ದಾವಣಗೆರೆ

ಈ ಶಾಲೆ ಎಲ್ಲ ಸರ್ಕಾರಿ ಶಾಲೆಗಳಂತಲ್ಲ....

ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯೆನಿಸುವ ಗಣಿತ, ವಿಜ್ಞಾನ ಪ್ರಾಯೋಗಿಕ ವಿಷಯಗಳ ಬಗ್ಗೆ ಪ್ರಾತಕ್ಷಿಕೆ ಮೂಲಕ ಸುಲಭವಾಗಿ ಮನವರಿಕೆ ಮಾಡಿಕೊಡಲಾಗುತ್ತಿದೆ.

ನಾಗರಸನಹಳ್ಳಿಯ ಚಲಸಾನಿ ಶೇಷುಶೇಖರ್‌ ಸರ್ಕಾರಿ ಪ್ರೌಢಶಾಲೆಯ ನೋಟ.

ದಾವಣಗೆರೆ: ಇದು ಬರೀ ಶಾಲೆಯಲ್ಲ. ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಪೂರಕ ವಾತಾವರಣ ಕಲ್ಪಿಸಿಕೊಡುತ್ತಿರುವ ಜ್ಞಾನದೇಗುಲ. ಖಾಸಗಿ ಆಂಗ್ಲ ಮಾಧ್ಯಮ ಶಾಲೆಗಳತ್ತ ಪೋಷಕರ ವ್ಯಾಮೋಹ. ಸರ್ಕಾರಿ ಶಾಲೆಗಳ ಬಗ್ಗೆ ನಿರಾಸಕ್ತಿ ಹೆಚ್ಚಾಗಿರುವ ದಿನಗಳಲ್ಲಿ ಇಲ್ಲಿನ ಸರ್ಕಾರಿ ಶಾಲೆಯೊಂದು ಮಾದರಿಯಾಗಿ, ಖಾಸಗಿ ಶಾಲೆಗಳಿಗೆ ಸರಿಸಮನಾಗಿ ಪೈಪೋಟಿ ನೀಡುತ್ತಿದೆ.

‌ದಾವಣಗೆರೆ ತಾಲ್ಲೂಕಿನ ನಾಗರಸನಹಳ್ಳಿ ಗ್ರಾಮದ ಶ್ರೀಚಲಸಾನಿ ಶೇಷುಶೇಖರ್‌ ಸರ್ಕಾರಿ ಪ್ರೌಢಶಾಲೆ, ಈ ವಿಶಿಷ್ಟ ಶಾಲೆಯಾಗಿದೆ. ಪಠ್ಯ ಹಾಗೂ ತಾಂತ್ರಿಕ ಕಲಿಕೆ ಆಧಾರಿತ ಗುಣಮಟ್ಟದ ಬೋಧನಾ ಕ್ರಮ ಅಳವಡಿಸಿಕೊಂಡಿದೆ. ಪ್ರತಿವರ್ಷ ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತಮ ಫಲಿತಾಂಶ ಪಡೆಯುವ ಜೊತೆಗೆ ಸುತ್ತಮುತ್ತಲಿನ ಗ್ರಾಮಗಳಲ್ಲಿ ಹೆಸರು ಗಳಿಸಿಕೊಂಡಿದೆ.

ಬೋಧನಾ ಕ್ರಮ: ಬಹುತೇಕ ವಿದ್ಯಾರ್ಥಿಗಳ ಪಾಲಿಗೆ ಕಬ್ಬಿಣದ ಕಡಲೆಯೆನಿಸುವ ಗಣಿತ, ವಿಜ್ಞಾನ ಪ್ರಾಯೋಗಿಕ ವಿಷಯಗಳ ಬಗ್ಗೆ ಪ್ರಾತಕ್ಷಿಕೆ ಮೂಲಕ ಸುಲಭವಾಗಿ ಮನವರಿಕೆ ಮಾಡಿಕೊಡಲಾಗುತ್ತಿದೆ. ಇದರಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗುತ್ತಿದೆ.

‘ಈ ವಿಧಾನಕ್ಕೆ 2 ಲ್ಯಾಪ್‌ಟಾಪ್‌ ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಇನ್ನೂ 10 ಲ್ಯಾಪ್ ಟಾಪ್‌ಗಳು ಬರುವ ನಿರೀಕ್ಷೆ ಇದೆ. ಆಗ ಇನ್ನೂ ಉತ್ತಮ ಬೋಧನೆ ಮಾಡಲು ಸಹಕಾರಿಯಾಗುತ್ತದೆ’ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್

ಗುಣಮಟ್ಟದ ಶಿಕ್ಷಣಕ್ಕೆ ಆದ್ಯತೆ: ಇಂದಿನ ಸ್ಪರ್ಧಾತ್ಮಕ ಯುಗಕ್ಕೆ ಅನುಗುಣವಾಗಿ ಪಠ್ಯ ಹಾಗೂ ಬೋಧನಾ ವಿಧಾನದಲ್ಲಿ ಬದಲಾವಣೆ ಮಾಡಿಕೊಳ್ಳಲಾಗುತ್ತಿದೆ. ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳನ್ನು, ಉತ್ತಮವಾಗಿ ಓದುವ ವಿದ್ಯಾರ್ಥಿಗಳೊಂದಿಗೆ ಐವರಂತೆ ಒಂದು ಗುಂಪು ಮಾಡಲಾಗುತ್ತದೆ. ನಿತ್ಯ ಪಠ್ಯ, ಪಠ್ಯೇತರ ಚಟುವಟಿಕೆ ಕುರಿತು  ಗುಂಪು ಚರ್ಚೆಗೆ ಅವಕಾಶ ಮಾಡಿಕೊಡಲಾಗುತ್ತಿದೆ.

ವಿಶೇಷ ತರಗತಿ: ನವೆಂಬರ್ ಆರಂಭದಿಂದಲೇ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಬೆಳಿಗ್ಗೆ ಹಾಗೂ ಸಂಜೆ ಒಂದೊಂದು ತಾಸು ವಿಶೇಷ ತರಗತಿ ನಡೆಸಲಾಗುತ್ತಿದೆ. ಅಲ್ಲದೇ 8 ಮತ್ತು 9ನೇ ತರಗತಿ ವಿದ್ಯಾರ್ಥಿಗಳಿಗೂ ಪೂರ್ವ ತಯಾರಿಯಾಗಿ ವಿಶೇಷ ತರಗತಿಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.

ಪ್ರತಿವರ್ಷ ಉತ್ತಮ ಫಲಿತಾಂಶ: ಎಸ್ಎಸ್‌ಎಲ್‌ಸಿಯಲ್ಲಿ ಕಳೆದ ಬಾರಿ 30 ವಿದ್ಯಾರ್ಥಿಗಳಿದ್ದು, ಈ ಪೈಕಿ 8 ಮಂದಿ ಉನ್ನತ ಶ್ರೇಣಿಯಲ್ಲಿ, 16 ಮಂದಿ  ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದರು. 6 ಮಂದಿಗೆ ಉತ್ತೀರ್ಣ ಶ್ರೇಣಿ ಬಂದಿತ್ತು. ಈ ಬಾರಿ 23 ವಿದ್ಯಾರ್ಥಿಗಳಿದ್ದಾರೆ. ಪ್ರತಿವರ್ಷದಂತೆ ಈ ಬಾರಿಯೂ ಉತ್ತಮ ಫಲಿತಾಂಶ ಪಡೆಯುವ ನಿಟ್ಟಿನಲ್ಲಿ ಸಕಲ ತಯಾರಿ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಇಲ್ಲಿನ ಗಣಿತ ವಿಷಯ ಶಿಕ್ಷಕಿ ಎಚ್‌.ಪಿ.ಸುಮಾ.

ದತ್ತು ಯೋಜನೆ: ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಬಗ್ಗೆ ವಿಶೇಷ ಕಾಳಜಿ ವಹಿಸಲಾಗುತ್ತಿದೆ. ಪೋಷಕರ ಒಪ್ಪಿಗೆ ಮೇರೆಗೆ ತರಗತಿಯಲ್ಲಿ 30 ವಿದ್ಯಾರ್ಥಿಗಳಿದ್ದರೆ, ಒಬ್ಬ ಶಿಕ್ಷಕರಿಗೆ 5 ವಿದ್ಯಾರ್ಥಿಗಳನ್ನು ದತ್ತು ನೀಡಲಾಗುವುದು. ಜವಾಬ್ದಾರಿ ಅನುಸಾರವಾಗಿ ನಿತ್ಯ ಶಿಕ್ಷಕರು ವಿದ್ಯಾರ್ಥಿಗಳ ಮನೆಯಲ್ಲಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸೂಕ್ತ ವಾತಾವರಣವಿದೆಯೇ? ಮಕ್ಕಳ ಸಮಸ್ಯೆಗಳೇನು? ಎಂಬುದನ್ನು ಅರಿತುಕೊಳ್ಳುತ್ತಾರೆ.

ಪ್ರತಿದಿನ ಬೆಳಿಗ್ಗೆ 5ಕ್ಕೆ ಓದುವಂತೆ ಪ್ರೇರಣೆ, ಪರೀಕ್ಷೆ ಭಯ ಎದುರಿಸುವ ವಿಧಾನ, ಶಾಲೆಗೆ ಗೈರಾಗದಂತೆ ನೋಡಿಕೊಳ್ಳುವಿಕೆ, ಓದುವ ವಿಧಾನ ಈ ಎಲ್ಲದರ ಬಗ್ಗೆ ಉಪಯುಕ್ತ ಸಲಹೆ ನೀಡುತ್ತಾರೆ. ವಿದ್ಯಾರ್ಥಿಗಳಲ್ಲಿ ಆತ್ಮಸ್ಥೈರ್ಯ, ಸ್ಪರ್ಧಾತ್ಮಕ ಮನೋಭಾವ ಹೆಚ್ಚಿಸುವ ಮಹತ್ತರ ಕೆಲಸ ಮಾಡಲಾಗುತ್ತಿದೆ ಎನ್ನುತ್ತಾರೆ ಶಾಲೆಯ ಶಿಕ್ಷಕರು.

ಲಘು ಉಪಹಾರ ಭಾಗ್ಯ: ಬೆಳಗಿನಿಂದ ಕಲಿಕೆಯಲ್ಲಿಯೇ ನಿರತರಾಗುವ ವಿದ್ಯಾರ್ಥಿಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ, ದಾನಿಗಳು, ಶಿಕ್ಷಕರು, ಎಸ್‌ಡಿಎಂಸಿ ಅಧ್ಯಕ್ಷರು, ಸದಸ್ಯರ ನೆರವಿನೊಂದಿಗೆ ನಿತ್ಯ ಸಂಜೆ ವೇಳೆ ಬಾಳೆಹಣ್ಣು, ಹಸಿ ಕಡಲೆ ಕಾಳು, ಅವಲಕ್ಕಿ ಸೇವ್‌, ಬಿಸ್ಕಿಟ್ ಹೀಗೆ ಒಂದೊಂದು ಬಗೆಯ ಉಪಹಾರವನ್ನು ಮಕ್ಕಳಿಗೆ ವ್ಯವಸ್ಥೆ ಮಾಡಲಾಗುತ್ತಿದೆ. ಪ್ರತಿವರ್ಷ ಈ ರೀತಿಯ ಸಂಪ್ರದಾಯ ಹಾಕಿಕೊಂಡು ಬಂದಿದ್ದೇವೆ ಎನ್ನುತ್ತಾರೆ ಶಿಕ್ಷಕ ಜಿ.ಆರ್‌.ರಾಜ್‌ಕುಮಾರ್‌.

ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗೆ ಶಿಕ್ಷಕರು ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದಾರೆ. ಪಠ್ಯದ ಬಗ್ಗೆ ಏನೇ ಗೊಂದಲಗಳಿದ್ದರೂ ಪರಿಹಾರಕ್ಕೆ ಉತ್ತಮ ಗಂಥಾಲಯ, ಪ್ರಯೋಗಾಲಯ ಇಲ್ಲಿದೆ. ಗಿಡಮರಗಳಿಂದ ಕೂಡಿದ ಶಾಲೆಯ ಆವರಣದಲ್ಲಿ ಓದುವುದೇ ಮನಸ್ಸಿಗೆ ಮುದ ನೀಡುತ್ತದೆ ಎನ್ನುತ್ತಾರೆ 10ನೇ ತರಗತಿ ವಿದ್ಯಾರ್ಥಿನಿ ಕೆ.ಎನ್‌.ಅನುಷಾ.

ಸ್ಪೆಷಲ್‌ ಕ್ಲಾಸ್: ಬರುವ ಜನವರಿಯಿಂದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗಾಗಿ ಪ್ರತಿ ಭಾನುವಾರ ಬೆಳಿಗ್ಗೆ 8.30ರಿಂದ ಮಧ್ಯಾಹ್ನ 12.30ರವರೆಗೆ ವಿಶೇಷ ತರಗತಿಗಳನ್ನು ಹಮ್ಮಿಕೊಂಡು ಗುಣಮಟ್ಟದ ಶಿಕ್ಷಣ ಒದಗಿಸುವ ಕಾರ್ಯ ಮಾಡಲಾಗುತ್ತಿದೆ.

ಶಾಲೆಗೆ ನಿತ್ಯ ನಾಗರಸನಹಳ್ಳಿ, ಮುಕ್ತೇನಹಳ್ಳಿ, ಜಡಗನಹಳ್ಳಿ, ಕನಗೊಂಡನಹಳ್ಳಿ, ಕೊಳೇನಹಳ್ಳಿ, ಕಾರಿಗನೂರು ಸುತ್ತಮುತ್ತಲಿನ ಗ್ರಾಮಗಳಿಂದ ವಿದ್ಯಾರ್ಥಿಗಳು ಬರುತ್ತಾರೆ. ಪ್ರತಿವರ್ಷ ಉತ್ತಮ ಫಲಿತಾಂಶ ಬರುತ್ತಿರುವ ಕಾರಣ ಬರುವ ಶೈಕ್ಷಣಿಕ ಸಾಲಿನಲ್ಲಿ ನಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತೇವೆ ಎಂದು ಹಲವು ಪೋಷಕರು ತಿಳಿಸಿದ್ದಾರೆ. ಇದರಿಂದ ಮಕ್ಕಳ ಹಾಜರಾತಿ ಕೂಡ ಹೆಚ್ಚಾಗುವ ನಿರೀಕ್ಷೆಯಲ್ಲಿದ್ದೇವೆ ಎನ್ನುತ್ತಾರೆ ಶಾಲೆಯ ಮುಖ್ಯೋಪಾಧ್ಯಾಯ ನಾಗರಾಜ್‌.

ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆ ಎನ್ನುವ ತಾತ್ಸಾರ ಮನೋಭಾವ ಬೇಡ. ಬದಲಾಗಿ ಶಿಕ್ಷಕರು ಅದನ್ನೇ ಅವಕಾಶ ಮಾಡಿಕೊಂಡು ಗುಣಮಟ್ಟದ ಶಿಕ್ಷಣ ನೀಡಿದ್ದಾದರೆ, ತಾಲ್ಲೂಕಿನ ಎಲ್ಲಾ ಶಾಲೆಗಳು ಪುನಶ್ಚೇತನಗೊಳ್ಳುವುದರಲ್ಲಿ ಸಂಶಯವಿಲ್ಲ. ನಾಗರಸನಹಳ್ಳಿ ಸರ್ಕಾರಿ ಶಾಲೆ ಗುಣಮಟ್ಟದ ಶಿಕ್ಷಣ ನೀಡುತ್ತಿದೆ. ಹಾಗಾಗಿ ಕಳೆದ ಮೂರು ವರ್ಷಗಳಿಂದಲೂ ಶೇ 100 ರಷ್ಟು ಫಲಿತಾಂಶ ಪಡೆದು ಮಾದರಿಯಾಗಿದೆ ಎನ್ನುತ್ತಾರೆ ದಕ್ಷಿಣ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಪುಷ್ಪಲತಾ.

* * 

ಈ ಶಾಲೆಯಲ್ಲಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಸಿಗುತ್ತಿದೆ. ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಶಿಕ್ಷಕರು ಪ್ರೋತ್ಸಾಹಿಸುತ್ತಿದ್ದಾರೆ. ಹಾಗಾಗಿ ಬೇರೆ ಊರುಗಳಿಂದಲೂ ಬರುವ ಮಕ್ಕಳ ಸಂಖ್ಯೆ ಹೆಚ್ಚಾಗಿದೆ.
ಚಂದ್ರಶೇಖರಯ್ಯ, ಎಸ್‌ಡಿಎಂಸಿ ಅಧ್ಯಕ್ಷರು

Comments
ಈ ವಿಭಾಗದಿಂದ ಇನ್ನಷ್ಟು

ಜಗಳೂರು
ಜನರಿಗೆ ತಲುಪದ ಕೇಂದ್ರದ ಯೋಜನೆಗಳು

ಜನ ಕಲ್ಯಾಣ ಯೋಜನೆಗಳಿಗಾಗಿ ಕೇಂದ್ರ ಸರ್ಕಾರವು ₹ 21 ಸಾವಿರ ಕೋಟಿ ಅನುದಾನ ನೀಡಿದ್ದರೂ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸಮರ್ಪಕವಾಗಿ ನಡೆದಿಲ್ಲ ಎಂದು ಕೇಂದ್ರ...

23 Mar, 2018

ದಾವಣಗೆರೆ
ನೀರಿನ ಸಂರಕ್ಷಣೆಯ ಅರಿವು ಮೂಡಿಸಿ

ನಿರಂತರ ಬರಗಾಲ ದಿಂದಾಗಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗುತ್ತಿದೆ. ನೀರಿನ ಅಗತ್ಯ ಹಾಗೂ ಅದರ ಸಂರಕ್ಷಣೆ ಕುರಿತು ಪ್ರತಿಯೊಬ್ಬರಿಗೂ ಜಾಗೃತಿ ಮೂಡಿಸುವ ತುರ್ತು ಇದೆ...

23 Mar, 2018
ಬೇಸಾಯ ಆರಂಭಿಸಿದ ರೈತರು

ನ್ಯಾಮತಿ
ಬೇಸಾಯ ಆರಂಭಿಸಿದ ರೈತರು

23 Mar, 2018

ದಾವಣಗೆರೆ
ವಚನ: ವ್ಯಕ್ತಿತ್ವ ಬದಲಾಯಿಸುವ ಅಸ್ತ್ರ

ದೇವರ ದಾಸಿಮಯ್ಯ ಅವರು ತಮ್ಮ ವಚನಗಳ ಮೂಲಕ ಉಂಟು ಮಾಡಿದ ವೈಚಾರಿಕ ಕ್ರಾಂತಿಯನ್ನು ಪವಾಡ ಎನ್ನಬಹುದು ಎಂದು ಸಾಹಿತಿ ಬಾಗೂರು ಆರ್‌. ನಾಗರಾಜಪ್ಪ ಅಭಿಪ್ರಾಯ...

23 Mar, 2018
ನೀರಿನ ಹರಿವಿನ ಪ್ರಮಾಣ ಹೆಚ್ಚಳ

ಮಲೇಬೆನ್ನೂರು
ನೀರಿನ ಹರಿವಿನ ಪ್ರಮಾಣ ಹೆಚ್ಚಳ

22 Mar, 2018