ತುಮಕೂರು

ಕೊರಟಗೆರೆ: ಜೆಡಿಎಸ್‌ನಲ್ಲಿ ತಳಮಳ

’ಕೊರಟಗೆರೆ  ಮೀಸಲು ಕ್ಷೇತ್ರವಾದ ಬಳಿಕ ದಲಿತ ಎಡಗೈ ಪಂಗಡದವರಿಗೆ ಅಧಿಕಾರ ಸಿಕ್ಕಿಲ್ಲ. ಬಲಗೈ ಪಂಗಡಕ್ಕೆ ಸೇರಿದ ಪರಮೇಶ್ವರ್ ಅವರಿಗೆ ಅಧಿಕಾರ ಸಿಕ್ಕಿದೆ. ಬಲಗೈ ಪಂಗಡದವರು ಕೇವಲ 7 ಸಾವಿರ ಮತದಾರರಿದ್ದಾರೆ.

ತುಮಕೂರು: ಬೆಂಗಳೂರಿನ ಉದ್ಯಮಿ ಡಿ.ಟಿ.ವೆಂಕಟೇಶ್ ಅವರೊಂದಿಗೆ ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹಾಗೂ ಜೆಡಿಎಸ್‌ ರಾಜ್ಯ  ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಚರ್ಚೆ ನಡೆಸಿರುವುದು ಕೊರಟಗೆರೆ ವಿಧಾನಸಭಾ ಕ್ಷೇತ್ರದ ಜೆಡಿಎಸ್‌ನಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ್‌ ಕ್ಷೇತ್ರದಲ್ಲಿ ಸುತ್ತಾಟ ಹೆಚ್ಚು ಮಾಡಿದ್ದಾರೆ. ಈ ಸಲ ಒಬ್ಬಂಟಿಯಾಗಿಲ್ಲ. ಸಂಸದ ಎಸ್‌.ಪಿ.ಮುದ್ದಹನುಮೇಗೌಡ, ಶಾಸಕ ಕೆ.ಎನ್‌.ರಾಜಣ್ಣ ಅವರನ್ನು ಮುಂದು ಮಾಡಿಕೊಂಡು ಜನರ ವಿಶ್ವಾಸ ಗಳಿಸುವ ಪ್ರಯತ್ನಕ್ಕೆ ಕೈ ಹಾಕಿದ್ದಾರೆ. ಹೀಗಾಗಿ ಕಳೆದ ಸಲದಂತೆ ಈ ಸಲವೂ ಪರಮೇಶ್ವರ್‌ಗೆ ಶಾಸಕ ಸುಧಾಕರ ಲಾಲ್‌ ಸವಾಲು ಒಡ್ಡಬಲ್ಲರೇ ಎಂಬ ಪ್ರಶ್ನೆ ಕ್ಷೇತ್ರದಲ್ಲಿದೆ.

’ಪರಮೇಶ್ವರ್ ನಡೆಯನ್ನು ಪಕ್ಷದ ಮುಖಂಡರು ಹತ್ತಿರದಿಂದ ಗಮನಿಸುತ್ತಿದ್ದಾರೆ. ಅಲ್ಲದೇ ಪರಮೇಶ್ವರ್ ಅವರು ಜೆಡಿಎಸ್‌ನ ಉಚ್ಛಾಟಿತ ಶಾಸಕ ಜಮೀರ್‌ ಅಹಮ್ಮದ್‌ ಅವರನ್ನು ಕರೆದುಕೊಂಡು ಜಿಲ್ಲೆಯ ಎಲ್ಲೆಡೆ ಜೆಡಿಎಸ್‌ ಶಾಸಕರ ಕ್ಷೇತ್ರಗಳಲ್ಲಿ ಓಡಾಡಿಸುತ್ತಿರುವುದು ಪಕ್ಷದ ವರಿಷ್ಠರಿಗೆ ಪರಮೇಶ್ವರ್ ಮೇಲೆ ಮತ್ತಷ್ಟು ಕೋಪ ತರಿಸಿದೆ. ಹೀಗಾಗಿ, ಕೊನೇ ಗಳಿಗೆಯಲ್ಲಿ ಏನೇ ಬೇಕಾದರೂ ಆಗಬಹುದು’ ಎಂದು ಜೆಡಿಎಸ್‌ನ ಹಿರಿಯ ಮುಖಂಡರೊಬ್ಬರು ತಿಳಿಸಿದರು.

’ಸುಧಾಕರ್ ಕ್ಷೇತ್ರದಲ್ಲಿ ಅಭಿವೃದ್ಧಿ ಕೆಲಸ ಮಾಡಿಲ್ಲ ಎಂಬ ಆರೋಪ ಇದೆ.  ಪರಮೇಶ್ವರ್ ಅವರಿಗೆ ನಿಷ್ಠೆ ಇರುವ ಕೆಲವು ಅಧಿಕಾರಿಗಳು ಜೆಡಿಎಸ್‌ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸುತ್ತಿದ್ದರೂ ಅಧಿಕಾರಿಗಳ ವಿರುದ್ಧ ಜೋರಾಗಿ ಮಾತನಾಡುವುದಿಲ್ಲ ಎಂಬ ಅಸಮಾಧಾನವೂ ಕಾರ್ಯಕರ್ತರಲ್ಲಿದೆ. ಇದೆಲ್ಲವನ್ನೂ ಪಕ್ಷರ ವರಿಷ್ಠರು ಗಮನಿಸುತ್ತಿದ್ದಾರೆ’ ಎಂದು ತಿಳಿಸಿದರು.

ಈಗ ಚರ್ಚೆಯಲ್ಲಿರುವ ವೆಂಕಟೇಶ್‌ ಸಣ್ಣ ಕೈಗಾರಿಕಾ ವಿಭಾಗದಲ್ಲಿ ಅತ್ಯುತ್ತಮ ರಫ್ತುದಾರ ಎಂದು ಕೇಂದ್ರ ಸರ್ಕಾರದ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು. ಕೊರಟಗೆರೆಯ ಬಿಕ್ಕೆಗುಡ್ಡ ಗ್ರಾಮದವರು. ದಲಿತ ಎಡಗೈಸಮುದಾಯಕ್ಕೆ ಸೇರಿರುವ ಇವರು ಹಣದಲ್ಲೂ ಬಲಾಢ್ಯರಿದ್ದಾರೆ. ಪರಮೇಶ್ವರ್ ಅವರಿಗೆ ಸೂಕ್ತ ಸವಾಲು ನೀಡಬಲ್ಲರು ಎಂಬ ಲೆಕ್ಕಾಚಾರವೂ ಪಕ್ಷದಲ್ಲಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.

’ಕೊರಟಗೆರೆ  ಮೀಸಲು ಕ್ಷೇತ್ರವಾದ ಬಳಿಕ ದಲಿತ ಎಡಗೈ ಪಂಗಡದವರಿಗೆ ಅಧಿಕಾರ ಸಿಕ್ಕಿಲ್ಲ. ಬಲಗೈ ಪಂಗಡಕ್ಕೆ ಸೇರಿದ ಪರಮೇಶ್ವರ್ ಅವರಿಗೆ ಅಧಿಕಾರ ಸಿಕ್ಕಿದೆ. ಬಲಗೈ ಪಂಗಡದವರು ಕೇವಲ 7 ಸಾವಿರ ಮತದಾರರಿದ್ದಾರೆ. ಎಡಗೈ ಪಂಗಡದ 52 ಸಾವಿರ ಮತದಾರರಿದ್ದಾರೆ. ಸುಧಾಕರ್‌ ಲಾಲ್‌ ಅವರ ಸಮುದಾಯದ 2 ಸಾವಿರ ಮತದಾರರಿದ್ದಾರೆ. ಜಾತಿ ಲೆಕ್ಕಾಚಾರದಲ್ಲಿ  ದಲಿತ ಎಡಗೈನವರು  ಮತ್ತು ಒಕ್ಕಲಿಗರು ಒಂದಾದರೆ ಜೆಡಿಎಸ್‌ ಸೋಲಿಸಲು ಯಾರಿಗೂ ಸಾಧ್ಯವಿಲ್ಲ’ ಎಂಬ ವಿಶ್ಲೇಷಣೆಯೂ ಕ್ಷೇತ್ರದಲ್ಲಿ ಹರಿದಾಡುತ್ತಿದೆ.

’ನ್ಯಾಯಮೂರ್ತಿ ಸದಾಶಿವ  ಆಯೋಗದ ವರದಿ ಜಾರಿಗೆ ಪರಮೇಶ್ವರ್ ವಿರೋಧ ಇದ್ದಾರೆ ಎಂಬ ಕಾರಣಕ್ಕಾಗಿ ಜಿಲ್ಲೆಯಲ್ಲಿ ಎಡ ಗೈ ಸಮುದಾಯ ಪರಮೇಶ್ವರ್‌ ವಿರುದ್ಧ ಸಿಟ್ಟಿಗೆದ್ದಿದೆ. ಇದೇ ಕಾರಣಕ್ಕಾಗಿ ದಲಿತ ಕವಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಕೆ.ಬಿ.ಸಿದ್ದಯ್ಯ ಹಾಗೂ ಅವರ ಗುಂಪು ಪರಮೇಶ್ವರ್ ವಿರುದ್ಧ ಬಹಿರಂಗವಾಗಿಯೇ ತೊಡೆತಟ್ಟಿದೆ. ಈ ಎಲ್ಲ ಕಾರಣಗಳಿಂದ ಎಡಗೈನವರಿಗೆ ಜೆಡಿಎಸ್‌ ಟಿಕೆಟ್‌ ನೀಡಬೇಕು ಎಂಬ ವಾದವನ್ನು ಚರ್ಚೆಯ ವೇಳೆ ಉದ್ಯಮಿಗಳ ಗುಂಪೊಂದು ದೇವೇಗೌಡ ಅವರ ಮುಂದೆ ಇಟ್ಟಿದೆ’ ಎಂದು ತಿಳಿದುಬಂದಿದೆ.

ತುಮಕೂರಿನ ಬಹುತೇಕ ದಲಿತ ಸಂಘಟನೆಗಳು ಹಾಗೂ ಸಾಹಿತಿಗಳ ಜತೆ ವೆಂಕಟೇಶ್‌  ಅವರಿಗೆ ಉತ್ತಮ ಒಡನಾಟವಿದೆ. ಇದು ಸಹ ಅವರ ಪರವಾಗಿ ಕೆಲಸ ಮಾಡಲಿದೆ ಎಂಬ ವಾದವೂ ಇದೆ.’ಜೆಡಿಎಸ್‌ ಜಿಲ್ಲಾ ಘಟಕದ ಅಧ್ಯಕ್ಷ ಸಿ.ಚೆನ್ನಿಗಪ್ಪ ಹಾಗೂ ಸುಧಾಕರ್‌ ಲಾಲ್ ನಡುವಿನ ಸಂಬಂಧ ಹಳಸಿದೆ ಎಂಬ ಮಾತುಗಳು ಸಹ ವೆಂಕಟೇಶ್‌ ಪಾಲಿಗೆ ಪ್ಲಸ್ ಪಾಯಿಂಟ್ ಆಗಬಹುದೇನೋ’ ಎಂಬ ಅನುಮಾನವನ್ನು ಜೆಡಿಎಸ್‌ ಮುಖಂಡರೊಬ್ಬರು ವ್ಯಕ್ತಪಡಿಸಿದರು.

‘ನನ್ನ ಬಳಿ ಹಣ ಇಲ್ಲದೇ ಇರಬಹುದು. ಆದರೆ ಜನರಿದ್ದಾರೆ. ಈಚೆಗೆ ನಡೆದ ಸಮಾವೇಶದಲ್ಲಿ ದೇವೇಗೌಡರು ಸ್ಪಷ್ಟ ಸಂದೇಶ ನೀಡಿದ್ದಾರೆ. ನಾನು ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ಕೆಲಸ ಮಾಡುತ್ತಿದ್ದೇನೆ’ ಎಂದು ಸುಧಾಕರಲಾಲ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

‘ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರಿಗೆ ಟಿಕೆಟ್‌ ನೀಡುವಂತೆ ಮನವಿ ಮಾಡಿರುವುದು ನಿಜ. ಈ ಇಬ್ಬರೂ ನಾಯಕರೊಂದಿಗೆ ಚರ್ಚೆ ಮಾಡಿದ್ದೇನೆ. ಕ್ಷೇತ್ರದಲ್ಲಿ ನಮ್ಮ ಸಮುದಾಯದವರು ಅತಿ  ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಸದಾಶಿವ ಆಯೋಗದ ಶಿಫಾರಸು ವಿಚಾರದಲ್ಲಿ ಸಮುದಾಯದ ಜನರಲ್ಲಿ ರಾಜಕೀಯ ಜಾಗೃತಿಯೂ ಮೂಡಿದೆ. ಟಿಕೆಟ್‌ ಕೊಡುವುದು ಬಿಡುವುದು ದೇವೇಗೌಡರ ತೀರ್ಮಾನಕ್ಕೆ ಬಿಟ್ಟಿದ್ದು’ ಎಂದು ವೆಂಕಟೇಶ್‌ ಹೇಳಿದರು.

Comments
ಈ ವಿಭಾಗದಿಂದ ಇನ್ನಷ್ಟು
ಮಳೆಗಾಳಿಗೆ ತುರುವೇಕೆರೆ ತತ್ತರ

ತುರುವೇಕೆರೆ
ಮಳೆಗಾಳಿಗೆ ತುರುವೇಕೆರೆ ತತ್ತರ

25 Apr, 2018

ತಿಪಟೂರು
ತಿಪಟೂರು: ಈಗ ತೀವ್ರ ಪೈಪೋಟಿ ಕಣ

ಈ ವಿಧಾನಸಭಾ ಕ್ಷೇತ್ರದಲ್ಲಿ ಹಿಂದೆ ಎಂದೆಂದೂ ಕಾಣದಷ್ಟು ಪಕ್ಷೇತರರ ಸ್ಪರ್ಧೆ ಕಂಡು ಬರುತ್ತಿದ್ದು, ಅವರೆಷ್ಟು ಮತ ಗಳಿಸುತ್ತಾರೆ ಅಥವಾ ಯಾವ ಅಧಿಕೃತ ಅಭ್ಯರ್ಥಿಗಳ ಕಾಲೆಳೆಯುತ್ತಾರೆ...

25 Apr, 2018
186 ಮಂದಿ ಉಮೇದುವಾರಿಕೆ ಸಲ್ಲಿಕೆ

ತುಮಕೂರು
186 ಮಂದಿ ಉಮೇದುವಾರಿಕೆ ಸಲ್ಲಿಕೆ

25 Apr, 2018

ತುಮಕೂರು
100ರಷ್ಟು ಮತದಾನಕ್ಕೆ ಪ್ರೇರೇಪಿಸಿ

ಶೇ 100ರಷ್ಟು ಮತದಾನ ನಡೆಯಲು ಪ್ರೇರಕರು ಮತದಾರನ ಬಳಿಗೆ ಹೋಗಿ ಪ್ರೇರೇಪಿಸಬೇಕು ಎಂದು ಜಿಲ್ಲಾ ಸ್ವೀಪ್ ಸಮಿತಿ ಅಧ್ಯಕ್ಷೆ ಅನಿಸ್ ಕಣ್ಮಣಿ ಜಾಯ್ ಸಲಹೆ...

25 Apr, 2018

ಕುಣಿಗಲ್
ರೈತ ಸಂಘದ ಅಭ್ಯರ್ಥಿ ನಾಮಪತ್ರ

ಕುಣಿಗಲ್: ತಾಲ್ಲೂಕಿನ ನೀರಾವರಿ ಮತ್ತು ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಮತ್ತು ಅಭಿವೃದ್ಧಿಗಾಗಿ ರೈತ ಸಂಘದ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಆನಂದ್ ಪಟೇಲ್ ಮನವಿ ಮಾಡಿದರು.

24 Apr, 2018