್ತಿತ್ತು. ಅದರಲ್ಲೂ ಧಾರವಾಡಿ ಭಾಷಾಶೈಲಿಯಲ್ಲಿ ‘ತುಪ್ಪದ್ ದ್ವಾಸಿ’ ಎಂದು  ಹೇಳುತ್ತಿದ್ದದ್ದು ಕೇಳಲೇ ಮಜ. ನನಗೋ ಅದನ್ನು ಎಂದು ಸವಿದೇನು ಎನ್ನಿಸಿತ್ತು.

  ಅಂತೂ ಇಂತೂ ಹಿರಿತಲೆಗಳನ್ನು ವಿಚಾರಿಸಿ ‘ಬಾಂಬೆ ರೆಸ್ಟೋರೆಂಟ್‌’ ಅನ್ನು ಹುಡುಕಿಯೇ ಬಿಟ್ಟಿದ್ದೆ. ಸುಭಾಷ್ ರಸ್ತೆಯ ತುದಿ, ಗಾಂಧೀ ಚೌಕದ ಸಮೀಪದಲ್ಲಿ ಬಣ್ಣ ಕಳೆದುಕೊಂಡು ಸೌಮ್ಯವಾಗಿ ನಿಂತಿತ್ತಾದರೂ ತನ್ನ ಖದರನ್ನು ಹಾಗೇ ಉಳಿಸಿಕೊಂಡಿತ್ತು ಎಂಬುದಕ್ಕೆ ಬಂದುಹೋಗುವ ಜನರೇ ಸಾಕ್ಷಿಯಾಗಿದ್ದರು. ಕುಟುಂಬದವರೊಟ್ಟಿಗೆ ಒಳಹೊಕ್ಕು ತುಪ್ಪದ ದೋಸೆ ಸವಿದಿದ್ದಾಗಿತ್ತು. ತೆಳ್ಳಗಿನ ಹಳದೀ ರೆಕ್ಕೆಯಂತಹ ರವೆದೋಸೆಗೆ ಸೋರುವಷ್ಟು ತುಪ್ಪ ಸುರಿದು, ಪುಟಾಣಿ ಚಟ್ನಿಪುಡಿ, ರಸದೊಂದಿಗೆ ಸವಿಯಲು ಕೊಟ್ಟಿದ್ದರು.

ಆ ರಸವೋ ಸಣ್ಣಗೆ ಹೆಚ್ಚಿದ ಬಟಾಟೆ, ಕಾಳುಗಳಿಂದ ಕೂಡಿದ್ದು ಸಿಹಿಯಾಗಿತ್ತು. ಕೊಂಕಣಿ ಶೈಲಿಯಲ್ಲಿ ಹೇಳುವುದಾದರೆ ‘ರಸ್ಸ’ ದಿನವೂ ರಸ ಅದೇ ಆದರೂ ಕಾಳುಗಳದ್ದು ಮಾತ್ರ ಬದಲಾವಣೆ. ಇನ್ನು ಈ ಸಿಹಿ ರಸ ಇಷ್ಟಪಡದವರಿಗೆ ಅದರ ಬದಲು ಬಟಾಟೆ ಪಲ್ಯ, ಚಟ್ನಿಯ ಪೂರೈಕೆಯ ವ್ಯವಸ್ಥೆಯಿತ್ತು. ವಿಶೇಷವೆಂದರೆ ರಸಕ್ಕೆ ಉಳ್ಳಾಗಡ್ಡೆ, ಬೆಳ್ಳುಳ್ಳಿ ಬಳಸುವುದಿಲ್ಲ. ಸಮೀಪದ ದತ್ತಾತ್ರೇಯ ಗುಡಿಗೆ ಹೋಗುವ ನೇಮ– ನಿಷ್ಠೆಯವರೂ ಕೂಡ ‘ತುಪ್ಪದ್ ದ್ವಾಸಿ’ ಯನ್ನು ಸವಿಯುತ್ತಿದ್ದದ್ದು ಕಾರಣ.

ಆನಂತರದಲ್ಲಿ ಪೇಟೆಗೆ ಹೋದಾಗಲೆಲ್ಲ ಬಾಂಬೆ ರೆಸ್ಟೋರೆಂಟಿಗೆ ಭೇಟಿ ಕೊಡುವುದು ಕಡ್ಡಾಯವಾಗಿತ್ತು. ಅಪ್ಪ ಬಂದಾಗ ಕರೆದುಕೊಂಡು ಹೋಗಿ ‘ತುಪ್ಪದ್ ದ್ವಾಸಿ’ ತಿನ್ನಿಸಿದಾಗ ಲೊಟ್ಟೆ ಹೊಡೆದುಕೊಂಡು ತಿಂದವನ ಮುಖದಲ್ಲಿ ಸಾರ್ಥಕ್ಯ ಭಾವ.

1918ರಲ್ಲಿ ಪ್ರಾರಂಭಗೊಂಡ ಆ ಹೋಟೆಲ್ ಇನ್ನೇನು ಶತಮಾನೋತ್ಸವದ ಆಚರಣೆಯ ಸಂಭ್ರಮದಲ್ಲಿದೆ. ಅಂದಿನಿಂದ ಇಂದಿನವರೆಗೂ ಕೆಲವೊಂದು ನಿಯಮಗಳಿಗೆ ಬದ್ಧರಾಗಿ ಪಾಲಿಸಿಕೊಂಡು ರುಚಿ ಗುಣಮಟ್ಟದಲ್ಲಿ ವ್ಯತ್ಯಾಸ ಮಾಡದೇ, ಇಂದಿನ ಬಣ್ಣ ಬಣ್ಣದ ಥಳುಕು ಬಳುಕಿನ ಬದಲಾವಣೆಯ ಗಾಳಿ ಸೋಕದಂತೆ ಅಂದಿನ ಸರಳತೆಯನ್ನು ಕಾಯ್ದುಕೊಳ್ಳುವಲ್ಲಿ ಹೊಟೇಲ್ ಮಾಲೀಕ ರಾಮಕೃಷ್ಣರ ಕಳಕಳಿಯ ಪರಿಶ್ರಮವಿದೆ.  ಎಪ್ಪತ್ತೇಳರ ವಯಸಿನ, ವಿಜ್ಞಾನ ಪದವೀಧರರಾದ ಶ್ರೀಯುತರದ್ದು ಪುಟಿಯುವ ಚೈತನ್ಯ. ಪ್ರತಿದಿನ ಬೆಳಗ್ಗೆ 7 ರಿಂದ 11.30ರವರೆಗೆ ಮಾತ್ರ ತುಪ್ಪದ ದೋಸೆಯ ಘಮ. ಆನಂತರ ಬೇಡಿಕೆ ಎಷ್ಟೇ ಇದ್ದರೂ ಸಿಗದು.

1955 ರಿಂದ ಹೊಟೇಲ್‌ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ರಾಮಕೃಷ್ಣರೇ ಹೇಳುವಂತೆ ನಾಲ್ಕಾಣೆಗೆ ಸಿಗುತ್ತಿದ್ದ ತುಪ್ಪದ ದೋಸೆಗೆ ನಂತರದಲ್ಲಿ ₹1 ಆಗಿ ಇದೀಗ ಬರೀ 40 ರೂಪಾಯಿ. ವ್ಯತ್ಯಾಸವೆಂದರೆ ಅಂದು ತುಪ್ಪದ ಕೈ ಒರೆಸಲು ಪೇಪರ್ ತುಂಡು ಕೊಡುತ್ತಿದ್ದರಂತೆ. ಇಂದು ಪೇಪರ್‌ ನ್ಯಾಪಕಿನ್‌ ಕೊಡುತ್ತಾರೆ. ನಾಡಿನ ಹೆಮ್ಮೆಯ ದ. ರಾ. ಬೇಂದ್ರೆ, ಬೆಟಗೇರಿ ಕೃಷ್ಣಶರ್ಮ, ಶಂಬಾ ಜೋಶಿ , ಪಂಡಿತ್ ಮಲ್ಲಿಕಾರ್ಜುನ ಮನ್ಸೂರ್ ಮುಂತಾದ ದಿಗ್ಗಜರೆಲ್ಲ ತಮ್ಮ ಹೋಟೆಲ್ಲಿನ ಸಿಗ್ನೇಚರ್ ತಿನಿಸು ತುಪ್ಪದ ದೋಸೆಯ ಕಾಯಂ ಗಿರಾಕಿಗಳಾಗಿದ್ದರೆಂದು ಹೇಳಿಕೊಳ್ಳುವಾಗ ರಾಮಕೃಷ್ಣರ ಮುಖದಲ್ಲಿ ಹೆಮ್ಮೆಯ ಮಿಂಚು.

  ಇದೀಗ ಹದಿನೈದು ವರ್ಷಗಳಿಂದ ಹುಬ್ಬಳ್ಳಿಯಲ್ಲಿ ನೆಲೆಸಿರುವ ನಾವು ಸಂಬಂಧಿಕರು, ಸ್ನೇಹಿತರು ಬಂದಾಗ ಅಥವಾ ಪಾರ್ಟಿಯ ನೆಪದಲ್ಲಿ ಧಾರವಾಡದ ಬಾಂಬೆ ರೆಸ್ಟೋರೆಂಟಿಗೆ ಹೋಗಿ ‘ತುಪ್ಪದ ದೋಸೆ’ ಸವಿಯುವುದು ಕಡ್ಡಾಯವಾಗಿಬಿಟ್ಟಿದೆ. ಝಗಮಗಿಸುವ ಮೆಟ್ರೋ ಸಿಟಿಯವರು ಕೂಡ ಸುಣ್ಣ ಬಣ್ಣವಿಲ್ಲದ ಅತಿ ಸರಳ ಪೀಠೋಪಕರಣಗಳುಳ್ಳ ಹೋಟೆಲ್ ನೋಡಿ ಮೂಗು ಮುರಿದರೂ ಘಮ ಘಮಿಸುವ ತುಪ್ಪದ ದೋಸೆಯ ತುಂಡನ್ನು ಬಾಯಿಗಿಟ್ಟುಕೊಂಡ ಕ್ಷಣವೇ ರಸಾಸ್ವಾದದಲ್ಲಿ ಕಳೆದುಹೋಗುವುದು ಧಾರವಾಡಿಗರ ತುಟಿಯಂಚಿನಲ್ಲಿ ಹೆಮ್ಮೆಯ ಮಂದಹಾಸ ಮಿನುಗಿಸುತ್ತದೆ. ‘ಹಂಗಾರ ಸ್ವಾದಪ್ರಿಯರ..! ಮತ್ಯಾಕ್ ತಡಾ ಮಾಡಾಕತ್ತೀರಿ? ತುಪ್ಪದ್ ದ್ವಾಸಿ ತಿನ್ನಾಕ ಎಂದ್ ಬರತೀರಿ ನಮ್ ಧಾರಾವಾಡಕ್ಕ?’

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT