ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತ ಸಾಲಗಾರನಲ್ಲ; ಸರ್ಕಾರವೇ ಬಾಕಿದಾರ

Last Updated 24 ಡಿಸೆಂಬರ್ 2017, 6:05 IST
ಅಕ್ಷರ ಗಾತ್ರ

ಸುರಪುರ: ‘ಸತತ ಬರಗಾಲ, ಅತಿವೃಷ್ಟಿ, ಅನಾವೃಷ್ಟಿ, ಸಾಲ, ಬಡತನ ಇನ್ನಿತರ ಸಂಗತಿಗಳು ರೈತರ ಬದುಕನ್ನು ಘಾಸಿಗೊಳಿಸಿವೆ. ರೈತನನ್ನು ಸರ್ಕಾರ ಒತ್ತಾಯಪೂರ್ವಕವಾಗಿ ಸಾಲಗಾರನನ್ನಾಗಿಸಿದೆ. ರೈತ ಸಾಲಗಾರ ನಲ್ಲ. ಸರ್ಕಾರವೇ ಬಾಕಿದಾರ’ ಎಂದು ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಘಟಕದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟೀಲ ಬೆಟ್ಟದೂರು ಪ್ರತಿಪಾದಿಸಿದರು.

ಇಲ್ಲಿಯ ಗರುಡಾದ್ರಿ ಕಲಾ ಮಂದಿರದಲ್ಲಿ ಶನಿವಾರ ಕರ್ನಾಟಕ ರಾಜ್ಯ ರೈತ ಸಂಘ (ಹಸಿರು ಸೇನೆ) ಜಿಲ್ಲಾ ಸಮಿತಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ರೈತ ದಿನಾಚರಣೆ ಉದ್ಘಾಟಿಸಿ, ಅವರು ಮಾತನಾಡಿದರು.

‘ದೇಶದ 125 ಕೋಟಿ ಜನರಿಗೆ ಅನ್ನ ನೀಡುವ ಅನ್ನದಾತನಿಗೆ ಆಳುವ ಸರ್ಕಾರಗಳು ಕಡೆಗಣಿಸುತ್ತಿವೆ. ರೈತರ ಬದುಕು ಶೋಚನೀಯವಾಗಿದ್ದು, ಇಂದು ಆತ ಸಂಕಷ್ಟಗಳ ಸರಮಾಲೆ ಯಲ್ಲಿ ಸಿಲುಕಿದ್ದಾನೆ. 176 ತಾಲ್ಲೂಕು ಗಳು ಬರಗಾಲ ಪೀಡಿತ ಎಂದು ಘೋಷಿಸಿದರೂ ಇದುವರೆಗೂ ನಯಾ ಪೈಸಾ ಬಂದಿಲ್ಲ’ ಎಂದು ದೂರಿದರು.

‘ಜಿಎಸ್‌ಟಿಯಿಂದ ಕೃಷಿ ಉಪಕರಣಗಳ ಬೆಲೆ ಏರಿಕೆಯಾಗಿದೆ. ಫಸಲ್‌ ಬಿಮಾ ಯೋಜನೆಗೆ ₹35 ಸಾವಿರ ಕೋಟಿ ತುಂಬಿದರೂ ಪರಿಹಾರ ಸಿಕ್ಕಿಲ್ಲ. ರೈತರ ಆರ್ಥಿಕಮಟ್ಟ ಕುಸಿದಿದೆ. ಯಾವ ಸರ್ಕಾರಗಳೂ ರೈತರನ್ನು ಉದ್ಧರಿಸುತ್ತಿಲ್ಲ. ರೈತರ ಹೆಸರಿನಲ್ಲಿ ಅಧಿಕಾರಿಗಳು ಮತ್ತು ರಾಜಕಾರಣಿಗಳು ಹಣ ಲೂಟಿ ಮಾಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

‘ಬಹು ಸಂಖ್ಯಾತರಾಗಿರುವ ರೈತರಲ್ಲಿ ಒಗ್ಗಟ್ಟು ಬೇಕು. ನಮ್ಮ ಹಕ್ಕು, ಗುರಿಗಳನ್ನು ಪಡೆಯಬೇಕು. ನಮ್ಮನ್ನು ನಿರ್ಲಕ್ಷಿಸುವ, ಶೋಷಣೆ ಮಾಡುವ ರಾಜಕೀಯ ಪಕ್ಷಗಳನ್ನು ತಿರಸ್ಕರಿಸಬೇಕು’ ಎಂದು ಸಲಹೆ ನೀಡಿದರು.

ಸಂಘದ ರಾಜ್ಯ ಘಟಕದ ಕಾರ್ಯ ದರ್ಶಿ ಮಲ್ಲಿಕಾರ್ಜುನ ಸತ್ಯಂಪೇಟೆ ಮಾತನಾಡಿ, ‘ದೇಶದ ಅನ್ನದ ಹಸಿವು ನೀಗಿಸುವ ಅನ್ನದಾತನ ಬಗ್ಗೆ ಸರ್ಕಾರಗಳಿಗೆ ಕನಿಷ್ಠ ಕಾಳಜಿಯೂ ಇಲ್ಲ. ರಾಜ್ಯದಲ್ಲಿ 3,800 ಆತ್ಮಹತ್ಯೆ ನಡೆದಿವೆ. ಡಾ.ಸ್ವಾಮಿನಾಥನ್ ವರದಿ ಜಾರಿ ಗೊಳಿಸಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾ ಘಟಕದ ಗೌರವಾಧ್ಯಕ್ಷ ವಿಶ್ವನಾಥರೆಡ್ಡಿ ಗೊಂದೆಡಗಿ ಮಾತ ನಾಡಿ, ‘ಕೃಷಿ ಮಾಡುವವನ ಪಾದ ತೊಳೆಯ ಬೇಕು ಎಂದು ಶರಣರು ಹೇಳಿದ್ದಾರೆ. ರೈತರೇ ಈ ದೇಶದ ನಿಜವಾದ ದೇವರು. ರೈತರು ಆತ್ಮಹತ್ಯೆ ಕೈಬಿಡಬೇಕು. ಸಾಲಗಾರನಾಗದೆ ಧೈರ್ಯಶಾಲಿಯಾಗಿ ಸ್ವಾವಲಂಬಿ ಜೀವನ ನಡೆಸಬೇಕು’ ಎಂದು ಕರೆ ನೀಡಿದರು.

ಸಮಿತಿ ಜಿಲ್ಲಾ ಘಟಕದ ಅಧ್ಯಕ್ಷ ಅಯ್ಯಣ್ಣ ಹಾಲಬಾವಿ, ಮುಖಂಡರಾದ ನಾಗರತ್ನಾ ಪಾಟೀಲ, ಮಹಾದೇವಿ ಬೇವಿನಾಳಮಠ, ನಿಯೋಜಿತ ನ್ಯಾಯಮೂರ್ತಿ ಲಕ್ಷ್ಮೀ ಕವಲಿ ಮಾತನಾಡಿದರು. ತಾಲ್ಲೂಕು ಘಟಕದ ಅಧ್ಯಕ್ಷ ಬಸನಗೌಡ ಹೆಮ್ಮಡಗಿ ಅಧ್ಯಕ್ಷತೆ ವಹಿಸಿದ್ದರು.

ಮಂಜುಳಾ, ಜಗದೇವಿ, ಚಂದ್ರಕಲಾ, ವಕೀಲರಾದ ಜಿ.ಎಸ್.ಪಾಟೀಲ, ದೇವಿಂದ್ರಪ್ಪ ಬೇವಿನಕಟ್ಟಿ, ರಮಾನಂದ ಕವಲಿ ಸೇರಿದಂತೆ ರೈತ ಮುಖಂಡರು, ಪದಾಧಿಕಾರಿಗಳು, ರೈತರು ಇದ್ದರು. ಸಂಗಣ್ಣ ಗುಳಗಿ ನಿರೂಪಿಸಿದರು. ರೈತ ದಿನಾಚರಣೆ ಅಂಗವಾಗಿ ನಗರದಲ್ಲಿ ಪ್ರೊ.ನಂಜುಂಡಸ್ವಾಮಿ ಅವರ ಭಾವಚಿತ್ರವನ್ನು ಎತ್ತಿನ ಬಂಡಿ ಯಲ್ಲಿ ಮೆರವಣಿಗೆ ಮಾಡಲಾಯಿತು.

* * 

ಪ್ರತಿಯೊಬ್ಬ ರೈತ ರಾಜಕೀಯ ಪ್ರಜ್ಞೆ ಬೆಳೆಸಿಕೊಳ್ಳಬೇಕು. ನಮ್ಮವರನ್ನೇ ಚುನಾವಣೆಯಲ್ಲಿ ಕಣಕ್ಕಿಳಿಸಿ ಗೆಲ್ಲಿಸಬೇಕು. ಅಲ್ಲಿಯವರೆಗೆ ರೈತರ ಉದ್ಧಾರ ಸಾಧ್ಯವಿಲ್ಲ.
ಚಾಮರಸ ಮಾಲಿಪಾಟೀಲ ರಾಜ್ಯ ಘಟಕದ ಗೌರವಾಧ್ಯಕ್ಷ, ರೈತ ಸಂಘ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT