ತುಮಕೂರು

ಪ್ರಕರಣ ನ್ಯಾಯಾಂಗ ತನಿಖೆಗೆ ಆಗ್ರಹ

‘ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಶಿಕ್ಷೆ ನೀಡಬೇಕು

ವಿವಿಧ ಸಂಘಟನೆಗಳ ಕಾರ್ಯಕರ್ತರು ಶನಿವಾರ ಪ್ರತಿಭಟನಾ ರ‍್ಯಾಲಿ ನಡೆಸಿದರು

ತುಮಕೂರು: ವಿಜಯಪುರದಲ್ಲಿ ದಲಿತ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಹತ್ಯೆ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಒತ್ತಾಯಿಸಿ ಜನಪರ ಸಂಘಟನೆಗಳ ಒಕ್ಕೂಟ ಮತ್ತು ಮಹಿಳಾ ದೌರ್ಜನ್ಯ ವಿರೋಧಿ ಸಮಿತಿ ಸದಸ್ಯರು ಶನಿವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಗರದ ಬಿಜಿಎಸ್ ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಿದರು. ಆರೋಪಿಗಳಿಗೆ ಉಗ್ರ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಹೊತ್ತು ಪ್ರತಿಭಟನೆ ನಡೆಸಿದರು.

ಪಿಯುಸಿಎಲ್ ಅಧ್ಯಕ್ಷ ಕೆ.ದೊರೈರಾಜ್ ಮಾತನಾಡಿ, ‘ಕೋಮುವಾದಿ ಪಕ್ಷಗಳ ನಾಯಕರು ಮಹಿಳೆಯ ಕುರಿತು ಹಗುರವಾಗಿ ಮಾತನಾಡುತ್ತಿದ್ದಾರೆ.ಇದರಿಂದ ಪ್ರಭಾವಿತರಾದ ವಿಕೃತ ಕಾಮಿಗಳು ಅತ್ಯಾಚಾರ, ದೌರ್ಜನ್ಯ ನಡೆಸುತ್ತಿದ್ದಾರೆ. ಪ್ರಚೋದನೆ ನೀಡುವವರ ವಿರುದ್ಧ ಕ್ರಮ ಜರುಗಿಸಬೇಕು’ ಎಂದು ಆಗ್ರಹಿಸಿದರು.

’ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 465ಕ್ಕೂ ಹೆಚ್ಚು ಹೆಣ್ಣು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ನಡೆದಿವೆ. ಸರ್ಕಾರ ಯಾವುದೇ ಕ್ರಮವನ್ನು ಈವರೆಗೂ ತೆಗೆದುಕೊಂಡಿಲ್ಲ. ಎಡ ಮತ್ತು ಪ್ರಗತಿಪರ ಸಂಘಟನೆಗಳು ನಿರಂತರ ಪ್ರತಿಭಟನೆ ನಡೆಸಿ ಒತ್ತಾಯಿಸಿವೆ. ಈಗ ವಿಜಯಪುರದಲ್ಲೂ ಅಂತಹದ್ದೇ ಪ್ರಕರಣ ನಡೆದಿದ್ದು, ಸೂಕ್ತ ತನಿಖೆ ನಡೆಸಬೇಕು’ ಎಂದು ಒತ್ತಾಯ ಮಾಡಿದರು.

ಡಾ.ಅರುಂಧತಿ ಮಾತನಾಡಿ,‘ ಆರೋಪಿಗಳನ್ನು ತಕ್ಷಣ ಬಂಧಿಸಬೇಕು. ಸಾಕ್ಷ್ಯ ನಾಶ ಮಾಡಲು ಪ್ರಯತ್ನಿಸುತ್ತಿರುವ ಶಕ್ತಿಗಳ ವಿರುದ್ಧ ಕಠಿಣ ಶಿಕ್ಷೆ ನೀಡಬೇಕು ಎಂದು ಆಗ್ರಹಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಘಟಕದ ಅಧ್ಯಕ್ಷೆ ಬಾ.ಹ.ರಮಾಕುಮಾರಿ, ಕವಯತ್ರಿ ಮಲ್ಲಿಕಾ ಬಸವರಾಜ್ ಮಾತನಾಡಿದರು. ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿ ಹಾಗೂ ಡಿವೈಎಸ್ಪಿ ಕೆ.ಎಸ್. ನಾಗರಾಜ್ ಅವರ ಮೂಲಕ ಗೃಹ ಸಚಿವರಿಗೆ ಮನವಿ ಸಲ್ಲಿಸಲಾಯಿತು.

ದಲಿತ ದಮನಿತರ ಸ್ವಾಭಿಮಾನಿ ವೇದಿಕೆಯ ಕೊಟ್ಟ ಶಂಕರ್, ಹೋರಾಟಗಾರ ಡ್ಯಾಗೇರಹಳ್ಳಿ ವಿರೂಪಾಕ್ಷ, ಕೊಳೆಗೇರಿ ನಿವಾಸಿಗಳ ಹಿತರಕ್ಷಣಾ ಸಮಿತಿ ಅಧ್ಯಕ್ಷ ಎ.ನರಸಿಂಹಮೂರ್ತಿ, ಸಾಮಾಜಿಕ ಕಾರ್ಯಕರ್ತೆ ಪ್ರವೀಣೆ, ಡಿವೈಎಫ್‌ಐ ಜಿಲ್ಲಾ ಘಟಕ ಅಧ್ಯಕ್ಷ ಎಸ್.ರಾಘವೇಂದ್ರ, ದರ್ಶನ್, ಸ್ಲಂ ಜನಾಂದೋಲನ ಸಂಘಟನೆಯ ಶೆಟ್ಟಾಳಯ್ಯ, ಹೋರಾಟಗಾರ್ತಿ ಕಲ್ಯಾಣಿ, ಸಿಪಿಎಂನ ಎನ್.ಕೆ.ಸುಬ್ರಮಣ್ಯ, ಪ್ರಾಂತ ರೈತ ಸಂಘದ ಸಹ ಸಂಚಾಲಕ ಬಿ.ಉಮೇಶ್, ವರದಕ್ಷಿಣೆ ವಿರೋಧಿ ವೇದಿಕೆ ಮತ್ತು ಮಹಿಳಾ ಸಾಂತ್ವನ ಕೇಂದ್ರದ ಪಾರ್ವತಮ್ಮ ರಾಜಕುಮಾರ್, ಗಂಗಲಕ್ಷ್ಮಿ, ಅಂಬಿಕಾ, ಸಮುದಾಯದ ಸಂಚಾಲಕ ಕೆ.ಈ.ಸಿದ್ದಯ್ಯ, ಆಟೊ ಸಿದ್ಧರಾಜು, ದಲಿತ ಮುಖಂಡ ಕುಂದೂರು ತಿಮ್ಮಯ್ಯ, ಮುರುಳಿ, ಕಟ್ಟಡ ಕಾರ್ಮಿಕ ಸಂಘಟನೆಯ ಜಿಲ್ಲಾ ಕಾರ್ಯದರ್ಶಿ ಶ್ರೀಧರ್, ಸಿಜ್ಞಾ ಸಂಘಟನೆಯ ಜ್ಞಾನಸಿಂಧುಸ್ವಾಮಿ, ಕೇಬಲ್ ರಘು, ರಾಮಾಂಜನೇಯ, ಕತೆಗಾರ ಮಿರ್ಜಾ ಬಷೀರ್, ಕವಿ ಈಚನೂರು ಇಸ್ಮಾಯಿಲ್ ಇದ್ದರು.

ಪ್ರಕರಣ ಲಘುವಾಗಿ ಪರಿಗಣಿಸಬೇಡಿ

‘ಅಧಿಕಾರದ ಆಸೆಗೆ ಹೆಣಗಳನ್ನು ಇಟ್ಟುಕೊಂಡು ರಾಜಕೀಯ ಮಾಡುವ ಶಕ್ತಿಗಳ ಬಗ್ಗೆ ಜನರು ಜಾಗೃತರಾಗಿರಬೇಕು. ದಲಿತ ವಿದ್ಯಾರ್ಥಿನಿಯ ಸಾವನ್ನು ಸರ್ಕಾರ ಲಘುವಾಗಿ ಪರಿಗಣಿಸದೇ ತಪ್ಪಿತಸ್ಥರಿಗೆ ಕಠಿಣ ಶಿಕ್ಷೆ ವಿಧಿಸಬೇಕು’ ಎಂದು ಸಿಐಟಿಯು ಜಿಲ್ಲಾ ಘಟಕ ಅಧ್ಯಕ್ಷ ಸೈಯದ್ ಮುಜೀಬ್ ಒತ್ತಾಯಿಸಿದರು.

ಚಿಕ್ಕನಾಯಕನಹಳ್ಳಿ: ವಿಜಯಪುರ ಜಿಲ್ಲೆಯ 9ನೇ ತರಗತಿ ವಿದ್ಯಾರ್ಥಿನಿ ಮೇಲೆ ನಡೆದಿರುವ ಅತ್ಯಾಚಾರ ಹಾಗೂ ಕೊಲೆಯು ನಾಗರಿಕ ಸಮಾಜ ತಲೆ ತಗ್ಗಿಸುವಂತಾಗಿದೆ ಎಂದು ಆರೋಪಿಸಿ ದಸಂಸ ಹಾಗೂ ಪ್ರಗತಿಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು.

ಪಟ್ಟಣದ ನೆಹರೂ ವೃತ್ತದಲ್ಲಿ ಸಂಘಟನೆಗಳು ಕಪ್ಪು ಪಟ್ಟಿ ಧರಿಸಿ ಪ್ರತಿಭಟಿಸಿದರು. ಪಟ್ಟಣದಲ್ಲಿ ಬೈಕ್‌ ರ‍್ಯಾಲಿ ನಡೆಸಲಾಯಿತು. ತಾಲ್ಲೂಕು ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ, ಆರೋಪಿಗಳನ್ನು ಬಂಧಿಸಿ ಗಲ್ಲು ಶಿಕ್ಷೆಗೆ ಒಳಪಡಿಸುವಂತೆ ಒತ್ತಾಯಿಸಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಶಾಸಕ ಸಿ.ಬಿ.ಸುರೇಶ್‌ಬಾಬು ಪ್ರತಿಭಟನೆಯನ್ನು ಬೆಂಬಲಿಸಿ ಮಾತನಾಡಿ, ಅತ್ಯಾಚಾರಿಗಳ ಮರ್ಮಾಂಗವನ್ನು ಕತ್ತರಿಸಿ ಹಾಕಬೇಕು. ಅತ್ಯಾಚಾರ ಮಾಡಿ ಹತ್ಯೆ ಮಾಡಿರುವ ಕಾಮುಕರು ಮನುಷ್ಯರಲ್ಲ ಅವರಿಗೆ ಗಲ್ಲುಶಿಕ್ಷೆ ಆಗಲೇ ಬೇಕು ಎಂದರು.

ದಸಂಸ ವಿಭಾಗೀಯ ಸಂಚಾಲಕ ಕೆ.ನಂಜುಂಡಯ್ಯ, ದಸಂಸ ವಿದ್ಯಾರ್ಥಿ ಘಟಕದ ಮುಖಂಡ ಪ್ರವೀಣ್, ಪುರಸಭೆ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್, ಕಸಾಪ ಅಧ್ಯಕ್ಷೆ ಎನ್.ಇಂದಿರಮ್ಮ ಮಾತನಾಡಿದರು. ಮುಖಂಡರಾದ ಕಂಟಲಗೆರೆ ಗುರುಪ್ರಸಾದ್, ಅಶ್ವತ್ಥ್‌ನಾರಾಯಣ್, ರಂಗಸ್ವಾಮಿ, ಗೋವಿಂದರಾಜು, ಯರೇಕಟ್ಟೆ ರಮೇಶ್, ಹಾಲುಗೊಣ ಮೂರ್ತಿ, ದಯಾನಂದ್, ತೀರ್ಥಪುರ ನಾಗರಾಜು, ಪುರಸಭೆ ಸದಸ್ಯ ಸಿ.ಎಸ್.ರಮೇಶ್, ಮೈಲಾರ ಮಲ್ಲಿಕ್ ಇದ್ದರು.

ಮೇಣದ ಉರಿಸಿದರು...

ತಿಪಟೂರು: ಪಟ್ಟಭದ್ರ ಹಿತಾಸಕ್ತಿಗಳು ದಲಿತ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವುದು ಇಡೀ ಸಮಾಜವೇ ತಲೆ ತಗ್ಗಿಸುವಂತಹ ದುಷ್ಕೃತ್ಯ. ಈ ಹತ್ಯೆ ಖಂಡನೀಯ. ತಪ್ಪಿತಸ್ಥರನ್ನು ಸರ್ಕಾರ ತಕ್ಷಣ ಬಂಧಿಸಿ ಮರಣ ದಂಡನೆಗೆ ಗುರಿ ಪಡಿಸಬೇಕು ಎಂದು ಎಪಿಎಂಸಿ ಉಪಾಧ್ಯಕ್ಷ ಹಾಗೂ ದಲಿತ ಮುಖಂಡ ಬಜಗೂರು ಮಂಜುನಾಥ್ ಒತ್ತಾಯಿಸಿದರು.

ನಗರದಲ್ಲಿ ಈಚೆಗೆ ಪ್ರಗತಿಪರ ಮತ್ತು ದಲಿತ ಸಂಘಟನೆಗಳ ಕಾರ್ಯಕರ್ತರು ಮೇಣದ ಬತ್ತಿ ಹಚ್ಚಿ ಅತ್ಯಾಚಾರ ಮತ್ತು ಹತ್ಯೆಯನ್ನು ಖಂಡಿಸಿದರು. ಸ್ವಲ್ಪ ಹೊತ್ತು ರಸ್ತೆ ತಡೆ ನಡೆಸಿದರು. ಸಂಸ್ಕೃತಿಯನ್ನು ಗುತ್ತಿಗೆ ಪಡೆದಂತೆ ಮಾತನಾಡುವ ಮನಸ್ಥಿತಿಗಳೇ ಈ ದುಷ್ಕೃತ್ಯ ನಡೆಸಿವೆ. ದಲಿತರ ಮೇಲಿನ ಇಂತಹ ಅನ್ಯಾಯವನ್ನು ನೋಡಿ ಸುಮ್ಮನೆ ಕೂರಲಾಗದು. ಪಟ್ಟಭದ್ರರ ವಿರುದ್ಧ ದೊಡ್ಡ ಮಟ್ಟದ ಹೋರಾಟ ಅಗತ್ಯವಿದೆ. ಈ ಬಗ್ಗೆ ಅರಿವು ಮೂಡಿಸುವ ಕೆಲಸವೂ ಆಗಬೇಕಿದೆ. ದಲಿತ ಮತ್ತು ಪ್ರಗತಿಪರ ಸಮುದಾಯ ಒಗ್ಗಟ್ಟಾಗಿ ಮುನ್ನುಗ್ಗಿದರೆ ಪಟ್ಟಭದ್ರ ಮನಸ್ಥಿತಿಗಳನ್ನು ಮಟ್ಟ ಹಾಕಬಹುದು ಎಂದು ಮಂಜುನಾಥ್ ತಿಳಿಸಿದರು.

ದಲಿತ ಮುಖಂಡ ತಿಪಟೂರು ಕೃಷ್ಣ ಮಾತನಾಡಿದರು. ಮುಖಂಡರಾದ ಕೆ.ಎಸ್.ಸದಾಶಿವಯ್ಯ, ಸಂತೋಷ್, ರಾಜಣ್ಣ, ಮೋಹನ್, ಮಧು, ರೇಣುಕ ಪ್ರಸಾದ್, ಕಲ್ಲೇಶ್ ಮಾತನಾಡಿದರು.

Comments
ಈ ವಿಭಾಗದಿಂದ ಇನ್ನಷ್ಟು
ಬಸವರಾಜು ವಿರುದ್ಧ ವಾಗ್ದಾಳಿ

ತುಮಕೂರು
ಬಸವರಾಜು ವಿರುದ್ಧ ವಾಗ್ದಾಳಿ

26 Apr, 2018
ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವ

ತುಮಕೂರು
ಕನ್ಯಕಾ ಪರಮೇಶ್ವರಿ ಅಮ್ಮನವರ ಉತ್ಸವ

26 Apr, 2018

ತಿಪಟೂರು
ರೈತರ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹ

ಜನಪ್ರತಿನಿಧಿಗಳಾಗಲು ಬಯಸುವವರು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆ ನೀಡಬೇಕು. ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ದೃಢ ಭರವಸೆಯನ್ನು ನೀಡಬೇಕು ಎಂದು ರೈತ ಪರ ಸಂಘಟನೆಗಳ ಸಮನ್ವಯ...

26 Apr, 2018
ಮಳೆಗಾಳಿಗೆ ತುರುವೇಕೆರೆ ತತ್ತರ

ತುರುವೇಕೆರೆ
ಮಳೆಗಾಳಿಗೆ ತುರುವೇಕೆರೆ ತತ್ತರ

25 Apr, 2018

ತಿಪಟೂರು
ತಿಪಟೂರು: ಈಗ ತೀವ್ರ ಪೈಪೋಟಿ ಕಣ

ಈ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಎಂದೆಂದೂ ಕಾಣದಷ್ಟು ಪಕ್ಷೇತರರ ಸ್ಪರ್ಧೆ ಕಂಡು ಬರುತ್ತಿದ್ದು, ಅವರೆಷ್ಟು ಮತ ಗಳಿಸುತ್ತಾರೆ ಅಥವಾ ಯಾವ ಅಧಿಕೃತ ಅಭ್ಯರ್ಥಿಗಳ ಕಾಲೆಳೆಯುತ್ತಾರೆ...

25 Apr, 2018