ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮರಳು ಕೊರತೆ: ಕಾಮಗಾರಿಗೆ ಹಿನ್ನಡೆ’

Last Updated 24 ಡಿಸೆಂಬರ್ 2017, 5:26 IST
ಅಕ್ಷರ ಗಾತ್ರ

ಆನವಟ್ಟಿ: ‘ಮರಳಿನ ಕೊರತೆಯಿಂದಾಗಿ ಫಲಾನುಭವಿಗಳಿಗೆ ಶೌಚಾಲಯ, ಆಶ್ರಯ ಮನೆಗಳನ್ನು ನಿಗದಿತ ಸಮಯದಲ್ಲಿ ನಿರ್ಮಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎಂದು ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಜ್ಯೋತಿ ಎಸ್‌.ಕುಮಾರ್‌ ಬೇಸರ ವ್ಯಕ್ತಪಡಿಸಿದರು.

ಇಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅಗಸನಹಳ್ಳಿ, ಆನವಟ್ಟಿ, ಹುರುಳಿ, ಕುಬಟೂರು, ಮೂಡಿ, ಸಮನವಳ್ಳಿ, ತಲ್ಲೂರು ಗ್ರಾಮ ಪಂಚಾಯ್ತಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಆನವಟ್ಟಿ ಹೋಬಳಿ ಸುತ್ತ ವರದಾ ಹಾಗೂ ದಂಡಾವತಿ ನದಿಗಳು ಹರಿಯುತ್ತಿವೆ. ಆದರೆ, ಇಲ್ಲಿನ ಮರಳನ್ನು ಬಳಕೆ ಮಾಡಲು ಅವಕಾಶವಿಲ್ಲ. ತೀರ್ಥಹಳ್ಳಿ, ಶಿವಮೊಗ್ಗದಿಂದ ಮರಳು ತರಿಸುವುದರಿಂದ ಕಾಮಗಾರಿಯ ವೆಚ್ಚ ಹೆಚ್ಚಾಗುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಪಂಚಾಯ್ತಿ ಶಿಕ್ಷಣ ಮತ್ತು ಆರೋಗ್ಯ ಸಮಿತಿ ಅಧ್ಯಕ್ಷ ವೀರೇಶ್ ಕೊಟಗಿ ಮಾತನಾಡಿ, ‘ಚಿಕ್ಕಚೌಟಿ, ಹಿರೇಚೌಟಿ, ಸಮನವಳ್ಳಿ, ಹೊಸಳ್ಳಿ ಭಾಗಗಳಲ್ಲಿ ಪ್ರತಿ ವರ್ಷ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ. ಇಲ್ಲಿ ಭೂವಿಜ್ಞಾನಿಗಳ ಕೊರತೆ ಇದೆ. ಹೀಗಾಗಿ ಭೂ ವಿಜ್ಞಾನಿಯನ್ನು ಕರೆಸಿ ಕೊಳವೆಬಾವಿ ಕೊರೆಸಿ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಲಾಗುವುದು’ ಎಂದರು.

ಜಿಲ್ಲಾ ಪಂಚಾಯ್ತಿ ಅಭಿವೃದ್ಧಿ ಉಪ ಕಾರ್ಯದರ್ಶಿ ರಂಗಸ್ವಾಮಿ ಮಾತನಾಡಿ, ‘ಎಲ್ಲಾ ಗ್ರಾಮ ಪಂಚಾಯ್ತಿಗಳು ಜನವರಿಯಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಬೇಕು. ಗ್ರಾಮಗಳಲ್ಲಿ ಅಗತ್ಯವಿರುವ ಯೋಜನೆಗಳನ್ನು ಸೇರಿಸಬೇಕು’ ಎಂದು ಹೇಳಿದರು.

‘14ನೇ ಹಣಕಾಸು ಯೋಜನೆಯಲ್ಲಿ ಕುಡಿಯುವ ನೀರಿಗೆ ಆದ್ಯತೆ ನೀಡಲಾಗುತ್ತಿದೆ. ಈ ಯೋಜನೆಯಡಿ ಚರಂಡಿ ದುರಸ್ತಿ, ಸ್ವಚ್ಛತಾ ಕಾಮಗಾರಿಗಳಿಗೆ ಅವಕಾಶ ಇರುವುದಿಲ್ಲ. ಗ್ರಾಮ ಪಂಚಾಯ್ತಿಗೆ ಕಡಿಮೆ ಆದಾಯ ಇರುವುದರಿಂದ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿದ್ದೇವೆ’ ಎಂದು ಅವರು ತಿಳಿಸಿದರು.

ನರೇಗಾ ಯೋಜನೆಯಡಿ ಶಾಲೆಗಳಿಗೆ ಶೌಚಾಲಯ, ಕಾಂಪೌಂಡ್‌ ನಿರ್ಮಿಸಲು ಕ್ರಿಯಾಯೋಜನೆ ಸಿದ್ಧಪಡಿಸಬೇಕು ಎಂದು ಪಿಡಿಒಗೆ ಸೂಚಿಸಿದರು. ಘನ ಮತ್ತು ದ್ರವ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸಲು ₹ 30 ಲಕ್ಷ ಅನುದಾನವಿದೆ. ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹಾಗೂ ಪಿಡಿಒಗಳು ಯೋಗ್ಯ ಸ್ಥಳವನ್ನು ಗುರುತಿಸಬೇಕು ಎಂದು ಹೇಳಿದರು. ಸ್ಥಳೀಯವಾಗಿ ಮರಳು ತೆಗೆಯಲು ಅವಕಾಶ ನೀಡುವಂತೆ ಜಿಲ್ಲಾಧಿಕಾರಿಯನ್ನು ಕೋರಲಾಗುವುದು ಎಂದು ಅವರು ತಿಳಿಸಿದರು.

ಜಿಲ್ಲಾ ಪಂಚಾಯ್ತಿ ಉಪಾಧ್ಯಕ್ಷೆ ವೇದಾ ವಿಜಯಕುಮಾರ್, ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ನಯನಾ ಶ್ರೀಪಾದ ಹೆಗಡೆ, ಉಪಾಧ್ಯಕ್ಷ ಸುರೇಶ್ ಹಾವಣ್ಣನವರ್, ಸದಸ್ಯರಾದ ಅಂಜಲಿ ಸಂಜೀವ್, ಪಿ.ಹನುಮಂತಪ್ಪ, ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಸರೋಜಮ್ಮ, ಕಾರ್ಯನಿರ್ವಹಣಾ ಅಧಿಕಾರಿ ಮಂಜುನಾಥ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT