ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವನತಿಯತ್ತ ಮುಧೋಳದ ಐತಿಹಾಸಿಕ ದೇಗುಲ

Last Updated 24 ಡಿಸೆಂಬರ್ 2017, 6:53 IST
ಅಕ್ಷರ ಗಾತ್ರ

ಯಲಬುರ್ಗಾ: ಪ್ರಾಚೀನ ಕಾಲದಲ್ಲಿ ಅನೇಕ ವಿದ್ಯಾಕೇಂದ್ರಗಳನ್ನು ಹೊಂದಿದ್ದ ಅಗ್ರಹಾರ ಎಂದೇ ಕರೆಸಿಕೊಂಡಿದ್ದ ಮುಧೋಳ ಗ್ರಾಮದ ಕೆಲ ಐತಿಹಾಸಿಕ ದೇವಾಲಯಗಳು ಸಂರಕ್ಷಣೆ ಇಲ್ಲದೇ ನಶಿಸಿ ಹೋಗುತ್ತಿವೆ.

ತಾಲ್ಲೂಕು ಕೇಂದ್ರದಿಂದ ಕೇವಲ 7 ಕಿ.ಮೀ ಅಂತರದಲ್ಲಿರುವ ಮುಧೋಳ ಗ್ರಾಮದಲ್ಲಿ ದೇವಾಲಯ, ಶಾಸನ ಹಾಗೂ ಸಾಂಸ್ಕೃತಿಕ ಹಿರಿಮೆಯನ್ನು ಹೊಂದಿದೆ. ಆದರೆ ಇಲ್ಲಿನ ಐತಿಹಾಸಿಕ ಸ್ಮಾರಕಗಳನ್ನು ಸೂಕ್ತ ರೀತಿಯಲ್ಲಿ ರಕ್ಷಣೆ ಇಲ್ಲದೇ ಇರುವುದರಿಂದ ಅವನತಿಯ ಹಂಚಿಗೆ ಸಾಗಿವೆ.

ಗ್ರಾಮದಲ್ಲಿ ಕಲ್ಯಾಣಿ ಚಾಲುಕ್ಯರ ಕಾಲದ ಶೈಲಿಯ ತ್ರಿಲಿಂಗೇಶ್ವರ ದೇವಸ್ಥಾನವು ಅತ್ಯಾಕರ್ಷಣೀಯವಾಗಿದೆ. ಸದ್ಯ ಉತ್ತಮ ಸ್ಥಿತಿಯಲ್ಲಿರುವ ಈ ದೇವಾಲಯದಲ್ಲಿ ನಿತ್ಯ ಪೂಜೆ ಪುನಸ್ಕಾರಗಳು ಹಾಗೂ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿವೆ.

ಗ್ರಾಮದಲ್ಲಿ ಕ್ರಿ.ಶ 12ನೇ ಶತಮಾನದಲ್ಲಿ ನಿರ್ಮಾಣವಾಗಿರುವ ಮತ್ತೊಂದು ಮಲ್ಲಿಕಾರ್ಜುನ ದೇವಾಲಯದಲ್ಲಿ ಸಾಕಷ್ಟು ಸಂಖ್ಯೆಯ ಕಲಾತ್ಮಕ ಕಂಬಗಳು ಮನ ಸೂರೆಗೊಳ್ಳುತ್ತಿವೆ. ಈಶ್ವರ ಮೂರ್ತಿ ಇರುವ ಈ ದೇವಾಲಯ ನಿರ್ಲಕ್ಷ್ಯಕ್ಕೆ ತುತ್ತಾಗಿದೆ.

ದೇವಾಲಯದಲ್ಲಿರುವ ವೀರಗಲ್ಲು ರಕ್ಷಣೆಯಿಲ್ಲದೇ ಇರುವ ಕಾರಣ ಬಿರುಕು ಬಿಟ್ಟಿದೆ. ಸಂಬಂಧಪಟ್ಟವರು ಸಂರಕ್ಷಿಸುವಲ್ಲಿ ಉದಾಸೀನ ಮಾಡಿದ್ದಾರೆ. ಅವನತಿ ಅಂಚಿನಲ್ಲಿರುವ ಕಾಡಸಿದ್ದೇಶ್ವರ ದೇಗುಲವು ನೋಡಲು ಸುಂದರವಾಗಿದ್ದರೂ ಬಹುಭಾಗ ಕುಸಿದಿದೆ.

ಇದರ ಸುತ್ತಲು ಜಾನುವಾರುಗಳು, ಕೃಷಿ ಪರಿಕರಗಳು, ಎತ್ತಿನ ಬಂಡಿ, ಟ್ರ್ಯಾಕ್ಟರ್ ನಿಲ್ಲುವ ಸ್ಥಳವನ್ನಾಗಿ ಮಾಡಿಕೊಂಡು ದೇವಸ್ಥಾನದ ಅಸ್ತಿತ್ವ ಕಳೆದುಕೊಳ್ಳುವಂತೆ ಮಾಡುತ್ತಿರುವುದು ಪ್ರಜ್ಞಾವಂತ ಹಾಗೂ ಇತಿಹಾಸ ಪ್ರಿಯರಿಗೆ ನೋವುಂಟು ಮಾಡಿದೆ.

ಸುತ್ತಲೂ ಮುಳ್ಳಿನ ಗಿಡಗಳು ಬೆಳೆದಿದ್ದು, ದೇವಸ್ಥಾನಕ್ಕೆ ಹೋಗಲು ದಾರಿ ಇಲ್ಲದಂತಾಗಿದೆ. ಈ ದೇವಸ್ಥಾನದ ಸುತ್ತಲು ತಿಪ್ಪೆಗಳ ರಾಶಿ ಇದೆ. ಈಗಾಗಲೇ ಸಂಪೂರ್ಣ ಶಿಥಿಲಾವಸ್ಥೆಯಲ್ಲಿರುವ ಈ ದೇಗುಲದಲ್ಲಿ ಕಲ್ಲಿನಲ್ಲಿ ಕೆತ್ತಿರುವ ಶಿಲ್ಪಕಲೆಗಳು, ಈಶ್ವರ ಮೂರ್ತಿ ಮಣ್ಣಲ್ಲಿ ಮುಚ್ಚಿಕೊಂಡಿದೆ. ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡು ಹಳೆಯ ದೇಗುಲಕ್ಕೆ ಹೊಸ ವಾತಾವರಣ ಸೃಷ್ಟಿಸಬೇಕಿದೆ.

ಜನಪ್ರತಿನಿಧಿಗಳು, ಅಧಿಕಾರಿಗಳು ಈ ಬಗ್ಗೆ ಕಾಳಜಿ ವಹಿಸಿ ಅವಸಾನದತ್ತ ಸರಿಯುತ್ತಿರುವ ಐತಿಹಾಸಿಕ ದೇವಾಲಯಗಳ ಸಂರಕ್ಷಣೆಗೆ ಮುಂದಾಗಬೇಕು ಎಂದು ಸ್ಥಳೀಯ ಯುವ ಮುಖಂಡ ಶರಣಪ್ಪ ಛಲವಾದಿ ಮಹಾಂತೇಶ, ಸಂಗಮೇಶ ಒತ್ತಾಯಿಸಿದ್ದಾರೆ.

*  * 

ಗ್ರಾಮೀಣ ಪ್ರದೇಶದ ಅನೇಕ ಐತಿಹಾಸಿಕ ದೇವಾಲಯಗಳು ಸಂಬಂಧಪಟ್ಟವರ ಹಾಗೂ ಸ್ಥಳೀಯರ ನಿರ್ಲಕ್ಷ್ಯದಿಂದ ಅವನತಿಯ ಹಂಚಿನಲ್ಲಿವೆ.
ವಿ.ಎಸ್. ಶಿವಪ್ಪಯ್ಯನಮಠ, ಬರಹಗಾರರು
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT