ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಇನ್ನು ಟೊಮೆಟೊ ವೈನ್ ಗಮ್ಮತ್ತು!

Last Updated 24 ಡಿಸೆಂಬರ್ 2017, 7:04 IST
ಅಕ್ಷರ ಗಾತ್ರ

ಬಾಗಲಕೋಟೆ: ಅಡುಗೆಯಲ್ಲಿ ಹುಳಿಗೆ, ಉಪ್ಪಿನಕಾಯಿಗೆ, ಚಟ್ನಿ, ಗೊಜ್ಜು, ಚಿಪ್ಸ್, ಹಪ್ಪಳ, ಸಂಡಿಗೆ, ಕೆಚಪ್, ಜಾಮ್ ಹೀಗೆ ಬಗೆ ಬಗೆಯ ತಿನಿಸಾಗಿ ರೂಪುಗೊಳ್ಳುತ್ತಿದ್ದ ಟೊಮೆಟೊ ಹಣ್ಣು ಇನ್ನು ವೈನ್ ಆಗಿಯೂ ಮದ್ಯ ಪ್ರಿಯರ ಮನಗೆಲ್ಲಲಿದೆ.

ಇಲ್ಲಿನ ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಆವರಣದಲ್ಲಿ ಶುಕ್ರವಾರ ಆರಂಭವಾದ ತೋಟಗಾರಿಕೆ ಮೇಳದಲ್ಲಿ ಟೊಮೆಟೊ ವೈನ್ ಸಾರ್ವಜನಿಕರನ್ನು ಹೆಚ್ಚು ಸೆಳೆಯಿತು.

ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯ ಕ್ಯಾಂಪಸ್‌ನ ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ವಿದ್ಯಾರ್ಥಿಗಳು ಪ್ರಾಯೋಗಿಕವಾಗಿ ಟೊಮೆಟೊ ವೈನ್‌ ಮಾಡಿದ್ದಾರೆ. ಮೇಳದ ಪ್ರದರ್ಶನ ಮಳಿಗೆಯಲ್ಲಿ ದ್ರಾಕ್ಷಿ, ಚಿಕ್ಕು, ಬಾಳೆ, ನೆಲ್ಲಿ, ಮಾವು, ದಾಳಿಂಬೆ, ಸೇಬು ಹೀಗೆ ವಿವಿಧ ಹಣ್ಣುಗಳಿಂದ ಮಾಡಿದ ಬಗೆ ಬಗೆ ಬಣ್ಣದ ವೈನ್ ಬಾಟಲಿಗಳ ಸಂಗ್ರಹದ ನಡುವೆ ವೈನಾಗಿ ಕಂಗೊಳಿಸಿದ ಟೊಮೆಟೊ ರಸ ನೋಡುಗರಲ್ಲಿ ಕುತೂಹಲದ ‘ಕಿಕ್‌’ ಮೂಡಿಸಿತು. ರುಚಿ ನೋಡಲು ಕೆಲವರು ಸ್ಯಾಂಪಲ್‌ ಕೇಳಿದರು. ಅದು ಪ್ರದರ್ಶನಕ್ಕಷ್ಟೇ ಎಂದು ತಿಳಿದು ನಿರಾಶೆಯಿಂದ ಮುನ್ನಡೆದರು.

ಶೇ 6ರಷ್ಟು ಸಿಹಿ ಅಂಶ: ‘ಟೊಮೆಟೊ ಹಣ್ಣಿನಲ್ಲಿ ಗರಿಷ್ಠ ಶೇ 5ರಿಂದ 6ರಷ್ಟು ಸಿಹಿ ಅಂಶ ಇರಲಿದೆ. ವೈನ್ ಮಾಡಲು ಹಣ್ಣಿನಲ್ಲಿ ಶೇ 22ರಿಂದ 24ರಷ್ಟು (ಡಿಗ್ರಿ ಬ್ರಿಕ್ಸ್) ಸಿಹಿ ಅಂಶ ಬೇಕಾಗುತ್ತದೆ. ಹಾಗಾಗಿ ಟೊಮೆಟೊ ಹಣ್ಣಿನ ಜೊತೆಗೆ ಕೃತಕ ಸಕ್ಕರೆಯನ್ನು ಬಳಕೆ ಮಾಡಿಕೊಂಡು ವೈನ್ ಮಾಡಬಹುದು’ ಎಂದು ಕೊಯ್ಲೋತ್ತರ ತಂತ್ರಜ್ಞಾನ ವಿಭಾಗದ ಮುಖ್ಯಸ್ಥ ಡಾ.ಎಸ್.ಎಲ್.ಜಗದೀಶ್ ಹೇಳುತ್ತಾರೆ.

‘ಟೊಮೆಟೊ ವೈನ್ ನಮ್ಮ ಭಾಗಕ್ಕೆ ಹೊಸದು. ರಾಜ್ಯದಲ್ಲಿ ದ್ರಾಕ್ಷಿ ಬಿಟ್ಟರೆ ಬೇರೆ ಯಾವುದೇ ಹಣ್ಣಿನ ವೈನ್‌ ಮಾರಾಟಕ್ಕೆ ಅಬಕಾರಿ ಇಲಾಖೆ ಪರವಾನಗಿ ನೀಡಿಲ್ಲ. ಆದರೆ ದೇಶದ ವಿವಿಧೆಡೆ ಈಗಾಗಲೇ 4ರಿಂದ 5 ವಾಣಿಜ್ಯ ಉದ್ದೇಶದ ಟೊಮೆಟೊ ವೈನ್ ತಯಾರಿಕೆ ಘಟಕಗಳಿವೆ’ ಎಂದು ಹೇಳುವ ಜಗದೀಶ್‌, ‘ದ್ರಾಕ್ಷಿ ರೀತಿಯೇ ಟೊಮೆಟೊ ತಿರುಳಿಗೆ ಈಸ್ಟ್‌ ಸೇರಿಸಿ 7ರಿಂದ 14 ದಿನಗಳ ಕಾಲ ಕೊಳೆಯುವಿಕೆ (ಫರ್ಮಂಟೇಶನ್), ಫಿಲ್ಟರ್ ಹಾಗೂ ಕೂಲಿಂಗ್ ಪ್ರಕ್ರಿಯೆಗೆ ಒಳಪಡಿಸಿದರೆ ವೈನ್ ಸಿದ್ಧವಾಗುತ್ತದೆ’ ಎಂದರು.

ತಂತ್ರಜ್ಞಾನ ರೈತರಿಗೂ ಪರಿಚಯಿಸಲಿ: ‘ಕೋಲಾರ, ಶ್ರೀನಿವಾಸಪುರ ಭಾಗದಲ್ಲಿ ಪ್ರತಿ ವರ್ಷ ಹಂಗಾಮಿನಲ್ಲಿ ಟೊಮೆಟೊ ಬೆಲೆ ಕುಸಿದು ಟನ್‌ಗಟ್ಟಲೇ ಹಣ್ಣನ್ನು ನಾವು ರಸ್ತೆಗೆ ಸುರಿಯುತ್ತೇವೆ. ದನಗಳಿಗೆ ತಿನ್ನಿಸಿ, ತಿಪ್ಪೆಗೂ ಹಾಕುತ್ತೇವೆ. ಈ ತಂತ್ರಜ್ಞಾನ ರೈತ ಗುಂಪುಗಳು, ಸಹಕಾರಿ ಸಂಘಗಳಿಗೆ ಪರಿಚಯಿಸಿದರೆ ಸ್ಥಳೀಯವಾಗಿ ವೈನ್ ಉತ್ಪಾದನೆ ಮಾಡಲು ಸಾಧ್ಯವಿದೆ’ ಎಂದು ಕೋಲಾರ ಜಿಲ್ಲೆ ಚಿಂತಾಮಣಿಯ ರೈತ ಎಸ್.ಶ್ರೀಧರ್ ಅಭಿಪ್ರಾಯಪಟ್ಟರು. ತೋಟಗಾರಿಕೆ ಮೇಳದ ವೀಕ್ಷಣೆಗೆ ಬಂದಿದ್ದ ಅವರು, ಮನೆಯಲ್ಲಿಯೇ ಟೊಮೆಟೊ ವೈನ್ ಮಾಡುವ ಬಗ್ಗೆ ವಿದ್ಯಾರ್ಥಿಗಳಿಂದ ಮಾಹಿತಿ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT