ಆಸಂದಿ ಬ್ರಹ್ಮೇಶ್ವರ ದೇಗುಲ ನಿರ್ಲಕ್ಷ

ಆಸಂದಿ ಗ್ರಾಮ ಅಜ್ಜಂಪುರದಿಂದ 11 ಕಿ.ಮೀ ದೂರದಲ್ಲಿದ್ದು, ಗ್ರಾಮ ಪಂಚಾಯ್ತಿ ಕೇಂದ್ರವಾಗಿದೆ. ಗಂಗರಸರ ಮತ್ತು ಹೊಯ್ಸಳರ ಕಾಲದಲ್ಲಿ ಅಸಂದಿನಾಡು ಎಂದು ಪ್ರಸಿದ್ದವಾಗಿತ್ತು.

ಕಡೂರು ತಾಲ್ಲೂಕಿನ ಆಸಂದಿ ಗ್ರಾಮದಲ್ಲಿರುವ ಬ್ರಹ್ಮೇಶ್ವರ ಮತ್ತು ಗಂಗೇಶ್ವರ ದ್ವಿಕೂಟಾಚಲ ದೇಗುಲ

ಬಾಲು ಮಚ್ಚೇರಿ

ಕಡೂರು ತಾಲ್ಲೂಕಿನ ಆಸಂದಿ ಗ್ರಾಮದ ಬ್ರಹ್ಮೇಶ್ವರ ಹಾಗೂ ಗಂಗೇಶ್ವರ ದ್ವಿಕೂಟಾಚಲ ದೇಗುಲ ನಿರ್ಲಕ್ಷ್ಯಕ್ಕೊಳಗಾಗಿದ್ದು, ನಿರ್ವಹಣೆಯಿಲ್ಲದೆ ಸೊರಗುತ್ತಿದೆ. ಅಂತರಘಟ್ಟೆಗೆ ಹೋಗುವ ರಸ್ತೆಯ ಪಕ್ಕದಲ್ಲಿಯೇ ಇರುವ ಈ ಭವ್ಯವಾದ ದೇಗುಲ ಅನಾದರಕ್ಕೊಳಗಾಗಿದ್ದು,  ಪುರಾತತ್ವ ಇಲಾಖೆಯೂ ಇದರತ್ತ ಗಮನ ಹರಿಸಿಲ್ಲ. ಗ್ರಾಮದಲ್ಲಿ ಈ ದೇಗುಲಗಳ ಬಗ್ಗೆ ಯಾವ ಮಾಹಿತಿಯೂ ದೊರೆಯುವುದಿಲ್ಲ. ದಿನಪ್ರತಿ ಪೂಜೆ ನಡೆಯುತ್ತದೆ. ಆದರೆ ದೇಗುಲಕ್ಕೆ ಬಾಗಿಲುಗಳಿಲ್ಲ. ರಕ್ಷಣೆಯೂ ಇಲ್ಲ. ಎಂತಹ ಬಿಸಿಲಿನಲ್ಲಿಯೂ ದೇವಾಲಯದೊಳಗೆ ಅತ್ಯಂತ ತಂಪಾದ ಅನುಭವವಾಗುತ್ತದೆ.

ಆಸಂದಿ ಗ್ರಾಮ ಅಜ್ಜಂಪುರದಿಂದ 11 ಕಿ.ಮೀ ದೂರದಲ್ಲಿದ್ದು, ಗ್ರಾಮ ಪಂಚಾಯ್ತಿ ಕೇಂದ್ರವಾಗಿದೆ. ಗಂಗರಸರ ಮತ್ತು ಹೊಯ್ಸಳರ ಕಾಲದಲ್ಲಿ ಅಸಂದಿನಾಡು ಎಂದು ಪ್ರಸಿದ್ದವಾಗಿತ್ತು. 8ನೆಯ ಶತಮಾನದಲ್ಲಿ ಈ ಪ್ರದೇಶ ಶ್ರೀಪುರುಷನ ಮಗ ವಿಜಯಾದಿತ್ಯನ ಆಳ್ವಿಕೆಗೊಳಪಟ್ಟಿತ್ತು.

ಈ ಭಾಗದಲ್ಲಿ 13 ಶೈವ ದೇಗುಲಗಳು ಇದ್ದವು ಎಂದು ಕ್ರಿ.ಶ. 1206ರ ಒಂದು ಶಾಸನ ತಿಳಿಸುತ್ತದೆ. ಆದರೆ ಈಗ ಆಸಂದಿಯಲ್ಲಿ ಉಳಿದಿರುವುದು 3 ದೇಗುಲಗಳು ಮಾತ್ರ. ಬ್ರಹ್ಮೇಶ್ವರ ಹಾಗೂ ಗಂಗೇಶ್ವರ ದೇಗುಲಗಳು ಎರಡು ಗರ್ಭಗೃಹಗಳಿರುವ ಒಂದೇ ದೇಗುಲ. ಈ ಪ್ರದೇಶವನ್ನಾಳುತ್ತಿದ್ದ ಗಂಗರಸನಿಂದ ಕ್ರಿ.ಶ. 1191 ರಲ್ಲಿ ನಿರ್ಮಾಣವಾಯಿತು. ನೆಲಮಟ್ಟದ ತಳಪಾಯದಲ್ಲಿ ಅರಳಿರುವ ದ್ವಿಕೂಟ ದೇಗುಲವಿದು.

ದೇಗುಲದ ಒಳಭಾಗದಲ್ಲಿರುವ ನುಣುಪಾದ ಕಂಬಗಳು ಹೊಯ್ಸಳ ಶೈಲಿಯವು. ದೇಗುಲದಲ್ಲಿ ಅಷ್ಟಾಗಿ ಕುಸುರಿ ಕೆತ್ತನೆಗಳಿಲ್ಲವಾದರೂ ವಾಸ್ತುಶಿಲ್ಪಕ್ಕೆ ಅನುಗುಣವಾಗಿದೆ. ಗರ್ಭಗೃಹ ಅಂತರಾಳ ಮತ್ತು ತೆರೆದ ಮಂಟಪಗಳಿದ್ದು, ಮಂಟಪದ ಸುತ್ತಲೂ ಬಾಲ್ಕನಿಯ ರೀತಿಯ ರಚನೆಗಳಿವೆ. 6 ಭುವನೇಶ್ವರಿ ವಿಗ್ರಹಗಳು ಇದ್ದು, ಕುಸುರಿ ಕಲೆಗಳು ಗಮನ ಸೆಳೆಯುತ್ತವೆ. ನಟರಾಜ ಮತ್ತು ವೀರಭದ್ರನ ವಿಗ್ರಹಗಳು ಭುವನೇಶ್ವರಿಯ ಮಧ್ಯದಲ್ಲಿ ಖಂಡರಿಸಲಾಗಿದೆ.

‘ಸಪ್ತಮಾತೃಕೆಯರ ವಿಗ್ರಹಗಳು, ಅಷ್ಟದಿಕ್ಪಾಲಕರ ವಿಗ್ರಹಗಳು ಸಣ್ಣದಾದರೂ ಸ್ಪಷ್ಟವಾಗಿ ಮನಮೋಹಕವಾಗಿವೆ. ಇಲ್ಲಿರುವ ಎರಡು ಗರ್ಭಗೃಹಗಳಲ್ಲಿ ಒಂದರಲ್ಲಿ ಶಿವಲಿಂಗವಿದೆ. ಇನ್ನೊಂದರಲ್ಲಿ ಯಾವುದೇ ವಿಗ್ರಹವಿಲ್ಲ. ಎರಡೂ ಗರ್ಭಗೃಹಗಳ ನಡುವೆ ವೇದಿಕೆಯಂತಹ ರಚನೆಯಿದೆ. ಬಹುಶಃ ಈ ವಿಗ್ರಹ ಅಥವಾ ಲಿಂಗವನ್ನು ಯಾರೋ ಹೊತ್ತೊಯ್ದಿರಬಹುದು ಅಥವಾ ನಾಶವಾಗಿರಬಹುದು’ಎಂಬುದು ಗ್ರಾಮದ ಹಿರಿಯರ ಅಭಿಪ್ರಾಯ.

ದೇಗುಲದ ಸುತ್ತಲೂ ಗೋಪುರದ ಮಾದರಿಯ ರಚನೆಗಳಿವೆ. ಯಾವುದೇ ವಿಗ್ರಹಗಳಿಲ್ಲ. ಆದರೆ ಒಂದೊಮ್ಮೆ ವಿಗ್ರಹಗಳನ್ನು ಕೆತ್ತಿದ್ದು, ಯಾರಾದರೂ ಕೊಂಡೊಯ್ದಿರಬಹುದಾದ ಸಾಧ್ಯತೆಗಳಿವೆ. ದೇಗುಲದ ಮುಂಭಾಗದಲ್ಲೊಂದು ಶಾಸನವಿದ್ದು, ದೇಗುಲದ ಸುತ್ತಮುತ್ತ ಭಗ್ನಗೊಂಡಿರುವ ಕಲ್ಲಿನ ಕೆತ್ತನೆಗಳಿವೆ. ಇದೇ ಗ್ರಾಮದಲ್ಲಿರುವ ರಾಮಲಿಂಗೇಶ್ವರ ದೇವಾಲಯವು 1114ರಲ್ಲಿ ನಿರ್ಮಾಣವಾಗಿದೆ. ಮತ್ತೊಂದು ವೀರಭದ್ರ  ದೇಗುಲ 1205 ರಲ್ಲಿ ಸ್ಥಾಪನೆಗೊಂಡ ತ್ರಿಕೂಟ ದೇಗುಲ.ಇದನ್ನು ಬಲ್ಲೇಶ್ವರನೆಂದೂ ಕರೆಯುತ್ತಾರೆ.

ಈ ಐತಿಹಾಸಿಕ ಮಹತ್ವದ ದೇಗುಲವನ್ನುಳಿಸಿಕೊಳ್ಳಲು ಜನಪ್ರತಿನಿಧಿಗಳು ಮನಸ್ಸು ಮಾಡಿದರೆ ಆಸಂದಿ ಗ್ರಾಮವೊಂದು ಪ್ರವಾಸಿ ತಾಣವಾಗಿಯೂ ಅಭಿವೃದ್ಧಿ ಹೊಂದಬಹುದಾಗಿದೆ ಎಂಬುದು ತಜ್ಞರ ಅಭಿಮತ.

Comments
ಈ ವಿಭಾಗದಿಂದ ಇನ್ನಷ್ಟು

ಮೂಡಿಗೆರೆ
ಜೀವಿಗಳ ಉಳಿವಿಗೆ ಭೂ ಸಂರಕ್ಷಣೆ ಅಗತ್ಯ

ಜಗತ್ತಿನ ಎಲ್ಲ ಜೀವಿಗಳ ಉಳಿವಿಗೆ ಭೂಮಿಯ ಸಂರಕ್ಷಣೆ ಅಗತ್ಯವಾಗಿದೆ ಎಂದು ಜೆಎಂಎಫ್‌ ನ್ಯಾಯಾಲಯದ ಹೆಚ್ಚುವರಿ ಸಿವಿಲ್‌ ನ್ಯಾಯಾಧೀಶೆ ಪ್ರಕೃತಿ ಕಲ್ಯಾಣ್‌ಪುರ್‌ ಅಭಿಪ್ರಾಯಪಟ್ಟರು.

23 Apr, 2018

ಮೂಡಿಗೆರೆ
ಚಾರ್ಮಾಡಿಘಾಟಿ: ತಪ್ಪದ ಪ್ರಯಾಣಿಕರ ಗೋಳು

ಮೂಡಿಗೆರೆ ತಾಲ್ಲೂಕಿನ ರಾಷ್ಟ್ರೀಯ ಹೆದ್ದಾರಿ 234 ರ ಚಾರ್ಮಾಡಿಘಾಟಿ ರಸ್ತೆಯಲ್ಲಿ ಸಂಚರಿಸುತ್ತಿರುವ ಘನ ವಾಹಗಳಿಂದ ಪ್ರಯಾಣಿಕರು ಪರದಾಡುವಂತಾಗಿದೆ.

23 Apr, 2018

ಚಿಕ್ಕಮಗಳೂರು
ಪರಿಸರ ಮಾಲಿನ್ಯ: ಜಾಗೃತಿ ಅಗತ್ಯ

ಚಿಕ್ಕಮಗಳೂರು ನೀರನ್ನು ಹಿತ ಮಿತವಾಗಿ ಬಳಕೆ ಮಾಡಬೇಕು. ಮನೆಗಳಲ್ಲಿ ನೀರು ಪೋಲಾಗಂದಂತೆ ಎಚ್ಚರ ವಹಿಸಬೇಕು ಎಂದು ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶ...

23 Apr, 2018
ಎನ್‌.ಆರ್.ಪುರ: ಹೆಚ್ಚಿದ ವಾಹನ ದಟ್ಟಣೆ

ನರಸಿಂಹರಾಜಪುರ
ಎನ್‌.ಆರ್.ಪುರ: ಹೆಚ್ಚಿದ ವಾಹನ ದಟ್ಟಣೆ

23 Apr, 2018

ನರಸಿಂಹರಾಜಪುರ
ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಲೈಂಗಿಕ ಶಿಕ್ಷಣ ನೀಡಿ

ಪೋಷಕರು ಮಕ್ಕಳಿಗೆ ವಿದ್ಯಾಭ್ಯಾಸದ ಜತೆ ಲೈಂಗಿಕ ಶಿಕ್ಷಣವನ್ನು ನೀಡುವತ್ತ ಗಮನಹರಿಸಬೇಕು ಎಂದು ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥ ಡಾ.ಕೆ.ಉಮೇಶ್ ಸಲಹೆ...

23 Apr, 2018